ಬೆಂಗಳೂರು: ರಾಜ್ಯ ಸರ್ಕಾರದಿಂದ ನೂತನವಾಗಿ 50 ತಾಲೂಕುಗಳನ್ನು ರಚಿಸಿ ಆದೇಶಿಸಿತ್ತು. ಈ ಬೆನ್ನಲ್ಲೇ 8 ತಾಲೂಕುಗಳಲ್ಲಿ ಹೊಸದಾಗಿ ಉಪ ನೋಂದಣಾಧಿಕಾರಿ ಕಚೇರಿ ( Sub Registrar Office ) ಪ್ರಾರಂಭಿಸಲು ಆದೇಶಿಸಿದೆ.
ಈ ಸಂಬಂಧ ಕಂದಾಯ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ನಡವಳಿಯನ್ನು ಹೊರಡಿಸಿದ್ದು, ನೂತನವಾಗಿ ರಚಿಸಲಾಗಿರುವ 50 ತಾಲೂಕುಗಳ ಪೈಕಿ 34 ತಾಲೂಕುಗಳಲ್ಲಿ ಹೊಸದಾಗಿ ಉಪ ನೋಂದಣಿ ಕಚೇರಿಗಳನ್ನು ಪ್ರಾರಂಭಿಸಲು ಪ್ರಸ್ತಾಪಿಸಲಾಗಿರುತ್ತದೆ ಎಂದಿದ್ದಾರೆ.
ಪ್ರಸ್ತುತ ಇರುವ ಮಾನದಂಡಗಳನ್ನು ಪೂರೈಸದಿದ್ದರೂ ಸಹ, ಹೊಸದಾಗಿ ರಚನೆಯಾಗಿರುವ ಹೊಸ ಉಪ ನೋಂದಣಿ ಕಚೇರಿಗಳನ್ನು ಪ್ರಾರಂಭಿಸಲು ಅನುಮತಿ ನೀಡುವಂತೆ ಹಾಗೂ ಪ್ರತಿ ಉಪ ನೋಂದಣಿ ಕಚೇರಿಗೆ ಹುದ್ದೆಗಳನ್ನು ಮಂಜೂರು ಮಾಡುವಂತೆ ನೋಂದಣಿ ಮಹಾಪರಿ ವೀಕ್ಷಕರು ಹಾಗೂ ಮುದ್ರಾಂಕಗಳ ಆಯುಕ್ತರು ಕೋರಿರುತ್ತಾರೆ ಎಂದು ಹೇಳಿದ್ದಾರೆ.
ಈ ಎಲ್ಲಾ ಪ್ರಸ್ತಾವನೆ ಹಿನ್ನಲೆಯಲ್ಲಿ ಹೊಸದಾಗಿ ರಚಿಸಲಾಗಿರುವ ತಾಲೂಕುಗಳ ಪೈಕಿ 8 ತಾಲೂಕುಗಳಲ್ಲಿ ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಹೊಸ ಉಪ ನೋಂದಣಾಧಿಕಾರಿಗಳ ಕಚೇರಿಗಳನ್ನು ಹೊಸದಾಗಿ ಪ್ರಾರಂಭಿಸಲು ಅನುಮೋದನೆ ನೀಡಿ ಆದೇಶಿಸಿದ್ದಾರೆ.
ಈ ಹಿನ್ನಲೆಯಲ್ಲಿ ಬೆಳಗಾವಿ ಜಿಲ್ಲೆಯ ಕಾಗವಾಡ, ಕೊಪ್ಪಳ ಜಿಲ್ಲೆ ಕುಕನೂರು, ಕನಕಗಿರಿ, ರಾಯಚೂರಿನ ಸಿರಿವಾರ, ಉಡುಪಿಯ ಕಾಪು, ವಿಜಯಪುರ ಜಿಲ್ಲೆಯ ಬಬಲೇಶ್ವರ, ತಿಕೋಟಾ ಹಾಗೂ ತಾಳಿಕೋಟೆಯಲ್ಲಿ ನೂತನವಾಗಿ ಹೊಸ ಉಪನೋಂದಣಾಧಿಕಾರಿಗಳ ಕಚೇರಿಗಳು ಆರಂಭಗೊಳ್ಳಲಿವೆ.
ವರದಿ: ವಸಂತ ಬಿ ಈಶ್ವರಗೆರೆ