ಕೋಲಾರ: 40 ಪರ್ಸೆಂಟ್ ಕಮಿಷನ್ ಆಗಿದೆ ಎಂದು ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಸೂಕ್ತ ದಾಖಲೆ ಒದಗಿಸಬೇಕು.ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಇನ್ನೂ ಕಷ್ಟವಾಗುತ್ತೆ. ದಾಖಲೆ ಕೊಡಲಿಲ್ಲವೆಂದರೆ ಎರಡು ವರ್ಷ ಶಿಕ್ಷೆ ಆಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮುನಿರತ್ನ ಹೇಳಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಅವರು ಈಗ ಆರೋಪ ಮಾಡಿ ಒಂದು ವರ್ಷ ಆಗಿದೆ. ಅದಕ್ಕೆ ದಾಖಲೆ ನೀಡಬೇಕು, ಆದರೆ ಒದಗಿಸಿಲ್ಲ. ಹೀಗಾಗಿ ನ್ಯಾಯಾಲಯದಿಂದ ಸಮನ್ಸ್ ಬಂತು, ಸಮನ್ಸ್ ಬಂದು ದಾಖಲೆ ಕೊಡದಿದ್ದರಿಂದ ವಾರೆಂಟ್ ಬಂತು. ಅದನ್ನು ಅರ್ಥ ಮಾಡಿಕೊಳ್ಳಬೇಕು. ಆರೋಪ ಮಾಡಿದ ಮೇಲೆ ಜೀರ್ಣ ಮಾಡಿಕೊಳ್ಳುವ ಶಕ್ತಿ ಇರಬೇಕು ಎಂದರು.
ರಾಜರಾಜೇಶ್ವರಿ ಕ್ಷೇತ್ರದಲ್ಲಿ 10 ಸಾವಿರ ಕೋಟಿ ಖರ್ಚು, ಹಾಗೂ 40% ಕಮಿಷನ್ ಎಲ್ಲಿ ಆಗಿದೆ ತೋರಿಸಬೇಕು. ದಾಖಲೆ ತೋರಿಸುವವರೆಗೂ ನಾನು ಬಿಡುವುದಿಲ್ಲ. ಆದಷ್ಟು ಬೇಗ ಈ ಪ್ರಕರಣ ಮುಗಿಸಲು ಕೋರ್ಟಿಗೆ ಅರ್ಜಿ ಸಲ್ಲಿಕೆ ಮಾಡುವೆ. ಇದು ಇಷ್ಟಕ್ಕೆ ನಿಲ್ಲುವುದಿಲ್ಲ, ಇನ್ನು ಮುಂದೆ ಇದೆ. ಖಂಡಿತವಾಗಲೂ ಹೇಳುತ್ತಿರುವೆ ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ ಎಂದರು.