ಬೆಂಗಳೂರು: ದಿವಂಗತ ಮಾಜಿ ಪ್ರಧಾನಿ ವಾಜಪೇಯಿಯವರ ಸ್ಮರಣಾರ್ಥವಾಗಿ ತಮ್ಮ ನೇತೃತ್ವದ ಉನ್ನತ ಶಿಕ್ಷಣ, ಐಟಿ-ಬಿಟಿ ಮತ್ತು ಕೌಶಲ್ಯಾಭಿವೃದ್ಧಿ ಹಾಗೂ ಜೀವನೋಪಾಯ ಇಲಾಖೆಗಳಲ್ಲಿ ‘ಸುಶಾಸನ ಮಾಸ’ವನ್ನು ಆಚರಿಸುವ ಮೂಲಕ ಇಂದು ವಿದ್ಯುನ್ಮಾನ, ಐಟಿ-ಬಿಟಿ ಹಾಗೂ ವಿಜ್ಞಾನ ತಂತ್ರಜ್ಞಾನ ಇಲಾಖೆ ವತಿಯಿಂದ ಹತ್ತು ಸಾವಿರ ಯುವಕರಿಗೆ ಉದ್ಯೋಗ ಪತ್ರ ವಿತರಣೆಯಾಗಲಿದೆ ಎಂದು ಸಚಿವ ಡಾ.ಸಿ ಎನ್ ಅಶ್ವತ್ಥನಾರಾಯಣ ( Minister Dr C.N Ashwathnarayana ) ತಿಳಿಸಿದ್ದಾರೆ.
ಸುಶಾಸನ ಮಾಸಾಚರಣೆ ಅಂಗವಾಗಿ ತಮ್ಮ ಇಲಾಖೆಗಳಲ್ಲಿನ ಹಲವು ಸುಧಾರಣಾ ಕ್ರಮಗಳನ್ನು ಇಡೀ ತಿಂಗಳು ಜನರಿಗೆ ತಿಳಿಸುವ ಸಲುವಾಗಿ ನಿರಂತರ ಕಾರ್ಯಕ್ರಮ ಗಳನ್ನು ಆಯೋಜಿಸಲಾಗಿತ್ತು. ಡಿ.25 ರಂದು ಸಮಾರೋಪ ಸಮಾರಂಭ ನಡೆಯಲಿದ್ದು ಅಂದು ಮುಖ್ಯಮಂತ್ರಿ ಭಾಗವಹಿಸಲಿದ್ದಾರೆ. ಅಂದು ಹಲವು ಮಹತ್ವದ ಕಾರ್ಯಕ್ರಮಗಳನ್ನು ಜಾರಿಗೊಳಿಸಲಾಗುವುದು ಎಂದರು.
ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ಸಂಪೂರ್ಣವಾಗಿ ಹೊಸ ರೂಪ ನೀಡಲಾಗುವುದು. ಜತೆಗೆ ಕೌಶಲಾಭಿವೃದ್ಧಿ ಇಲಾಖೆಯ ಮೂಲಕ 10 ಸಾವಿರ ಜನರಿಗೆ ವಿವಿಧ ಸಂಸ್ಥೆಗಳಲ್ಲಿ ಉದ್ಯೋಗ ಕೊಡಿಸುವ ಸಂಬಂಧ ನೇಮಕಾತಿ ಪತ್ರಗಳನ್ನು ನೀಡಲಾಗುವುದು. ಹಾಗೆಯೇ, ಜಿಟಿಟಿಸಿ ಸುವರ್ಣ ಸಂಭ್ರಮದ ಅಂಗವಾಗಿ ಕಟ್ಟಿರುವ ನೂತನ ಕಟ್ಟಡವನ್ನು ಈ ಸಂದರ್ಭದಲ್ಲಿ ಲೋಕಾರ್ಪಣೆ ಮಾಡಲಾಗುವುದು. ಅಲ್ಲದೆ, ತಾಂತ್ರಿಕ ಶಿಕ್ಷಣ ಇಲಾಖೆಗೆ ನೇಮಕಾತಿ ಮತ್ತು ವೃಂದ ನಿಯಮಗಳನ್ನು 15 ವರ್ಷಗಳ ನಂತರ ರೂಪಿಸಲಾಗುತ್ತಿದೆ ಎಂದರು.