ಧಾರವಾಡ : ಧಾರವಾಡ ಜಿಲ್ಲೆಯಲ್ಲಿ ಜಾನುವಾರುಗಳಲ್ಲಿ ಚರ್ಮ ಗಂಟು ರೋಗ ಉಲ್ಬಣವಾಗಿರುವುದರಿಂದ ಈ ರೋಗ ಹರಡುವುದನ್ನು ತಡೆಗಟ್ಟಲು ಮುಂಜಾಗ್ರತಾಕ್ರಮವಾಗಿ ಡಿಸೆಂಬರ್ 26, 2022 ರಿಂದ ಜನವರಿ 25, 2023 ವರೆಗೆ ಕರ್ನಾಟಕ ಪ್ರಾಣಿ ರೋಗ (ನಿಯಂತ್ರಣ ) ಕಾಯ್ದೆ 1961 ಮತ್ತು ಸಿಆರ್ಪಿಸಿ ಕಾಯ್ದೆ 1973 ಕಲಂ 144ರ ಮೇರೆಗೆ ಧಾರವಾಡ ಜಿಲ್ಲಾಯಾದ್ಯಂತ ಜಾನುವಾರು ಸಂತೆ, ಜಾನುವಾರು ಜಾತ್ರೆ ಮತ್ತು ಜಾನುವಾರು ಸಾಗಾಣಿಕೆ ಮಾಡುವುದನ್ನು ನಿಷೇಧಿಸಿ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಆದೇಶಿಸಿದ್ದಾರೆ.
ಈ ಆದೇಶವು ಸಾಮೂಹಿಕ ಜಾನುವಾರುಗಳು ಸೇರುವಂತಹ ಜಾನುವಾರು ಜಾತ್ರೆ, ಜಾನುವಾರು ಸಂತೆ ಮತ್ತು ಜಾನುವಾರು ಸಾಗಾಣಿಕೆಗೆ ಮಾತ್ರ ಅನ್ವಯ ಆಗುತ್ತದೆ. ಇದನ್ನು ಹೊರತುಪಡಿಸಿ ಬೇರೆ ಯಾವ ಉದ್ದೇಶಕ್ಕೂ ಅನ್ವಯಿಸುವುದಿಲ್ಲ. ಈ ಆದೇಶವನ್ನು ಉಲ್ಲಂಘಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಆದೇಶದಲ್ಲಿ ತಿಳಿಸಿದ್ದಾರೆ.