ಶಿವಮೊಗ್ಗ: 2022ನೇ ಸಾಲಿನ ಪದ್ಮಶ್ರೀ ಪುರಸ್ಕೃತ ಖ್ಯಾಕ ಗಮಕ ಕಲಾವಿದರಾದಂತ ಹೊಸಳ್ಳಿ ಹೆಚ್ ಆರ್ ಕೇಶವಮೂರ್ತಿಯವರು, ಇಂದು ನಿಧನರಾಗಿದ್ದಾರೆ. ಈ ಮೂಲಕ ಖ್ಯಾತ ಗಮಕ ಗಂಧರ್ವ ಹೊಸಹಳ್ಳಿ ಕೇಶವಮೂರ್ತಿ ( Padma Shri awardee noted gamaka artiste Hosahalli Keshavamurthy passes away ) ಇನ್ನಿಲ್ಲವಾಗಿದ್ದಾರೆ.
ಶಿವಮೊಗ್ಗ ಸಮೀಪದ ಹೊಸಹಳ್ಳಿ ಗ್ರಾಮದಲ್ಲಿ ಜನಿಸಿದ್ದಂತ ಕೇಶವಮೂರ್ತಿಯವರು, ಹಲವಾರು ದಶಕಗಳಿಂದ ನಿರಂತರವಾಗಿ ಗಮಕ ಕಾರ್ಯಕ್ರಮಗಳ ಮೂಲಕ ಸಾಧನೆ ಗೈದವರಾಗಿದ್ದರು. ಅವರ ಗಮಕ ಸಾಧನೆಯನ್ನು ಗುರ್ತಿಸಿದ್ದಂತ ಭಾರತ ಸರ್ಕಾರವು, 2022ನೇ ಸಾಲಿನ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ, ಗೌರವಿಸಿತ್ತು.
ಇದೀಗ ವಯೋ ಸಹಜ ಖಾಯಿಲೆಯಿಂದ ಬಳಲುತ್ತಿದ್ದಂತ ಗಮಕ ಗಂಧರ್ವ ಹೊಸಹಳ್ಳಿ ಕೇಶವಮೂರ್ತಿ(88) ಅವರು, ಇಂದು ಮಧ್ಯಾಹ್ನ ತಮ್ಮ ಸ್ವಗೃಹದಲ್ಲಿ ನಿಧನರಾಗಿರೋದಾಗಿ ತಿಳಿದು ಬಂದಿದೆ.
ಖ್ಯಾತ ಗಮಕ ಕಲಾವಿದ ಹೊಸಹಳ್ಳಿ ಹೆಚ್ ಆರ್ ಕೇಶವಮೂರ್ತಿಯವರ ಬದುಕಿನ ಹಿನ್ನೋಟ
ಜನನ
ಶಿವಮೊಗ್ಗ ಸಮೀಪದ ಹೊಸಹಳ್ಳಿ ಗ್ರಾಮದಲ್ಲಿ 22 ಫೆಬ್ರವರಿ 1934ರಂದು ಜನಿಸಿದ ಕೇಶವಮೂರ್ತಿ ಅವರದ್ದು ಕೃಷಿಕ ಮನೆತನ. ತಂದೆ ರಾಮಸ್ವಾಾಮಿ ಶಾಸ್ತ್ರಿಗಳು ಸಂಸ್ಕೃತ ವಿದ್ವಾಂಸರು, ಜೊತೆಗೆ ಗಾಯಕರು. ತಾಯಿ ಲಕ್ಷ್ಮೀದೇವಮ್ಮ, ಇವರ ಸೋದರ ರಾಮಾಶಾಸ್ತ್ರಿಗಳು ಗಮಕ ಹಾಗೂ ಸಂಗೀತ ವಿದ್ವಾಂಸರು. ಇದೇ ಇವರಿಗೆ ಪ್ರೇರಣೆ.
ಶಿಕ್ಷಣ
ಮೊದಲಿಗೆ ತಂದೆ ರಾಮಸ್ವಾಾಮಿ ಶಾಸ್ತ್ರಿ ಹಾಗೂ ಟಿ. ರಾಮಾಶಾಸ್ತ್ರಿಗಳ ಮಾರ್ಗದರ್ಶನ, ತಂದೆಯವರು ವಾಚಿಸುತ್ತಿದ್ದ ಸಂಸ್ಕೃತ ಕಾವ್ಯಗಳೇ ಇವರ ವಾಚನ ಕಲೆಯನ್ನು ರೂಢಿಸಿಕೊಳ್ಳಲು ಸ್ಫೂರ್ತಿಯಾಯಿತು. ಅನಂತರ ಹಿರಿಯ ಗಮಕಿಗಳು, ರಂಗಭೂಮಿ ಕಲಾವಿದರೂ ಆಗಿದ್ದ ಕೆ.ಎಸ್. ವೆಂಕಟೇಶಯ್ಯನವರ ಬಳಿ ಕ್ರಮವಾದ ಗಮಕ ವಾಚನ ಶಿಕ್ಷಣ ಪಡೆದು, ಕನ್ನಡ ಸಾಹಿತ್ಯ ಪರಿಷತ್ತು ನಡೆಸುತ್ತಿದ್ದ ಪರೀಕ್ಷೆಗಳಲ್ಲಿ ತೇರ್ಗಡೆ ಹೊಂದಿದ್ದಾರೆ. ಸಾಮಾನ್ಯ ವಿದ್ಯಾಭ್ಯಾಾಸ ಇಂಟರ್ ಮೀಡಿಯಟ್ ತೇರ್ಗಡೆಯಾಗಿದ್ದರು.
ಸಾಧನೆ
ಕಳೆದ ನಲವತ್ತಕ್ಕೂ ಹೆಚ್ಚು ವರ್ಷಗಳಿಂದ ನಿರಂತರವಾಗಿ ಗಮಕ ಕಾರ್ಯಕ್ರಮಗಳನ್ನು ನೀಡುತ್ತ ಬಂದಿದ್ದಾರೆ. ಹಿರಿಯ ವ್ಯಾಖ್ಯಾನಕಾರರಾಗಿದ್ದ ವ್ಯಾಖ್ಯಾನ ವಾಚಸ್ಪತಿ ಮತ್ತೂರು ಲಕ್ಷ್ಮೀಕೇಶವ ಶಾಸ್ತ್ರಿಯವರ ವ್ಯಾಖ್ಯಾನದೊಂದಿಗೆ ಸಮಗ್ರ ಕುಮಾರವ್ಯಾಸ ಭಾರತದ 135 ಧ್ವನಿ ಸುರುಳಿಗಳು, ಮಾರ್ಕಂಡೇಯ ಅವಧಾನಿ ಅವರ ವ್ಯಾಖ್ಯಾನದೊಂದಿಗೆ 35 ಧ್ವನಿ ಸುರುಳಿಗಳಲ್ಲಿ ಜೈಮಿನಿ ಭಾರತ ಹೊರ ಬಂದಿದೆ. ಹೆಗ್ಗೋಡು, ಮತ್ತೂರು, ಶಿವಮೊಗ್ಗ, ಮೈಸೂರು, ಬೆಂಗಳೂರು, ಗದಗ ಹಾಗೂ ಹೊರ ರಾಜ್ಯಗಳಲ್ಲೂ ಅನೇಕ ಕಾರ್ಯಕ್ರಮಗಳನ್ನು ನೀಡಿದ್ದಾರೆ.
ಹೊಸಹಳ್ಳಿಯ ಗಮಕ ಕಲಾ ಪರಿಷತ್ತಿನ ಅಧ್ಯಕ್ಷರಾಗಿ ಗಮಕ ತರಗತಿಗಳನ್ನು ನಡೆಸಿ, ಮತ್ತೂರು ಶಿವಮೊಗ್ಗ ಮುಂತಾದೆಡೆ ನೂರಾರು ವಿದ್ಯಾರ್ಥಿಗಳಿಗೆ ಗಮಕ ಶಿಕ್ಷಣ ನೀಡಿದ ಹಿರಿಮೆ ಕೇಶವಮೂರ್ತಿ ಅವರದ್ದು. ಡಾ. ಮತ್ತೂರು ಕೃಷ್ಣಮೂರ್ತಿ ಮತ್ತು ಕೇಶವಮೂರ್ತಿಗಳ ಜೋಡಿ ಜಗತ್ಪ್ರಸಿದ್ಧವಾಗಿದೆ. ಇವರಿಬ್ಬರ ವಾಚನ ವ್ಯಾಖ್ಯಾನದಲ್ಲಿ ಕುಮಾರವ್ಯಾಸ ಭಾರತದ 200 ಕ್ಯಾಸೆಟ್ಟುಗಳು ಬಿಡುಗಡೆಯಾಗಿವೆ.
ಪ್ರಶಸ್ತಿ – ಪುರಸ್ಕಾಾರಗಳು
ಗಮಕ ಕಲೆಗಾಗಿಯೇ ಇರುವ ಕುಮಾರವ್ಯಾಸ ಪ್ರಶಸ್ತಿಯನ್ನು ಮೊದಲನೆಯವರಾಗಿ ಪಡೆದವರು ಕೇಶವಮೂರ್ತಿಗಳು. ನ್ಯಾಯಧೀಶ ಸಾಹಿತಿ ಕೊ. ಚನ್ನಬಸಪ್ಪನವರಿಂದ ’ಗಮಕ ಕೋಕಿಲ’ ಹೊಸಹಳ್ಳಿ ಗಮಕ ಕಲಾಪರಿಷತ್ತಿನಿಂದ ’ಗಮಕ ಗಂಧರ್ವ’, ಶಿವಮೊಗ್ಗ ರಸಿಕ ಶ್ರೋತೃಗಳಿಂದ ’ಗಮಕ ಗಾನವಾರಿಧಿ’, ಕರ್ನಾಟಕ ಗಮಕ ಕಲಾ ಪರಿಷತ್ತು ನಡೆಸಿದ ರಾಜ್ಯ ಮಟ್ಟದ ಸಮ್ಮೇಳನದಲ್ಲಿ ಸನ್ಮಾನ, ಬೆಂಗಳೂರಿನ ಅತ್ತಿಮಬ್ಬೆ ಪ್ರತಿಷ್ಠಾನದಿಂದ ಗಮಕ ಸಿಂಧು’ ಮೊದಲಾದ ಬಿರುದು ಗಳಿಸಿರುವ ಕೇಶವಮೂರ್ತಿಯವರನ್ನು ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ತನ್ನ 1994-95 ನೇ ಸಾಲಿನ ’ಕರ್ನಾಟಕ ಕಲಾತಿಲಕ’ ಬಿರುದನ್ನು ನೀಡಿ ಗೌರವಿಸಿದೆ. ಕರ್ನಾಟಕ ಸರ್ಕಾರ ’ರಾಜ್ಯೋತ್ಸವ ಪ್ರಶಸ್ತಿ’ ನೀಡಿ ಗೌರವಿಸಲಾಗಿತ್ತು.
ಕೇಶವ ಮೂರ್ತಿ ಅವರಿಗೆ 70 ವರ್ಷ ತುಂಬಿದ ಸವಿನೆನಪಿಗಾಗಿ ಹೊಸಹಳ್ಳಿ ಗಮಕ ಪರಿಷತ್ತು ’ಗಮಕ ಗಂಧರ್ವ’ ಎಂಬ ಅಭಿನಂದನಾ ಗ್ರಂಥವನ್ನು ಹೊರತಂದು ಇವರಿಗೆ ಅರ್ಪಿಸಿತು. ಶಿವಮೊಗ್ಗ ಜಿಲ್ಲಾ ಗಮಕ ಪರಿಷತ್ತಿನ ಜಿಲ್ಲಾ ಮಟ್ಟದ ಸಮ್ಮೇಳನದ ಅಧ್ಯಕ್ಷರಾಗಿ ಸನ್ಮಾನಿಸಲ್ಪಟ್ಟಿದ್ದಾರೆ. ಕರ್ನಾಟಕ ಗಾನ ಕಲಾ ಪರಿಷತ್ತಿನ 37ನೇ ಸಮ್ಮೇಳನದ ವಿದ್ವತ್ ಸದಸ್ಸಿನಲ್ಲಿ ಸನ್ಮಾಾನಿಸಲ್ಪಟ್ಟಿದ್ದರಬ. ಇಂತಹ ಅವರು ಇಂದು ನಿಧನರಾಗುವ ಮೂಲಕ ಇನ್ನಿಲ್ಲವಾಗಿದ್ದಾರೆ.