ಬೆಳಗಾವಿ : ಹೊರದೇಶಗಳಲ್ಲಿ ಕೋವಿಡ್ ಸೋಂಕಿನ ಭೀತಿ ಹೆಚ್ಚಳವಾದ ಹಿನ್ನೆಲೆ ಕರ್ನಾಟಕದಲ್ಲಿ ಕೂಡ ಎಚ್ಚರ ವಹಿಸಲಾಗುತ್ತಿದೆ. ಮೂರನೇ ಡೋಸ್ ಲಸಿಕೆ ಪಡೆಯದವರ ಮೇಲೆ ಹೆಚ್ಚಿನ ನಿಗಾ ಇಡುತ್ತೇವೆ ಆರೋಗ್ಯ ಸಚಿವ ಡಾ ಕೆ ಸುಧಾಕರ್ ಹೇಳಿದ್ದಾರೆ.
ರಾಜ್ಯದಲ್ಲಿ 3 ನೇ ಡೋಸ್ ನೀಡಲು ಹೆಚ್ಚಿನ ಕ್ರಮ ಕೈಗೊಳ್ಳಲಾಗುತ್ತಿದೆ. ಆದ್ದರಿಂದ ಕೋವಿಡ್ ಪಾಸಿಟಿವ್ ಬರುವವರನ್ನು ಹೆಚ್ಚಿನ ನಿಗಾ ವಹಿಸಿದ್ದೇವೆ ಎಂದು ಹೇಳಿದರು. ಶೀಘ್ರದಲ್ಲೇ ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ ಸಭೆ ನಡೆಸಿ ಈ ಬಗ್ಗೆ ಇನ್ನಷ್ಟು ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುತ್ತೇವೆ ಎಂದು ಸಚಿವ ಸುಧಾಕರ್ ಹೇಳಿದರು. ಮೂರನೇ ಡೋಸ್ ಲಸಿಕೆ ಪಡೆಯದವರ ಮೇಲೆ ಹೆಚ್ಚಿನ ನಿಗಾ ಇಡುತ್ತೇವೆ, ಮಕ್ಕಳಿಗೂ ಲಸಿಕೆಯ ಅವಶ್ಯಕತೆ ಇದೆ, ಸಭೆ ಬಳಿಕ ಈ ಬಗ್ಗೆ ಸರಿಯಾದ ಮಾರ್ಗಸೂಚಿ ಜಾರಿಗೆ ತರಲಿದ್ದೇವೆ ಎಂದು ಹೇಳಿದರು.
ಚೀನಾದಲ್ಲಿ ಕೊರೋನಾ ಸೋಂಕು ಹೆಚ್ಚಳ ಬೆನ್ನಲ್ಲೆ ಭಾರತದಲ್ಲಿ ಕೋವಿಡ್ ಅಲರ್ಟ್ ಘೋಷಣೆಯಾಗಿದೆ.ಹೊರದೇಶಗಳಲ್ಲಿ ಕೋವಿಡ್ ಹೆಚ್ಚಳ ಹಿನ್ನೆಲೆ ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಮಾಸ್ಕ್ ಕಡ್ಡಾಯಗೊಳಿಸಲು ಬಿಬಿಎಂಪಿ ಚಿಂತನೆ ನಡೆಸಿದೆ .
ಹೊಸ ವರ್ಷಕ್ಕೆ ಜನಸಂದಣಿ ಹೆಚ್ಚಾಗುವ ಸಾಧ್ಯತೆಯಿದ್ದು, ಕೋವಿಡ್ ಸಲಹಾ ಸಮಿತಿಗೆ ಈಗಾಗಲೇ ಈ ಬಗ್ಗೆ ಬಿಬಿಎಂಪಿ ಮನವಿ ಸಲ್ಲಿಸಿದೆ. ಮಾರ್ಕೆಟ್, ಮಾಲ್, ಥಿಯೇಟರ್, ಪಾರ್ಕ್, ಮೆಟ್ರೋ, ಬಸ್,ಏರ್ ಪೋರ್ಟ್ ನಲ್ಲಿ ಮಾಸ್ಕ್ ಕಡ್ಡಾಯ ಮಾಡಬೇಕೆಂದು ಬಿಬಿಎಂಪಿ ಚಿಂತನೆ ನಡೆಸಿದೆ.. ಮೊದಲ ಹಂತದಲ್ಲಿ ಯಾವುದೇ ಫೈನ್ ಇಲ್ಲದೇ ಮಾಸ್ಕ್ ಧರಿಸುವಂತೆ ಅರಿವು ಮೂಡಿಸಬೇಕು ಎಂದು ಮನವಿ ಸಲ್ಲಿಸಲಾಗಿದೆ.
ಚಳಿಗಾಲ ಆಗಿರೋದ್ರಿಂದ ಶೀತ, ಜ್ವರ ಕೆಮ್ಮು ಸಹಜವಾಗಿದೆ. ಕೋವಿಡ್ ಪ್ರಕರಣಗಳ ಬಗ್ಗೆ ಯಾರು ಆತಂಕ ಪಡುವ ಅಗತ್ಯವಿಲ್ಲ ಎಂದು ಆರೋಗ್ಯ ಇಲಾಖೆಗೆ ತಾಂತ್ರಿಕ ಸಲಹಾ ಸಮಿತಿ ಶಿಫಾರಸ್ಸು ಮಾಡಲಾಗಿದೆ. ಜೊತೆಗೆ ಆಸ್ಪತ್ರೆಗೆ ತೆರಳುವ ರೋಗಿಗಳಿಗೆ ಮಾಸ್ಕ ಧರಿಸೋದಕ್ಕೆ ಸೂಚಿಸಿ ಈ ಲಕ್ಷಣಗಳು ಕಾಣಿಸಿಕೊಂಡರೆ ತಕ್ಷಣ ವೈದ್ಯರ ಸಲಹೆ ಪಡೆಯಿರಿ ಎಂದು ರಾಜ್ಯದಲ್ಲಿ ಮಹಮಾರಿ ಕೋವಿಡ್ ಬಗ್ಗೆ ಎಚ್ಚರಿಕೆ ನೀಡಲಾಗಿದೆ.