ಬೆಂಗಳೂರು: ಇನ್ಫೋಸಿಸ್, ವಿಪ್ರೋ, ಟಿಸಿಎಸ್, ಐಬಿಎಂ ಸೇರಿದಂತೆ ಐಟಿ, ಬಿಟಿ, ಸ್ಟಾರ್ಟಪ್ ಮತ್ತು ಇಎಸ್ಡಿಎಂ ವಲಯಕ್ಕೆ ಸೇರಿದ 25ಕ್ಕೂ ಹೆಚ್ಚು ಪ್ರಮುಖ ಕಂಪನಿಗಳ ಪ್ರಮುಖರ ಜತೆ ಕೇಂದ್ರ ರೈಲ್ವೆ ಮತ್ತು ಐಟಿ ಸಚಿವ ಅಶ್ವಿನಿ ವೈಷ್ಣವ್ ಇಲ್ಲಿ ಭಾನುವಾರ ಮಹತ್ತ್ವದ ಚರ್ಚೆ ನಡೆಸಿದರು. ಈ ಸಂದರ್ಭದಲ್ಲಿ ಅವರು, ಕೇಂದ್ರ ಸರಕಾರವು ಉದ್ಯಮ ಸ್ನೇಹಿ ನೀತಿಗಳನ್ನು ಜಾರಿಗೆ ತರುವ ಭರವಸೆ ನೀಡಿದರು.
ನಗರದ ಖಾಸಗಿ ಹೋಟೆಲಿನಲ್ಲಿ ನಡೆದ ಬೆಳಗಿನ ಉಪಹಾರ ಸಹಿತ ಸಮಾಲೋಚನಾ ಸಭೆಯಲ್ಲಿ ಉದ್ಯಮಿಗಳ ಅಹವಾಲುಗಳನ್ನು ಆಲಿಸಿದ ಅವರು, ‘ಕೇಂದ್ರವು ಸದ್ಯದಲ್ಲೇ ‘ನೂತನ ಸಮಗ್ರ ಡಿಜಿಟಲ್ ಆರ್ಥಿಕತೆ ನಿಯಂತ್ರಣ ನೀತಿ’ಯನ್ನು ಜಾರಿಗೆ ತರಲಿದೆ. ಜತೆಗೆ ‘ಮೇಕ್ ಇನ್ ಇಂಡಿಯಾ’ ಉಪಕ್ರಮಕ್ಕೆ ಪೂರಕವಾಗಿ ಸಂಶೋಧನೆ ಮತ್ತು ಅಭಿವೃದ್ಧಿ ನೀತಿಯನ್ನು ಮತ್ತಷ್ಟು ನಿಖರಗೊಳಿಸಲಾಗುವುದು ಎಂದು ಹೇಳಿದರು.
ಬೆಂಗಳೂರಿನಲ್ಲಿ ಹೆಚ್ಚಾದ ಪುಂಡರ ಹಾವಳಿ: ಹಫ್ತಾ ನೀಡಲಿಲ್ಲವೆಂದು ವ್ಯಾಪಾರಿ ಮೇಲೆ ಲಾಂಗ್ ಬೀಸಿ ಹಲ್ಲೆ
ಅಲ್ಲದೆ, ರಾಜ್ಯದ ಐಟಿ, ಸ್ಟಾರ್ಟಪ್ ಮತ್ತು ಇಎಸ್ಡಿಎಂ ವಲಯದ ಕಂಪನಿಗಳಿಗೆ ಸಂಬಂಧಿಸಿದಂತೆ ಏನೇನು ಮಾಡಬೇಕು ಎನ್ನುವ ವರದಿಯನ್ನು ಕೊಡುವಂತೆ ಅವರು ಐಟಿ ವಿಷನ್ ಗ್ರೂಪ್ ಅಧ್ಯಕ್ಷ ಕ್ರಿಸ್ ಗೋಪಾಲಕೃಷ್ಣನ್, ಸ್ಟಾರ್ಟಪ್ ವಿಷನ್ ಗ್ರೂಪ್ ಅಧ್ಯಕ್ಷ ಪ್ರಶಾಂತ್ ಪ್ರಕಾಶ್ ಮತ್ತು ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ನ ಅಧ್ಯಕ್ಷ ಡಾ.ಬಿ ವಿ ನಾಯ್ಡು ಅವರಿಗೆ ಅವರು ಸೂಚಿಸಿದರು.
ಕೇಂದ್ರವು ಯಾವಾಗಲೂ ನೀತಿ ನಿರೂಪಣೆಗೆ ಮೊದಲು ಉದ್ಯಮಿಗಳ ಜತೆ ಚರ್ಚಿಸುತ್ತಲೇ ಬಂದಿದೆ. ಉದ್ಯಮಗಳ ಬೆಳವಣಿಗೆಗೆ ಎಂತಹ ನೀತಿಗಳು ಬೇಕು ಮತ್ತು ಏನೇನನ್ನು ಮಾಡಿದರೆ ಅನುಕೂಲ ಎನ್ನುವುದನ್ನು ಉದ್ಯಮಿಗಳು ಮುಕ್ತವಾಗಿ ಹಂಚಿಕೊಳ್ಳಬೇಕು. ಇದರ ಜತೆಗೆ, ಸಮಸ್ಯೆಗಳಿಗೆ ತಮ್ಮಲ್ಲೇ ಇರುವ ಅತ್ಯುತ್ತಮ ಪರಿಹಾರಗಳನ್ನೂ ಸರಕಾರಕ್ಕೆ ಸೂಚಿಸಬಹುದು ಎಂದು ಅವರು ಸ್ಪಷ್ಟಪಡಿಸಿದರು.
ಭಾರತದಲ್ಲಿ ಮೆಕ್ಯಾನಿಕಲ್ ಕ್ಷೇತ್ರಕ್ಕೆ ಸಂಬಂಧಪಟ್ಟಂತೆ ಕೌಶಲ್ಯಗಳ ಕೊರತೆ ಇದೆ ಎನ್ನುವುದು ಗಮನಕ್ಕೆ ಬಂದಿದೆ. ಆದ್ದರಿಂದ, ಈ ಕ್ಷೇತ್ರಕ್ಕೆ ಸಂಬಂಧಪಟ್ಟ ಉದ್ಯಮಗಳು ಕನಿಷ್ಠಪಕ್ಷ ಒಂದು ಕೋರ್ಸನ್ನಾದರೂ ವಿನ್ಯಾಸಗೊಳಿಸಿ ಕೊಟ್ಟರೆ, ಅದನ್ನು ಒಂದು ವಿಶ್ವವಿದ್ಯಾಲಯದಲ್ಲಾದರೂ ತಕ್ಷಣವೇ ಜಾರಿಗೊಳಿಸಲಾಗುವುದು. ಈ ವಿಷಯದಲ್ಲಿ ವಿಸ್ಟ್ರಾನ್ ಮತ್ತು ಫಾಕ್ಸ್ಕಾನ್ ಕಂಪನಿಗಳು ನೇತೃತ್ವ ವಹಿಸಿಕೊಳ್ಳಬೇಕು ಎಂದು ಅವರು ಭರವಸೆ ನೀಡಿದರು.
ಸೆಮಿಕಂಡಕ್ಟರ್ ಕ್ಷೇತ್ರಕ್ಕೆ ಸಂಬಂಧಪಟ್ಟಂತೆ ಉಜ್ವಲ ಭವಿಷ್ಯವಿದೆ ಎಂದು ಹೇಳಲಾಗುತ್ತಿದೆ. ಇದು ಸಾಧ್ಯವಾಗಬೇಕಾದರೆ 20 ವರ್ಷಗಳ ದೀರ್ಘಾವಧಿಯ ಒಂದು ಸಮಗ್ರ ಕಾರ್ಯಕ್ರಮವನ್ನು ಹಾಕಿಕೊಳ್ಳಬೇಕಾದ ಅಗತ್ಯವಿದೆ. ಆಧುನಿಕ ತಂತ್ರಜ್ಞಾನಾಧಾರಿತ ಉದ್ಯಮಗಳನ್ನು ನಾವು ಸಮರ್ಥವಾಗಿ ಬಳಸಿಕೊಳ್ಳಬೇಕಾಗಿದೆ. ಮೊದಲ ಹಂತದಲ್ಲಿ ಇನ್ಕ್ಯುಬೇಷನ್ ಕಾರ್ಯಕ್ರಮಗಳಲ್ಲಿ ಯಶಸ್ಸನ್ನು ಕಂಡರೆ, ಇದನ್ನು 20ಕ್ಕೂ ಹೆಚ್ಚು ರಾಜ್ಯಗಳಿಗೆ ವಿಸ್ತರಿಸಬಹುದು ಎಂದು ವೈಷ್ಣವ್ ಸಲಹೆ ನೀಡಿದರು.
ಉದ್ಯಮ ಕ್ಷೇತ್ರದಲ್ಲಿ ಸರಕು ಸಾಗಣೆ ತ್ರಾಸದಾಯಕವಾಗಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ಇದನ್ನು ಪರಿಹರಿಸಲು ರೈಲ್ವೆ ಇಲಾಖೆಯು ಸಿದ್ಧವಿದ್ದು, ತನ್ನ 30 ಸಾವಿರ ಕೋಚ್ಗಳನ್ನು ಒದಗಿಸಲಿದೆ. ಉದ್ಯಮ ವಲಯವು ಮೊದಲಿಗೆ ಇದನ್ನು ಬೆಂಗಳೂರಿನಲ್ಲೇ ಬೇಕಾದರೂ ಪರೀಕ್ಷಾರ್ಥವಾಗಿ ಬಳಸಿ ನೋಡಬಹುದು. ಇದರಿಂದ ಸರಕು ಸಾಗಣೆ ಸುಗಮವಾಗಿ ನಡೆಯಲಿದ್ದು, ಇದು ಕೂಡ ‘ಈಸ್ ಆಫ್ ಡೂಯಿಂಗ್ ಬಿಜಿನೆಸ್’ ವ್ಯವಸ್ಥೆಯ ಭಾಗವಾಗಿದೆ ಎಂದು ಅವರು ಮುಕ್ತ ಆಹ್ವಾನ ನೀಡಿದರು.
ಹಿಂದೆಲ್ಲ ಟೆಲಿಕಾಂ ಸಂಪರ್ಕ ಗೋಪುರಗಳಿಗೆ ಅನುಮತಿ ನೀಡಲು ಏಳೆಂಟು ತಿಂಗಳು ಹಿಡಿಯುತ್ತಿದ್ದವು. ಈಗ ಶೇಕಡ 80ರಷ್ಟು ಗೋಪುರಗಳಿಗೆ ಕೇವಲ ಏಳು ದಿನಗಳಲ್ಲಿ ಅನುಮತಿ ಕೊಡಲಾಗುತ್ತಿದೆ. ಉದ್ಯಮಗಳು ಸಾಂದ್ರವಾಗಿ ನೆಲೆಯೂರಿರುವ ಕಡೆಗಳಲ್ಲಿ ಮೂಲಸೌಲಭ್ಯಗಳ ಅಭಿವೃದ್ಧಿಗೂ ಆದ್ಯ ಗಮನ ಕೊಡಲಾಗುವುದು ಎಂದು ಕೇಂದ್ರ ಸಚಿವರು ತಿಳಿಸಿದರು.
‘ರೈಲ್ವೆ ಪ್ರಯಾಣಿಕ’ರೇ ಗಮನಿಸಿ: ಈಗ ‘ಮೊಬೈಲ್ ಆ್ಯಪ್’ನಲ್ಲೂ ‘ಕಾಯ್ದಿರಿಸದ ಟಿಕೆಟ್ ಬುಕ್ಕಿಂಗ್’ ಮಾಡಬಹುದು
ಕಾರ್ಯಕ್ರಮದಲ್ಲಿ ಮಾತನಾಡಿದ ಸ್ವಾರ್ಟಪ್ ವಿಷನ್ ಗ್ರೂಪ್ ಮುಖ್ಯಸ್ಥ ಪ್ರಶಾಂತ್ ಪ್ರಕಾಶ್, “ಈಗ ಎಲ್ಲರೂ ಸ್ಟಾರ್ಟಪ್ಗಳ ಬಗ್ಗೆ ಉತ್ಸಾಹ ಹೊಂದಿದ್ದಾರೆ. ಆದರೆ, ನಮ್ಮ ಕಾರ್ಯ ಪರಿಸರದಲ್ಲಿ ಯಾವ ಕ್ಷೇತ್ರಗಳಿಗೆ ಸಂಬಂಧಿಸಿದ ನವೋದ್ಯಮಗಳು ಗೆಲ್ಲುತ್ತವೆ ಎನ್ನುವುದನ್ನು ಕಂಡುಕೊಳ್ಳುವುದು ಮುಖ್ಯವಾಗಿದೆ. ಹೀಗಾಗಿ ನಾವು ಸ್ಟಾರ್ಟಪ್ ಕ್ಷೇತ್ರದ ಮರುವ್ಯಾಖ್ಯಾನವನ್ನು ಮಾಡಬೇಕಾಗಿದೆ” ಎಂದರು.
ಸಮಾಲೋಚನಾ ಸಭೆಯಲ್ಲಿ ಐಟಿ-ಬಿಟಿ ಸಚಿವ ಡಾ.ಸಿ ಎನ್ ಅಶ್ವತ್ಥನಾರಾಯಣ, ಐಟಿ ಬಿಟಿ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಮಣರೆಡ್ಡಿ, ನಿರ್ದೇಶಕ ಡಾ.ಶಿವಶಂಕರ ಅವರು ಉಪಸ್ಥಿತರಿದ್ದರು.
ಜೆಟ್ವರ್ಕ್ನ ಅಮೃತ್ ಆಚಾರ್ಯ, ನಾಸ್ಕಾಂನ ಕೆ.ಎಸ್.ವಿಶ್ವನಾಥ್, ಟಿಸಿಎಸ್ನ ಸುನೀಲ್ ದೇಶಪಾಂಡೆ, ಇನ್ಫೋಸಿಸ್ನ ಕಾತಿರ್ಕ ನೀಲಕಂಠನ್, ಕಿಂಡ್ರಲ್ನ ಲಿಂಗರಾಜು, ಸೀಮನ್ಸ್ನ ಮನೋಜ್ ಪ್ರಸಾದ್, ಮರ್ಸಿಡಿಸ್ ಬೆಂಜ್ನ ಮನು ಸಾಳೆ ಮುಂತಾದವರು ಪಾಲ್ಗೊಂಡಿದ್ದರು.
ಉಳಿದಂತೆ ಗೋಲ್ಡ್ಮನ್ ಸ್ಯಾಕ್ಸ್, ಆಕ್ಸೆಂಚರ್, ಮೈಕ್ರಾನ್, ಪ್ರೆಸಿಡೆಂಟ್, ಟೀಮ್ಲೀಸ್, ಲಾಗ್೯ ಮೆಟೀರಿಯಲ್ಸ್, ಐಸ್ಪಿರಿಟ್, ಏಂಜೆಲ್ ಇನ್ವೆಸ್ಟರ್, ಕ್ಯಾಪ್ಟನ್ ಫ್ರೆಶ್, ಬ್ಲ್ಯಾಕ್ಬಕ್ ಮುಂತಾದ ಕಂಪನಿಗಳ ಉನ್ನತ ಮಟ್ಟದ ಪ್ರತಿನಿಧಿಗಳು ಹಾಜರಿದ್ದರು.