ಹುಬ್ಬಳ್ಳಿ : ನಮ್ಮ್ ಕ್ಲಿನಿಕ್ ಗಳನ್ನು ( Namma Clinic ) ಮೇಲ್ದರ್ಜೆಗೇರಿಸಲು ಮುಂದಿನ ಬಜೆಟ್ ನಲ್ಲಿ ಅನುದಾನ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ( Chief Minister Basavaraj Bommai ) ತಿಳಿಸಿದರು.
ಅವರು ಇಂದು ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ಹಿಂದೆ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಡಿಸ್ಪೆನ್ಸರಿಗಳಿದ್ದವು. ವೈದ್ಯರು ನೆಗಡಿ, ಜ್ವರ ಇತ್ಯಾದಿ ಸಣ್ಣಪುಟ್ಟ ಪರೀಕ್ಷೆ ಮಾಡಿ ಚಿಕಿತ್ಸೆ ನೀಡುತ್ತಿದ್ದರು. ಬಡವರಿಗೆ ಪ್ರಾಥಮಿಕವಾಗಿ ಚಿಕಿತ್ಸೆ ನೀಡುವ ದೃಷ್ಟಿಯಿಂದ ನಮ್ಮ ಕ್ಲಿನಿಕ್ ಸ್ಥಾಪಿಸಲಾಗುತ್ತಿದೆ. 437 ಇಡೀ ರಾಜ್ಯ ದಲ್ಲಿ ಸ್ಥಾಪನೆಯಾಗುತ್ತಿದೆ. ಪ್ರಥಮ ಹಂತದಲ್ಲಿ ನೂರು ಕ್ಲಿನಿಕ್ ಗಳು ಪ್ರಾರಂಭವಾಗುತ್ತದೆ. ನಮ್ಮ ಕ್ಲಿನಿಕ್ ಗಳ ಕಾರ್ಯವೈಖರಿ ನೋಡಿಕೊಂಡು ತಪಾಸಣೆ ಮಾಡಿ ಔಷಧ ನೀಡುವುದಲ್ಲದೆ, ರಕ್ತ ಪರೀಕ್ಷೆ ಮುಂತಾದ ಪೂರ್ವಭಾವಿ ಪರೀಕ್ಷೆಗಳನ್ನು ಕೈಗೊಳ್ಳಲು ವ್ಯವಸ್ಥೆ ಕಲ್ಪಿಸಲಾಗುವುದು. ಟೆಲಿ ಮೆಡಿಸಿನ್ ವ್ಯವಸ್ಥೆಯನ್ನೂ ಇದಕ್ಕೇ ಜೋಡಿಸಲಾಗುವುದು ಎಂದರು.
ಕೇಂದ್ರ ಗೃಹ ಸಚಿವರೊಂದಿಗೆ ಸಭೆ
ಕೇಂದ್ರ ಗೃಹ ಸಚಿವರು ಎರಡೂ ರಾಜ್ಯ ಗಳ ಮುಖ್ಯಮಂತ್ರಿಗಳನ್ನು ಕರೆದು ಶಾಂತಿ ಸುವ್ಯವಸ್ಥೆ ಕಾಪಾಡಲು ಇಂದಿನ ಸಭೆ ಕರೆಯಲಾಗಿದೆ. ಅಲ್ಲಿ ಕರ್ನಾಟಕದ ನಿಲುವನ್ನು ಕಾನೂನಾತ್ಮಕ, ಆಡಳಿತಾತ್ಮಕ ಹಾಗೂ ರಾಜಕೀಯವಾಗಿ ತಿಳಿಸಲಾಗುವುದು. ಕರ್ನಾಟಕದ ನಿಲುವು ಸ್ಪಷ್ಟವಿದೆ ಎಂದು ಮನವರಿಕೆ ಮಾಡಲು ಸಿದ್ದವಾಗಿ ಹೋಗುತ್ತಿರುವುದಾಗಿ ತಿಳಿಸಿದರು.
ವ್ಯಾಖ್ಯಾನಿಸುವುದಿಲ್ಲ
ರಾಜ್ಯಗಳ ಪುನರ್ ವಿಂಗಡನಾ ಕಾಯ್ದೆಗೂ ಮುನ್ನ ಹಲವಾರು ವರದಿಗಳು ಬಂದಿದೆ. ಕಾಯ್ದೆ ಆಗಿ ಅಂತಿಮಗೊಂಡಿದೆ. ಇದು ಈಗಿನ ಕಾನೂನಿನ ವಸ್ತುಸ್ಥಿತಿ. ರಾಜ್ಯಗಳ ಪುನರ್ ವಿಂಗಡನಾ ಕಾಯ್ದೆಯ ನಿರ್ಣಯಗಳನ್ನು ಅವರು ಪ್ರಶ್ನಿಸಿದ್ದಾರೆ. ಇದನ್ನು ನಿರ್ವಹಿಸಬೇಕೋ, ಬೇಡವೋ ಎಂದೇ ಸರ್ವೋಚ್ಚ ನ್ಯಾಯಾಲಯ ತೀರ್ಮಾನ ಮಾಡಿಲ್ಲ. ಸಂವಿಧಾನಬದ್ಧವಾಗಿ ಯೋಚನೆ ಮಾಡಿದಾಗ ಅದು ಮೆಂಟೇನಬಲ್ ಆಗೋಲ್ಲ. ಈಗಾಗಲೇ ಅದರ ಬಗ್ಗೆ ಸಾಕಷ್ಟು ವಾದಗಳಾಗಿವೆ. ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಕರಣವಿರುವಾಗ ಯಾವುದೇ ವ್ಯಾಖ್ಯಾನ ಮಾಡುವುದಿಲ್ಲ. ಪ್ರಕರಣದ ಮೇಲೆ ಯಾವುದೇ ಪ್ರಭಾವ ಬೀರಬಾರದು ಎನ್ನುವ ಕಾರಣದಿಂದ ನಾನು ವ್ಯಾಖ್ಯಾನ ಮಾಡುವುದಿಲ್ಲ ಎಂದರು.