ನವದೆಹಲಿ: ಅರುಣಾಚಲ ಪ್ರದೇಶಕ್ಕೆ ಸಮೀಪದಲ್ಲಿರುವ ಯುದ್ಧ ವಿಮಾನಗಳ ಮೇಲೆ ದಾಳಿ ನಡೆಸುವ ಸಾಮರ್ಥ್ಯ ಹೊಂದಿರುವ ಚೀನಾದ ಡ್ಯುಯಲ್-ಯೂಸ್ ವಿಮಾನ ನಿಲ್ದಾಣವು ಕಟ್ಟಡ ನಿರ್ಮಾಣ ಮಾಡಿದೆ ಎನ್ನಲಾಗಿದೆ. ಈ ಬಗ್ಗೆ ಇಂಡಿಯಾ ಟುಡೇ ವರದಿ ಮಾಡಿದೆ. ಡಿಸೆಂಬರ್ 9.ರಂದು ಗಡಿ ಘರ್ಷಣೆಯ ನಂತರ ಭಾರತ ಮತ್ತು ಚೀನಾ ನಡುವಿನ ಉದ್ವಿಗ್ನತೆಯ ನಡುವೆ ಇದು ಕಂಡು ಬಂದಿದೆ.
ಅರುಣಾಚಲದ ತವಾಂಗ್ನ ವಾಸ್ತವಿಕ ನಿಯಂತ್ರಣ ರೇಖೆ (ಎಲ್ಎಸಿ) ಬಳಿ ಉದ್ವಿಗ್ನತೆ ಹೆಚ್ಚಾಗುತ್ತಿದ್ದಂತೆ ಭಾರತ-ಚೀನಾ ಗಡಿಯಿಂದ ಉತ್ತರಕ್ಕೆ ಸುಮಾರು 155 ಕಿ.ಮೀ ದೂರದಲ್ಲಿರುವ ಈ ವಿಮಾನ ನಿಲ್ದಾಣವನ್ನು ಸಿದ್ಧಗೊಳಿಸಲಾಗುತ್ತಿದೆ ಎನ್ನಲಾಗಿದೆ.
ಅಂದ ಹಾಗೇ ಡಿಸೆಂಬರ್ 9. ರಂದು ಗಡಿ ಘರ್ಷಣೆ ಗೆ ಸಂಬಂಧಪಟ್ಟಂತೆ ಭಾರತ ಮತ್ತು ಚೀನಾ ನಡುವಿನ ಉದ್ವಿಗ್ನತೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವೈರಲ್ ಆಗಿರೋ ವಿಡಿಯೋದಲ್ಲಿ ನಮ್ಮ ಹೆಮ್ಮೆಯ ಭಾರತೀಯ ಸೈನಿಕರು ಚೀನೀ ಸೈನಿಕರಿಗೆ ಯಾವೆಲ್ಲ ರೀತಿಯಲ್ಲಿ ಟಾಂಗ್ ನೀಡುತ್ತಿರುವುದನ್ನು ಕಾಣಬಹುದಾಗಿದೆ. ಆದರೆ ವಿಡಿಯೋಗೆ ಸಂಬಂಧಪಟ್ಟಂತೆ ಉಭಯ ದೇಶಗಳಿಂದ ಇನ್ನೂ ಯಾವುದೇ ಅಧಿಕೃತ ಮಾಹಿತಿಯನ್ನು ಹಂಚಿಕೊಂಡಿಲ್ಲ.
ಈ ನಡುವೆ ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿಯ (ಪಿಎಲ್ಎ) ಸೈನಿಕರು ಎಲ್ಎಸಿಯನ್ನು ಉಲ್ಲಂಘಿಸಲು ಮತ್ತು ಏಕಪಕ್ಷೀಯವಾಗಿ ಯಥಾಸ್ಥಿತಿಯನ್ನು ಬದಲಾಯಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ರಾಜನಾಥ್ ಸಿಂಗ್ ಆರೋಪಿಸಿದ್ದಾರೆ. ಎರಡೂ ಕಡೆ ಗಾಯಗಳಾಗಿದ್ದು, ಭಾರತೀಯ ಸೈನಿಕರಲ್ಲಿ ಯಾವುದೇ ಸಾವು ನೋವು ಸಂಭವಿಸಿಲ್ಲ ಎಂದು ರಕ್ಷಣಾ ಸಚಿವರು ಸಂಸತ್ತಿಗೆ ಮಾಹಿತಿ ನೀಡಿದರು.
ಆದರೆ ಭಾರತೀಯ ಪಡೆಗಳು ತವಾಂಗ್ನಲ್ಲಿ ‘ಅಕ್ರಮವಾಗಿ’ ಗಡಿಯನ್ನು ದಾಟಿವೆ ಮತ್ತು ಚೀನೀ ಪಡೆಗಳಿಗೆ “ಅಡ್ಡಿಪಡಿಸಿವೆ” ಎಂದು ಚೀನಾ ಆರೋಪಿಸಿದೆ, ಇದು ಕಳೆದ ವಾರ ಹೊಸ ಸಂಘರ್ಷಕ್ಕೆ ಕಾರಣವಾಯಿತು ಎಂದು ಎಎಫ್ಪಿ ವರದಿಗಳು ತಿಳಿಸಿವೆ.