ಮಂಡ್ಯ: ಆರೋಗ್ಯಕರ ಸಮಾಜ ನಿರ್ಮಾಣದಲ್ಲಿ ಪೌರ ಕಾರ್ಮಿಕರ ಪಾತ್ರ ಅತ್ಯಮೂಲ್ಯವಾಗಿದ್ದು, ಇವರನ್ನು ಗೌರವಯುತವಾಗಿ ಕಾಣುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ಶಾಸಕ ಡಿ.ಸಿ.ತಮ್ಮಣ್ಣ ಹೇಳಿದರು.
ಮದ್ದೂರು ಪಟ್ಟಣದ ಸಿದ್ಧಾರ್ಥ ನಗರದಲ್ಲಿ 2 ಕೋಟಿ ರೂಪಾಯಿ ವೆಚ್ಚದಲ್ಲಿ 23 ಪೌರ ಕಾರ್ಮಿಕರಿಗೆ ವಸತಿ ಸಮುಚ್ಚಯ ನಿರ್ಮಾಣ ಕಾಮಗಾರಿಗೆ ಸೋಮವಾರ ಚಾಲನೆ ನೀಡಿ ಮಾತನಾಡಿ, ಪೌರ ಕಾರ್ಮಿಕರು ಸ್ಥಳೀಯ ಸಂಸ್ಥೆಗಳ ಆಧಾರ ಸ್ತಂಭ ಮತ್ತು ಭೂಸೇನಾ ಸೈನಿಕರಿದ್ದಂತೆ. ಕೊರೋನಾ, ಮಳೆ, ಚಳಿ, ಗಾಳಿ ಎಂತಹ ಸಂದಿಗ್ಧ ಪರಿಸ್ಥಿತಿಯಲ್ಲೂ ತಮ್ಮ ಆರೋಗ್ಯವನ್ನು ಬದಿಗೊತ್ತಿ ಸ್ವಚ್ಚತಾ ಕಾರ್ಯ ಮಾಡುತ್ತಾರೆ. ಇಂತಹ ಪೌರ ಕಾರ್ಮಿಕರು ಅನೈರ್ಮಲ್ಯದ ಜೊತೆ ಹೋರಾಡಿ ಉತ್ತಮ ಪರಿಸರ ಸೃಷ್ಟಿಸುವುದು ಒಂದು ಯುದ್ದವಿದ್ದಂತೆ ಎಂದು ತಿಳಿಸಿದರು.
ಈ ಸೈನಿಕರಿಗೆ ಮೂಲ ಸೌಲಭ್ಯಗಳನ್ನು ಕಲ್ಪಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಆಗಾಗಿ ಪುರಸಭೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ 23 ಖಾಯಂ ಪೌರ ಕಾರ್ಮಿಕರಿಗೆ 23 ವಸತಿ ಸಂಕೀರ್ಣ ನಿರ್ಮಾಣ ಮಾಡಲಾಗುತ್ತಿದ್ದು, ಕಾಮಗಾರಿ 8 ತಿಂಗಳಲ್ಲಿ ಪೂರ್ಣಗೊಳ್ಳಲಿದೆ ಎಂದರು.
ಪುರಸಭೆ ಸದಸ್ಯರು ಕಟ್ಟಡದ ಗುಣಮಟ್ಟವನ್ನು ಆಗಿಂದಾಗ್ಗೆ ಪರೀಕ್ಷಿಸುವ ಮೂಲಕ ಪೌರ ಕಾರ್ಮಿಕರಿಗೆ ಉತ್ತಮ ಗುಣ ಮಟ್ಟದ ಗೃಹ ನಿರ್ಮಾಣಕ್ಕೆ ಕ್ರಮ ವಹಿಸಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಪುರಸಭೆ ಅಧ್ಯಕ್ಷ ಸುರೇಶ್ ಕುಮಾರ್, ಉಪಾಧ್ಯಕ್ಷೆ ಸುಮಿತ್ರ ರಮೇಶ್, ಸ್ಥಾಯಿ ಸಮಿತಿ ಅಧ್ಯಕ್ಷ ಟಿ.ಆರ್.ಪ್ರಸನ್ನ ಕುಮಾರ್ ಸದಸ್ಯರಾದ ಎಂ.ಐ. ಪ್ರವೀಣ್, ಎಸ್.ಮಹೇಶ್, ಬಸವರಾಜು, ಸಿದ್ದರಾಜು, ಆದಿಲ್ ಅಲಿ ಖಾನ್, ಲತಾ, ರತ್ನ ತಿಮ್ಮಯ್ಯ, ಪ್ರಮೀಳ. ವನಿತಾ, ಮ.ನ.ಪ್ರಸನ್ನ ಕುಮಾರ್, ಸರ್ವಮಂಗಳ, ಮುಖ್ಯಾಧಿಕಾರಿ ಅಶೋಕ್, ಪರಿಸರ ಅಭಿಯಂತರ ನಾಗೇಂದ್ರ ಗಾವಂಕರ್, ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿಳಿಯಪ್ಪ, ಜೆಡಿಎಸ್ ತಾಲೂಕು ಅಧ್ಯಕ್ಷ ಚಿಕ್ಕ ತಿಮ್ಮೇಗೌಡ, ಗ್ರಾ.ಪಂ ಅಧ್ಯಕ್ಷ ರವಿಕುಮಾರ್ ಮುಖಂಡರಾದ ರಮೇಶ್, ಫೈರೋಜ್, ಅಕ್ಮಲ್ ಮತ್ತಿತರರು ಇದ್ದರು.
ವರದಿ : ಗಿರೀಶ್ ರಾಜ್, ಮಂಡ್ಯ