ಬೆಂಗಳೂರು: ಬೆಳಗಾವಿ ಗಡಿ ವಿಚಾರದಲ್ಲಿ ಯಾವುದೇ ವಿವಾದವಿಲ್ಲ. ಈ ಬಗ್ಗೆ ಮಹಾಜನ್ ವರದಿಯೇ ಅಂತಿಮ. ಇದು ಕರ್ನಾಟಕ ಸರ್ಕಾರದ ಅಂತಿಮ ನಿಲುವು. ಇದರಲ್ಲಿ ಯಾವುದೇ ಗೊಂದಲವಿಲ್ಲ ಎಂಬುದಾಗಿ ಗಡಿ ಹಾಗೂ ನದಿಗಳ ರಕ್ಷಣಾ ಆಯೋಗದ ಅಧ್ಯಕ್ಷ ನಿವೃತ್ತ ನ್ಯಾಯಮೂರ್ತಿ ಶಿವರಾಜ್ ಪಾಟೀಲ್ ತಿಳಿಸಿದ್ದಾರೆ.
ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಬೆಳಗಾವಿ ಗಡಿಯ ವಿಚಾರವಾಗಿ ಸದನದಲ್ಲಿ ಬಹಳಷ್ಟು ಚರ್ಚೆಯಾಗಿದೆ. ಮಹಾಜನ್ ವರದಿ ಅಂತಿಮ ಎಂಬುದಾಗಿ ಸದನದಲ್ಲೇ ತೀರ್ಮಾನವಾಗಿದೆ. ನಮ್ಮ ನಿಲುವು ಸ್ಪಷ್ಟ. ಮಹಾಜನ್ ವರದಿಯೇ ಅಂತಿಮ. ಅದರಲ್ಲಿ ಯಾವುದೇ ಗೊಂದಲವಿಲ್ಲ ಎಂಬುದಾಗಿ ಹೇಳಿದ್ದಾರೆ.
ಮಹಾರಾಷ್ಟ್ರದಿಂದ ಬೆಳಗಾವಿಯ ಗಡಿ ಬಗ್ಗೆ ಕ್ಯಾತೆ ತೆಗೆಯಲಾಗಿದೆ. ಮಹಾ ಸಚಿವರು ಬೆಳಗಾವಿ ಗಡಿ ಪ್ರವೇಶಿಸುವುದಾಗಿ ಘೋಷಣೆ ಮಾಡಿ, ಬಳಿಕ ರಾಜ್ಯ ಸರ್ಕಾರ ಅವಕಾಶ ನೀಡದೇ ಇದ್ದ ಕಾರಣ ಆಗಮಿಸಿರಲಿಲ್ಲ. ಅಲ್ಲದೇ ಮಹಾ ಗಡಿ ಕ್ಯಾತೆಯ ಬಗ್ಗೆ ಕನ್ನಡಿಗರು ಸಿಡಿದೆದ್ದಿದ್ದರು. ಹಲವೆಡೆ ಪ್ರತಿಭಟನೆ ಕೂಡ ನಡೆಸಲಾಗಿದೆ.