ಸಂಭಾಲ್(ಉತ್ತರ ಪ್ರದೇಶ): ಮದುವೆಗೆಂದು ಬಂದಿದ್ದ ಸುಮಾರು 300 ಅತಿಥಿಗಳ ಸಮ್ಮುಖದಲ್ಲಿ ವರನು ವೇದಿಕೆಯಲ್ಲಿ ಚುಂಬಿಸಿದಕ್ಕೆ ಕೋಪಗೊಂಡ ವಧು ತನ್ನ ಮದುವೆಯನ್ನು ರದ್ದುಗೊಳಿಸಿರುವ ಘಟನೆ ಸಂಭಾಲ್ನಲ್ಲಿ ನಡೆದಿದೆ.
ವಧು ವರನ ವಿರುದ್ಧ ದೂರು ನೀಡಲು ಪೊಲೀಸ್ ಠಾಣೆಗೆ ಬಂದಿದ್ದಾಳೆ. ವರದಿಗಳ ಪ್ರಕಾರ, ಮಂಗಳವಾರ ರಾತ್ರಿ ದಂಪತಿಗಳು ಹೂಮಾಲೆ ವಿನಿಮಯ ಮಾಡಿಕೊಂಡ ನಂತರ ವರ ವಧುವಿಗೆ ಚುಂಬಿಸಿದ್ದಾನೆ. ಇದ್ರಿಂದ ಕೋಪಗೊಂಡು ವಧು ತಕ್ಷಣವೇ ವೇದಿಕೆಯಿಂದ ಹೊರನಡೆದಳು. ವಧು ನೀಡಿದ ದೂರಿನಲ್ಲಿ, ವರನು ತನ್ನನ್ನು ಅನುಚಿತವಾಗಿ ಸ್ಪರ್ಶಿಸಿದನೆಂದು ವಧು ಆರೋಪಿಸಿದ್ದಾಳೆ. ಈ ರೀತಿಯ ವರ್ತನೆಯಿಂದ ಆಕೆ ಅನುಮಾನ ಗೊಂಡಿರುವುದಾಗಿ ಹೇಳಿದ್ದಾಳೆ.
ವರ ತನ್ನ ಸ್ನೇಹಿತರೊಂದಿಗೆ ಮಾಡಿದ ಚಾಲೆಂಜ್ನಲ್ಲಿ ಗೆಲ್ಲಲು, ವೇದಿಕೆಯ ಮೇಲೆಯೇ ವಧುವುಗೆ ಚುಂಬಿಸಿದ್ದಾನೆ ಎನ್ನಲಾಗಿದೆ. ಪೊಲೀಸರು ಮಧ್ಯಸ್ಥಿಕೆ ವಹಿಸಲು ಪ್ರಯತ್ನಿಸಿದರು. ಆದರೆ, ಇದಕ್ಕೆ ಒಪ್ಪದ ವಧು ಮದುವೆಯನ್ನು ರದ್ದುಗೊಳಿಸಿದ್ದು, ಅತಿಥಿಗಳು ಮನೆಗೆ ಮರಳಿದ್ದಾರೆ.
ಈ ಬಗ್ಗೆ ಮಾತನಾಡಿದ ವಧುವಿನ ತಾಯಿ, “ವರ ಸ್ನೇಹಿತರಿಂದ ಪ್ರಚೋದನೆಗೆ ಒಳಗಾಗಿದ್ದಾನೆ. ನಾವು ನನ್ನ ಮಗಳನ್ನು ಮನವೊಲಿಸಲು ಪ್ರಯತ್ನಿಸಿದ್ದೇವೆ. ಆದರೆ, ಅವಳು ಅವನನ್ನು ಮದುವೆಯಾಗಲು ನಿರಾಕರಿಸಿದ್ದಾಳೆ. ನಾವು ಇನ್ನೂ ಕೆಲವು ದಿನ ಕಾಯಲು ನಿರ್ಧರಿಸಿದ್ದೇವೆ. ಈ ಬಗ್ಗೆ ನಿರ್ಧರಿಸಲು ಸ್ವಲ್ಪ ಸಮಯ ಬೇಕು ಎಂದಿದ್ದಾರೆ.
ಘಟನೆ ಸಂಭವಿಸುವ ವೇಳೆಗೆ ವಿಧಿವಿಧಾನಗಳು ನಡೆದಿದ್ದರಿಂದ ತಾಂತ್ರಿಕವಾಗಿ ದಂಪತಿಗಳು ವಿವಾಹವಾಗಿದ್ದಾರೆ. ಒಂದೆರಡು ದಿನ ಕಾಯುವ ನಂತರ ಏನು ಮಾಡಬೇಕೆಂದು ನಾವು ನಿರ್ಧರಿಸುತ್ತೇವೆ ಎಂದು ಪೊಲೀಸರು ತಿಳಿಸಿದ್ದಾರೆ.