ಬೆಂಗಳೂರು: ನೀವು ನನ್ನನ್ನು ಬಾಲಂಗೋಚಿಯಾಗಿಯಾದರೂ ಬಳಸಿಕೊಳ್ಳಿ, ತಲೆಯಂತಾದರು ಬಳಸಿಕೊಳ್ಳಿ. ನಿಮ್ಮ ಸ್ಪೂರ್ತಿ, ಆತ್ಮವಿಶ್ವಾಸ ನೋಡುತ್ತಿದ್ದರೆ ನಮ್ಮನ್ನು ವಿಧಾನಸೌಧದಲ್ಲಿ ಕೂರಿಸುವ ರೀತಿ ಇದೆ. ನೀವು ಏನು ಮಾಡುತ್ತೀರೋ ಗೊತ್ತಿಲ್ಲ, ನಿಮ್ಮ ಮನೆ ಬಾಗಿಲಿಗೆ ಅವಕಾಶ ಬಂದಿದ್ದು ಅದನ್ನು ಕಳೆದುಕೊಳ್ಳಬೇಡಿ. ನನ್ನ ಕೈಗೆ ಪೆನ್ನು ಪೇಪರ್ ನೀಡಿ ಈ ಸಮಾಜಕ್ಕೆ ಯಾವ ರೀತಿ ಅನುಕೂಲ ಮಾಡಿಕೊಡಬೇಕು ಎಂದು ನನಗೆ ಗೊತ್ತಿದೆ. ನಿಮ್ಮ ಆಶೀರ್ವಾದ ನನ್ನ ಮೇಲೆ ಇರಲಿ ಎಂಬುದಾಗಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಮೀಸಲಾತಿ ಹೋರಾಟಕ್ಕೆ ಕರೆ ನೀಡಿದ್ದಾರೆ.
ಇಂದು ಒಕ್ಕಲಿಗರ ಮೀಸಲಾತಿ ಸಭೆಯಲ್ಲಿ ಮಾತನಾಡಿದ ಅವರು, ಒಕ್ಕಲಿಗರ ಮೀಸಲಾತಿ ವಿಚಾರವಾಗಿ ಎಲ್ಲರ ಜತೆ ಚರ್ಚಿಸಿ ತೀರ್ಮಾನಕ್ಕೆ ಬರಲು ಈ ಸಭೆ ನಡೆಸಲಾಗುತ್ತಿದೆ. ಈ ಸಭೆ ನೋಡಿದ ನಂತರ ನನಗೆ ಒಂದು ಮಾತು ನೆನಪಾಗುತ್ತಿದೆ. ಜೊತೆಗೂಡುವುದು ಆರಂಭ, ಜೊತೆಗೂಡಿ ಚರ್ಚಿಸುವುದು ಪ್ರಗತಿ, ಜೊತೆಗೂಡಿ ಹೋರಾಟ ಮಾಡುವುದು ಯಶಸ್ಸು. ಅದೇ ರೀತಿ ನೀವು ನಾವೆಲ್ಲರೂ ಪಕ್ಷಭೇದ ಮರೆತು, ವೈಷಮ್ಯಗಳನ್ನು ಪಕ್ಕಕ್ಕಿಟ್ಟು ಪೂಜ್ಯರ ನಾಯಕತ್ವದಲ್ಲಿ ಒಗ್ಗಟ್ಟಿನಿಂದ ಹೋರಾಟ ಮಾಡಿದರೆ ಮಾತ್ರ ಯಶಸ್ಸು ಕಾಣಲು ಸಾಧ್ಯ. ಯಶಸ್ಸು ಎಂಬುದು ಸುಮ್ಮನೆ ಬರುವುದಿಲ್ಲ. ಸರ್ಕಾರ ಹಾಗೂ ಅನೇಕ ಪಕ್ಷಗಳ ನಿಲುವು ಬೇರೆ ಬೇರೆ ಇರುತ್ತದೆ. ಆದರೆ ನಾವು ಬೇರೆಯವರ ಹಕ್ಕನ್ನು ಕಿತ್ತುಕೊಳ್ಳಲು ಇಲ್ಲಿ ಸಭೆ ಸೇರಿಲ್ಲ ಎಂದರು.
ಸೂರ್ಯ ಮುದ್ರೆ ಮಾಡುವುದರಿಂದಾಗುವ ಲಾಭಗಳೇನು? ಇದನ್ನು ಮಾಡುವ ಸರಿಯಾದ ವಿಧಾನ ತಿಳಿಯಿರಿ | surya mudra
ನಾವು ಹುಟ್ಟುವಾಗ ಇಂತಹುದೆ ಜಾತಿಯಲ್ಲಿ ಹುಟ್ಟಬೇಕು ಎಂದು ಅರ್ಜಿ ಹಾಕಿಲ್ಲ. ಹುಟ್ಟುವಾಗ ಉಸಿರು ಇರುತ್ತದೆ, ಆದರೆ ಹೆಸರು ಇರುವುದಿಲ್ಲ. ಸತ್ತಾಗ ಹೆಸರು ಇರುತ್ತದೆ, ಆದರೆ ಉಸಿರೇ ಇರುವುದಿಲ್ಲ. ಹುಟ್ಟು ಸಾವಿನ ಮಧ್ಯೆ ನಾವು ನಮ್ಮ ಸಮಾಜಕ್ಕೆ ಏನಾದರೂ ಕೊಡುಗೆ ಕೊಟ್ಟು ಹೋಗಬೇಕು. ಅಮ್ಮನ ನೆನಪು ಪ್ರೀತಿಯ ಮೂಲ, ಗುರುವಿನ ನೆನಪು ಕಲಿಕೆಯ ಮೂಲ, ದೇವರ ನೆನಪು ಭಕ್ತಿಯ ಮೂಲ, ನಿಮ್ಮವರ ನೆನಪು ಮನುಷ್ಯತ್ವದ ಮೂಲ ಎಂದು ಹೇಳಿದರು.
ನಮ್ಮ ತಂದೆ, ತಾಯಿಗಳಿಂದ ನಾವು ಒಕ್ಕಲಿಗ ಜಾತಿಯಲ್ಲಿ ಹುಟ್ಟಿ, ಬೆಳೆದು, ಸಂಘಟಿತರಾಗಿದ್ದೇವೆ. ಈ ವೇದಿಕೆಯಲ್ಲಿರುವ ನಮ್ಮೆಲ್ಲರನನ್ನೂ ಸಮಾಜ ಹಾಗೂ ನಮ್ಮ ಪಕ್ಷದಲ್ಲಿ ಗುರುತಿಸುವುದೇ ಒಕ್ಕಲಿಗರು ಎಂದು. ನನ್ನನ್ನು ಕಾಂಗ್ರೆಸ್ ಪಕ್ಷ ರಾಜ್ಯದ ಅಧ್ಯಕ್ಷರನ್ನಾಗಿ ಮಾಡಲಾಗಿದೆ. ಎಸ್.ಎಮ್. ಕೃಷ್ಣ ಅವರ ನಂತರ ನನ್ನನ್ನು ಈ ಸ್ಥಾನದಲ್ಲಿ ಕೂರಿಸಿದ್ದಾರೆ. ನನ್ನ ಸಂಘಟನೆಯ ಇತಿಹಾಸ ಒಂದು ಕಡೆಯಾದರೆ, ನಾನು ಒಕ್ಕಲಿಗ ಸಮುದಾಯದವನು ಎಂಬ ಕಾರಣಕ್ಕೆ ಆಯ್ಕೆ ಮಾಡಿರುವುದೂ ಮತ್ತೊಂದು ಸತ್ಯ ಎಂದರು.
ಸಂವಿಧಾನದ ಆಶಯಗಳಿಗೆ ಕೊಳ್ಳಿ ಇಟ್ಟಿದ್ದೆ ಕಾಂಗ್ರೆಸ್: ಟ್ಟಿಟ್ ಮಾಡಿ ಕುಟುಕಿದ ಬಿಜೆಪಿ
ಆರ್. ಅಶೋಕ್ ಸೇರಿದಂತೆ ಇಲ್ಲಿರುವ ಮಂತ್ರಿಗಳು ಈ ಸ್ಥಾನಕ್ಕೆ ಬರಲು ಕಾರಣ ಅವರು ಒಕ್ಕಲಿಗ ಸಮಾಜದ ಪ್ರತಿನಿಧಿಯಾಗಿರುವುದಕ್ಕೆ. ಇದನ್ನು ನಾವೆಲ್ಲ ಗಮನದಲ್ಲಿಟ್ಟುಕೊಳ್ಳಬೇಕು. ನಾವು ನಮ್ಮ ಹಕ್ಕು ಕೇಳಲು ಇಲ್ಲಿ ನಿಂತಿದ್ದೇವೆ. ಮೀಸಲಾತಿ ವಿಚಾರವಾಗಿ ಸುಪ್ರೀಂ ಕೋರ್ಟ್ ಆದೇಶ ಬಂದ ನಂತರ, ನಮ್ಮ ಸಮಾಜದ ಕಾನೂನು ತಜ್ಞರು ಅಧ್ಯಯನ ಮಾಡಿ, ಸ್ವಾಮೀಜಿಗಳ ಜತೆ ಚರ್ಚೆ ಮಾಡಿದ್ದಾರೆ. ನಾವು ಬೇರೆಯವರ ಹಕ್ಕನ್ನು ಕೇಳುತ್ತಿಲ್ಲ. ಈ ಸಮಾಜದ ಜನಸಂಖ್ಯೆ ಎಷ್ಟಿದೆಯೋ ಅದರ ಆಧಾರದ ಮೇಲೆ ನಮಗೆ ಮೀಸಲಾತಿ ನೀಡಿ ಎಂದು ಕೇಳುತ್ತಿದ್ದೇವೆ. ನಾವು ಯಾರಿಗೂ ತೊಂದರೆ ಮಾಡುವವರಲ್ಲ ಎಂದು ತಿಳಿಸಿದರು.
ಪರಿಶಿಷ್ಟ ಜಾತಿ ಹಾಗೂ ಪಂಗಡದವರಿಗೆ ಜನಸಂಖ್ಯೆ ಆಧಾರದ ಮೇಲೆ ಕಾಯ್ದೆ ತಂದು ಅದಕ್ಕೆ ಅನುಗುಣವಾಗಿ ಬಜೆಟ್ ನಲ್ಲಿ ಅನುದಾನ ನೀಡುತ್ತಿದ್ದೇವೆ. ಈ ಮೀಸಲಾತಿ ವಿಚಾರವಾಗಿ ಬೇರೆ ಸಮುದಾಯಗಳು ಕೂಡ ಹೋರಾಟ ಮಾಡುತ್ತಿದ್ದು, ಅವರ ಹೋರಾಟದ ಬಗ್ಗೆ ನಮ್ಮ ಯಾವುದೇ ತಕರಾರಿಲ್ಲ. ಅದೇ ಹಕ್ಕನ್ನು ನಾವು ಪಡೆಯಲು ಹೋರಾಟ ಮಾಡಬೇಕಿದೆ. ಹುಳಿ ಪೆಟ್ಟು ಬೀಳದೆ ಯಾವ ಕಲ್ಲು ಕೂಡ ಶಿಲೆಯಾಗುವುದಿಲ್ಲ, ನೇಗಿಲಿನಿಂದ ಉಳುಮೆ ಮಾಡದೆ ಯಾವ ಭೂಮಿಯು ಫಲ ನೀಡುವುದಿಲ್ಲ. ಅದೇ ರೀತಿ ಒಕ್ಕಲುತನದ ಜವಾಬ್ದಾರಿಯನ್ನು ನಮ್ಮ ಪೂರ್ವಜರು ನಮಗೆ ಜವಾಬ್ದಾರಿ ನೀಡಿದ್ದಾರೆ. ನಾವು ಅದನ್ನು ಉಳಿಸಿಕೊಂಡು ಹೋಗಬೇಕಿದೆ ಎಂದು ಹೇಳಿದರು.
ದೇವರು ನಮಗೆ ವರವನ್ನೂ ಕೊಡುವುದಿಲ್ಲ, ಶಾಪವನ್ನೂ ಕೊಡುವುದಿಲ್ಲ. ದೇವರು ನಮಗೆ ಕೇವಲ ಅವಕಾಶಗಳನ್ನು ಮಾತ್ರ ನೀಡುತ್ತಾನೆ. ಆ ಅವಕಾಶಗಳನ್ನು ನಾವು ಹೇಗೆ ಬಳಸಿಕೊಳ್ಳುತ್ತೇವೆ ಎಂಬುದು ಮುಖ್ಯವಾಗುತ್ತದೆ. ಈಗ ನಮಗೆ ನಮ್ಮ ಹಕ್ಕಿನ ಧ್ವನಿ ಎತ್ತಲು ಅವಕಾಶ ಸಿಕ್ಕಿದೆ. ಇದನ್ನು ಬಳಸಿಕೊಂಡು ನಮ್ಮ ಸಮಾಜದ ಹಕ್ಕನ್ನು ಕೇಳಲು ಹೋರಾಟ ಮಾಡಬೇಕಿದೆ ಎಂದು ತಿಳಿಸಿದರು.
BIG NEWS: ರಾಜ್ಯದಲ್ಲಿ ಮತ್ತೆ ಶುರುವಾಯ್ತು ‘ಮೀಸಲಾತಿ ಮಹಾಯುದ್ಧ’: ಸರ್ಕಾರಕ್ಕೆ ‘ಒಕ್ಕಲಿಗ ಸಮುದಾಯ’ದ ಡೆಡ್ ಲೈನ್
ನಮ್ಮ ಹೋರಾಟ ಯಾವ ನಿಟ್ಟಿನಲ್ಲಿ ಸಾಗಬೇಕು ಎಂದು ಶ್ರೀಗಳು ಮಾರ್ಗದರ್ಶನ ನೀಡುತ್ತಾರೆ. ಶುಭ ಗಳಿಗೆ ಶುಭ ಮಹೂರ್ತ ನಿಗದಿ ಮಾಡಿದ್ದು, ಇದು ನಮ್ಮ ವೈಯಕ್ತಿಕ ಹೋರಾಟವಲ್ಲ. ನಾವು ಹುಟ್ಟಿರುವ ಈ ಸಮಾಜಕ್ಕಾಗಿ, ಅದರ ಜನರಗಾಗಿ ಮಾಡುತ್ತಿರುವ ಹೋರಾಟ. ನಾವು ಇಲ್ಲಿ ಎಲ್ಲರೂ ಸೇರಿ ದೀಪ ಹಚ್ಚಿದ್ದು, ನಮಗೆ ದೀಪದ ಬೆಳಕು ಮಾತ್ರ ಕಾಣುತ್ತಿದೆ. ಆ ಬೆಳಕಿನ ಹಿಂದೆ ಇರುವ ಭಕ್ತಿ ಹಾಗೂ ಎಣ್ಣೆ ರೀತಿಯಲ್ಲಿ ನಮ್ಮ ಸಮಾಜದ ಜನರಿದ್ದಾರೆ. ಸಮುದಾಯದ ನಾಯಕರು ಎನಿಸಿಕೊಂಡಿರುವ ನಾವೆಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಬೇಕಿದೆ ಎಂದರು.
ಇವತ್ತು ನಮಗೆ ಒಂದು ಅವಕಾಶ ಸಿಕ್ಕಿದೆ. ಇಂದು ನಮ್ಮ ಮನೆ ಬಾಗಿಲಿಗೆ ಬೆಳಕು ಹರಿದು ಬಂದಿದೆ. ಅದನ್ನು ನೀವು ರಾಜಕೀಯವಾಗಿ ಬಳಸಿಕೊಳ್ಳಬೇಕು. ರಾಜಕೀಯ ಅವಕಾಶ ಬಳಸಿಕೊಳ್ಳಬೇಕು. ನೀವು ನಿಮ್ಮ ಮನೆಯ ಕಿಟಕಿ ಬಾಗಿಲನ್ನು ತೆರೆದು ಆ ಬೆಳಕನ್ನು ಒಳಗೆ ಕರೆದುಕೊಳ್ಳಬೇಕು. ಲಕ್ಷ್ಮಿಯನ್ನು ಮನೆಯೊಳಗೆ ಕರೆದುಕೊಂಡಂತೆ ಅಧಿಕಾರವನ್ನು ಪಡೆದುಕೊಳ್ಳಬೇಕು. ನಿಮ್ಮ ಕೈಯಲ್ಲಿ ಅಧಿಕಾರ ಇಲ್ಲದಿದ್ದರೆ ನಿಮ್ಮಿಂದ ಏನನ್ನೂ ಮಾಡಲು ಸಾಧ್ಯವಿಲ್ಲ. ಅಧಿಕಾರವನ್ನು ಕೊಡುವುದು, ಬಿಡುವುದು ಈ ಜನಾಂಗದ ಕೈಯಲ್ಲಿ ಮಾತ್ರ ಇದೆ ಎಂದರು.
ನಾನು ಪಕ್ಷದ ಅಧ್ಯಕ್ಷ ಎಂದು ಆ ಸ್ಥಾನದಿಂದ ನೋಡಿದರೆ ಇದಕ್ಕೂ ಕಾರಣ ಈ ಸಮಾಜ. ನನ್ನನ್ನು ಈ ಸಮಾಜ ಗುರುತಿಸಿ ನಾಯಕನನ್ನಾಗಿ ಬೆಳೆಸಿದೆ. ನನ್ನ ಕಷ್ಟಕಾಲದಲ್ಲಿ ಬೆಂಬಲಕ್ಕೆ ನಿಂತಿದೆ. ನಾನು ಜೈಲು ಸೇರುವ ಸಮಯ ಬಂದಾಗ ಸಾವಿರಾರು ಜನ ಬಂದು ಸೇರಿ, ನನಗೆ ಶಕ್ತಿ ತುಂಬಿ ವಾಪಸ್ ಕರೆತಂದಿದ್ದಾರೆ. ನಿಮ್ಮೆಲ್ಲರ ಮುಂದೆ ಇಷ್ಟು ಧೈರ್ಯವಾಗಿ ಮಾತನಾಡುವ ಶಕ್ತಿಯನ್ನೂ ತುಂಬಿದ್ದಾರೆ. ಈ ಸಮಾಜಕ್ಕೆ ಋಣ ತೀರಿಸಬೇಕಾಗಿದ್ದು ನನ್ನ ಕರ್ತವ್ಯ ಎಂದು ಹೇಳಿದರು.
ನಾನು ಆಗಾಗ್ಗೆ ಒಂದು ಮಾತು ಹೇಳುತ್ತೇನೆ. ಮನುಷ್ಯನ ಹುಟ್ಟು ಆಕಸ್ಮಿಕ, ಸಾವು ಅನಿವಾರ್ಯ. ಜನನ ಉಚಿತ ಮರಣ ಖಚಿತ. ಈ ಹುಟ್ಟು ಸಾವಿನ ಮಧ್ಯೆ ನಾವು ಏನು ಸಾಧನೆ ಮಾಡುತ್ತೇವೆ ಎಂಬುದು ಮುಖ್ಯವಾಗುತ್ತದೆ. ನಮ್ಮ ಜನಸಂಖ್ಯೆ ಆಧಾರದ ಮೇಲೆ ನಾವು ನಮ್ಮ ಸಮಾಜದ ಹಕ್ಕನ್ನು ಕೇಳುತ್ತಿದ್ದೇವೆ. ಈ ಮೀಸಲಾತಿ ಹಾಗೂ ಉದ್ಯೋಗ ನನಗೆ ಬೇಕಾಗಿಲ್ಲದಿರಬಹುದು. ಆದರೆ ನಮ್ಮ ಸಮುದಾಯದವರಿಗೆ ಬೇಕಾಗಿದೆ. ಮಕ್ಕಳನ್ನು ಶಾಲೆಗೆ ಸೇರಿಸುವುದು, ಪಂಚಾಯಿತಿಯಿಂದ ಹಿಡಿದು ಪಾರ್ಲಿಮೆಂಟ್ ವರೆಗೆ ಚುನಾವಣೆಗೆ ಅರ್ಜಿ ಹಾಕುವವರೆಗೂ ನೀವು ಯಾವ ಜಾತಿ ಎಂದು ಕೇಳಲಾಗುತ್ತದೆ. ಹೀಗಾಗಿ ನಾವು ನಮ್ಮ ಜಾತಿಯನ್ನು ಮುಚ್ಚಿಟ್ಟುಕೊಳ್ಳಲು ಸಾಧ್ಯವಿಲ್ಲ ಎಂದರು.
ನಾವು ದೊಡ್ಡ ಹೋರಾಟಕ್ಕೆ ಸಜ್ಜಾಗಬೇಕಿದ್ದು, ಇದರಲ್ಲಿ ಯಶಸ್ಸು ಕಾಣಬೇಕಾದರೆ ಸಂಘಟನೆ ಬೇಕು. ಒಗ್ಗಟ್ಟು ಇಲ್ಲದೆ ಯಶಸ್ಸು ಸಾಧಿಸಲು ಸಾಧ್ಯವಿಲ್ಲ. ನಾವು ನಮ್ಮ ಸಮಾಜದ ಜನರನ್ನು ಜಾಗೃತರನ್ನಾಗಿ ಮಾಡಬೇಕು. ಹಳ್ಳಿ, ಹಳ್ಳಿಗೆ ಹೋಗಿ ಸಂಘಟನೆ ಮಾಡಬೇಕು. ವಾಸ್ತವ ಅಂಶವನ್ನು ಜನರಿಗೆ ಮನದಟ್ಟು ಮಾಡಿಕೊಡಬೇಕು. ಈ ವಿಚಾರವಾಗಿ ದೃಢ ಯೋಜನೆ ರೂಪಿಸಿ, ಕೆಲಸ ಮಾಡಬೇಕು. ಈ ಹೋರಾಟದಲ್ಲಿ ನಾನು ಮುಂದೆಯಾದರೂ ಇರಲು ಸಿದ್ದ, ಹಿಂದೆಯಾದರೂ ಇರಲು ಸಿದ್ಧ. ನಿಮಗೆ ಹೇಗೆ ಬೇಕೋ ಆ ರೀತಿ ನನ್ನನ್ನು ಬಳಸಿಕೊಳ್ಳಿ. ಒಟ್ಟಿನಲ್ಲಿ ಈ ಸಮುದಾಯಕ್ಕೆ ಸಿಗಬೇಕಾದ ಹಕ್ಕು ಸಿಗಬೇಕು ಎಂದು ತಿಳಿಸಿದರು.
ಈ ಹೋರಾಟ ಯಶಸ್ಸು ಸಾಧಿಸಬೇಕಾದರೆ, ಧರ್ಮರಾಯನ ಧರ್ಮ ಇರಬೇಕು, ದಾನ ಶೂರ ಕರ್ಣನ ದಾನತ್ವ ಇರಬೇಕು, ಅರ್ಜುನನ ಗುರಿ ಇರಬೇಕು, ಭೀಮನ ಬಲ ಇರಬೇಕು, ವಿದುರನ ನೀತಿ ಇರಬೇಕು, ಕೃಷ್ಣನ ತಂತ್ರ ಇರಬೇಕು. ಆಗ ಮಾತ್ರ ಯಶಸ್ಸು ಸಾಧಿಸಲು ಸಾಧ್ಯ ಎಂದರು.
ನೀವು ನನ್ನನ್ನು ಬಾಲಂಗೋಚಿಯಾಗಿಯಾದರೂ ಬಳಸಿಕೊಳ್ಳಿ, ತಲೆಯಂತಾದರು ಬಳಸಿಕೊಳ್ಳಿ. ನಿಮ್ಮ ಸ್ಪೂರ್ತಿ, ಆತ್ಮವಿಶ್ವಾಸ ನೋಡುತ್ತಿದ್ದರೆ ನಮ್ಮನ್ನು ವಿಧಾನಸೌಧದಲ್ಲಿ ಕೂರಿಸುವ ರೀತಿ ಇದೆ. ನೀವು ಏನು ಮಾಡುತ್ತೀರೋ ಗೊತ್ತಿಲ್ಲ, ನಿಮ್ಮ ಮನೆ ಬಾಗಿಲಿಗೆ ಅವಕಾಶ ಬಂದಿದ್ದು ಅದನ್ನು ಕಳೆದುಕೊಳ್ಳಬೇಡಿ. ನನ್ನ ಕೈಗೆ ಪೆನ್ನು ಪೇಪರ್ ನೀಡಿ ಈ ಸಮಾಜಕ್ಕೆ ಯಾವ ರೀತಿ ಅನುಕೂಲ ಮಾಡಿಕೊಡಬೇಕು ಎಂದು ನನಗೆ ಗೊತ್ತಿದೆ. ನಿಮ್ಮ ಆಶೀರ್ವಾದ ನನ್ನ ಮೇಲೆ ಇರಲಿ. ಈ ಹೋರಾಟಕ್ಕೆ ಜಯವಾಗಲಿ. ಶ್ರೀಗಳ ಮಾರ್ಗದರ್ಶನದಲ್ಲಿ ನಾವೆಲ್ಲ ಸೇರಿ ನಡೆಯೋಣ, ಎಲ್ಲರಿಗೂ ಯಶಸ್ಸು ಸಿಗಲಿ ಎಂದರು.