ನವದೆಹಲಿ: ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿಗೆ ತರಲು ಬಿಜೆಪಿ ಬದ್ಧವಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ಈ ಕುರಿತಾಗಿ ಪ್ರಜಾಸತ್ತಾತ್ಮಕ ಚರ್ಚೆಗಳು ನಡೆಯಬೇಕಿದೆ. ಈ ಎಲ್ಲಾ ಚರ್ಚೆ ಹಾಗೂ ಸಮಾಲೋಚನೆ ಬಳಿಕ ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿ ಆಗಲಿದೆ ಎಂದು ಅಮಿತ್ ಶಾ ಹೇಳಿದರು.
BIGG NEWS : ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ : ರೈತ ಸಮುದಾಯಕ್ಕೆ ಇಲ್ಲಿದೆ ಮುಖ್ಯ ಮಾಹಿತಿ
ಕೇಂದ್ರ ಗೃಹ ಸಚಿವರಾಗಿ ಅಮಿತ್ ಶಾ ಕಾರ್ಯ ನಿರ್ವಹಿಸುತ್ತಿರುವ ಅವಧಿಯಲ್ಲೇ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ಕಿತ್ತೊಗೆಯಲಾಗಿದೆ. ಕಣಿವೆ ರಾಜ್ಯದಲ್ಲಿ ಶಾಂತಿ ಮರುಸ್ಥಾಪನೆಗೆ ಭದ್ರತಾ ಪಡೆಗಳು ಶ್ರಮಿಸುತ್ತಿವೆ. ಇದಲ್ಲದೆ ಜಾಗತಿಕ ಮಟ್ಟದಲ್ಲೂ ಭಯೋತ್ಪಾದನೆ ವಿರುದ್ಧದ ಕಠಿಣ ಕ್ರಮ ಕ್ರಮದ ಸಂದೇಶವನ್ನು ಕೇಂದ್ರ ಸರ್ಕಾರ ನಿಡಿವೆ. ಇವೆಲ್ಲವೂ ತಮ್ಮ ವೈಯಕ್ತಿಕ ಸಾಧನೆಗಳೇ ಎಂದು ಕೇಳಲಾದ ಪ್ರಶ್ನೆಗೆ ಉತ್ತರಿಸಿರುವ ಅಮಿತ್ ಶಾ, ಇವೆಲ್ಲವೂ ಸಮಗ್ರ ಮೋದಿ ಸರ್ಕಾರದ ಸಾಧನೆಯಾಗಿದ್ದು, ಯಾವುದೂ ತಮ್ಮ ವೈಯಕ್ತಿಕ ಸಾಧನೆ ಅಲ್ಲ ಎಂದಿದ್ದಾರೆ.
ನವದೆಹಲಿಯಲ್ಲಿ ನಡೆದ ಟೈಮ್ಸ್ ನೌ ಶೃಂಗ ಸಭೆ 2022ರಲ್ಲಿ ಮಾತನಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, ಆರ್ಟಿಕಲ್ 370 ವಿಚಾರವಾಗಿ ಕೈ ಹಾಕಬೇಡಿ, ಕೈ ಹಾಕಿದರೆ ನಿಮ್ಮ ಕೈ ಸುಟ್ಟುಕೊಳ್ಳುತ್ತೀರಿ ಎಂದು ಹಲವರು ಎಚ್ಚರಿಕೆ ನೀಡಿದ್ದರು. ಆದರೆ, ಪ್ರಧಾನ ಮಂತ್ರಿ ನರೇಂದ್ರ ಮೋದಿ ಸಾರಥ್ಯದ ಕೇಂದ್ರದ ಎನ್ಡಿಎ ಸರ್ಕಾರವು ದೃಢ ನಿರ್ಧಾರ ಕೈಗೊಂಡಿತು. ಇದೀಗ ಜಮ್ಮು ಮತ್ತು ಕಾಶ್ಮೀರವು ಬಿಜೆಪಿ ಶ್ರಮದಿಂದಾಗಿ ಪ್ರವರ್ಧಮಾನಕ್ಕೆ ಬರುತ್ತಿದೆ ಎಂದು ಅಮಿತ್ ಶಾ ಹೇಳಿದರು.
ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ಕಿತ್ತೊಗೆಯುತ್ತೇವೆ ಎಂದು ಜನ ಸಂಘದ ಕಾಲದಿಂದಲೂ ಬಿಜೆಪಿ ಪಕ್ಷವು ಈ ದೇಶದ ಜನತೆಗೆ ಮಾತು ಕೊಟ್ಟಿತ್ತು. ಇದೀಗ ಈ ಮಾತನ್ನು ಉಳಿಸಿಕೊಂಡಿದ್ದೇವೆ ಎಂದು ಅಮಿತ್ ಶಾ ಹೇಳಿದ್ದಾರೆ.
ಇದೇ ವೇಳೆ ಏಕರೂಪ ನಾಗರಿಕ ಸಂಹಿತೆ ಕುರಿತಾಗಿಯೂ ಮಾತನಾಡಿದ ಅಮಿತ್ ಶಾ, ಯಾವುದೇ ಜಾತ್ಯತೀತ ಪ್ರಜಾಪ್ರಭುತ್ವ ದೇಶದಲ್ಲಿ ಎಲ್ಲ ಪ್ರಜೆಗಳಿಗೂ ಒಂದೇ ರೀತಿಯ ಕಾನೂನು ಇರಬೇಕು. ಸಂಸದೀಯ ಸಮಿತಿ ಕೂಡಾ ಸಂಸತ್ಗೆ ಇದೇ ಅಭಿಪ್ರಾಯವನ್ನು ಶಿಫಾರಸ್ಸು ಮಾಡಿದೆ. ರಾಜ್ಯ ಸರ್ಕಾರಗಳ ಸಹಯೋಗದೊಂದಿಗೆ ಕೇಂದ್ರ ಸರ್ಕಾರವು ಶೀಘ್ರದಲ್ಲೇ ದೇಶಾದ್ಯಂತ ಏಕರೂಪ ನಾಗರಿಕ ನೀತಿ ಸಂಹಿತೆ ಜಾರಿಗೆ ತರಲಿದೆ ಎಂದು ಅಮಿತ್ ಶಾ ಹೇಳಿದರು.
ಯಾವುದೇ ಪ್ರಜಾಪ್ರಭುತ್ವವಾದಿ ಜಾತ್ಯತೀತ ರಾಷ್ಟ್ರದಲ್ಲಿ ಕಾನೂನುಗಳು ಜಾತಿ ಹಾಗೂ ಧರ್ಮದ ಆಧಾರದ ಮೇಲೆ ಬೇರೆ ಬೇರೆ ಆಗಿರಬಾರದು. ಎಲ್ಲ ಜಾತಿ, ಧರ್ಮದವರಿಗೂ ಒಂದೇ ರೀತಿಯ ಕಾನೂನು ಇರಬೇಕು. ಈ ಕುರಿತಾಗಿ ಸಂಸತ್ ಹಾಗೂ ಎಲ್ಲ ರಾಜ್ಯಗಳ ವಿಧಾನಸಭೆಗಳಲ್ಲಿ ಮಸೂದೆ ಮಂಡಿಸಿ ಅದಕ್ಕೆ ಸಮ್ಮತಿ ಪಡೆದು ಕಾಯ್ದೆಯ ರೂಪ ನೀಡಬೇಕಿದೆ ಎಂದು ಅಮಿತ್ ಶಾ ಹೇಳಿದರು.
ಹಾಗೆ ನೋಡಿದರೆ ಬಿಜೆಪಿ ಪಕ್ಷವೊಂದನ್ನು ಹೊರತುಪಡಿಸಿ ದೇಶದ ಇನ್ಯಾವುದೇ ರಾಜಕೀಯ ಪಕ್ಷವೂ ಏಕರೂಪ ನಾಗರಿಕ ನೀತಿ ಸಂಹಿತೆ ಪರವಾಗಿ ಇಲ್ಲ. ಆದರೆ, ಈ ಕುರಿತಾಗಿ ಆರೋಗ್ಯಕರ ಚರ್ಚೆಯ ಅಗತ್ಯತೆ ಇದೆ. ಬಹಿರಂಗ ಚರ್ಚೆ ನಡೆಯಬೇಕಿದೆ ಎಂದು ಅಮಿತ್ ಶಾ ಹೇಳಿದರು.
ಈಗಾಗಲೇ ಬಿಜೆಪಿ ಆಡಳಿತದ ಹಿಮಾಚಲ ಪ್ರದೇಶ, ಉತ್ತರಾಖಂಡ ಹಾಗೂ ಗುಜರಾತ್ ರಾಜ್ಯಗಳಲ್ಲಿ ಸುಪ್ರೀಂ ಕೋರ್ಟ್ ಹಾಗೂ ಹೈಕೋರ್ಟ್ನ ನಿವೃತ್ತ ಮುಖ್ಯ ನ್ಯಾಯಮೂರ್ತಿಗಳ ಸಾರಥ್ಯದಲ್ಲಿ ಸಮಿತಿ ರಚಿಸಿ ಈ ಕುರಿತಾಗಿ ಚರ್ಚಿಸಲಾಗಿದೆ. ವಿವಿಧ ಧರ್ಮಗಳ ಜನತೆಯ ಅಭಿಪ್ರಾಯ ಸಂಗ್ರಹಿಸಲಾಗಿದೆ ಎಂದು ಅಮಿತ್ ಶಾ ಮಾಹಿತಿ ನೀಡಿದರು.