ಬೆಂಗಳೂರು: 2022-23ನೇ ಸಾಲಿನಲ್ಲಿ ಸರ್ಕಾರ ನಿಗದಿಪಡಿಸಿದ ಕೃಷಿ ಸಾಲ ವಿತರಣೆಯಲ್ಲಿ ಡಿಸಿಸಿ ಬ್ಯಾಂಕುಗಳು ಉತ್ತಮ ಸಾಧನೆ ಮಾಡುತ್ತಿರುವುದು ಶ್ಲಾಘನೀಯ. ಮಾರ್ಚ್ ಅಂತ್ಯದ ವೇಳೆಗೆ ಸರ್ಕಾರ ನಿಗದಿಪಡಿಸಿರುವ ಗುರಿಗಿಂತ ಹೆಚ್ಚು ಸಾಧನೆ ಮಾಡಬೇಕು ಎಂದು ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ಹೇಳಿದರು.
ಕೃಷಿ ಸಾಲ ವಿತರಣೆ ಕುರಿತಂತೆ ಡಿಸಿಸಿ ಬ್ಯಾಂಕುಗಳ ಅಧ್ಯಕ್ಷರು ಮತ್ತು ಅಪೆಕ್ಸ್ ಬ್ಯಾಂಕ್ ನ ನಿರ್ದೇಶಕರುಗಳು ಹಾಗೂ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ವಿಕಾಸಸೌಧದಲ್ಲಿ ನಡೆದ ಸಭೆಯಲ್ಲಿ ಸಚಿವರು ಮಾತನಾಡಿ, ಬಹುತೇಕ ಡಿಸಿಸಿ ಬ್ಯಾಂಕುಗಳು ಶೇ.80 ರಿಂದ 100ರಷ್ಟು ಸಾಧನೆ ಮಾಡಿವೆ. ಉಳಿದ ಡಿಸಿಸಿ ಬ್ಯಾಂಕುಗಳು ನಿಗದಿತ ಅವಧಿಯೊಳಗೆ ಸರ್ಕಾರ ನಿಗದಿಪಡಿಸಿರುವ ಗುರಿ ಮುಟ್ಟಲು ಕಾರ್ಯಪ್ರವೃತ್ತರಾಗಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಾಳೆಯಿಂದ ನಂದಿನಿ ಹಾಲು, ಮೊಸರಿನ ದರ 2 ರೂ ಹೆಚ್ಚಳ: ಹೀಗಿದೆ ನೂತನ ಪರಿಷ್ಕೃತ ದರಪಟ್ಟಿ | Nandini Milk Price Hike
ಕೃಷಿ ಸಾಲ ವಿತರಣೆಯಲ್ಲಿ ಯಾವುದೇ ಸಮಸ್ಯೆ, ಗೊಂದಲಗಳಿದ್ದರೆ ಅದನ್ನು ಗಮನಕ್ಕೆ ತಂದರೆ ಸರ್ಕಾರದ ಹಂತದಲ್ಲಿ ತಕ್ಷಣ ಪರಿಹರಿಸುವ ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದರು.
ನವೆಂಬರ್ ತಿಂಗಳವರೆಗೆ 17.16 ಲಕ್ಷ ರೈತರಿಗೆ 12,518.92 ಕೋಟಿ ರೂ. ಅಲ್ಪಾವಧಿ ಕೃಷಿ ಸಾಲ ವಿತರಿಸಲಾಗಿದೆ. ಇದರಲ್ಲಿ 1 ಲಕ್ಷ ಹೊಸ ರೈತರಿಗೆ 792.61 ಕೋಟಿ ರೂ. ಸಾಲ ವಿತರಿಸಲಾಗಿದೆ. ಪರಿಶಿಷ್ಟ ಪಂಗಡದ 2.33 ಲಕ್ಷ ರೈತರಿಗೆ 1428.64 ಕೋಟಿ ರೂ. ಸಾಲ ವಿತರಿಸಲಾಗಿದೆ ಎಂದು ಅಧಿಕಾರಿಗಳು ಸಚಿವರಿಗೆ ಮಾಹಿತಿ ನೀಡಿದರು.
ಬಿಬಿಎಂಪಿ ವೋಟರ್ ಐಡಿ ಪರಿಷ್ಕರಣೆ ಅಕ್ರಮ: ನಾಳೆ ಬೆಂಗಳೂರಿಗೆ ಉಪ ಚುನಾವಣಾ ಆಯುಕ್ತರ ಭೇಟಿ
ಮಧ್ಯಮಾವಧಿ ಮತ್ತು ದೀರ್ಘಾವಧಿ ಕೃಷಿ ಸಾಲ ವಿತರಣೆಯಲ್ಲಿನ ಪ್ರಗತಿ ಕುರಿತು ಸಚಿವರು ಮಾಹಿತಿ ಕೇಳಿದರು. 22,590 ರೈತರಿಗೆ 711 ಕೋಟಿ ರೂ. ಮಧ್ಯಮಾವಧಿ ಮತ್ತು ದೀರ್ಘಾವಧಿ ಕೃಷಿ ಸಾಲ ವಿತರಣೆ ಮಾಡಲಾಗಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ 1635 ರೈತರಿಗೆ 45.36 ಕೋಟಿ ರೂ. ಮಧ್ಯಮಾವಧಿ ಮತ್ತು ದೀರ್ಘಾವಧಿ ಕೃಷಿ ಸಾಲ ವಿತರಿಸಲಾಗಿದೆ ಎಂದು ಅಧಿಕಾರಿಗಳು ಉತ್ತರಿಸಿದರು.
ಸಭೆಯಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಗಣಕೀಕರಣದ ಕುರಿತು ಹಾಗೂ ರಾಷ್ಟ್ರಮಟ್ಟದಲ್ಲಿ ಸಹಕಾರ ನೀತಿ ರೂಪಿಸಲು ಸಲಹೆಗಳನ್ನು ಕೂಡ ಪಡೆಯಲಾಯಿತು.
ಸಭೆಯಲ್ಲಿ ಸಚಿವರುಗಳಾದ ಶಿವರಾಮ್ ಹೆಬ್ಬಾರ್, ಹಾಲಪ್ಪ ಆಚಾರ್, ಸಹಕಾರ ಇಲಾಖೆ ಪ್ರಧಾನ ಕಾರ್ಯದರ್ಶಿ ಶಿವಯೋಗಿ ಪಿ.ಕಳಸದ್, ಮಾಜಿ ಸಚಿವರಾದ ಲಕ್ಷ್ಮಣ್ ಸವದಿ, ಶಾಸಕರುಗಳಾದ ರಾಜಕುಮಾರ್ ಪಾಟೀಲ ತೇಲ್ಕೂರ್, ರಾಜಣ್ಣ ಸೇರಿದಂತೆ ಡಿಸಿಸಿ ಬ್ಯಾಂಕುಗಳ ಅಧ್ಯಕ್ಷರು, ಉಪಾಧ್ಯಕ್ಷರು, ಅಪೆಕ್ಸ್ ಬ್ಯಾಂಕ್ ನಿರ್ದೇಶಕರುಗಳು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.