ನವದೆಹಲಿ : ಇನ್ನು ಮುಂದೆ ಶಬರಿಮಲೆ ಭಕ್ತಾದಿಗಳಿಗೆ ವಿಮಾನದ ‘ಕ್ಯಾಬಿನ್ ಬ್ಯಾಗೇಜ್’ನಲ್ಲಿ ಇರುಮುಡಿ ಜತೆಗೆ ತೆಂಗಿನಕಾಯಿ ಕೊಂಡೊಯ್ಯಲು ವಿಮಾನಯಾನ ಭದ್ರತಾ ನಿಯಂತ್ರಕ ಸಂಸ್ಥೆಯಾದ ‘ಬಿಸಿಎಎಸ್’ ಅನುಮತಿ ನೀಡಿದೆ.
ಸಾಮಾನ್ಯವಾಗಿ ತೆಂಗಿನಕಾಯಿ ದಹನಶೀಲವಾಗಿದ್ದರಿಂದ ಅದನ್ನು ವಿಮಾನದೊಳಗಡೆ ಕ್ಯಾಬಿನ್ ಬ್ಯಾಗೇಜ್ನಲ್ಲಿ ಕೊಂಡೊಯ್ಯಲು ಬಿಡಲಾಗುತ್ತಿರಲಿಲ್ಲ.
ಆದರೆ ವಿಶೇಷವಾಗಿ ಶಬರಿಮಲೆ ಯಾತ್ರಾರ್ಥಿಗಳ ಇರುಮುಡಿ ಇರುವ ಬ್ಯಾಗೇಜ್ ಅನ್ನು ಸಂಪೂರ್ಣವಾಗಿ ತಪಾಸಣೆಗೆ ಒಳಪಡಿಸಿದ ಬಳಿಕ, ಅಂದರೆ ಎಕ್ಸ್ರೇ, ಸ್ಫೋಟಕ ಪತ್ತೆ ಪರೀಕ್ಷೆ ಹಾಗೂ ವಿಮಾನಯಾನ ಭದ್ರತಾ ಸಿಬ್ಬಂದಿ (ಎಎಸ್ಜಿ) ಸ್ವಯಂ ಪರೀಕ್ಷೆ ನಡೆಸಿದ ಬಳಿಕ ಅನುಮತಿ ನೀಡಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಶಬರಿಮಲೆಗೆ ಹೋಗುತ್ತಿರುವ ಭಕ್ತಾದಿಗಳು ದೇವರಿಗೆ ಸಮರ್ಪಿಸಲು ತಮ್ಮೊಂದಿಗೆ ಇರುಮುಡಿ ಕಟ್ಟು (ತುಪ್ಪ ಹಾಗೂ ತೆಂಗಿನಕಾಯಿ ಇರುವ ಕಟ್ಟು) ಕೊಂಡೊಯ್ಯುತ್ತಾರೆ. ಈ ನಿಟ್ಟಿನಲ್ಲಿಯಾತ್ರಾರ್ಥಿಗಳ ಅನುಕೂಲಕ್ಕಾಗಿ ನಿಗದಿತ ಅವಧಿಯವರೆಗೆ ಮಾತ್ರ ಈ ವಿಶೇಷ ವಿನಾಯಿತಿ ನೀಡಲಾಗಿದೆ ಎಂದು ‘ಬಿಸಿಎಎಸ್ ’ ಸ್ಪಷ್ಟಪಡಿಸಿದೆ.