ಧಾರವಾಡ : ಜಿಲ್ಲೆಯ ಹಿಂಗಾರು ಬಿತ್ತನೆ ಹಾಗೂ ಬೆಳೆಗಳ ಸಂರಕ್ಷಣೆಗಾಗಿ ಕೃಷಿ ಇಲಾಖೆಯು ರೈತರಿಗೆ ಮನ್ನೇಚ್ಚರಿಕಾ ಕ್ರಮಗಳನ್ನು ತಿಳಿಸಿದೆ. ಈ ಕುರಿತು ಕೃಷಿ ಇಲಾಖೆಯ ಜಂಟಿನಿರ್ದೇಶಕರು ಪ್ರಕಟಣೆ ನೀಡಿದ್ದು, ಬಿತ್ತನೆ ಸಂದರ್ಭದಲ್ಲಿ ಬೀಜೋಪಚಾರ ಮತ್ತು ಹಿಂಗಾರು ಆರಂಭದಲ್ಲಿ ಬಿತ್ತನೆ ಮಾಡಿದ ಬೆಳೆಗಳಿಗೆ ರೋಗ, ಕೀಟಗಳ ಹಾವಳಿಯನ್ನು ನಿಯಂತ್ರಿಸಲು ಕೃಷಿ ತಜ್ಞರು ನೀಡಿರುವ ನಿರ್ವಹಣಾ ಕ್ರಮಗಳನ್ನು ಪಾಲಿಸಬೇಕೆಂದು ಅವರು ತಿಳಿಸಿದ್ದಾರೆ.
ಹಿಂಗಾರಿ ಜೋಳ ಬೀಜೋಪಚಾರ: ಗಂಧಕ ಬೀಜೋಪಚಾರದ ಪೂರ್ವದಲ್ಲಿ ಪ್ರತಿ ಕಿ.ಗ್ರಾಂ ಬೀಜವನ್ನು 1.5 ಲೀ ನೀರಿನಲ್ಲಿ 30 ಗ್ರಾಂ ಕ್ಯಾಲ್ಸಿಯಂ ಕ್ಲೋರೈಡ್ ಅಥವಾ 7.5 ಗ್ರಾಂ ಪೊಟ್ಯಾಷಿಯಂ ನೈಟ್ರೇಟ್ ಬೆರೆಸಿದ ಅಥವಾ ಗೋಮೂತ್ರ (ಶೇ.25) ಬೆರೆಸಿದ ದ್ರಾವಣದಲ್ಲಿ 8 ಗಂಟೆಗಳ ಕಾಲ ನೆನೆಸಿ ನೆರಳಿನಲ್ಲಿ ಒಣಗಿಸಿ ಬಿತ್ತುವುದರಿಂದ ಬೀಜ ಮೊಳಕೆ ಹಾಗೂ ಸಸಿಗಳ ಬೆಳವಣಿಗೆ ಸುಧಾರಿಸುವುದು.
ಹಿಂಗಾರಿ ಜೋಳ ಬಿತ್ತಿದ 30 ಮತ್ತು 60 ದಿವಸಗಳಾದ ಮೇಲೆ ಪೊಟ್ಯಾಷಿಯಂ ನೈಟ್ರೇಟ್ (ಏಓಔ3) ಶೇ. 0.5 (ಪ್ರತಿ ಲೀಟರ್ ನೀರಿಗೆ 5 ಗ್ರಾಂ ಬೆರೆಸಿ) ಸಿಂಪರಣೆ ಕೈಗೊಳ್ಳುವುದರಿಂದ ಬರ ನಿರೋಧಕ ಶಕ್ತಿಯನ್ನು ವೃದ್ಧಿಸಿ ಹೆಚ್ಚಿನ ಇಳುವರಿ ಪಡೆಯಬಹುದು.
ಕೀಟ ಹಾಗೂ ರೋಗ ನಿರ್ವಹಣೆ ಕ್ರಮ:
ಕಾಡಿಗೆ ರೋಗ: ಒಂದು ಕಿ.ಗ್ರಾಂ ಬೀಜಕ್ಕೆ 2 ಗ್ರಾಂ ಗಂಧಕ ಅಥವಾ ಕ್ಯಾಪ್ಟಾನ್ 80 ಡಬ್ಲೂಪಿ ಅಥವಾ 2 ಗ್ರಾಂ ಥೈರಾಮ್ 75 ಡಬ್ಲೂಪಿ. ಲೇಪನ ಮಾಡಿ ಬಿತ್ತನೆ ಮಾಡಬೇಕು. ಕೊಯ್ಲ ಮಾಡುವ ಮೊದಲು ಕಾಡಿಗೆ ರೋಗ ಪೀಡಿತ ತೆನೆಗಳನ್ನು ಗುರುತಿಸಿ ಆಯ್ದು ಸುಡುವುದರಿಂದ ರೋಗ ಹರಡುವುದನ್ನು ತಡೆಗಟ್ಟಬಹುದು.
ಫಾಲ್ ಸೈನಿಕ ಹುಳು:ಈ ಕೀಟದ ಬಾಧೆ ಹೆಚ್ಚಿನ ಪ್ರಮಾಣದಲ್ಲಿ ಜೋಳ ಮತ್ತು ಗೋವಿನ ಜೋಳದಲ್ಲಿ ಕಂಡುಬಂದಿರುವುದರಿಂದ, ರೈತರು ಈ ಕೀಟದ ನಿರ್ವಹಣೆಗೆ 0.3 ಗ್ರಾಂ. ಇಮಾಮೆಕ್ಟಿನ್ ಬೆಂಜೋಯೆಟ್ 5 Sಉ ಅಥವಾ 0.2ಮಿ.ಲೀ, ಸ್ಪೈನೋಸ್ಯಾಡ್ ಪ್ರತಿ ಲೀಟರ್ ನೀರಿಗೆ ಬೆರೆಸಿ ಸಾಯಂಕಾಲದ ಹೊತ್ತಿನಲ್ಲಿ ಸಿಂಪರಣೆ ಮಾಡಿ ಕೀಟದ ನಿರ್ವಹಣೆ ಮಾಡಬೇಕು. ಬೆಳೆಯು ಎತ್ತರವಿದ್ದಾಗ ಕಳಿತ ಪಾಷಾಣವನ್ನು 50 ಕಿ.ಗ್ರಾಂ. ದಷ್ಟು ಸುಳಿ ಹಾಗೂ ಎಲೆಗಳ ಮೇಲೆ ಬೀಳುವಂತೆ ಎರಚಬೇಕು.
ಪಾಷಾಣ ತಯಾರಿಸುವ ವಿಧಾನ: 4 ಕಿ.ಗ್ರಾಂ ಬೆಲ್ಲ, 250 ಮಿ.ಲೀ ಮೊನೋಕ್ರೋಟೊಫಾಸ್ 36 ಎಸ್.ಎಲ್, 5-8 ಲೀಟರ್ ನೀರು ಹಾಗೂ 50 ಕಿ. ಗ್ರಾಂ ಅಕ್ಕಿ ಅಥವಾ ಗೋದಿ ತೌಡಿನೊಂದಿಗೆ ಬೆರೆಸಿ. ನಂತರ 48 ಗಂಟೆಗಳ ಕಾಲ ಗೋಣಿ ಚೀಲಗಳಲ್ಲಿ ಕಳಿಯಲು ಇಡಬೇಕು.
ಸಸ್ಯ ಹೇನು ಮತ್ತು ಸುಳಿ ತಿಗಣೆ :ಈ ಕೀಟಗಳ ನಿರ್ವಹಣೆಗೆ 0.5 ಮಿ.ಲೀ ಇಮಿಡಾಕ್ಲೋಪ್ರಿಡ್ ಅಥವಾ 1.00 ಗ್ರಾಂ ಆಸಿಪೀಟ್ ಪ್ರತಿ ಲೀಟರ್ ನೀರಿಗೆ ಬೆರೆಸಿ ಸಂಪಡಿಸಬೇಕು.
ಕುಸುಬೆ :ಕುಸುಬೆ ಬೆಳೆಯಲ್ಲಿ ಎಲೆ ತಿನ್ನುವ ಹುಳು ಬಾಧೆ ಕಂಡು ಬಂದಲ್ಲಿ ನಿರ್ವಹಣೆಗೆ 2 ಮಿ.ಲೀ ಕ್ವಿನಾಲ್ಫಾಸ್ ಅಥವಾ 0.5 ಮಿ.ಲೀ ಲ್ಯಾಮಡಾಸೈಲೋಥ್ರಿನ್ ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು.
ಸಸ್ಯ ಹೇನು: ಈ ಕೀಟದ ಬಾಧೆ ನಿರ್ವಹಣೆಗೆ 0.5 ಮಿ.ಲೀ ಇಮಿಡಾಕ್ಲೋಪ್ರಿಡ್ ಅಥವಾ 1.0 ಗ್ರಾಂ ಆಸಿಫೇಟ್ ಪ್ರತಿ ಲೀ ನೀರಿಗೆ ಬೆರೆಸಿ ಸಿಂಪಡಿಸಬೇಕು.
ತೊಂಡಿಲು ಕೊರಕ:ಈ ಕೀಟದ ಬಾಧೆ ಕಂಡುಬಂದಲ್ಲಿ 2 ಮಿ,ಲೀ ಕ್ವಿನಾಲಫಾಸ್ ಅಥವಾ 0.5 ಮಿ.ಲೀ ಲ್ಯಾಮಡಾಸೈಲೋಥ್ರಿನ್ 5 ಇಸಿ ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು.
ಎಲೆ ಚುಕ್ಕೆ ರೋಗ: ರೋಗದ ಲP್ಪ್ಷಣ ಕಂಡು ಬಂದ ತಕ್ಷಣ 2 ಗ್ರಾಂ ಮ್ಯಾಂಕೋಜೆಬ್ 75 ಡಬ್ಲೂಪಿ ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು.
ಕಡಲೆ :
ಕಡಲೆ ಕಾಯಿಕೊರಕ (ಹೆಲಿಕೋವರ್ಪಾ): ಬಿತ್ತುವಾಗ ಪ್ರತಿ ಎಕರೆಗೆ 20 ಗ್ರಾಂ ಸೂರ್ಯಕಾಂತಿ ಹಾಗೂ 20 ಗ್ರಾಂ ಜೋಳದ ಬೀಜಗಳನ್ನು ಕೂಡಿಸಿ ಬಿತ್ತಬೇಕು. ನಂತರ ಬೆಳೆಯು ಕಾಳು ಕಟ್ಟವ ಹಂತದಲ್ಲಿದ್ದಾಗ ಪ್ರತಿ ಎಕರೆಗೆ 10 ಸೇರು ಚುರಿಮುರಿಯನ್ನು (ಮಂಡಕ್ಕಿ/ಮಂಡ್ಯಾಳ) ಹೊಲದ ತುಂಬೆಲ್ಲಾ ಚೆಲ್ಲುವುದರಿಂದ ಪಕ್ಷಿಗಳಿಗೆ ಕೀಡೆಗಳನ್ನು ತಿನ್ನಲು ಪೋತ್ಸಾಹಿಸಿದಂತೆ ಆಗುತ್ತದೆ.
ಕೀಟನಾಶಕಗಳಾದ 2 ಮಿ.ಲೀ ಕ್ಲೋರಫೆನಾಫೈರ್ 24% ಎಸ್.ಸಿ.ಅಥವಾ 0.075 ಮಿ.ಲೀ ಫ್ಲೂಬೆಂಡಿಯಾಮೈಡ್ 39.35 ಎಸ್.ಸಿ ಅಥವಾ ಕ್ಲೋರೆಂಟ್ರಿನಾಲಿಪ್ರೋಲ 18.5 ಎಸ್. ಸಿ, 0.15 ಮಿ.ಲೀ ಅಥವಾ 0.2 ಗ್ರಾಂ ಇಮಾಮೆಕ್ಟಿನ್ ಬೆಂಜೊಯೇಟ, 5 ಎಸ್.ಜಿ ಅಥವಾ 0.1 ಮಿ.ಲೀ ಸ್ಪೈನೊಸ್ಯಾಡ್ 45 ಎಸ.ಸಿ ಅಥವಾ 0.3 ಮಿ.ಲೀ ಇಂಡಾಕ್ಸಾಕಾರ್ಬ್ 14.5 ಎಸ್.ಸಿ.ಅಥವಾ 4 ಗ್ರಾಂ ಕಾರ್ಬರಿಲ್ 50 ಡಬ್ಲೂಪಿ. ಅಥವಾ 1.0 ಮೀ.ಲೀ ಮಿಥೈಲ್ ಪ್ಯಾರಾಥಿಯಾನ್ 50 ಇ.ಸಿ. ಅಥವಾ 2 ಮಿ.ಲೀ ಕ್ವಿನಾಲ್ಫಾಸ್ 25 ಇ.ಸಿ ಅಥವಾ 2 ಮಿ.ಲೀ ಮಿಥೊಮಿಲ್ 40 ಎಸ್.ಪಿ ಅಥವಾ 2 ಮಿ.ಲೀ ಪ್ರೋಫೆನೋಫಾಸ್ 50 ಇ.ಸಿ ಅಥವಾ 1 ಗ್ರಾಂ ಅಸಿಫೇಟ್ 75 ಎಸ್.ಪಿ ಅಥವಾ ಬೆಳ್ಳೂಳಿ ಮತ್ತು ಹಸಿ ಮೆಣಸಿಕಾಯಿ ಕಷಾಯವನ್ನು 20 ಮಿ.ಲೀ ಪ್ರತಿ ಲೀಟರ್ ನೀರಿನಲ್ಲಿ ಸಿಂಪಡಿಸಬೇಕು.
ತುಕ್ಕುರೋಗ¬: ಕಡಲೆ ಮತ್ತು ಗೋಧಿ ಬೆಳೆಗಳಿಗೆ ಬರುವ ತುಕ್ಕು ರೋಗ ನಿರ್ವಹಣೆಗೆ ಮುಂಜಾಗ್ರತಾ ಕ್ರಮವಾಗಿ ರೋಗ ಕಂಡು ತಕ್ಷಣ ಹೆಕ್ಸಾಕೋನಾಜೋಲ್ 1 ಮಿ.ಲೀ ಅಥವಾ ಪ್ರೊಫಿಕೋನಾಜೋಲ್ 1 ಮಿ.ಲೀ ಪ್ರತಿ ಲೀಡರ್ ನೀರಿಗೆ ಬೆರೆಸಿ ಸಿಂಪಡಿಸಬೇಕು.
ನಟೆ ರೋಗ/ ಸಿಡಿ ರೋಗ/ ಸೊರಗು ರೋಗ / ಮತ್ತು ಬೇರು ಕೊಳೆ ರೋಗ: ಪ್ರತಿ ಕಿ.ಗ್ರಾಂ ಬೀಜಕ್ಕೆ 2 ಗ್ರಾಂ ಕ್ಯಾಫ್ಟಾನ್ 80 ಡಬ್ಲೂ.ಪಿ ಅಥವಾ ಥೈರಾಮ್ 75 ಡಬ್ಲೂಪಿ. ಅಥವಾ ಮೆಂಕೋಜೆಬ್ 75 ಡಬ್ಲೂ.ಪಿ ಅಥವಾ 3.5 ಗ್ರಾಂ (ಕಾರ್ಬನಡೈಜಿಮ್ + ಮ್ಯಾಂಕೋಜೆಬ್) ಅಥವಾ 4 ಗ್ರಾಂ ಟ್ರೈಕೋಡರ್ಮಾ ಜೈವಿಕ ಶಿಲೀಂಧ್ರದಿಂದ ಬೀಜೋಪಚಾರ ಮಾಡಬೇಕು. ರೋಗ ಬಾಧಿತ ಗಿಡಗಳನ್ನು ಆಗಾಗ ಕಿತ್ತು ಸುಡಬೇಕು. ನೆಟೆ ರೋಗ ಮತ್ತು ಬೇರು ಕೊಳೆ ರೋಗದ ಪರಿಣಾಮಕಾರಿ ನಿರ್ವಹಣೆಗೆ ಬಿತ್ತನೆ ಬೀಜಕ್ಕೆ ಟ್ರೈಕೋಡರ್ಮಾ ಜೈವಿಕ ಶಿಲೀಂಧ್ರನಾಶಕವನ್ನು ಪ್ರತಿ ಕಿ.ಗ್ರಾಂ ಬೀಜಕ್ಕೆ 4 ಗ್ರಾಂ ದಂತೆ ಬೀಜೋಪಚಾರ ಮಾಡುವುದರ ಜೊತೆಗೆ 1 ಕಿ.ಗ್ರಾಂ ಟ್ರೈಕೋಡರ್ಮಾ ಪುಡಿಯನ್ನು 100. ಕಿ.ಗ್ರಾಂ ಪುಡಿ ಮಾಡಿದ ತಿಪ್ಪೆಗೊಬ್ಬರ ಮತ್ತು 20 ಕಿ.ಗ್ರಾಂ ಬೇವಿನ ಬೀಜದ ಪುಡಿಯಲ್ಲಿ ಮಿಶ್ರಮಾಡಿ ಶೇ. 50 ರಷ್ಟು ತೇವಾಂಶ ಇರುವಂತೆ ಮಾಡಿ ಪ್ಲಾಸ್ಟಿಕ್ ಹೊದಿಕೆಯಿಂದ ಮುಚ್ಚಿ 7 ದಿವಸಗಳವರೆಗೆ ಇಟ್ಟು ಒಂದು ಎಕರೆ ಜಮೀನಿಗೆ (ಮಣ್ಣಿಗೆ) ಬಿತ್ತುವ ಸಮಯದಲ್ಲಿ ಉಪಯೋಗಿಸಬೇಕು.
ಗೋದಿ:
ತುಕ್ಕು ರೋಗ: ನಿಗದಿತ ಸಮಯದಲ್ಲಿ ಅಂದರೆ ಅಕ್ಟೋಬರ್ 1 ನೇ ಹಾಗೂ 2ನೇ ವಾರದಲ್ಲಿ ಬಿತ್ತನೆ ಮಾಡಿದಲ್ಲಿ ಈ ರೋಗದ ಬಾಧೆಯು ಕಡಿಮೆಯಾಗುವುದು. ಬಿತ್ತನೆಗೆ ರೋಗ ನಿರೋಧಕ ತಳಿಗಳನ್ನು ಉಪಯೋಗಿಸುವುದು. ಎಲೆ ತುಕ್ಕುರೋಗ ಕಂಡ ತಕ್ಷಣ 1 ಮಿ.ಲೀ ಪ್ರೊಪಿಕೋನ್ಜೋಲ್ 25 ಇ ಸಿ. ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪರಣೆ ಮಾಡಬೇಕು. ರೋಗದ ತ್ರೀವ್ರತೆಗೆ ಅನುಗುಣವಾಗಿ 15 ದಿನಗಳ ಅಂತರದಲ್ಲಿ ಎರಡನೆಯ ಸಿಂಪರಣೆ ಮಾಡಬೇಕು.
ಎಲೆ ಮಚ್ಚೆ ರೋಗ:ರೋಗವು ಕಾಣಿಸಿಕೊಂಡ ಕೊಡಲೇ 2 ಗ್ರಾಂ ಮ್ಯಾಂಕೊಜೆಬ್ 75 ಡಬ್ಲು.ಪಿ. ಶಿಲೀಂದ್ರನಾಶಕವನ್ನು ಅಥವಾ 1.0 ಮಿ.ಲೀ ಹೆಕ್ಸಾಕೋನಾಜೋಲ್ 5% ಇ.ಸಿ. ಯನ್ನು ಪ್ರತಿ ಲೀ. ನೀರಿನಲ್ಲಿ ಬೆರೆಸಿ ಸಂಪರಣೆ ಮಾಡಬೇಕು. ರೋಗದ ತೀವ್ರತೆಗೆ ಅನುಗುಣವಾಗಿ 15 ದಿನಗಳ ಅಂತರದಲ್ಲಿ ಈ ಸಿಂಪರಣೆ ಕೈಗೊಳ್ಳಬೇಕು.
ಹೆಚ್ಚಿನ ಮಾಹಿತಿಗಾಗಿ ಹತ್ತಿರದ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿಗಳನ್ನು ಸಂಪರ್ಕಿಸಬೇಕೆಂದು ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.