ಬೆಂಗಳೂರು : ದೆಹಲಿಯಲ್ಲಿ ಶ್ರದ್ಧಾ (Shraddha) ಹತ್ಯೆಯ ಬೆನ್ನಲ್ಲೇ ಡೇಟಿಂಗ್ ಆ್ಯಪ್ ಗಳ ವಿಶ್ವಾಸಾರ್ಹತೆ ಬಗ್ಗೆ ಪ್ರಶ್ನೆ ಎದ್ದಿದೆ. ಯುವ ಮನಸ್ಸುಗಳು, ಒಂಟಿ ಜೀವಗಳೇ ಇಲ್ಲಿ ಟಾರ್ಗೆಟ್ ಆಗಿವೆ.
ಹೌದು. ಗುರು ಹಿರಿಯರು ನಿಶ್ಚಯ ಮಾಡಿದ್ದ ಮದುವೆಗಳೇ ಮುರಿದು ಹೋಗುವ ಕಾಲ ಇದು. ಅಂತದ್ದರಲ್ಲಿ ಡೇಟಿಂಗ್ ಆ್ಯಪ್ (Dating App) ಗಳಲ್ಲಿ ಪರಿಚಯವಾದ ಪ್ರೀತಿ, ಗೆಳೆತನ ಎಷ್ಟು ದಿನ ಬಾಳುತ್ತೆ ಹೇಳಿ. ಇತ್ತೀಚೆಗೆ ಡೇಟಿಂಗ್ ಆ್ಯಪ್ ಗಳ ಜಾಲ ಹೆಚ್ಚಾಗಿದೆ. ಹಣ ಕಟ್ಟಿ ರಿಜಿಸ್ಟರ್ ಮಾಡ್ಕೊಂಡ್ರೆ ಹುಡುಗನದ್ದೋ ಹುಡುಗಿಯದ್ದೋ ನಂಬರ್ ಸಿಗುತ್ತೆ. ಅಮೇಲೆ ಶುರುವಾಗೋದೇ ಅಸಲಿ ಆಟ. ಅಮಾಯಕ ಹೆಣ್ಣುಮಕ್ಕಳೇ ಈ ಡೇಟಿಂಗ್ ಆ್ಯಪ್ ಗಳಲ್ಲಿ ಬಲಿಪಶುವಾಗ್ತಿರೋದು. ಅಲ್ಲದೆ ಶೇ.90 ಗಂಡು ಮಕ್ಕಳ ಪ್ರೊಫೈಲ್ ಗಳು ಫೇಕ್ ಇವೆಯಂತೆ.
ಮುದುಕನಾಗಿದ್ದವನು ಯಂಗ್ ಫೋಟೋ (Photo) ಹಾಕೋದು, ಅಥವಾ ಬೇರೆ ಯಾರದ್ದೋ ಫೋಟೋ ಹಾಕಿ ಹೆಣ್ಣುಮಕ್ಕಳನ್ನು ಬುಟ್ಟಿಗೆ ಬೀಳಿಸಿಕೊಳ್ಳುವುದು ಇಲ್ಲಿ ಕಾಮನ್ ಆಗಿದೆ. ಒಳ್ಳೆಯ ಕೆಲಸಕ್ಕೆ ಹೋಗ್ತಿರುವ ಹೆಣ್ಣುಮಕ್ಕಳು, ಕೈ ತುಂಬಾ ಸಂಬಳ ಪಡೆಯುತ್ತಿರುವವರು, ನೋಡೋಕೆ ಚೆನ್ನಾಗಿದ್ದು, ಫ್ಯಾಮಿಲಿ ಆರ್ಥಿಕವಾಗಿ ಚೆನ್ನಾಗಿರುವವರು, ವಿಧವೆಯರು ಹಾಗೂ ಡಿವೋರ್ಸ್ ಆಗಿರುವ ಮಹಿಳೆಯರೇ ಈ ಡೇಟಿಂಗ್ ಆ್ಯಪ್ ಗಳ ಬಲಿಪಶುಗಳಾಗಿರುತ್ತಾರೆ.
ಡೇಟಿಂಗ್ ಆ್ಯಪ್ ಗಳಲ್ಲಿ ಪರಿಚಯವಾದ ಹೆಣ್ಣುಮಕ್ಕಳ ನಂಬರ್ ಪಡೆದು ಸಭ್ಯಸ್ಥರಂತೆ ನಟಿಸ್ತಾರೆ. ಹರೆಯದ ಹೆಣ್ಮಕ್ಕಳು ಪ್ರೀತಿಯಾಸೆಗೆ, ವಿಧವೆ ಅಥವಾ ಡಿವೋರ್ಸ್ ಆಗಿರುವ ಹೆಣ್ಣುಮಕ್ಕಳು ಜೀವನಕ್ಕೆ ಆಸರೆಯಾಗಬಹುದು ಅನ್ನುವ ಕಾರಣಕ್ಕೋ ಏನೋ ಹೆಣ್ಣುಮಕ್ಕಳು ಇವರಿಡುವ ಮದುವೆ ಅನ್ನೊ ಆಫರ್ (Marriage Offer) ಒಪ್ಪಿಕೊಳ್ಳುತ್ತಾರೆ. ಹಣದ ಅವಶ್ಯಕತೆ ಇರುವವರ ತರ ನಟಿಸಿ ಇದೇ ಹೆಣ್ಣುಮಕ್ಕಳು ಕಷ್ಟಪಟ್ಟು ಕೂಡಿಟ್ಟ ಲಕ್ಷಾಂತರ ಹಣ ಸಹ ಹೊಡ್ಕೊಂಡು, ಉಂಡೂ, ಕೊಂಡೂ ಹೋಗ್ತಾರೆ. ಕೆಲವರು ಮಾನಕ್ಕೆ ಅಂಜಿ ಕಂಪ್ಲೆಂಟ್ ಸಹ ನೀಡೋದಿಲ್ಲ ಎಂದು ನಿವೃತ್ತ ಡಿಸಿಪಿ ಬಸವರಾಜ್ ಮಾಲಗತ್ತಿ ಹೇಳುತ್ತಾರೆ.