ಮೊಳಕಾಲ್ಮೂರು: ಐದು ವರ್ಷದ ಅಧಿಕಾರಾವಧಿಯಲ್ಲಿ ಮತಕ್ಷೇತ್ರದ ಅಭಿವೃದ್ಧಿ ಮರೆತ ಸಚಿವ ಶ್ರೀರಾಮುಲು ಜನರಿಗೆ ಎಸ್ ಟಿ ಸಮಾವೇಶದ ನೆಪದಲ್ಲಿ ಬಾಡೂಟ ಏರ್ಪಡಿಸುತ್ತಿದ್ದಾರೆ. ಬಾಡೂಟ ಉಂಡ ಜನರು ಮತಕ್ಷೇತ್ರಕ್ಕೆ ಮಾಡಿರುವ ವಂಚನೆ ಮರೆತುಬಿಡುತ್ತಾರೆ ಎಂಬ ಭ್ರಮೆಯನ್ನು ಶ್ರೀರಾಮುಲು ಬಿಡಬೇಕು ಎಂದು ಕಾಂಗ್ರೆಸ್ ಮುಖಂಡ ಡಾ.ಬಿ.ಯೋಗೇಶ್ ಬಾಬು ಟೀಕಿಸಿದರು.
ಸೋಮವಾರ ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿ, ಬಾಡೂಟ ಉಂಡ ಮತಕ್ಷೇತ್ರದ ಜನರು ಸಚಿವ ಶ್ರೀರಾಮುಲುಗೆ ಮತಕ್ಷೇತ್ರದಿಂದ ಬೀಳ್ಕೊಡುಗೆ ನೀಡಿದ್ದಾರೆ ಎಂದು ವ್ಯಾಖ್ಯಾನಿಸಿದರು.
ಡಿಸೆಂಬರ್ ವೇಳೆಗೆ ರಾಜ್ಯದ ಶೇ.50 ರಷ್ಟು ಅರ್ಹರಿಗೆ ಆಯುಷ್ಮಾನ್ ಕಾರ್ಡ್ ವಿತರಣೆ – ಸಚಿವ ಡಾ.ಕೆ.ಸುಧಾಕರ್
ಇಡೀ ರಾಜ್ಯದಲ್ಲಿ ಮೊಳಕಾಲ್ಮೂರು ಅತ್ಯಂತ ಹಿಂದುಳಿದ ಮತಕ್ಷೇತ್ರ ಎಂಬ ಹಣೆಪಟ್ಟಿ ಇನ್ನೂ ಕಳಚಿಲ್ಲ. ಜನರಲ್ಲಿ ಜಾತಿ ರಾಜಕಾರಣ ಮಾಡಿದ್ದಲ್ಲದೇ ಸರ್ಕಾರದ ಸೌಲಭ್ಯಗಳು ಸಿಗದಂತೆ ಶ್ರೀರಾಮುಲು ಶಕುನಿ ರಾಜಕಾರಣ ಮಾಡಿದ್ದಾರೆ. ಅಧಿಕಾರ ನೀಡಿದ ಜನರನ್ನು ಮರೆತು ಬಳ್ಳಾರಿ ಜಿಲ್ಲೆಯ ಉಸ್ತುವಾರಿ ವಹಿಸಿಕೊಂಡು ಮತಕ್ಷೇತ್ರದ ಜನರಿಗೆ ಮಾಡಿರುವ ವಂಚನೆ ಯಾರಿಗೂ ತಿಳಿದಿಲ್ಲ ಎಂಬ ಜಾಣ ಕುರುಡಿನೊಳಗೆ ಮತ್ತೆ ಅಧಿಕಾರಕ್ಕಾಗಿ ಬಾಡೂಟ ಏರ್ಪಡಿಸುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
ಶ್ರೀರಾಮುಲು ಅವರ ಹಣಬಲ, ತೋಳ್ಬಲಕ್ಕೆ ನಾನು ಅಂಜುವುದಿಲ್ಲ. ಸೋಮವಾರ ಪಕ್ಷದ ಟಿಕೆಟ್ ಆಕಾಂಕ್ಷಿಯಾಗಿ ಅರ್ಜಿ ಸಲ್ಲಿಸಿದ್ದೇನೆ. ಹತ್ತುವರ್ಷಗಳಿಂದ ಮತಕ್ಷೇತ್ರದ ಕುಗ್ರಾಮಗಳನ್ನೂ ಉಪೇಕ್ಷಿಸದೇ ಪಕ್ಷ ಸಂಘಟಿಸಿದ್ದೇನೆ. ಜಿಲ್ಲಾ ಪಂಚಾಯ್ತಿ ಸದಸ್ಯನಾಗಿ ಇಡೀ ಮತಕ್ಷೇತ್ರದಲ್ಲಿ ಸುತ್ತಾಡಿ ಜನರ ಸಮಸ್ಯೆ ತಿಳಿದಿದ್ದೇನೆ. ಅಷ್ಟೇ ಅಲ್ಲದೇ ಜಿಲ್ಲಾಮಟ್ಟದ ಸಭೆಗಳಲ್ಲಿ ಮತಕ್ಷೇತ್ರದ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಿದ್ದೇನೆ. ಕಾರ್ಯಕರ್ತರು ಪಕ್ಷವನ್ನು ಅಧಿಕಾರಕ್ಕೆ ತರಲು ನಿರಂತರ ಶ್ರಮಿಸುತ್ತಿದ್ದಾರೆ. ಮತಕ್ಷೇತ್ರದ ಮತದಾರರು, ಕಾರ್ಯಕರ್ತರ ಒತ್ತಾಸೆ ಮೇರೆಗೆ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದೇನೆ. ಪಕ್ಷದ ವರಿಷ್ಠರು ಟಿಕೆಟ್ ನೀಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮತಕ್ಷೇತ್ರದ ಗಡಿಭಾಗದಲ್ಲಿ ಕನಿಷ್ಠ ಅಭಿವೃದ್ಧಿ ಆಗಿಲ್ಲ. ತಳಕು, ನಾಯಕನಹಟ್ಟಿ, ರಾಂಪುರ ಹೋಬಳಿಗಳಲ್ಲಿ ಅಭಿವೃದ್ಧಿಪರ ಒಂದೂ ಯೋಜನೆಗಳು ಅನುಷ್ಠಾನಗೊಂಡಿಲ್ಲ. ಜನರಿಗೆ ಶ್ರೀರಾಮುಲು ನೀಡಿದ್ದ ಭರವಸೆಗಳು ಒಂದಾದರೂ ಸಾಕಾರಗೊಂಡಿಲ್ಲ. ಮತಕ್ಷೇತ್ರದಲ್ಲಿ ಒಂದೂ ರಸ್ತೆಗಳು ಅಭಿವೃದ್ಧಿ ಕಂಡಿಲ್ಲ. ಅಂತಹ ರಸ್ತೆಗಳು ಶ್ರೀರಾಮುಲು ಕಣ್ಣಿಗೆ ಬಿದ್ದಿಲ್ಲ. ಅವರ ಕಣ್ಣಿಗೆ ಬರೀ ಬಳ್ಳಾರಿನೇ ಕಾಣಿಸುತ್ತದೆ. ಹಾಗಾಗಿ, ಹಗಲಿರುಳು ಬಳ್ಳಾರಿಯಲ್ಲೇ ಉಳಿದು ಶ್ರಮಿಸುತ್ತಿದ್ದಾರೆ. ಎಂಥವರಿಗೆ ಮತಹಾಕಿದೆವಲ್ಲ ಎಂದು ಜನರು ಶ್ರೀರಾಮುಲು ಅವರ ಬಗ್ಗೆ ದೂರಿಕೊಳ್ಳುತ್ತಿದ್ದಾರೆ ಎಂದರು.
ಸಚಿವ ಶ್ರೀರಾಮುಲು ಮತಕ್ಷೇತ್ರದಲ್ಲಿ ಪುನಃ ಚುನಾವಣೆಗೆ ನಿಂತರೆ ಹೀನಾಯ ಸೋಲಿಸಲು ಮತದಾರರು ಕಾಯುತ್ತಿದ್ದಾರೆ ಎಂದು ಬಿಜೆಪಿ ಕಾರ್ಯಕರ್ತರೇ ಶ್ರೀರಾಮುಲು ಅವರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ. ಹಾಗಾಗಿ, ಬಾಡೂಟ ಉಣಿಸಿ ತಾನು ಮಾಡಿರುವ ವಂಚನೆ ಜನರಲ್ಲಿ ಮರೆಸಬೇಕು ಎಂದುಕೊಂಡಿದ್ದರೆ ಅದು ಶ್ರೀರಾಮುಲು ಅವರ ಮೂರ್ಖತನ ಆಗುತ್ತದೆ ಎಂದರು.
BIGG NEWS: ನೀವು ಕೋಲಾರಕ್ಕೆ ಹೋಗಬೇಡಿ; ಚಾಮುಂಡೇಶ್ವರಿಯಲ್ಲಿ ನಿಂತು ಗೆದ್ದು ಬನ್ನಿ: ಕೆ.ಎಸ್ ಈಶ್ವರಪ್ಪ ಸಲಹೆ
ಮತಕ್ಷೇತ್ರದ ಜನರಿಗೆ ತಾವು ಮಾಡಿರುವ ವಂಚನೆ, ಅನ್ಯಾಯ ಒಪ್ಪಿಕೊಂಡು ಸ್ಪರ್ಧೆಯಿಂದ ಹಿಂದುಳಿದರೆ ಮಾನ ಉಳಿಯಲಿದೆ. ಹಾಗಾಗಿ, ಶ್ರೀರಾಮುಲು ಬಾಡೂಟ ಕೂಡಲೇ ನಿಲ್ಲಿಸಿ ಮತಕ್ಷೇತ್ರಕ್ಕೆ ಮಾಡಿರುವ ಅನ್ಯಾಯದ ಬಗ್ಗೆ ಆತ್ಮವಲೋಕನ ಮಾಡಿಕೊಳ್ಳಬೇಕು ಎಂದು ಯೋಗೇಶ್ ಬಾಬು ಹೇಳಿದ್ದಾರೆ.
ಶ್ರೀರಾಮುಲು ಮತಕ್ಷೇತ್ರದ ಯುವಕರನ್ನು ಕಡೆಗಣಿಸಿದ್ದಾರೆ. ಎಸ್ಸಿ ಎಸ್ಟಿ ಮೀಸಲು ಮತಕ್ಷೇತ್ರ ಪ್ರತಿನಿಧಿಸುತ್ತಿರುವ ಶ್ರೀರಾಮುಲು ಎಸ್ ಟಿ ಕಲ್ಯಾಣ ಸಚಿವ ಶ್ರೀರಾಮುಲು ಬೆರಳೆಣಿಕೆಯಷ್ಟು ಯೋಜನೆ, ಸೌಲಭ್ಯ ಕಲ್ಪಿಸಿಲ್ಲ. ಯುವಶಕ್ತಿಗೆ ದೊರೆಯಬೇಕಿದ್ದ ಸರ್ಕಾರಿ ಸೌಲಭ್ಯ ಸಿಗದಂತೆ ನೋಡಿಕೊಂಡಿದ್ದಾರೆ. ಸಾಕಷ್ಟು ಯೋಜನೆಗಳಿದ್ದರೂ ಮತಕ್ಷೇತ್ರದ ಯುವಜನರಿಗೆ ಒಂದೇ ಒಂದು ಯೋಜನೆಯನ್ನು ಸಾಕಾರಗೊಳಿಸಿಲ್ಲ. ಯುವಕರಿಗೆ ನಯವಂಚನೆಯನ್ನು ಮಾಡಿದ್ದಾರೆ. ಯುವ ಸಮುದಾಯ ಮತಕ್ಷೇತ್ರದಲ್ಲಿ ಪರಿವರ್ತನೆಯ ರಾಜಕಾರಕ್ಕೆ ಮುಂದಾಗಿದೆ. ನೂರಾರು ಯುವ ಉತ್ಸಾಹಿಗಳು ಕಾಂಗ್ರೆಸ್ ಗೆ ಬೆಂಬಲ ವ್ಯಕ್ತಪಡಿಸಿವೆ. ಹಾಗಾಗಿ ಶ್ರೀರಾಮುಲು ಅವರ ಹೆಡೆಮುರಿಯಲು ಸ್ಪರ್ಧಿಸಲು ಒತ್ತಾಯವಿದೆ. ಮತಕ್ಷೇತ್ರದ ಸಮಸ್ತ ಮತದಾರರ ಒಕ್ಕೊರಲಿನ ಆಗ್ರಹಕ್ಕೆ ಮಣಿದು ಟಿಕೆಟ್ ಗಾಗಿ ಅರ್ಜಿ ಸಲ್ಲಿಸಿದ್ದೇನೆ ಎಂದರು.