ಬೆಳಗಾವಿ : ಒಡೆದು ಆಳುವ ಬ್ರಿಟಿಷರ ನೀತಿಯನ್ನು ಬಳುವಳಿಯಾಗಿ ಕಾಂಗ್ರೆಸ್ ಪಕ್ಷಕ್ಕೆ ಬಿಟ್ಟುಕೊಟ್ಟಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಅವರು ಇಂದು ಖಾನಾಪುರದಲ್ಲಿ ಬಿಜೆಪಿ ಆಯೋಜಿಸಿದ್ದ ಜನಸಂಕಲ್ಪ ಯಾತ್ರೆಯಲ್ಲಿ ಮಾತನಾಡಿ, ಇಲ್ಲಿ ನೂರು ವರ್ಷ ದಾಟಿರುವ ಕಾಂಗ್ರೆಸ್ ಪಕ್ಷವಿದೆ. ಒಡೆದಾಳುವ ನೀತಿ ಬ್ರಿಟಿಷರದಿತ್ತು. ಇನ್ನೂರು ವರ್ಷ ಆಳಿದರು. ದೇಶದಲ್ಲಿ ತುರ್ತು ಪರಿಸ್ಥಿತಿಯನ್ನು ಹೇರಿದರು. ಸಂವಿಧಾನವನ್ನು ಮೊಕಟುಗೊಳಿಸಿ, ಸಂವಿಧಾನ, ಅಂಬೇಡ್ಕರ್ ಅವರ ಬಗ್ಗೆ ಮಾತನಾಡುತ್ತಾರೆ. ಅಂಬೇಡ್ಕರ್ ಅವರನ್ನು ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿಸಿತು. ಅವರು ತೀರಿ ಹೋದಾಗ ದೆಹಲಿಯಲ್ಲಿ ಆರು ಅಡಿ ಸ್ಥಳವನ್ನು ನೀಡದ ಪಕ್ಷ ಕಾಂಗ್ರೆಸ್. ಇಂದು ಖಲಿಸ್ತಾನ ಹುಟ್ಟುಹಾಕಿದ ಬಿಂದ್ರನ್ ವಾಲೆಗೆ, ನಕ್ಸಲರಿಗೆ ಪುಷ್ಟಿಯನ್ನು ಕೊಟ್ಟಿದ್ದು ಕಾಂಗ್ರೆಸ್ . ದೇಶವನ್ನು ವಿಭಜಿಸುವ ಕೆಲಸವನ್ನು ನಿರಂತರವಾಗಿ ಮಾಡುತ್ತಿದ್ದಾರೆ ಎಂದರು.
ಸತೀಶ್ ಜಾರಕಿಹೊಳಿ ಅಸ್ಮಿತೆಗೆ, ನಂಬಿಕೆಗೆ, ಬುನಾದಿಗೆ ಧಕ್ಕೆ ತಂದಿದ್ದಾರೆ
ಭಾರತ್ ಜೋಡೋ ಮಾಡುವ ರಾಹುಲ್ ಗಾಂಧಿ ಒಂದೆಡೆಯಾದರೆ, ಇನ್ನೊಂದು ಕಡೆ ಕಾಂಗ್ರೆಸ್ ಪಕ್ಷದ ನಾಯಕ ಸತೀಶ್ ಜಾರಕಿಹೊಳಿ ಭಾರತವನ್ನು ಒಡೆಯುವ ಕೆಲಸ ಮಾಡುತ್ತಿದ್ದಾರೆ. ಅವರ ಮನಸ್ಥಿತಿ, ಭಾವನೆಗಳು ಹೊಲಸಿದೆ. ವಾಲ್ಮೀಕಿ ಕುಲಕ್ಕೆ ಸೇರಿದ ಸತೀಶ್ ಜಾರಕಿಹೊಳಿ ವಾಲ್ಮೀಕಿಯವರನ್ನು ನಂಬುತ್ತಾರೊ ಇಲ್ಲವೋ? ವಾಲ್ಮೀಕಿ ಶ್ರೇಷ್ಠ ಕುಲತಿಲಕ. ರಾಮಾಯಣ ರಚಿಸಿದವರು. ರಾಮಾಯಣ, ವಾಲ್ಮೀಕಿ ಹಾಗೂ ರಾಮನ ಬಗ್ಗೆ ನಂಬಿಕೆ ಇದ್ದರೆ ಈ ರೀತಿ ಹೇಳುತ್ತಿರಲಿಲ್ಲ. ಇದನ್ನು ಮೊದಲು ಸ್ಪಷ್ಟಪಡಿಸಬೇಕು. ಅವರ ಸಹೋದರನ ಹೆಸರು ಲಕ್ಷ್ಮಣ. ರಾಮಾಯಣದ ರಾಮನ ತಮ್ಮನ ಹೆಸರು ಕೂಡ ಲಕ್ಷಣ. ಅವರನ್ನು ಕರೆಯುವಾಗ ಇದರ ನೆನಪಾಗಲಿಲ್ಲವೇ. ನಿಮ್ಮ ಚುನಾವಣೆ, ಶಾಲೆಯಲ್ಲಿ ಏನೆಂದು ಬರೆಸಿದ್ದಾರೆ. ಈಗ ಕೇವಲ ರಾಜಕಾರಣಕ್ಕಾಗಿ, ಮತಕ್ಕಾಗಿ ತುಷ್ಟೀಕರಣದ ರಾಜಕಾರಣಕ್ಕಾಗಿ ಈ ಮಾತುಗಳನ್ನು ಆಡುತ್ತಿದ್ದಾರೆ. ತಾವು ಹುಟ್ಟಿದ ಸಂಸ್ಕøತಿ, ಪರಂಪರೆಯ ಬಗ್ಗೆ ಮಾತನಾಡುವುದು ಶೋಭೆಯನ್ನು ತಂದುಕೊಡುವುದಿಲ್ಲ. ಇದು ಇಡೀ ಕಾಂಗ್ರೆಸ್ ಪಕ್ಷದ ನೀತಿ. ನಿನ್ನೆ ಕಾಂಗ್ರೆಸ್ ವಕ್ತಾರರು ಬೇರೆ ಸಭೆಯಲ್ಲಿ ಮಾತನಾಡಿರುವುದು ಎಂದಿದ್ದಾರೆ. ಯಾವ ಸಭೆಯಲ್ಲಿ ಮಾತನಾಡಿದರೂ ವಿಚಾರ ಒಂದೇ. ಹಿಂದೂಗಳನ್ನು ಹೀಯಾಳಿಸಿ, ಅಪಮಾನ ಮಾಡಿ ಮಾತನಾಡಿದ್ದಾರೆ. ಅಸ್ಮಿತೆಗೆ, ನಂಬಿಕೆಗೆ, ಬುನಾದಿಗೆ ಧಕ್ಕೆ ತಂದಿದ್ದಾರೆ ಎಂದರು.
ನಮ್ಮ ನಂಬಿಕೆಗಳ ಬಗ್ಗೆ ನಂಬಿಕೆ ಇಲ್ಲದವರಿಗೆ ನಮ್ಮನ್ನು ಆಳುವ ಹಕ್ಕು ಇಲ್ಲ
ಈ ರೀತಿಯ ಮನಸ್ಥಿತಿ ಇರುವ ಪಕ್ಷ ನಮಗೆ ಬೇಕಿಲ್ಲ. ನಮ್ಮ ನಂಬಿಕೆಗಳನ್ನು ನಂಬಿಕೆ ಇಲ್ಲದಿದ್ದರೆ ಅವರಿಗೆ ನಮ್ಮನ್ನು ಆಳುವ ಹಕ್ಕು ಇಲ್ಲ ಎಂದು ತೀರ್ಮಾನ ಮಾಡಬೇಕಿದೆ. ನಮ್ಮ ನಂಬಿಕೆಗಳು ಬಹಳ ಮುಖ್ಯ. ಅದರ ಮೂಲಕ ಭವ್ಯ ಭವಿಷ್ಯ ಬೆರೆಯುತ್ತೇವೆ. ನಮ್ಮ ಭವಿಷ್ಯ ಈ ನಂಬಿಕೆಯ ಮೇಲಿದೆ. ಈ ಮನಸ್ಥಿತಿಯುಳ್ಳ ಪಕ್ಷಕ್ಕೆ ಎಂದಿಗೂ ಅಧಿಕಾರ ನೀಡಬಾರದು ಎನ್ನುವ ಸಂಕಲ್ಪವನ್ನು ಮಾಡೋಣ. ಕರ್ನಾಟಕ ರಾಜ್ಯವನ್ನು 5 ವರ್ಷ ಆಡಳಿತ ನಡೆಸಿ ಭಾಗ್ಯಗಳನ್ನು ಘೋಷಿಸಿದರೂ ಯಾವ ಭಾಗ್ಯವೂ ಜನರಿಗೆ ಮುಟ್ಟಿಲ್ಲ. ಕೊನೆಗೆ ಜನರಿಗೆ ಇವರನ್ನುಆಯ್ಕೆ ಮಾಡಿದ್ದು ದೌರ್ಭಾಗ್ಯ ಎಂದು ತಿಳಿಯಿತು. ಮುಖ್ಯಮಂತ್ರಿ ಸಿದ್ಧರಾಮಯ್ಯ ತಮ್ಮ ಸ್ಥಾನ ಕಳೆದುಕೊಂಡರು. ಕಾಂಗ್ರೆಸ್ ಸೋತುಹೋಯಿತು. ಆತ್ಮಾವಲೋಕನ ಮಾಡಿಕೊಳ್ಳಲೂ ಅವರು ತಯಾರಿಲ್ಲ. ಅಧಿಕಾರದ ಗುಂಗು, ಮದದಲ್ಲಿ ಮಾತನಾಡುತ್ತಾರೆ. ಆದರೆ ಕರ್ನಾಟಕದ ಜನತೆ ತೀರ್ಮಾನ ಮಾಡಿದೆ. ಕಾಂಗ್ರೆಸ್ ನ್ನು ಈ ಬಾರಿ ಮನೆಗೆ ಕಳಿಸುವ ಕೆಲಸ ಮಾಡುವುದಾಗಿ ತೀರ್ಮಾನ ಮಾಡಿದ್ದಾರೆ. ಎಲ್ಲಾ ಕಡೆ ಇದೇ ಸಂಕಲ್ಪ ಉತ್ಸಾಹವಿದೆ ಎಂದರು.