ಕೆಎನ್ ಎನ್ ಡಿಜಿಟಲ್ ನ್ಯೂಸ್ : ಕಾರ್ತಿಕಮಾಸದಂದು ತುಳಸಿ ಮದುವೆ ಅಂತಾ ಮಾಡ್ತಾರೆ. ಹಿಂದೂ ಧರ್ಮದಲ್ಲಿ ತುಳಸಿ ಗಿಡಕ್ಕೆ ತನ್ನದೇ ಆದ ವಿಶೇಷ ಮಹತ್ವವಿದ್ದು, ಶಾಸ್ತ್ರಗಳಲ್ಲಿಯೂ ಪವಿತ್ರವಾದ ದೇವತ ಸ್ಥಾನವನ್ನು ನೀಡಲಾಗಿದೆ.
ಹೊಸ ಮನೆ ನಿರ್ಮಿಸಿದಾಗ ಮನೆಯ ಮುಂದೊಂದು ತುಳಸಿ ಗಿಡದ ಕಟ್ಟೆ ನಿರ್ಮಿಸುವುದು ಅಗತ್ಯವಾಗಿದೆ. ಮನೆಯಲ್ಲಿ ತುಳಸಿ ಗಿಡವಿದ್ದರೆ ಶುಭವೆಂದು ಹೇಳಲಾಗುತ್ತದೆ. ವಾಸ್ತು ಪ್ರಕಾರ ಮನೆಯಲ್ಲಿ ತುಳಸಿ ಗಿಡ ಎಲ್ಲಿರಬೇಕು? ಎಲ್ಲಿರಬಾರದು? ಎಂದು ತಿಳಿದುಕೊಳ್ಳುವುದು ಮುಖ್ಯವಾಗಿದೆ.
ಒಂದು ಅದ್ಭುತವಾದ ಔಷಧೀಯ ಸಸ್ಯವಾದ ತುಳಸಿ ಗಿಡಕ್ಕೆ ವಾಸ್ತ್ರಶಾಸ್ತ್ರದಲ್ಲಿಯೂ ಎಲ್ಲಿಲ್ಲದ ಮಹತ್ವ. ಸಕಲ ವಾಸ್ತು ದೋಷಗಳನ್ನು ನಿವಾರಣೆ ಮಾಡುವ ಶಕ್ತಿಯು ತುಳಸಿ ಗಿಡಕ್ಕೆ ಇದೆ ಮತ್ತು ಜನರು ಮನೆಯಲ್ಲಿ ಸುಖ ಸಂತೋಷದಿಂದ ಬಾಳಬಹುದು ಎಂದು ವಾಸ್ತುಶಾಸ್ತ್ರದಲ್ಲಿ ಹೇಳಲಾಗಿದೆ. ಒಂದು ತುಳಸಿಯ ದಳವು ಶ್ರೀಮಾನ್ ನಾರಾಯಣನ ತೂಕಕ್ಕೆ ಸಮವೆಂದು ಹೇಳಲಾಗಿದೆ.
ಮನೆಯಲ್ಲಿ ಎಲ್ಲಿಡಬೇಕು ತುಳಸಿ ಗಿಡ?
ವಾಸ್ತುಶಾಸ್ತ್ರದ ಪ್ರಕಾರ ಮನೆಯಲ್ಲಿ ಎಲ್ಲಿ ಭಾರ ಬೇಕೋ ಅಥವಾ ಎಲ್ಲಿ ವಾಸ್ತು ದೋಷವಿದೆಯೋ ಅಲ್ಲಿ ತುಳಸಿ ಗಿಡ ಇಟ್ಟು ಪೂಜಿಸಬೇಕು. ನೈರುತ್ಯ ಮತ್ತು ದಕ್ಷಿಣವು ಭಾರವಿರಬೇಕು. ಈ ದಿಕ್ಕುಗಳಲ್ಲಿ ತುಳಸಿ ಗಿಡ ಸ್ಥಾಪಿಸಿದರೆ ಸಮತೋಲ ಮಾಡಬಹುದು. ತುಳಸಿ ಗಿಡವು ದೇವರಿಗೆ ಸಮಾನವೆಂದುಕೊಂಡು ಈಶಾನ್ಯದಲ್ಲಿ ಬೆಳೆಸಿದರೆ ಮಾನಸಿಕ ತೊಂದರೆ, ಕೆಲಸ ಕಾರ್ಯಗಳಲ್ಲಿ ಹಿನ್ನಡೆ ಇತ್ಯಾದಿಗಳನ್ನು ಅನುಭವಿಸಬೇಕಾಗುತ್ತದೆ.
ತುಳಸಿ ಗಿಡದ ಮಹತ್ವ
ವಿಪತ್ತು ಕಾಣಿಸಿಕೊಳ್ಳುವ ಮನೆಯಲ್ಲಿ ಸಾಕಷ್ಟು ಕಾಳಜಿಯನ್ನು ಮಾಡಿದರೂ ತುಳಸಿಯು ಒಣಗಲಾರಂಭಿಸುತ್ತದೆ. ಎಷ್ಟೇ ನೀರು ಹಾಕಿದರೂ ತುಳಸಿ ಗಿಡವು ಬೆಳೆಯದಿದ್ದಲ್ಲಿ, ಎಲೆಗಳು ನಿರಂತರವಾಗಿ ಉದುರುತ್ತಿದ್ದರೆ ಹಾಗೂ ಒಣಗಿದರೆ ಶಕುನ ಶಾಸ್ತ್ರದ ಪ್ರಕಾರ ಮನೆಯಲ್ಲಿ ಅಹಿತಕರ ಘಟನೆಗಳು ನಡೆಯುವ ಮುನ್ಸೂಚನೆಯಾಗಿದೆ.