ಶಿವಮೊಗ್ಗ : ಶಿವಮೊಗ್ಗ ತಾಲ್ಲೂಕಿನಲ್ಲಿ ಭತ್ತದ ಬೆಳೆಗೆ ಕಂದು ಜಿಗಿ ಹುಳುವಿನ ಭಾದೆ ಕಂಡುಬಂದಿದೆ. ರೈತರು ಈ ಬಗ್ಗೆ ಜಾಗೃತರಾಗಿ, ಗದ್ದೆಯನ್ನು ಪ್ರತಿ ದಿನ ವೀಕ್ಷಿಸುತ್ತಿರಬೇಕು.
ಭತ್ತದ ಬುಡವನ್ನು ಪರೀಕ್ಷಿಸಿ ಮತ್ತು ಜಮೀನಿನಲ್ಲಿ ಹೆಚ್ಚು ದಿನ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಆಗಾಗ ಜಮೀನಿನ ನೀರನ್ನು ಬಸಿದು, ಪುನಃ ಒಂದೆರಡು ದಿನ ಬಿಟ್ಟು ನೀರನ್ನು ಹಾಯಿಸಬೇಕು. ಯೂರಿಯ ರಸಗೊಬ್ಬರ ಬಳಕೆ ಕಡಿಮೆ ಮಾಡಿಕೊಳ್ಳಬೇಕು. ಭತ್ತದ ಗದ್ದೆಯಲ್ಲಿ ಗಾಳಿ ಸರಾಗವಾಗಿ ಹಾದು ಹೋಗುವಂತೆ ಪ್ರತಿ 5 ಸಾಲಿಗೆ ಒಂದು ಸಾಲು ಜಾಗ ಮಾಡಬೇಕಾಗುತ್ತದೆ.
ಬುಡದಲ್ಲಿ ರಸ ಹೀರುವ ಹುಳು, ಕಂದು ಜಿಗಿ ಹುಳು ಪ್ರಮಾಣ ಹೆಚ್ಚಾಗಿ ಕಂಡುಬಂದಲ್ಲಿ, ರಾಸಾಯನಿಕ ನಿಯಂತ್ರಣ ಅಗತ್ಯ ನಿಯಂತ್ರಣಕ್ಕಾಗಿ ಇಮಿಡಾಕ್ಲೋಪ್ರಿಡ್ 17.8 ಎಸ್ ಎಲ್ 0.5 ಮಿಲಿ/ಲೀ ಅಥವಾ ಪೈಮೆಟ್ರೋಜೈನ್ 50 ಡಬ್ಲ್ಯುಜಿ 0.6 ಗ್ರಾಂ/ಲೀ ನೀರಿಗೆ ಅಥವಾ ಬುಪ್ರೋಪ್ರೇಜಿನ್ 25 ಎಸ್ ಸಿ 1 ಮಿಲಿ/ಲೀ ನೀರಿಗೆ ಅಥವಾ ಪ್ಲೋನಿಕಾಮಿಡ್ 50 ಡಬ್ಲ್ಯುಜಿ 0.3 ಗ್ರಾಂ/ಲೀ ಅಥವಾ ಥಯೋಮಿಥೋಜಾಮ್ 25 ಡಬ್ಲ್ಯುಜಿ 0.3 ಗ್ರಾಂ/ಲೀ ಇವುಗಳಲ್ಲಿ ಯಾವುದಾದರೂ ಒಂದನ್ನು ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು.
BIGG NEWS: ಕಂದೂರಿನಲ್ಲಿ ಚಂದ್ರಶೇಖರ್ ಅಂತ್ಯಕ್ರಿಯೆಗೆ ಸಕಲ ಸಿದ್ಧತೆ; ಅಂತಿಮ ದರ್ಶನಕ್ಕೆ ಅವಕಾಶ
ಸಿಂಪಡಿಸುವ ಮುನ್ನ ಜಮೀನಿನಲ್ಲಿರುವ ನೀರನ್ನು ಬಸಿದು, ರಾಸಾಯನಿಕ ಸಿಂಪಡಿಸಿದ 24 ತಾಸುಗಳ ನಂತರ ನೀರನ್ನು ಹಾಯಿಸಬೇಕು ಎಂದು ಸಹಾಯಕ ಕೃಷಿ ನಿರ್ದೇಶಕರಾದ ಶಿವರಾಜ್ ಕುಮಾರ್ ಹೆಚ್ ಎಸ್ ರವರು ತಿಳಿಸಿದ್ದಾರೆ.