ಬೆಂಗಳೂರು: ಕೋವಿಡ್ ( Covid ) ಮತ್ತು ಕೋವಿಡ್ ನಂತರವೂ ಬಿಜೆಪಿ ಜನಪರ ಆಡಳಿತ ಕೊಟ್ಟಿದೆ. ಜನರಿಗೆ ಹತ್ತಿರವಾಗಿ ಕಳೆದ ಬಾರಿಗಿಂತ ಹೆಚ್ಚು ಜನಮನ್ನಣೆಯೂ ಸಿಗುವ ದಿಕ್ಸೂಚಿ ಕಾಣುತ್ತಿದೆ ಎಂದು ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ( Chief Minister Basavaraj Bommai ) ಅವರು ತಿಳಿಸಿದರು.
ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಮುಖಂಡರ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ರಾಜ್ಯದಲ್ಲಿ ಸಂಕಲ್ಪ ಯಾತ್ರೆ ವೇಳೆ ಬಿಜೆಪಿ ಪರ ಅಲೆ ಕಾಣುತ್ತಿದೆ. ಕಾಂಗ್ರೆಸ್ ಪಕ್ಷದಲ್ಲಿ ( Congress Party ) ಹತ್ತಾರು ವರ್ಷ ಕೆಲಸ ಮಾಡಿದ ನಾಯಕರು ಅವರ ಸೇವೆ, ಸಜ್ಜನಿಕೆಗೆ ಬೆಲೆ ಸಿಗದೆ ರಾಷ್ಟ್ರೀಯ- ದೇಶಭಕ್ತಿಯ- ವಿಶ್ವಮಾನ್ಯ ನಾಯಕ ನರೇಂದ್ರ ಮೋದಿಜಿ ( Narendra Modi ) ನೇತೃತ್ವದ ಪಕ್ಷದತ್ತ ಮುಖ ಮಾಡಿದ್ದಾರೆ. ಡಬಲ್ ಎಂಜಿನ್ ಸರಕಾರಗಳು ಕಂಕಣಬದ್ಧವಾಗಿ ಕೆಲಸ ಮಾಡುವ ವಿಶ್ವಾಸದ ಜೊತೆ, ಪಕ್ಷದ ಸಿದ್ಧಾಂತ ಮತ್ತು ತತ್ವಾದರ್ಶವನ್ನು ನಂಬಿ ಎಲ್ಲ ಪ್ರಮುಖರು ಬಿಜೆಪಿ ಸೇರಿದ್ದಾರೆ ಎಂದರು.
ಮುದ್ದಹನುಮೇಗೌಡರು ತುಮಕೂರು ಜಿಲ್ಲೆಯ ನಾಯಕರು. ಶಾಸಕ- ಸಂಸದರಾಗಿ ತಮ್ಮದೇ ಆದ ಛಾಪನ್ನು ಹೊಂದಿದ ಸಜ್ಜನ ರಾಜಕಾರಣಿ. ಅವರ ಸೇರ್ಪಡೆಯಿಂದ ಪಕ್ಷಕ್ಕೆ ದೊಡ್ಡ ಬಲ ಬಂದಿದೆ. ಚಿತ್ರನಟರೂ ಆದ ಶಶಿಕುಮಾರ್ ಅವರು ಮತ್ತೆ ಮರಳಿ ಮನೆಗೆ ಬಂದಿದ್ದಾರೆ. ನಮ್ಮ ಮನೆಯೇ ಸುರಕ್ಷಿತ; ಇಲ್ಲಿ ಸಿಗುವ ಗೌರವ ಬೇರೆ ಕಡೆ ಸಿಗುವುದಿಲ್ಲ ಎಂದು ವಾಪಸಾಗಿದ್ದಾರೆ. ಅವರು ಬಂದ ಕಾರಣ ಪಕ್ಷಕ್ಕೆ ಶಕ್ತಿ ಹೆಚ್ಚಾಗಿದೆ. ಸೇವಾದಳದ ಹನುಮಂತರಾವ್ ಭ್ರಮನಿರಸನಗೊಂಡು ಇಲ್ಲಿ ಬಂದಿದ್ದಾರೆ. ಅವರ ಸೇವೆ ಪಡೆಯುತ್ತೇವೆ ಎಂದರು.
ಐಎಎಸ್ ಅಧಿಕಾರಿ, ಜನಪರ ಕೆಲಸ ಮಾಡಿದ ವ್ಯಕ್ತಿ ಬಿ.ಹೆಚ್. ಅನಿಲ್ ಕುಮಾರ್ ದೀನದಲಿತರ ಬಗ್ಗೆ ಅಪಾರ ಕಾಳಜಿ ಉಳ್ಳವರು. ಅವರು ಪಕ್ಷಕ್ಕೆ ಬಂದಿದ್ದರಿಂದ ಮೌಲ್ಯಯುತ ರಾಜಕಾರಣಕ್ಕೆ ಬೆಲೆ ಬಂದಿದೆ. ರಮೇಶ್ ಮುನಿಯಪ್ಪ ಅವರು ದೆಹಲಿ- ರಾಷ್ಟ್ರ ರಾಜಕಾರಣದಲ್ಲಿ ಅಪಾರ ಅನುಭವ ಇದ್ದವರು. ಅವರಿಗೂ ಹೃದಯಪೂರ್ವಕ ಸ್ವಾಗತ ಎಂದು ತಿಳಿಸಿದರು.
ಬರಲ್ಲಾ ಅಂದ್ರೂ ವಧುವಿನ ಕೈ-ಕಾಲು ಹಿಡಿದು ಮನೆಗೆ ಹೊತ್ಕೊಂಡೋದ ಅತ್ತೆ ಮನೆಯವ್ರು | WATCH VIDEO
ರಾಜಕಾರಣದಲ್ಲಿ ಸಮೀಕರಣ ಆಗುತ್ತಿದೆ. ಬಿಜೆಪಿಯೊಂದೇ ಗುರುತ್ವಾಕರ್ಷಣೆ ಇರುವ ಶಕ್ತಿ. ಹೀಗಾಗಿ ಅದರ ಸುತ್ತಲೇ ರಾಜಕಾರಣ ನಡೆಯುತ್ತಿದೆ ಎಂದ ಅವರು, ಸ್ಥಾನಮಾನದ ಕುರಿತು ಪಕ್ಷ ತೀರ್ಮಾನ ಮಾಡುತ್ತದೆ. ಈ ವ್ಯವಸ್ಥೆಯನ್ನು ಎಲ್ಲರೂ ಒಪ್ಪಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಕಾಂಗ್ರೆಸ್ ಪಕ್ಷವು ರಾಜ್ಯದಲ್ಲಿ ಅಧಿಕಾರ ಕಳೆದುಕೊಂಡಿದ್ದು ಮಾತ್ರವಲ್ಲದೆ ಜನಮತವನ್ನೂ ಕಳೆದುಕೊಂಡಿದೆ. ಹಿಂದೆ 120ಕ್ಕಿಂತ ಹೆಚ್ಚಿದ್ದ ಸೀಟುಗಳು ಕಳೆದ ಚುನಾವಣೆಯಲ್ಲಿ 79ಕ್ಕೆ ಇಳಿದಿತ್ತು. ಸಚಿವ ಸಂಪುಟದ ಬಹುತೇಕ ಸಚಿವರು ಸೋತಿದ್ದರು. ಜನಮತ ಇಲ್ಲದಿದ್ದರೂ ಜೆಡಿಎಸ್ ಜೊತೆ ಸೇರಿ ಹಿಂಬಾಗಿಲಿನಿಂದ ಅಧಿಕಾರ ಮಾಡಲು ಹೋಗಿ ಆ ಪ್ರಯೋಗವೂ ವಿಫಲವಾಯಿತು ಎಂದು ವಿವರಿಸಿದರು.
ಇನ್ನೂ 15-20 ದಿನಗಳಲ್ಲಿ ಕಾಂಗ್ರೆಸ್ ಬಾಗಿಲು ಮುಚ್ಚಲಿದೆ – BJP ರಾಜ್ಯಾಧ್ಯಕ್ಷ ನಳಿನ್ಕುಮಾರ್ ಕಟೀಲ್ ಭವಿಷ್ಯ
ಮಾಜಿ ಸಂಸದ ಮುದ್ದಹನುಮೇಗೌಡ ಅವರು ಮಾತನಾಡಿ, ಬಿಜೆಪಿ ನನ್ನನ್ನು ಗೌರವಯುತವಾಗಿ ಸ್ವಾಗತಿಸಿದೆ. ಪ್ರಧಾನಮಂತ್ರಿ ಹುದ್ದೆಗೆ ಮೋದಿಜಿ ಗಾಂಭೀರ್ಯ ತಂದಿದ್ದಾರೆ. ದೇಶವನ್ನು ಅಭಿವೃದ್ಧಿ ಪಥದಲ್ಲಿ ಒಯ್ದಿದ್ದಾರೆ ಎಂದು ಮೆಚ್ಚುಗೆ ಸೂಚಿಸಿದರು. ರಾಜ್ಯ ಸರಕಾರವೂ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದು ತಿಳಿಸಿದರು.
ಚಲನಚಿತ್ರ ನಟ ಮತ್ತು ಮಾಜಿ ಸಂಸದ ಶಶಿಕುಮಾರ್ ಅವರು ಮಾತನಾಡಿ, ಬಿಜೆಪಿ ನನಗೇನೂ ಹೊಸದಲ್ಲ. ಎನ್ಡಿಎ ಜೊತೆಗೆ ನಾನಿದ್ದೆ. ಸುಳ್ಳಿನ ಆಶ್ವಾಸನೆ ಕಾರಣದಿಂದ ಪಕ್ಷದಿಂದ ದೂರವಿದ್ದೆ. ಮೋದಿಜಿ- ಬಸವರಾಜ ಬೊಮ್ಮಾಯಿ ಅವರ ಜನಪರ ಆಡಳಿತವನ್ನು ಮೆಚ್ಚಿ ಮತ್ತೆ ಬಿಜೆಪಿ ಸೇರಿದ್ದೇನೆ ಎಂದು ತಿಳಿಸಿದರು.
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ಕುಮಾರ್ ಕಟೀಲ್, ರಾಜ್ಯ ಉಪಾಧ್ಯಕ್ಷ ನಿರ್ಮಲ್ ಕುಮಾರ್ ಸುರಾಣ ಅವರು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ರಾಜ್ಯದ ಸಚಿವ ಗೋವಿಂದ ಕಾರಜೋಳ, ಎಸ್.ಟಿ. ಸೋಮಶೇಖರ್, ಡಾ|| ಸಿ.ಎನ್.ಅಶ್ವತ್ಥನಾರಾಯಣ್, ಭೈರತಿ ಬಸವರಾಜ್, ವಿಧಾನಪರಿಷತ್ ಸದಸ್ಯ ಸಿ.ಪಿ. ಯೋಗೇಶ್ವರ್, ರಾಜ್ಯ ಉಪಾಧ್ಯಕ್ಷ ಲಕ್ಷಣ ಸವದಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಸಿದ್ದರಾಜು ಮತ್ತು ಪಕ್ಷದ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.
ಮಾಜಿ ಸಂಸದ ಮುದ್ದಹನುಮೇಗೌಡ, ಕನ್ನಡ ಚಲನಚಿತ್ರ ನಟ ಮತ್ತು ಮಾಜಿ ಸಂಸದ ಶಶಿಕುಮಾರ್, ನಿವೃತ್ತ ಐಎಎಸ್ ಅಧಿಕಾರಿ ಬಿ.ಹೆಚ್. ಅನಿಲ್ ಕುಮಾರ್, ಶೀಲಾ ದೀಕ್ಷಿತ್ ಅವರ ವಿಶೇಷ ಕರ್ತವ್ಯಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದ ರಮೇಶ್ ಮುನಿಯಪ್ಪ, ಕಾಂಗ್ರೆಸ್ ಸೇವಾದಳದ ರಾಜ್ಯ ಉಪಾಧ್ಯಕ್ಷ ಹನುಮಂತರಾವ್ ಜವಳಿ ಮತ್ತಿತರರು ಬಿಜೆಪಿ ಸೇರಿದರು. ಇವರಲ್ಲದೆ ಕೆ.ಪಿ.ಸಿ.ಸಿ ಸದಸ್ಯ ಹಾಗೂ ತೆಂಗು ನಾರು ಮಂಡಳಿ ಮಾಜಿ ಅಧ್ಯಕ್ಷ ಜಿ.ವೆಂಕಟಾಚಲಯ್ಯ, ಸಮಾಜವಾದಿ ಪಕ್ಷದ ಪ್ರಧಾನ ಕಾರ್ಯದರ್ಶಿ ಹೆಚ್.ವೈ.ರವಿಕುಮಾರ್, ರಾಜ್ಯ ರೈತ ಸಂಘದ ನಾಯಕ ಸಂಜೀವ ರೆಡ್ಡಿ, ದಲಿತ ಮುಖಂಡ ವೆಂಕಟೇಶಮೂರ್ತಿ ಅವರೂ ಪಕ್ಷ ಸೇರಿದರು.