ಬೆಂಗಳೂರು : ಇನ್ವೆಸ್ಟ್ ಕರ್ನಾಟಕ 2022ರ ( Invest Karnataka -2022) ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ಇಂದು ಸಹಿ ಹಾಕಲಾಗಿರುವ ಎಲ್ಲ ಬಂಡವಾಳ ಹೂಡಿಕೆಯ ಒಪ್ಪಂದಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಈ ಯೋಜನೆಗಳು ವಾಸ್ತವದಲ್ಲಿ ಕಾರ್ಯಗತಗೊಳ್ಳುವ ನಿಟ್ಟಿನಲ್ಲಿ ಸರ್ಕಾರ ಎಲ್ಲ ಅನುಮತಿಗಳನ್ನು ಹಾಗೂ ಸಹಕಾರವನ್ನು ನೀಡಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ( Chief Minister Basavaraj Bommai ) ತಿಳಿಸಿದರು.
ಅವರು ಇಂದು ಬೆಂಗಳೂರಿನ ಅರಮನೆ ಮೈದಾನದ ಆವರಣದಲ್ಲಿ ಇನ್ವೆಸ್ಟ್ ಕರ್ನಾಟಕಬಿಲ್ಡ್ ಫಾರ್ ದ ವರ್ಲ್ಡ್..2022 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ರೈಲ್ವೆ ಪ್ರಯಾಣಿಕರೇ ಗಮನಿಸಿ: ಪ್ರಯಾಣದ ವೇಳೇ ಈ ರೀತಿ ಮಾಡಿದ್ರೆ ದಂಡ ವಿಧಿಸಲಾಗುತ್ತದೆ
ಮುಂದಿನ ಮೂರು ತಿಂಗಳೊಳಗೆ ಬಂಡವಾಳ ಹೂಡಿಕೆಯ ಯೋಜನೆಗಳಿಗೆ ಸರ್ಕಾರ ಅನುಮೋದನೆ ನೀಡಲು ಕ್ರಮ
ಕರ್ನಾಟಕದಲ್ಲಿ ಇನ್ನೂ ಹೆಚ್ಚಿನ ರೀತಿಯಲ್ಲಿ ಕೈಗಾರಿಕಾ ಸ್ನೇಹಿ ವಾತಾವರಣವನ್ನು ಸರ್ಕಾರ ನಿರ್ಮಿಸಲಿದೆ. ಗರಿಷ್ಟ ಮಟ್ಟದ , ದಕ್ಷ ಹಾಗೂ ಉತ್ತಮ ಗುಣಮಟ್ಟದ ಉತ್ಪಾದಕತೆ ರಾಜ್ಯದಲ್ಲಿ ಆಗಬೇಕಿದೆ. ಆರ್ಥಿಕತೆಯಲ್ಲಿ ಪರಿಣಾಮ ಮಾತ್ರ ಮಹತ್ವದ ಪಾತ್ರ ವಹಿಸುತ್ತದೆ. ಈ ಬಂಡವಾಳಗಳು ವಾಸ್ತವವಾಗಿ ಬದಲಾಯಿಸುವುದೇ ಸರ್ಕಾರದ ಮುಂದಿನ ಗುರಿಯಾಗಿದೆ. ಈಗ ಕಾಗದದ ಮೇಲಿರುವ ಬಂಡವಾಳ, ವಾಸ್ತವವಾಗಬೇಕು. 2.80 ಲಕ್ಷ ಕೋಟಿಗೂ ಹೆಚ್ಚಿನ ಬಂಡವಾಳ ಯೋಜನೆಗಳಿಗೆ ಈಗಾಗಲೇ ಅನುಮೋದನೆಯನ್ನು ಸರ್ಕಾರ ನೀಡಿದೆ. ಮುಂದಿನ ಮೂರು ತಿಂಗಳೊಳಗೆ ಮುಂದಿನ ಬಂಡವಾಳ ಹೂಡಿಕೆಯ ಯೋಜನೆಗಳ ಬಗ್ಗೆ ಸರ್ಕಾರ ಅನುಮೋದನೆ ನೀಡಲು ಕ್ರಮ ಕೈಗೊಳ್ಳಲಿದೆ. ರಾಜ್ಯಸರ್ಕಾರ ಬಂಡವಾಳ ಹೂಡಿಕೆಯ ಬಗ್ಗೆ ಬಹಳ ಗಂಭೀರವಾಗಿದ್ದು, ಹೂಡಿಕೆದಾರರೂ ಸಹ ಇದೇ ಗಂಭೀರತೆಯನ್ನು ಹೊಂದಬೇಕಾಗುತ್ತದೆ ಎಂದರು.
ಕರ್ನಾಟಕದಲ್ಲಿನ ಕೈಗಾರಿಕೆಗಳು ವಿಶ್ವಮಟ್ಟಕ್ಕೆ ಬೆಳೆಯಬೇಕೆಂಬ ಸಂಕಲ್ಪ
ಕರ್ನಾಟಕ ಏರೋಸ್ಪೇಸ್, ಬಯೋಟೆಕ್, ನವೀಕರಿಸಬಹುದಾದ ಇಂಧನ ಸೇರಿದಂತೆ ಹಲವು ರಂಗಗಳಲ್ಲಿ ಮುಂಚೂಣಿಯಲ್ಲಿದೆ. ರಾಜ್ಯ ಸ್ಟಾರ್ಟ್ ಅಪ್ ಹಾಗೂ ಯೂನಿಕಾರ್ನ್ ಗಳಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿದೆ. ಭಾರತದ ಸುಮಾರು 105 ಯೂನಿಕಾರ್ನ್ ಗಳಲ್ಲಿ ಸುಮಾರು 35 ಯೂನಿಕಾರ್ನ್ಗಳು ಕರ್ನಾಟಕದಲ್ಲಿವೆ. ದೇಶದ 4 ಡೆಕಾಕಾರ್ನ್ ಗಳಲ್ಲಿ 3 ಕರ್ನಾಟಕಲ್ಲಿದೆ. ಉತ್ಪಾದನಾ ವಲಯ, ಸೇವಾ ವಲಯ, ಐಟಿಬಿಟಿ ವಲಯ, ಸ್ಟಾರ್ಟ್ ಅಪ್ ವಲಯದಲ್ಲಿ ಕರ್ನಾಟಕ ಬಲಿಷ್ಟವಾಗಿದೆ. ಕರ್ನಾಟಕದಲ್ಲಿ ಈಗಾಗಲೇ ಸ್ಥಾಪಿತವಾಗಿರುವ ಪ್ರತಿಷ್ಠಿತ ಕೈಗಾರಿಕೆಗಳು ರಾಜ್ಯದಲ್ಲಿಯೇ ಇನ್ನಷ್ಟು ವಿಸ್ತರಣೆಯಾಗುತ್ತಿವೆ. ವಿಶ್ವಮಟ್ಟಕ್ಕೆ ಕರ್ನಾಟಕದಲ್ಲಿ ಕೈಗಾರಿಕೆಗಳು ಬೆಳೆಯಬೇಕು ಹಾಗೂ ವಿಶ್ವದ ಅಭಿವೃದ್ಧಿಯ ಸಂಕಲ್ಪವನ್ನು ಒಟ್ಟಾಗಿ ಕೈಗೊಳ್ಳೊಣ ಎಂದರು.
ವಿಶ್ವಮಟ್ಟದ ಸಂಶೋಧನಾ ಕೇಂದ್ರಗಳು
ಸಂಶೋಧನೆಗಳಿಗಾಗಿ ಆರ್ ಎಂಡ್ ಡಿ ನೀತಿಯನ್ನು ತಂದ ಮೊದಲ ರಾಜ್ಯ ಕರ್ನಾಟಕ. ಸಣ್ಣಗ್ಯಾರೇಜ್ ನಿಂದ ಹಿಡಿದು ದೊಡ್ಡ ಸಂಸ್ಥೆಯವರೆಗೆ ಸಂಶೋಧನೆಗೆ ಒತ್ತು ನೀಡಲಾಗುವುದು. ಐಐಟಿ, ಐಐಎಂ. ಐಐಎಸ್ ಸಿ, ಡಿಆರ್ ಡಿಓ ಸೇರಿದಂತೆ ಪ್ರಮುಖ ಸಂಸ್ಥೆಗಳು ರಾಜ್ಯದಲ್ಲಿವೆ. 400 ಅಂತರರಾಷ್ಟ್ರೀಯ ಗುಣಮಟ್ಟದ ಸಂಶೋಧನಾ ಕೇಂದ್ರಗಳು ಬೆಂಗಳೂರಿನಲ್ಲಿವೆ. ಪ್ರಪಂಚದಾದ್ಯಂತ ಸುಮಾರು 10 ಸಾವಿರ ಇಂಜಿನಿಯರ್ಗಳು ಬೆಂಗಳೂರಿನಲ್ಲಿ ಸ್ಥಾಪಿತವಾಗಿರುವ ಕಂಪನಿಗಳಲ್ಲಿ ಸಂಶೋಧನಾ ಕಾರ್ಯ ಕೈಗೊಂಡಿದ್ದಾರೆ. ಜಿನೋಮ್ಯಾಟಿಕ್ಸ್ ನಿಂದ ಏರೋಸ್ಪೇಸ್ ವಲಯದಲ್ಲಿ ಸಂಶೋಧನೆಗಳು ನಡೆಯುತ್ತವೆ. ಕೇವಲ ಕರ್ನಾಟಕ, ಭಾರತ, ವಿಶ್ವವಲ್ಲದೇ, ಇಡೀ ಮಾನವ ಕುಲದ ಅಭಿವೃದ್ಧಿಯೇ ಕರ್ನಾಟಕದಲ್ಲಾಗುತ್ತದೆ. ಕೇಂದ್ರ ನೀತಿ ಆಯೋಗದ ಸೂಚ್ಯಂಕದಂತೆ ಆವಿಷ್ಕಾರದಲ್ಲಿ ಕರ್ನಾಟಕ ಮೊದಲನೇ ಸ್ಥಾನದಲ್ಲಿದೆ ಎಂದು ತಿಳಿಸಿದರು.
ರಾಜ್ಯದ ಕೈಗಾರಿಕಾ ಸ್ನೇಹಿ ವಾತಾವರಣದಿಂದ 7 ಲಕ್ಷ ಕೋಟಿ ಬಂಡವಾಳ ಹೂಡಿಕೆ
ಕೋವಿಡ್ ನಂತರ ದೊಡ್ಡ ಪ್ರಮಾಣದಲ್ಲಿ ಬಂಡವಾಳ ಹೂಡಿಕೆದಾರರ ಸಮಾವೇಶವನ್ನು ಆಯೋಜಿಸಿರುವ ಮೊದಲ ರಾಜ್ಯ ಕರ್ನಾಟಕ. 7 ಲಕ್ಷ ಕೋಟಿಗಿಂತ ಹೆಚ್ಚು ಬಂಡವಾಳ ಹರಿದುಬರಲು ಕರ್ನಾಟಕ ಶಕ್ತಿ, ಪರಂಪರೆ ಮತ್ತು ಕೈಗಾರಿಕಾ ಸ್ನೇಹಿ ವಾತಾವರಣದಿಂದ ಸಾಧ್ಯವಾಗಿದೆ. ಮೊದಲು ನಮ್ಮ ಮೇಲೆ ನಮಗೆ ವಿಶ್ವಾಸವಿರಬೇಕು. ನಮ್ಮ ಶಕ್ತಿ, ಸಾಮರ್ಥ್ಯದ ಮೇಲೆ ನಮಗೆ ವಿಶ್ವಾಸವಿರಬೇಕು. ಕರ್ನಾಟಕದಲ್ಲಿ ಕೋವಿಡ್ ತಂದೊಡ್ಡಿದ ಸವಾಲುಗಳನ್ನು ಅವಕಾಶಗಳನ್ನಾಗಿ ಮಾಡಿಕೊಳ್ಳಲಾಯಿತು. ಕೋವಿಡ್ ನ್ನು ಸಮರ್ಥವಾಗಿ ನಿರ್ವಹಿಸುವುದರ ಜೊತೆಗೆ ಕೋವಿಡ್ ನಂತರದ ಕರ್ನಾಟಕದ ಅಭಿವೃದ್ಧಿಗಾಗಿ ಸಜ್ಜುಗೊಂಡಿತು. ಕೋವಿಡ್ ನಂತರ ಪ್ರಪಂಚದ ಆರ್ಥಿಕತೆಯ ಸನ್ನವೇಶಗಳು ಬದಲಾಗುತ್ತಿದ್ದು, ಈ ಬದಲಾವಣೆಗೆ ಕರ್ನಾಟಕ ಸಿದ್ಧಗೊಂಡಿತ್ತು. ಆರ್ಥಿಕತೆಯ ಚೇತರಿಕೆಯಲ್ಲಿ ದೇಶದಲ್ಲಿ ಮುಂಚೂಣಿಯಲ್ಲದ್ದ ರಾಜ್ಯ ಕರ್ನಾಟಕ. ರಾಜ್ಯವೇ ಸ್ವತ: ಈ ಕಾರ್ಯಕ್ಕೆ ಮುಂದಾಯಿತು. ರಾಜ್ಯವೇ ಬದಲಾವಣೆಗೆ ನಾಯಕತ್ವ ವಹಿಸಿ ಇಡೀ ದೇಶಕ್ಕೆ ಉತ್ತಮ ಉದಾಹರಣೆಯಾಯಿತು ಎಂದರು.
ರಾಜ್ಯದಲ್ಲಿ ಪ್ರಗತಿಪರ ಚಿಂತನೆಯುಳ್ಳ ನೀತಿಗಳಿವೆ
ಕೋವಿಡ್ ನಂತರದ ಸಂದರ್ಭದಲ್ಲಿ ರಾಜ್ಯದ ಆರ್ಥಿಕ ಬೆಳವಣಿಗೆ ಮೊದಲಿಗಿಂತ ಹೆಚ್ಚಾಗಿತ್ತು. ಕಳೆದ ವರ್ಷದ ಕೇವಲ ಆರು ತಿಂಗಳ ಒಳಗಾಗಿ ಆದಾಯದ ಗುರಿಗಿಂತ 13000 ಕೋಟಿ ರೂ. ಹೆಚ್ಚಿಗೆ ಆದಾಯ ಸಂಗ್ರಹಿಸಲಾಯಿತು. ಇದು ನಮ್ಮ ರಾಜ್ಯದ ಶಕ್ತಿಯಾಗಿದೆ. ಜಿಎಸ್ ಟಿ ಸಂಗ್ರಹದಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ಕರ್ನಾಟಕದಲ್ಲಿ ಸುಧಾರಿತ ನೀತಿಗಳು, ಕೈಗಾರಿಕಾ ಸ್ನೇಹಿ ಪರಿಸರವನ್ನು ನೀಡುತ್ತಿದೆ. ಪ್ರಗತಿಪರ ಚಿಂತನೆಯ ನೀತಿಗಳು ರಾಜ್ಯದಲ್ಲಿವೆ.ಈಸ್ ಆಫ್ ಡುಯಿಂಗ್ ಬಿಸೆನೆಸ್,ಕೈಗಾರಿಕಾ ಪ್ರೋತ್ಸಾಹಕ ನೀತಿ, ಸೆಮಿಕಂಡಕ್ಟರ್ ನೀತಿ, ಇವಿ ನೀತಿ, ಆರ್ ಎಂಡ್ ಡಿ ನೀತಿ ರಾಜ್ಯದಲ್ಲಿವೆ ಎಂದರು.
ಹೆಚ್ಚಿನ ಉದ್ಯೋಗಾವಕಾಶಗಳನ್ನು ನೀಡುವ ಕೈಗಾರಿಕೆಗಳಿಗೆ ಹೆಚ್ಚಿನ ಪ್ರೋತ್ಸಾಹ
ಕರ್ನಾಟಕದಲ್ಲಿ ಉದ್ಯೋಗ ನೀತಿಯೂ ಇದೆ. ಕರ್ನಾಟಕದ ಜನ ಶ್ರೀಮಂತರಾಗುವ ಮೂಲಕ ರಾಜ್ಯ ಶ್ರೀಮಂತವಾಗಬೇಕು. ಇದು ಪರಿಶ್ರಮ ಹಾಗೂ ಉದ್ಯೋಗಾವಕಾಶಗಳಿಂದ ಮಾತ್ರ ಸಾಧ್ಯ. ಈ ಸದುದ್ದೇಶದಿಂದ ಕರ್ನಾಟದಲ್ಲಿ ಉದ್ಯೋಗ ನೀತಿಯನ್ನು ಜಾರಿಗೆ ತರಲಾಗಿದೆ. ಕರ್ನಾಟಕದಲ್ಲಿ ಬಂಡವಾಳ ಹೂಡಿಕೆಗಳಿಗೆ ಎಲ್ಲ ರೀತಿಯ ಪ್ರೋತ್ಸಾಹಕಗಳನ್ನು ನೀಡಲಾಗುವುದು.ಹೆಚ್ಚಿನ ಉದ್ಯೋಗಾವಕಾಶಗಳನ್ನು ನೀಡುವ ಕೈಗಾರಿಕೆಗಳಿಗೆ ಹೆಚ್ಚಿನ ಪ್ರೋತ್ಸಾಹಗಳನ್ನು ನೀಡಲಾಗುವುದು. ಕರ್ನಾಟಕದಲ್ಲಿ ಎಲ್ಲ ಸವಾಲುಗಳಿಗೆ ಪರಿಹಾರ ನೀಡಲಾಗುವುದು. ಸರ್ಕಾರ ಸಮಸ್ಯೆ ಭಾಗವಾಗದೇ ಪರಿಹಾರ ಭಾಗವಾಗಲಿದೆ. ನೀತಿಗಳು, ಮೂಲಭೂತಸೌಕರ್ಯಗಳನ್ನು ನೀಡಲಾಗುವುದು. ರಾಜ್ಯದಲ್ಲಿ ಬಂಡವಾಳ ಹೂಡಿಕೆಗೆ ಅತ್ಯಂತ ಪ್ರಶಸ್ತವಾದ ಸ್ಥಳವಾಗಿದೆ. ರಾಜ್ಯದಲ್ಲಿ ಹಾಕಿದ ಬಂಡವಾಳ ನಿಮಗೆ ಪ್ರತಿಫಲವನ್ನು ಆದಷ್ಟು ಬೇಗನೆ ನೀಡುತ್ತದೆ ಎಂದರು.
ಸವಾಲುಗಳನ್ನು ಅವಕಾಶಗಳಾಗಿ ಪರಿವರ್ತಿಸಲಾಗುತ್ತಿದೆ
ಕರ್ನಾಟಕ ಈ ಕ್ಷೇತ್ರದಲ್ಲಿನ ಸ್ಪರ್ಧೆಗೆ ಸಿದ್ಧವಿದೆ. ಸ್ಪರ್ಧೆಗಳಿಂದ ದಕ್ಷತೆ ಹೆಚ್ಚುವ ಜೊತೆಗೆ ನಾವು ಸದಾ ಕಾರ್ಯೋನ್ಮುಖರಾಗಿರುತ್ತೇವೆ. ನಮ್ಮ ಸ್ಪರ್ಧೆ ವಿಶ್ವಮಟ್ಟದ್ದಾಗಿದೆ. ಕೋವಿಡ್ ನಂತರ ಆರ್ಥಿಕತೆಯಲ್ಲಿ ಮುಂದಿದ್ದ ವಿಶ್ವದ ಅನೇಕ ದೇಶಗಳು ಈಗ ಬೆಲೆಏರಿಕೆ ಸೇರಿದಂತೆ ಹಲವು ತೊಂದರೆಗಳನ್ನು ಅನುಭವಿಸುತ್ತಿವೆ. ಇಂತಹ ಸಂದರ್ಭದಲ್ಲಿ ವಿಶ್ವದ ಕಣ್ಣು ಭಾರತದಂತಹ ಅಭಿವೃದ್ಧಿಶೀಲ ರಾಷ್ಟ್ರಗಳ ಮೇಲೆ ನೆಟ್ಟಿದೆ. ಚೈನಾಪ್ಲಸ್ ಒನ್ ಗಮ್ಯಗಳು ಬಹಳ ಕಡಿಮೆಯಿದೆ. ಇದರಲ್ಲಿ ಪ್ರಮುಖವಾದ ಗಮ್ಯವೆಂದರೆ ಭಾರತ. ಆದ್ದರಿಂದಲೇ ಇಲ್ಲಿ ಸವಾಲುಗಳನ್ನು ಅವಕಾಶಗಳಾಗಿ ಪರಿವರ್ತಿಸಲಾಗುತ್ತಿದೆ ಎಂದರು.
ಕರ್ನಾಟಕದ ಮೇಲೆ ಹೂಡಿಕೆದಾರರ ವಿಶ್ವಾಸವಿದೆ
ಪ್ರದಾನಿ ಮೋದಿಯವರ ದೂರದೃಷ್ಟಿಯ ನಾಯಕರಾಗಿದ್ದಾರೆ. 2025 ಒಳಗೆ ಭಾರತದ ಎಲ್ಲ ಮನೆಗಳಿಗೆ ನಳಸಂಪರ್ಕದ ಕುಡಿಯುವ ನೀರು ತಲುಪಿಸುವ ಯೋಜನೆಯನ್ನು ಕೈಗೊಳ್ಳುವ ಎದೆಗಾರಿಕೆ ಪ್ರಧಾನಿ ಮೋದಿಯವರಿಗಿದೆ. ಅತ್ಯಂತ ಕ್ಲಿಷ್ಟಕರವಾದ ಈ ಕಾರ್ಯವನ್ನು ಯಶಸ್ವಿಯಾಗಿ ಕೈಗೊಳ್ಳುತ್ತಿದ್ದಾರೆ. ಇದು ಅವರ ದಕ್ಷತೆಯನ್ನು ತೋರುತ್ತದೆ. ಮೇಕ್ ಇನ್ ಇಂಡಿಯಾ, ಸಬ್ ಕಾ ಸಾಥ್ ಸಬಾ ಕಾ ವಿಶ್ವಾಸ್, ಆತ್ಮನಿರ್ಭರ ಭಾರತ ದಂತಹ ಪರಿಕಲ್ಪನೆಯನ್ನ ಮುಂದುವರೆಸಲಾಗುವುದು. ಇದು ಡಬಲ್ ಇಂಜಿನ್ ಸರ್ಕಾರ. ಕೇಂದ್ರ ಸರ್ಕಾರ ರಾಜ್ಯಕ್ಕೆ ಎಲ್ಲ ರೀತಿಯ ಸಹಕಾರವನ್ನು ನೀಡುತ್ತಿದೆ. ಕರ್ನಾಟಕ ಸುಸ್ಥಿರ ಆರ್ಥಿಕ ಅಭಿವೃದ್ಧಿಯನ್ನು ಕಾಣುತ್ತಿದೆ. ರಾಜ್ಯದಲ್ಲಿ ಬಂಡವಾಳ ಹೂಡಿಕೆಯ ಪ್ರಮಾಣವನ್ನು ಗಮನಿಸಿದರೆ, ಕರ್ನಾಟಕದ ಮೇಲಿನ ಹೂಡಿಕೆದಾರರ ವಿಶ್ವಾಸವನ್ನು ಬಿಂಬಿಸುತ್ತದೆ. ಕರ್ನಾಟಕದಲ್ಲಿ ಬಂಡವಾಳ ಹೂಡಿಕೆ ಮಾಡುತ್ತಿರುವ ಸಂಸ್ಥೆಗಳು ರಾಜ್ಯದ ಆರ್ಥಿಕ ಪ್ರಗತಿಯಲ್ಲಿ ಭಾಗಿದಾರರಾಗುತ್ತಿರುವುದಕ್ಕೆ ಅಭಿನಂದನೆಗಳು. ಮುಂದಿನ ಇನ್ವೆಸ್ಟ್ ಕರ್ನಾಟಕ ಬಂಡವಾಳ ಹೂಡಿಕೆದಾರರ ಸಮಾವೇಶವನ್ನು 2025 ರಲ್ಲಿ ನಮ್ಮ ಸರ್ಕಾರ ಪುನ: ಆಯೋಜಿಸುವ ಸಂಪೂರ್ಣ ವಿಶ್ವಾಸವನ್ನು ನಾವು ಹೊಂದಿದ್ದೇವೆ ಎಂದರು.
ಈ ಸಂದರ್ಭದಲ್ಲಿ ಕರ್ನಾಟಕದ ರಾಜ್ಯಪಾಲರಾದ ಥಾವರ್ ಚಂದ ಗೆಲ್ಹೊತ್, ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್, ಪ್ರಲ್ಹಾದ್ ಜೋಶಿ, ರಾಜೀವ್ ಚಂದ್ರಶೇಖರ್, ಪಿಯೂಷ್ ಗೋಯಲ್, ಸಚಿವರಾದ ಡಾ. ಅಶ್ವತ್ಥ್ ನಾರಾಯಣ, ಮುರುಗೇಶ್ ನಿರಾಣಿ, ಎಂಟಿಬಿ ನಾಗರಾಜ್, ಮೈಸೂರು ರಾಜ ವಂಶಸ್ಥರಾದ ರಾಣಿ ಪ್ರಮೋದಾದೇವಿ, ಉದ್ಯಮಿಗಳಾದ ಸಜ್ಜನ್ ಜಿಂದಾಲ್ , ವಿಕ್ರಮ ಕಿರ್ಲೊಸ್ಕರ್, ರಿಷಬ್ ಪ್ರೇಮ್ ಜಿ , ಪ್ರತಿಕ್ ಅಗರವಾಲ್, ರಾಜನ್ ಮಿತ್ತಲ್, ಕರಣ್ ಅದಾನಿ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಹಾಗೂ ಮತ್ತಿತರರು ಹಾಜರಿದ್ದರು.