ಶಿವಮೊಗ್ಗ: ಸರ್ಕಾರದ ಫುಡ್ ಸೇಫ್ಟಿ ವಿಭಾಗದ ಆಹಾರ ಅಂಕಿತ ಅಧಿಕಾರಿಗಳ ಅಧಿಕೃತ ಜೀಪಿನಲ್ಲೇ ನಕಲಿ ಅಧಿಕಾರಿಯೊಬ್ಬರು ನಗರದ ವಿವಿಧೆಡ ದಾಳಿ ನಡೆಸಲು ಹೋಗಿ ಸಿಕ್ಕಿಹಾಕಿಕೊಂಡು ಇದೀಗ ವಿನೋಬನಗರ ಠಾಣೆಯಲ್ಲಿ ಚೀಟಿಂಗ್ ಪ್ರಕರಣ ದಾಖಲಾಗು ಮೂಲಕ ಇಲಾಖೆ ಮಾನ ಹರಾಜು ಹಾಕಿದ್ದಾರೆ.
ಎರಡು ದಿನಗಳ ಹಿಂದೆ ವಿನೋಬನಗರದಲ್ಲಿ ನೂತನವಾಗಿ ಆರಂಭವಾದ ಬೆಣ್ಣೆದೋಸೆ ಹೋಟೆಲ್ ಮತ್ತು ಗೋರೂರು ಮಾರ್ಟ್ ಗೆ ಸರ್ಕಾರದ ಅಧಿಕೃತ ಅಂಕಿತ ನೀಡಲಾಗಿತ್ತು. ಇಂತಹ ಹೋಟೆಲ್, ಮಾರ್ಟ್ ಗೆ ಅಧಿಕಾರಿಗಳ ಜೀಪಿನಲ್ಲೇ ಆಗಮಿಸಿದ ಗಂಗಾಧರ್ ಎನ್ನುವ ವ್ಯಕ್ತಿ ಪರಿಶೀಲನೆಯ ನೆಪದಲ್ಲಿ ಒಳ ಪ್ರವೇಶಿಸಿ ಕೆಲವು ಲೋಪಗಳನ್ನು ತೋರಿಸಿ ಪೆನಾಲ್ಟಿ ರೂಪದಲ್ಲಿ ಹಣಕ್ಕೆ ಡಿಮ್ಯಾಂಡ್ ಮಾಡಿದ್ದಾರೆ. 12 ಸಾವಿರ ರೂ. ನೀಡುವಂತೆ ತಾಕೀತು ಮಾಡಿದ್ದಾರೆ.
ರಾಜ್ಯದ ಎಲ್ಲ ರಂಗಗಳಲ್ಲಿ ಕನ್ನಡ ಬಳಕೆಗೆ ಕಾನೂನು ರಚನೆ – CM ಬಸವರಾಜ ಬೊಮ್ಮಾಯಿ
ಮರು ದಿವಸ ನೀಡುವುದಾಗಿ ಅಂಗಡಿ ಮಾಲೀಕ ಹೇಳಿದ್ದು, ಮತ್ತೆ ಬಂದ ಸೋ ಕಾಲ್ಡ್ ಅಧಿಕಾರಿ 2 ಸಾವಿರ ರೂ ಪಡೆದಿದ್ದಾನೆ. ಇದು ಅಲ್ಲಿನ ಸಿಸಿ ಕ್ಯಾಮೆರಾದಲ್ಲಿ ದಾಖಲಾಗಿದೆ. ಈ ಸುಳಿವು ಸಿಕ್ಕಿದ ಮಾಧ್ಯಮದವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆಗೆ ಬಂದ ಅಧಿಕಾರಿಯ ಪದನಾಮ ಮತ್ತು ಐಡಿ ಕಾರ್ಡ್ ತೋರಿಸಲು ಹೇಳಿದ್ದಾರೆ. ಆಗ ಗಲಿಬಿಲಿಗೊಂಡ ನಕಲಿ ಅಧಿಕಾರಿ ನಾನು ಆಹಾರ ವಿಭಾಗದಲ್ಲಿ ಡಾಟಾ ಎಂಟ್ರಿ ಮಾಡುವ ಉದ್ಯೋಗಿ, ಸಾಹೇಬರು ನನಗೆ ಪರಿಶೀಲನೆಗೆ ಕಳುಹಿಸಿದ್ದಾರೆ ಎಂದು ತಪ್ಪಿಸಿಕೊಳ್ಳಲು ಯತ್ನಿಸಿದ್ಧಾನೆ.
ಮಾಧ್ಯಮದವರು ಆಹಾರ ಅಂಕಿತ ಅಧಿಕಾರಿಗೆ ದೂರವಾಣಿ ಮೂಲಕ ಸಂಪರ್ಕಿಸಲು ಯತ್ನಿಸಿದಾಗ ಅವರು ದೂರವಾಣಿ ತೆಗೆದುಕೊಳ್ಳದ ಕಾರಣ ಆರೋಪಿ ಗಂಗಾಧರ್ ಡ್ರೈವರ್ ಮೊಬೈಲ್ ಅನ್ನು ಮಾಧ್ಯಮದವರಿಗೆ ನೀಡಿ ಓಟ ಕಿತ್ತಿದ್ದಾನೆ.
ಇದೀಗ ವಿನೋಬನಗರ ಪೊಲೀಸ್ ಠಾಣಾಧಿಕಾರಿಗಳು ಸರ್ಕಾರಿ ಜೀಪನ್ನು ವಶಪಡಿಸಿಕೊಂಡಿದ್ದು, ಚೀಟಿಂಗ್ ಪ್ರಕರಣ ದಾಖಲಿಸಿದ್ದಾರೆ. ಅಲ್ಲದೇ ಓಡಿಹೋದ ನಕಲಿ ಅಧಿಕಾರಿ ಗಂಗಾಧರ್ನನ್ನು ಬಂಧಿಸಲು ಬಲೆ ಬೀಸಿದ್ದಾರೆ. ಇಲಾಖೆ ಅಧಿಕಾರಿ ಡಾ. ಮಧು ಪೊಲೀಸ್ ಠಾಣೆಗೂ ಬರದೆ, ಮಾಧ್ಯಮಗಳ ಸಂಪರ್ಕಕ್ಕೂ ಸಿಗದೆ ತಟಸ್ಥರಾಗಿದ್ದು, ಹಲವು ಅನುಮಾನಕ್ಕೆ ಕಾರಣವಾಗಿದೆ. ಇದೀಗ ವಿನೋಬನಗರ ಠಾಣಾ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.