ಕಲಬುರಗಿ: ರಾಜ್ಯದಲ್ಲಿ ಎಲ್ಲ ವರ್ಗ ಹಾಗೂ ಪ್ರದೇಶಗಳ ಅಭಿವೃದ್ಧಿ ಆರಂಭವಾಗಿದ್ದು, 2023 ರ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಮತ್ತೆ ಕಮಲ ಅರಳಲಿದ್ದು, ಕರ್ನಾಟಕದ ಕಲ್ಯಾಣ ಪರ್ವ ಆರಂಭವಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಹೇಳಿದರು.
ಇಂದು ಕಲಬುರಗಿಯಲ್ಲಿ ಬಿಜೆಪಿ ಕರ್ನಾಟಕ ವತಿಯಿಂದ ಜರುಗಿದ ರಾಜ್ಯ ಹಿಂದುಳಿದ ವರ್ಗಗಳ ವಿರಾಟ್ ಸಮಾವೇಶದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಾತನಾಡಿ, ಎಲ್ಲರನ್ನೂ ಎಲ್ಲಾ ಕಾಲದಲ್ಲೂ ಮೋಸ ಮಾಡಲು ಸಾಧ್ಯ ಇಲ್ಲ. ಹಿಂದುಳಿದ ವರ್ಗಕ್ಕೆ ಸ್ಥಾನಮಾನ ಕೊಡುತ್ತೇನೆ ಎಂದಿದ್ದ ಸಿದ್ದರಾಮಯ್ಯ ಅವರು, ತಮ್ಮ ಸ್ವಜಾತಿ ಕುರುಬ ಸಮುದಾಯಕ್ಕೂ ಸಂಪುಟದಲ್ಲಿ ಯಾವುದೇ ಸ್ಥಾನ ಮಾನ ಕೊಡದೇ ಮೋಸ ಮಾಡಿದ್ದಾರೆ.
ಎಸ್ಸಿಎಸ್ಟಿ ಮೀಸಲಾತಿ ಹೆಚ್ಚಳದಲ್ಲಿ ನಮ್ಮ ಪಾತ್ರ ಮುಖ್ಯ ಇದೆ ಎಂದು ಹೇಳಿದ್ದ ಸಿದ್ದರಾಮಯ್ಯ ಅವರ ಮಾತಿಗೆ ಮುಖ್ಯಮಂತ್ರಿ ಬೊಮ್ಮಾಯಿ ಅವರು “ಪಕ್ಕದ ಮನೆಯವರು ಮಗು ಹುಟ್ಟಿಸಿದ್ರೆ ಈ ಮನೆಯವನು ಊರು ತುಂಬಾ ಪೇಡಾ ಹಂಚಿದನಂತೆ” ಎಂಬ ಗಾದೆ ಮಾತು ಹೇಳುವ ಮೂಲಕ ಟಾಗ್ ನೀಡಿದರು. 50 ವರ್ಷದ ಬೇಡಿಕೆಗೆ ನೀವು ಅಧಿಕಾರ ಇದ್ದೂ ಏನೂ ಮಾಡಲಿಲ್ಲ. ನಾಗಮೋಹನ್ ದಾಸ್ ಕಮಿಟಿ ಮಾಡಿದ್ದು ಸಮ್ಮಿಶ್ರ ಸರ್ಕಾರವೇ ಹೊರತು ಕಾಂಗ್ರೆಸ್ ಸರ್ಕಾರ ಅಲ್ಲ. ಈ ಜನಾಂಗಕ್ಕೆ ಯಾಕೆ ನ್ಯಾಯ ಕೊಡಬೇಕು ಎಂಬುದನ್ನು ವರದಿ ಮುಖಾಂತರ ಪಡೆದುಕೊಂಡು ಯಡಿಯೂರಪ್ಪ ಮತ್ತು ನಾನು ಅದನ್ನು ಕಾರ್ಯರೂಪಕ್ಕೆ ತರಲು ಸಾಧ್ಯವಾಯಿತು ಎಂದು ಹೇಳಿದರು.
ಒಬಿಸಿ ಬಗ್ಗೆ ಮಾತನಾಡಲು ನಿಮಗೆ ನೈತಿಕ ಹಕ್ಕಿಲ್ಲ
ಎಸ್ಸಿಎಸ್ಟಿ ಸಮಯದಾಯದ ಜೀವನ ಗುಣಮಟ್ಟ ಹೆಚ್ಚಾಗಬೇಕು. ಅವರೂ ಕೂಡ ಇತರರಂತೆ ಮುಖ್ಯವಾಹಿನಿಗೆ ಬಂದು ಸ್ವಾವಲಂಬನೆಯ ಜೀವನ ನಡೆಸಬೇಕು ಎಂಬ ಕಾರಣದಿಂದ ಎಷ್ಟೇ ವಿರೋಧವಿದ್ದರೂ ಗಣನೆಗೆ ತೆಗೆದುಕೊಳ್ಳದೇ ಎಸ್ಸಿಎಸ್ಟಿ ಮೀಸಲಾತಿ ಹೆಚ್ಚಿಸಿ ಆ ಜನಾಂಗಕ್ಕೆ ನ್ಯಾಯವನ್ನು ಕೊಟ್ಟಿದ್ದೇವೆ. ಯಾವುದೇ ಆಧಾರವಿಲ್ಲದ ಕುರುಬ ಜನಾಂಗಕ್ಕೆ ಅಮೃತ ಯೋಜನೆ ಮೂಲಕ 20 ಸಾವಿರ ಸಂಘಗಳಿಗೆ 354 ಕೋಟಿ ಅನುದಾನ ಕೊಟ್ಟಿದ್ದೇವೆ. ಇದ್ದನ್ನು ಕುರಿಗಾಹಿ ಸಮುದಾಯದಿಂದಲೇ ಬಂದ ಸಿದ್ದರಾಮಯ್ಯ ಯಾಕೆ ಮಾಡಲಿಲ್ಲ. ಅಧಿಕಾರಿಕ್ಕೆ ಬಂದ ಮೇಲೆ ಅವರಿಗೆ ಸಹಾಯ ಮಾಡಬೇಕೆಂಬ ಕನಿಷ್ಠ ಸೌಜನ್ಯವೂ ನಿಮಗಿರಲಿಲ್ಲ. ಒಬಿಸಿ ಬಗ್ಗೆ ಮಾತನಾಡಲು ನಿಮಗೆ ಯಾವ ನೌತಿಕ ಹಕ್ಕಿದೆ ಎಂದು ಸಿಎಂ ಬೊಮ್ಮಾಯಿ ಅವರು ಸಿದ್ದರಾಮಯ್ಯ ಅವರನ್ನು ಪ್ರಶ್ನಿಸಿದರು.
ಸಾಮಾಜಿಕ ನ್ಯಾಯ ಭಾಷಣದ ಸರಕಾಗಿದೆ
ಕಾಂಗ್ರೆಸ್ ಅವರಿಗೆ ಸಾಮಾಜಿಕ ನ್ಯಾಯ ಕೇವಲ ಭಾಷಣದ ಸರಕಾಗಿದೆ. ಭಾಷಣದಿಂದ ಹೊಟ್ಟೆ ತುಂಬಲ್ಲ. ಆದ್ರೆ ಇವತ್ತು ನಮ್ಮ ಬಿಜೆಪಿ ಸರ್ಕಾರ ಸಾಮಾಜಿಕ ನ್ಯಾಯ, ಸಾಮಾಜಿಕ ಅವಕಾಶ, ಸಾಮಾಜಿಕ ಸಮಾನತೆಯನ್ನು ಕೊಡುತ್ತಿದೆ. ಇದಕ್ಕೆ ಪ್ರೇರಣೆ ನಮ್ಮ ನಾಯಕರಾದ ನರೇಂದ್ರ ಮೋದಿ ಅವರು. ಎಲ್ಲ ಸಮುದಾಯಗಳನ್ನು ಒಗ್ಗೂಡಿಸಿ ಅವರು ಭಾರತವನ್ನು ಮುನ್ನಡೆಸುತ್ತಿದ್ದಾರೆ. ಅದೇ ಹಾದಿಯಲ್ಲಿ ನಮ್ಮ ಸರ್ಕಾರವೂ ಇದೆ ಎಂದು ಸಿಎಂ ಬೊಮ್ಮಾಯಿ ಅವರು ಹೇಳಿದರು.
ಸಮ್ಮೇಳನಕ್ಕೆ ಖಾಲಿ ಕೈಲಿ ಬಂದಿಲ್ಲ
ತಳವಾರ ಸಮುದಾಯ ಎಸ್ಟಿ ವರ್ಗಕ್ಕೆ ಸೇರಿಸಬೇಕೆಂದು ಕೇಂದ್ರ ಆದೇಶ ಮಾಡಿದೆ. ಅವರನ್ನು ಹಿಂದುಳಿದ ವರ್ಗಗಳ ಪಟ್ಟಿಯಿಂದ ತೆಗೆದು ಎಸ್ಟಿಗೆ ಸೇರಿಸಿ ಮತ್ತೊಮ್ಮೆ ಅವಕಾಶ ನೀಡಲಾಗಿದೆ. ಸಮುದಾಯದಲ್ಲಿ ಬಡತನ ಇದೆ, ಅಲ್ಲಿ ನೋವಿದೆ, ಅವರು ವಲಸೆ ಹೋಗುತ್ತಾರೆ. ಇದನ್ನು ನೋಡಿಯೂ ಸುಮ್ಮನೆ ಕೂರುವ ಕರುಳು ನಮ್ಮದಲ್ಲ. ಅವರಿಗೆ ನ್ಯಾಯ ಕೊಡಬೇಕೆಂದು ಈಗಾಗಲೇ ನಿರ್ಣಯ ಮಾಡಲಾಗಿದೆ. ಈ ಸಮ್ಮೇಳನಕ್ಕೆ ನಾನು ಖಾಲಿ ಕೈಲಿ ಬಂದಿಲ್ಲ. ಸರ್ಕಾರದ ಆದೇಶದೊಂದಿಗೆ ಬಂದಿದ್ದೇನೆ. ಅಧಿಕಾರ ಬರುತ್ತೆ ಹೋಗುತ್ತೆ, ಆದ್ರೆ ಈ ಸಮುದಾಯಕ್ಕೆ ನಾನು ನ್ಯಾಯ ಕೊಟ್ಟೇ ಹೋಗ್ತೀನಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಹಿಂದುಳಿದ ಪ್ರದೇಶದ ಅಭಿವೃದ್ದಿ
ಹಿಂದುಳಿದ ಪ್ರದೇಶದ ಮತ್ತು ಹಿಂದುಳಿದ ಜನಾಂಗದ ಅಭಿವೃದ್ಧಿ ಆದಾಗ ಮಾತ್ರ ಕರ್ನಾಟಕ ರಾಜ್ಯದ ಸಮಗ್ರ ಅಭಿವೃದ್ಧಿ ಆಗುತ್ತದೆ. ಎಲ್ಲ ಸಮುದಾಯಗಳೂ ದುಡಿಮೆಯಿಂದ ಮೇಲೆ ಬರಬೇಕು. ದುಡ್ಡೇ ದೊಡ್ಡಪ್ಪ ಅಲ್ಲ. ದುಡಿಮೆಯೇ ದೊಡ್ಡಪ್ಪ. ಆ ದುಡಿಯುವ ಅವಕಾಶ ನಮ್ಮ ಸರ್ಕಾರ ಕೊಡುತ್ತದೆ. ಕಲ್ಯಾಣ ಕರ್ನಾಟಕ ಎಂದು ನಮ್ಮ ನಾಯಕರು ಹೆಸರಿಟ್ಟಿದ್ದಾರೆ. ನಿಜವಾದ ಕಲ್ಯಾಣ ಕರ್ನಾಟಕ ಮಾಡಲು ನಮ್ಮ ಸರ್ಕಾರ ಸಂಕಲ್ಪ ತೊಟ್ಟಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.
ಕಲ್ಯಾಣ ಪರ್ವ ನಾವು ಪ್ರಾರಂಭ ಮಾಡ್ತೀವಿ
ಈ ಭಾಗಕ್ಕೆ ಈ ವರ್ಷ 2 ಸಾವಿರ ಶಾಲಾ ಕೊಠಡಿಗಳು, 51 ಹೊಸ ಆಸ್ಪತ್ರೆಗಳು, 316 ಹೊಸ ಬಸ್ಗಳು ನೀಡಿದ್ದೇವೆ. ಇಲ್ಲಿಯೇ ಟೆಕ್ಸ್ಟೈಲ್ ಪಾರ್ಕ್ ಮಾಡಲಾಗುತ್ತಿದೆ. ಈ ಮೂಲಕ ಯುವಕರಿಗೆ ಕೆಲಸವನ್ನು ಕೊಡುತ್ತೇವೆ. ಕಲ್ಯಾಣ ಕರ್ನಾಟಕದಲ್ಲಿ ನಿಜವಾದ ಕಲ್ಯಾಣ ಪರ್ವ ನಾವು ಪ್ರಾರಂಭ ಮಾಡುತ್ತೀವಿ. ಯಾರೂ ಸಹ ಹಸಿವು, ಬಡತನ, ನಿರುದ್ಯೋಗದಿಂದ ಬಳಲಬಾರದು ಎಂದು ಸಂಕಲ್ಪ ಮಾಡಿದ್ದೇವೆ. ನಿಮಗಾಗಿ ನಾನು 24 ತಾಸು ಕೆಲಸ ಮಾಡಲು ತಯಾರಿದ್ದೇನೆ. ಏನೇ ಬರಲಿ ನಿಮ್ಮ ಪರವಾಗಿ ಕೆಲಸ ಮಾಡಲು ಸಿದ್ಧನಿದ್ದೇನೆ. ಯಾವುದೇ ತ್ಯಾಗಕ್ಕೂ ಸಿದ್ಧನಿದ್ದೇನೆ. ನಿಮ್ಮ ಆಶೀರ್ವಾದ ಇರಲಿ. ಮುಂದಿನ ದಿನಗಳಲ್ಲಿ ಬದಲಾವಣೆಯ ಹರಿಕಾರರು ನೀವಾಗಬೇಕು ಎಂದು ಸಿಎಂ ಬೊಮ್ಮಾಯಿ ಹೇಳಿದರು.
ಹಿಂದುಳಿದ ವರ್ಗ ನಿಮ್ಮ ಜೇಬಲ್ಲಿಲ್ಲ
ಸಮ್ಮೇಳನದಲ್ಲಿ ಜನ ಸಾಗರ ಸೇರಿದೆ. ಇದರಿಂದ ನಮಗೆ ಅನೆ ಬಲ ಬಂದಿದೆ. ನಿಮ್ಮ ಶಕ್ತಿಯನ್ನು ನಿಮ್ಮ ಪರವಾಗಿ ಮಾತ್ರ ಬಳಕೆ ಮಾಡುತ್ತೇವೆ. ನಮಗಾಗಿ ಗುಲಗಂಜಿಯಷ್ಟೂ ಬಳಕೆ ಮಾಡುವುದಿಲ್ಲ ಎಂದು ನಾನು ಪ್ರತಿಜ್ಞೆ ಮಾಡುತ್ತೇನೆ. ಹಿಂದುಳಿದ ವರ್ಗ ನಿಮ್ಮ ಜೇಬಲ್ಲಿಲ್ಲ. ಈ ವರ್ಗ ಈಗ ಜಾಗೃತವಾಗಿದೆ. ಸಂಪೂರ್ಣವಾಗಿ ಭಾರತೀಯ ಜನತಾ ಪಕ್ಷದ ಪರವಾಗಿ ಎದ್ದುನಿಂತಿದೆ. ಈ ಹಿಂದುಳಿದ ವರ್ಗದ ಸಮ್ಮೇಳನದ ವೇದಿಕೆಯಲ್ಲಿ ನಾನು ಕಾಂಗ್ರೆಸ್ ಗೆ ಸವಾಲು ಹಾಕುತ್ತೀನಿ. ತಾಕತ್ತು ಇದ್ದರೆ, ಧಮ್ ಇದ್ದರೆ ನಮ್ಮ ವಿಜಯ ಪಥವನ್ನು ನಿಲ್ಲಿಸುವ ಪ್ರಯತ್ನ ಮಾಡಿ ಎಂದು ಸಿಎಂ ಬೊಮ್ಮಾಯಿ ಸವಾಲು ಹಾಕಿದರು.
ಲಂಬಾಣಿ ತಾಂಡಾ ಅಭಿವೃದ್ಧಿ ಮಾಡುತ್ತಿದ್ದೇವೆ
ಲಂಬಾಣಿ ಜನಾಂಗ 75 ವರ್ಷಗಳಿಂದ ಅಲೆಮಾರಿಗಳಾಗಿದ್ದರು. ಹಿಂದಿದ್ದ ಸರ್ಕಾರಗಳು ಅವರ ಮನೆಗಳಿಗೆ ಹಕ್ಕು ಪತ್ರ ಕೊಟ್ಟಿರಲಿಲ್ಲ. ಅವರ ತಾಂಡಾಗಳನ್ನು ಗ್ರಾಮಗಳಾಗಿ ಮಾಡಿರಲಿಲ್ಲ. ಲಂಬಾಣಿ ತಾಂಡಾಗಳ ಅಭಿವೃದ್ಧಿ ಕೆಲಸವನ್ನು ಯಡಿಯೂರಪ್ಪ ಅವರಿದ್ದ ಸರ್ಕಾರ ಮಾಡಿದೆ. ಈಗ ನಮ್ಮ ಸರ್ಕಾರ ತಾಂಡಾಗಳಲ್ಲಿರುವ ಅವರ 20 ಸಾವಿರ ಮನೆಗಳಿಗೆ ಹಕ್ಕುಪತ್ರಗಳನ್ನು ಸಬ್ ರಿಜಿಸ್ಟ್ರಾರ್ ಕಚೇರಿ ಮೂಲಕ ರಿಜಿಸ್ಟರ್ ಮಾಡಿ ನೀಡುತ್ತಿದ್ದೇವೆ. ಈ ಮೂಲಕ ಅವರಿಗೆ ಸೂರು ಕಲ್ಪಿಸುವ ಕೆಲಸ ನಮ್ಮ ಸರ್ಕಾರ ಮಾಡುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದರು.
ಸುಳ್ಳು ಸುದ್ದಿಯನ್ನು ನಂಬಬೇಡಿ
ಎಲ್ಲ ವರ್ಗದ ಕಲ್ಯಾಣಕ್ಕಾಗಿ ದುಡಿಯುವ ಸಂದರ್ಭದಲ್ಲಿ ಹತ್ತು ಹಲವಾರು ಜನರು ಅಪಸ್ವರಗಳನ್ನು ಮತ್ತು ಸುಳ್ಳು ಸುದ್ದಿಗಳನ್ನು ಕೊಡುವ ಪ್ರಯತ್ನ ಮಾಡುತ್ತಾರೆ. ಅವಕ್ಕೆ ಕಿವಿಗೊಡದೇ ಎಲ್ಲ ಸಮುದಾಯಗಳು ಒಂದಾಗಿ ಬೆಳೆಯಬೇಕು. ಮುಂದಿನ ದಿನಗಳಲ್ಲಿ ನಿಮ್ಮ ಸರ್ಕಾರ ಬರಬೇಕು. ಅದರಿಂದ ನಿಮ್ಮ ಕಲ್ಯಾಣ ಆಗಬೇಕು. ಆ ಶಕ್ತಿ ನಿಮ್ಮಲ್ಲಿದೆ. ಆ ಶಕ್ತಿಯನ್ನು ನಮಗೆ ಕೊಟ್ಟು ಆಶೀರ್ವಾದ ಮಾಡಿ ಎಂದು ಸಿಎಂ ಬೊಮ್ಮಾಯಿ ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ, ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್, ರಾಜ್ಯದ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸಚಿವರುಗಳಾದ ಗೋವಿಂದ ಕಾರಜೋಳ, ಮುರುಗೇಶ್ ನಿರಾಣಿ, ಡಾ. ಅಶ್ವತ್ಥ್ ನಾರಾಯಣ, ಪ್ರಭು ಚೌಹಾಣ್ ಸೇರಿದಂತೆ ಅನೇಕ ಬಿಜೆಪಿ ನಾಯಕರು ಉಪಸ್ಥಿತರಿದ್ದರು.