ಬೆಂಗಳೂರು : ಡಾಲಿ ಧನಂಜಯ್ ನಟನೆಯ ‘ಹೆಡ್ ಬುಷ್’ ಸಿನಿಮಾದಲ್ಲಿ ವೀರಭದ್ರ ದೇವರ ವೀರಗಾಸೆಗೆ ಅವಮಾನ ಮಾಡಲಾಗಿದೆ ಎಂದು ವೀರಗಾಸೆ ಕಲಾವಿದರು ಆಕ್ಷೇಪ ವ್ಯಕ್ತ ಪಡಿಸಿದ್ದಾರೆ. ವೀರಶೈವರ ಸಾಂಪ್ರದಾಯಿಕ ಕುಣಿತವಾಗಿರುವ ವೀರಗಾಸೆಗೆ ಅಪಮಾನ ಮಾಡಲಾಗಿದೆ. ಕೂಡಲೇ ದೃಶ್ಯಕ್ಕೆ ಕತ್ತರಿ ಹಾಕಬೇಕು ಎಂಬ ಆಗ್ರಹ ಕೇಳಿಬಂದಿದ್ದು, ಸೋಷಿಯಲ್ ಮೀಡಿಯಾದಲ್ಲಿ ಬಾಯ್ ಕಾಟ್ ಹೆಡ್ ಬುಷ್ ಅಭಿಯಾನ ಪ್ರಾರಂಭವಾಗಿದೆ.
ಇದರ ನಡುವೆ ಹೆಡ್ ಬುಷ್ ಸಿನಿಮಾದ ವಿವಾದ ಇದೀಗ ರಾಜಕೀಯ ತಿರುವು ಪಡೆದುಕೊಂಡಿದ್ದು, ಸರ್ಕಾರಕ್ಕೆ ಸಂಕಷ್ಟ ಎದುರಾಗಿದೆ.
ಹೌದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನೀಲ್ ಕುಮಾರ್ ವೀರಗಾಸೆ ಕುರಿತಾಗಿ ಟ್ವಿಟ್ ಮಾಡುತ್ತಿದ್ದಂತೆಯೇ ಅನೇಕರು ಅವರ ಮೇಲೆ ಮುಗಿ ಬಿದ್ದಿದ್ದು, ಜಾನಪದ ಕಲಾವಿದರಿಗೂ ಮಾಸಾಶನ ನೀಡುವಂತೆ ಆಗ್ರಹಿಸಿದ್ದಾರೆ.
ಬರೀ ಒಂದು ಸಮುದಾಯಕ್ಕೆ ಮಾತ್ರ ಮಾಸಾಶನ ಕೊಟ್ಟಿದ್ದೀರಿ. ವೀರಗಾಸೆ, ಕಂಸಾಳೆ ಹೀಗೆ ಎಲ್ಲ ಜಾನಪದ ಪ್ರಕಾರದ ಕಲಾವಿದರಿಗೂ ಕೊಡಿ ಎಂದು ಸೋಷಿಯಲ್ ಮೀಡಿಯಾದಲ್ಲಿ ಆಗ್ರಹ ವ್ಯಕ್ತವಾಗಿದೆ. ಬರೀ ನಿಮ್ಮ ಭಾಗದ ಕಲಾವಿದರಿಗೆ ಮಾತ್ರ ಮಾಸಾಶನ ನೀಡಿ ತಾರತಮ್ಯ ತೋರುತ್ತಿದ್ದೀರಿ. ನಿಮಗೆ ವೀರಗಾಸೆಯ ಬಗ್ಗೆ ಅಷ್ಟೊಂದು ಕಾಳಜಿ ಇದ್ದರೆ, ಕೂಡಲೇ ಅವರಿಗೂ ಮಾಸಾಶನ ನೀಡಬೇಕು ಎಂದು ಹಲವರು ಆಗ್ರಹಿಸಿದ್ದಾರೆ. ಆದರೆ ಸಚಿವರು ಮಾತ್ರ ಯಾವ ಪ್ರತಿಕ್ರಿಯೆ ಕೂಡ ನೀಡಲಿಲ್ಲ, ಇದಕ್ಕೆ ಸರ್ಕಾರ ಯಾವ ರೀತಿ ಪ್ರತಿಕ್ರಿಯೆ ಕೊಡುತ್ತದೆ ಎಂಬುದನ್ನು ಕಾದು ನೋಡಬೇಕು.
ಡಾಲಿ ಧನಂಜಯ್ ನಟನೆಯ ಹೆಡ್ ಬುಷ್ ಚಿತ್ರದ ವಿರುದ್ಧ ಫಿಲಂ ಚೇಂಬರ್ ಗೆ ದೂರು ನೀಡಲಾಗಿದೆ ಎಂದು ಕರಗ ಸಮಿತಿ ಅಧ್ಯಕ್ಷ ಸತೀಶ್ ಹೇಳಿದ್ದಾರೆ. ಬೆಂಗಳೂರು ಕರಗ ವಿಶ್ವವಿಖ್ಯಾತಿ ಪಡೆದಿದೆ, ಆದರೆ ಇಲ್ಲಿ ಕರಗದ ಕೈಯಲ್ಲಿ ಕೆಟ್ಟದಾಗಿ ಕುಣಿಸಿ, ಸುತ್ತ ನಿಂತು ಚಪ್ಪಾಳೆ ತಟ್ಟಿ ಅವಹೇಳನ ಮಾಡಲಾಗಿದೆ ಎಂದಿದ್ದಾರೆ. ನಮ್ಮ ಸಮುದಾಯದ ಆಚರಣೆಯನ್ನು ಗಾಳಿಗೆ ತೂರಲಾಗಿದೆ. ಸಮುದಾಯಗಳ ನಂಬಿಕೆ ಧಕ್ಕೆ ತರಬಾರದು, ನಮ್ಮ ಶ್ರದ್ದೆ, ಆಚಾರ ವಿಚಾರಗಳಿಗೆ ಧಕ್ಕೆ ತಂದಿದ್ದು ಬಹಳ ನೋವಾಗಿದೆ ಎಂದರು. ಆದ್ದರಿಂದ ನಾವು ಫಿಲಂ ಚೇಂಬರ್ ಗೆ ದೂರು ನೀಡಿದ್ದೇವೆ ಎಂದರು.
ಈ ಕುರಿತು ನಟ ಡಾಲಿ ಧನಂಜಯ್ ಪ್ರತಿಕ್ರಿಯೆ ನೀಡಿದ್ದು, ತಾನೂ ಕೂಡ ವೀರಭದ್ರ ದೇವರ ಆರಾಧಕ ಆಗಿರುವುದರಿಂದ ಯಾವುದೇ ಕಾರಣಕ್ಕೂ ಅವಮಾನ ಮಾಡಿಲ್ಲ ಎಂದು ಹೇಳಿದ್ದಾರೆ. ಇಂದು ವೀರಗಾಸೆ ಕಲಾವಿದರನ್ನು ಬೆಂಗಳೂರಿನಲ್ಲಿ ಭೇಟಿ ಮಾಡುತ್ತಿದ್ದೇನೆ. ಈ ವಿಷಯವನ್ನು ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳುತ್ತೇನೆ. ನನಗೂ ವೀರಭದ್ರ ದೇವರ ಮೇಲೆ ಅಪಾರ ಭಕ್ತಿ.. ಹಾಗಾಗಿ ನನ್ನಿಂದ ಯಾವುದೇ ಅವಮಾನ ಆಗುವಂತಹ ಕೆಲಸ ಆಗಲ್ಲ ಎಂದಿದ್ದಾರೆ.
BREAKING NEWS: ಸರ್ಕಾರದಿಂದ ಓಲಾ, ಉಬರ್ ಗೆ ಮೂಗುದಾರ; ಮುಂದಿನ ವಾರದಲ್ಲೇ ಹೊಸ ದರ ನಿಗದಿ