ನವದೆಹಲಿ : ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬುಧವಾರ ಪಕ್ಷದ ವ್ಯವಹಾರಗಳನ್ನ ನಡೆಸಲು ಸಂಚಾಲನಾ ಸಮಿತಿಯನ್ನ ಘೋಷಿಸಿದರು ಮತ್ತು ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರನ್ನ ಸಮಿತಿಯಲ್ಲಿ ಸೇರಿಸಿಕೊಂಡಿದ್ದಾರೆ. ಗಾಂಧಿ ಕುಟುಂಬದವರಲ್ಲದೇ, ಎಲ್ಲ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಸದಸ್ಯರನ್ನೂ ಸಂಚಾಲನಾ ಸಮಿತಿಯ ಭಾಗವನ್ನಾಗಿ ಮಾಡಲಾಯಿತು.
ಸಂಪ್ರದಾಯದ ಪ್ರಕಾರ, ಹೊಸ ಕಾಂಗ್ರೆಸ್ ಅಧ್ಯಕ್ಷರ ಆಯ್ಕೆಯ ನಂತರ, ಸಿಡಬ್ಲ್ಯೂಸಿಯನ್ನ ವಿಸರ್ಜಿಸಲಾಗುತ್ತದೆ ಮತ್ತು ಪಕ್ಷದ ವ್ಯವಹಾರಗಳನ್ನ ನಡೆಸಲು ಸಂಚಾಲನಾ ಸಮಿತಿಯನ್ನ ರಚಿಸಲಾಗುತ್ತದೆ.
ಇದಕ್ಕೂ ಮುನ್ನ ಕಾರ್ಯಕಾರಿ ಸಮಿತಿಯ ಎಲ್ಲಾ ಸದಸ್ಯರು, ಪ್ರಧಾನ ಕಾರ್ಯದರ್ಶಿಗಳು ಮತ್ತು ಉಸ್ತುವಾರಿಗಳು ತಮ್ಮ ರಾಜೀನಾಮೆಯನ್ನು ಹೊಸ ಕಾಂಗ್ರೆಸ್ ಅಧ್ಯಕ್ಷರಿಗೆ ಸಲ್ಲಿಸಿದರು.
ಕಾಂಗ್ರೆಸ್ ಸಂವಿಧಾನದ ಪ್ರಕಾರ, ಮುಂದಿನ ವರ್ಷ ಮಾರ್ಚ್-ಏಪ್ರಿಲ್ನಲ್ಲಿ ನಡೆಯಲಿರುವ ಪಕ್ಷದ ಸರ್ವಸದಸ್ಯರ ಅಧಿವೇಶನದಲ್ಲಿ ಖರ್ಗೆ ಅವರನ್ನು ಪಕ್ಷದ ಮುಖ್ಯಸ್ಥರನ್ನಾಗಿ ಆಯ್ಕೆ ಮಾಡಲು ಅನುಮೋದನೆ ನೀಡಲಾಗುವುದು ಎಂದು ಪಿಟಿಐ ವರದಿ ಮಾಡಿದೆ.