ಬೆಂಗಳೂರು: ಭಾರತ್ ಜೋಡೋ ಯಾತ್ರೆ ( Bharath Jodo Yathra ) ಒಂದು ಆಂದೋಲನವಾಗಿತ್ತು. ಇದು ಜನ ಸಂಪರ್ಕ ಯಾತ್ರೆ ಮಾತ್ರವಲ್ಲ, ದೇಶಕ್ಕೆ ಒಂದು ಹೋರಾಟ ಆಗಿತ್ತು. ಇಡೀ ದೇಶ ಕೋಮು ಸಾಮರಸ್ಯ ಬೆಸೆಯುವತ್ತ ಗಮನಹರಿಸುವಂತೆ ಮಾಡಿದೆ ಎಂಬುದಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ( DK Shivakumar ) ಹೇಳಿದ್ದಾರೆ.
ನಗರದಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದಂತ ಅವರು, ‘ರಾಹುಲ್ ಗಾಂಧಿ ಅವರ ನಡಿಗೆ ಜನಸಾಮಾನ್ಯರ ಕಡೆಗೆ ಆಗಿತ್ತು. ದೇಶಾದ್ಯಂತ ಜನಸಾಮಾನ್ಯರ ಬಳಿಗೆ ಹೋಗಿ ಅವರ ನೋವನ್ನು ಖುದ್ದಾಗಿ ಆಲಿಸಿರುವ ಏಕೈಕ ನಾಯಕ ರಾಹುಲ್ ಗಾಂಧಿ’ ಎಂದು ಬಣ್ಣಿಸಿದ್ದಾರೆ.
ರಾಜ್ಯದ ಜನತೆಯ ಸಹಕಾರದಿಂದ ಕರ್ನಾಟಕದಲ್ಲಿ ಭಾರತ ಐಕ್ಯತಾ ಯಾತ್ರೆ ಯಶಸ್ವಿಯಾಗಿ ನಡೆದಿದೆ. ಇದಕ್ಕೆ ನಿಮ್ಮ ಕ್ಯಾಮೆರಾ ಕಣ್ಣುಗಳೇ ಸಾಕ್ಷಿ. ರಾಷ್ಟ್ರ ರಾಜಕಾರಣವನ್ನು ಬೇರೆ ದಿಕ್ಕಿನೆಡೆ ತೆಗೆದುಕೊಂಡು ಹೋಗುವ ಆಂದೋಲನವಾಗಿ ಈ ಯಾತ್ರೆ ಸಾಗಿದೆ. ಇದು ಕೇವಲ ಯಾತ್ರೆಯಾಗಿ ಉಳಿದಿಲ್ಲ. ಇದರಲ್ಲಿ ನೀವು ನಾವು ಕಂಡಿದ್ದು, ಯುವಕರು, ಮಹಿಳೆಯರು, ಪುಟಾಣಿ ಮಕ್ಕಳ ಪ್ರೀತಿ ವಿಶ್ವಾಸ. ಇಂದಿರಾ ಗಾಂಧಿ ಅವರನ್ನು ನೋಡಲು ಜನ ಹೇಗೆ ನೂಕುನುಗ್ಗಲು ಮಾಡಿಕೊಂಡು ಬರುತ್ತಿದ್ದರೋ ಅದೇರೀತಿ ರಾಹುಲ್ ಗಾಂಧಿ ಅವರನ್ನು ನೋಡಲು ನೂರಾರು ಕಿ.ಮೀ ದೂರದಿಂದ ಮಕ್ಕಳು ತಮ್ಮ ತಂದೆ ತಾಯಂದಿರ ಜತೆ ಆಗಮಿಸುತ್ತಿದ್ದರು. ರಾಹುಲ್ ಗಾಂಧಿ ಅವರು ಸಾವಿರಾರು ಜನರ ಜತೆ ಮಾತನಾಡಿ, ನೀವು ಏನು ಮಾಡುತ್ತಿದ್ದೀರಿ, ಏನು ಓದುತ್ತಿದ್ದೀರಿ, ಮುಂದೆ ಏನು ಮಾಡುತ್ತೀರಿ ಎಂದು ಕೇಳಿ ಅವರ ಅಭಿಪ್ರಾಯ ಪಡೆದರು ಎಂದರು.
ಬೆಳಗ್ಗೆ 5.30ಕ್ಕೆ ಎದ್ದು, 6.25ರ ವೇಳೆಗೆ ಪಾದಯಾತ್ರೆ ಆರಂಭಿಸುತ್ತಿದ್ದರು. ನಿಗದಿತ ನಡಿಗೆ ವೇಳಾಪಟ್ಟಿಯಲ್ಲಿ ಸ್ವಲ್ಪವೂ ಬದಲಾವಣೆ ಮಾಡಲಿಲ್ಲ. ನಾನು ತಡವಾಗಿ ಯಾತ್ರೆ ಆರಂಭಿಸೋಣ ಎಂದು ಮನವಿ ಮಾಡಿದಾಗ ಅದಕ್ಕೆ ಒಪ್ಪಲಿಲ್ಲ. ಇದು ನಮ್ಮಿಬ್ಬರ ನಡಿಗೆ ಮಾತ್ರವಲ್ಲ. 3500 ಕಿ.ಮೀ ದೂರ ಸಾಗಬೇಕು. ಹೀಗಾಗಿ ಯಾವುದೇ ಬದಲಾವಣೆ ಸಾಧ್ಯವಿಲ್ಲ ಎಂದರು. ಸಂಜೆ 4 ರಿಂದ ಮತ್ತೆ ಹೆಜ್ಜೆ ಹಾಕಿ ಎಲ್ಲಾ ಜನರ ಜತೆ ಮಾತನಾಡುತ್ತಿದ್ದರು ಎಂದು ಹೇಳಿದರು.
ಚಾಮರಾಜನಗರದಲ್ಲಿ ಆದಿವಾಸಿಗಳು, ಆಕ್ಸಿಜನ್ ದುರಂತದಲ್ಲಿ ಮಡಿದವರ ಕುಟುಂಬದವರು, ರಾಯಚೂರಿನಲ್ಲಿ ದೇವದಾಸಿಗಳು ಸೇರಿದಂತೆ ನರೇಗಾ ಕಾರ್ಮಿಕರು, ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಐಟಿ ಉದ್ಯೋಗಿಗಳು, ನಿರುದ್ಯೋಗಿ ಯುವಕರು, ರೈತರು, ನಿವೃತ್ತ ಸೈನಿಕರು, ವ್ಯಾಪಾರಸ್ಥರು, ಎಲ್ಲ ವರ್ಗದವರ ಜತೆ ಸಂವಾದ ನಡೆಸಿದರು. ವಿಕಲಚೇತನ ಅತಿಥಿ ಶಿಕ್ಷಕಿ, ಮೆಕಾನಿಕ್ ಅವರ ಜತೆಗೆ ಚರ್ಚೆ ಸಂದರ್ಭದಲ್ಲಿ ಅವರು ಬಹಳ ಸ್ಪೂರ್ತಿದಾಯಕ ಅನುಭವ ಪಡೆದರು ಎಂದರು.
ರಾಹುಲ್ ಗಾಂಧಿ ಅವರ ದೈಹಿಕ ಕ್ಷಮತೆ ಒಂದೆಡೆಯಾದರೆ ಅವರ ಮಾನಸಿಕ ಕ್ಷಮತೆ ಬಹಳ ಬಲಿಷ್ಟವಾಗಿದೆ. ಅವರು ದೇಶ ಹಾಗೂ ಪಕ್ಷಕ್ಕಾಗಿ ಪ್ರಧಾನಮಂತ್ರಿ ಹುದ್ದೆ ಹಾಗೂ ಪಕ್ಷದ ಅಧ್ಯಕ್ಷ ಸ್ಥಾನ ತ್ಯಾಗ ಮಾಡಿದವರು. ಯಾತ್ರೆ ಸಂದರ್ಭದಲ್ಲಿ ಮಾಧ್ಯಮ ಮಿತ್ರರೊಬ್ಬರು ರಾಹುಲ್ ಗಾಂಧಿ ಅವರಿಗೆ ಅಧಿಕಾರ ವ್ಯಾಮೋಹ ಇಲ್ಲದ ನೀವು ಈ ಯಾತ್ರೆ ಮಾಡುತ್ತಿರುವುದೇಕೆ ಎಂದು ಕೇಳಿದಾಗ, ನೆಹರೂ ಅವರಿಂದ ಹಿಡಿದು ನಮ್ಮ ಕುಟುಂಬದ ಎಲ್ಲರಿಗೂ ಈ ದೇಶದ ಜನ ತೋರಿರುವ ಪ್ರೀತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಈ ಋಣ ತೀರಿಸಲು ಸಾಧ್ಯವಿಲ್ಲ. ನಮಗೆ ಅಧಿಕಾರ ಬರುತ್ತದೆ, ಹೋಗುತ್ತದೆ. ನಾನು ಈ ಹಿಂದೆಯೇ ಅಧಿಕಾರ ಅನುಭವಿಸಬಹುದಾಗಿತ್ತು. ಆದರೆ ಅವರ ಪ್ರೀತಿಯ ಋಣ ತೀರಿಸಲು ಅಸಾಧ್ಯ. ಹೀಗಾಗಿ ಅವರ ನೋವು, ಕಷ್ಟ ಆಲಿಸುತ್ತಿದ್ದೇನೆ. ನಮ್ಮ ಕೈಲಾದ ನೆರವು ನೀಡುತ್ತೇವೆ ಎಂದು ಉತ್ತರಿಸಿದರು.
‘ಶಿವಮೊಗ್ಗ ಸ್ಮಾರ್ಟ್ಸಿಟಿ’ ಸಂಬಂಧಿಸಿದ ದೂರು ದಾಖಲಿಸಲು ‘ಸಹಾಯವಾಣಿ’ ಆರಂಭ
ನಾವು ಮೊದಲ ದಿನ ಗುಂಡ್ಲುಪೇಟೆಯಿಂದ ಈ ಯಾತ್ರೆ ಆರಂಭಿಸಿದೆವು. ನಂತರ ಬದನವಾಳು ಗ್ರಾಮದಲ್ಲಿ ಸವರ್ಣೀಯರು ಹಾಗೂ ದಲಿತರ ಮಧ್ಯೆ ದಶಕಗಳಿಂದ ಇದ್ದ ವೈಮನಸ್ಸಿಗೆ ಅಂತ್ಯವಾಡಿ, ಅವರ ಮಧ್ಯೆ ನಾಶವಾಗಿದ್ದ ಸಾಮರಸ್ಯವನ್ನು ಮತ್ತೆ ಬೆಸೆದು, ಅಲ್ಲಿ ರಸ್ತೆ ನಿರ್ಮಾಣ ಮಾಡಿದ್ದೇವೆ. ಅದು ಸಣ್ಣ ರಸ್ತೆ. ಅದಕ್ಕೆ ಭಾರತ ಜೋಡೋ ರಸ್ತೆ ಎಂದು ಹೆಸರಿಟ್ಟು, ಎರಡೂ ಸಮಾಜದವರ ಜತೆ ಒಟ್ಟಿಗೆ ಕೂತು ಊಟ ಮಾಡಿ ಅವರಲ್ಲಿ ಮತ್ತೆ ಬಾಂಧವ್ಯ ಬೆಸೆಯಲಾಗಿದೆ. ಈ ಯಾತ್ರೆ ಯಶಸ್ಸಿಗೆ ಇದಕ್ಕಿಂತ ಬೇರೆ ಯಾವ ಸಾಕ್ಷಿ ಬೇಕು? ಎಂದು ಪ್ರಶ್ನಿಸಿದರು.
ನಾನು ಬೇರೆ ಪಕ್ಷದ ಟೀಕೆ ಬಗ್ಗೆ ಚರ್ಚೆ ಮಾಡುವುದಿಲ್ಲ. ಈ ಐಕ್ಯತಾ ಯಾತ್ರೆ ಎಲ್ಲರ ಬದುಕಿನ ಭಾಗವಾಗಿದೆ. ಬಳ್ಳಾರಿಯಲ್ಲಿ ರಾಹುಲ್ ಗಾಂಧಿ ಅವರ ಗಮನ ಸೆಳೆದದ್ದು ಎಂದರೆ ಬಳ್ಳಾರಿಯಲ್ಲಿ ಜೀನ್ಸ್ ತಯಾರಿಕಾ ಉದ್ದಿಮೆಗಳ ಜತೆಗಿನ ಸಂವಾದ. ಭಾರತದ ಜೀನ್ಸ್ ರಾಜಧಾನಿ ಬಳ್ಳಾರಿ ಎಂದರು. ಕಡಿಮೆ ಬೆಲೆಗೆ ಅತ್ಯುತ್ತಮ ಜೀನ್ಸ್ ಪ್ಯಾಂಟ್ ತಯಾರು ಮಾಡುತ್ತಿದ್ದಾರೆ. ಇಂತಹ ಸಂಪನ್ಮೂಲದ ಉದ್ದಿಮೆಯನ್ನು ಸರಿಯಾಗಿ ಬಳಸಿಕೊಳ್ಳಬೇಕು ಎಂದು ಹೇಳಿದರು. ರಾಹುಲ್ ಗಾಂಧಿ ಅವರು ರೈತರ ವಿಚಾರ ಕೂಡ ತಿಳಿದುಕೊಂಡರು ಎಂದರು.
ರಾಹುಲ್ ಗಾಂಧಿ ಅವರು ಕೇವಲ ರಾಷ್ಟ್ರೀಯ ಸಮಸ್ಯೆ ಮಾತ್ರವಲ್ಲ, ರಾಜ್ಯದಲ್ಲಿನ ಸಮಸ್ಯೆ ಬಗ್ಗೆಯೂ ಹೆಚ್ಚು ಗಮನ ಹರಿಸಿದರು. ರಾಜ್ಯದಲ್ಲಿ ದಕ್ಷ ಆಡಳಿತ ನೀಡಬೇಕು, ಭ್ರಷ್ಟ ಸರ್ಕಾ ಕಿತ್ತೊಗೆಯಬೇಕು, ಯುವಕರಿಗೆ ಆಗುತ್ತಿರುವ ಮೋಸ ತಡೆಯಬೇಕು ಎಂದು ಚಿಂತನೆ ನಡೆಸಿದ್ದಾರೆ. ಸ್ಥಳೀಯ ಭಾಷೆ, ಕೇಂದ್ರದ ಪರೀಕ್ಷೆಗಳಲ್ಲಿ ಕನ್ನಡಕ್ಕೆ ಆದ್ಯತೆ, ಕನ್ನಡದ ಸ್ವಾಭಿಮಾನಕ್ಕೆ ಧಕ್ಕೆ ಆಗಬಾರದು ಎಂಬ ಸ್ಪಷ್ಟ ಸಂದೇಶ ನೀಡಿದರು. ನಿರುದ್ಯೋಗಿ ಯುವಕರ ಸಮಸ್ಯೆಯನ್ನು ಪ್ರತ್ಯೇಕವಾಗಿ ಆಲಿಸಿದ್ದಾರೆ ಎಂದರು.
ಅವರು ಈ ಯಾತ್ರೆಯಲ್ಲಿ ಎಲ್ಲಾ ಜಾತಿ, ಧರ್ಮಗಳ ಮಂದಿರಕ್ಕೆ ಭೇಟಿ ನೀಡಿ ನಮನ ಸಲ್ಲಿಸಿದರು. ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ದಸರಾ ಸಮಯದಲ್ಲಿ ರಾಜ್ಯಕ್ಕೆ ಆಗಮಿಸಿ, ನಮ್ಮ ಸಂಸ್ಕಾರ ಹಾಗೂ ಸಂಪ್ರದಾಯದಂತೆ ಹಬ್ಬ ಆಚರಣೆ ಮಾಡಿ, ಅರ್ಧ ದಿನ ಯಾತ್ರೆಯಲ್ಲಿ ಕೂಡ ಹೆಜ್ಜೆ ಹಾಕಿದರು ಎಂದು ಹೇಳಿದರು.
ರಾಹುಲ್ ಗಾಂಧಿ ಅವರು ಸೋನಿಯಾ ಗಾಂಧಿ ಅವರ ಶೂ ಲೇಸ್ ಹಾಕಿದ್ದಕ್ಕೆ ಬಿಜೆಪಿ ತನ್ನ ಸಾಮಾಜಿಕ ಜಾಲತಾಣವೆಂಬ ಸುಳ್ಳಿನ ಕಾರ್ಖಾನೆ ಮೂಲಕ ಟೀಕೆ ಮಾಡಿದ್ದರು. ಆದರೆ, ತಾಯಿ ಮಗನ ಬಾಂಧವ್ಯ, ಜನರ ಪ್ರೀತಿ, ಅವರ ಅಕ್ಕರೆ ನಿಮ್ಮ ಕ್ಯಾಮೆರಾ ಕಣ್ಣಲ್ಲಿ ಸೆರೆಯಾಗಿದೆ. ಇದೆಲ್ಲವನ್ನೂ ಜನ ಕಣ್ಣಾರೆ ನೋಡಿದ್ದಾರೆ ಎಂದು ತಿಳಿಸಿದರು.
ನಮ್ಮ ರಾಜ್ಯದಲ್ಲಿ ಈ ಯಾತ್ರೆಯನ್ನು ಇಲ್ಲಿಗೆ ನಿಲ್ಲಿಸದೆ, ಎಲ್ಲಾ ಜಿಲ್ಲೆಗಳಲ್ಲಿ ಯಾತ್ರೆಯ ಛಾಯಾಚಿತ್ರ ಪ್ರದರ್ಶನ ಮಾಡಲಾಗುವುದು. ಧ್ರುವನಾರಾಯಣ್ ಅವರ ಅಧ್ಯಕ್ಷತೆಯಲ್ಲಿ ಬಿ.ಎಲ್ ಶಂಕರ್, ವಿ.ಆರ್ ಸುದರ್ಶನ್, ಪ್ರೊ.ರಾಧಾಕೃಷ್ಣ, ಸಿ.ಎಸ್ ದ್ವಾರಕನಾಥ್, ಐಶ್ವರ್ಯ ಮಹಾದೇವ್, ಗುರುಪಾದಸ್ವಾಮಿ, ಸೆಂಥಿಲ್, ಮನ್ಸೂರ್ ಅಲಿ ಖಾನ್ ಹಾಗೂ ದಿನೇಶ್ ಗೂಳಿಗೌಡ ಅವರನ್ನೊಳಗೊಂಡ ಸಮಿತಿ ಮಾಡಿ, ಈ ಯಾತ್ರೆ ಬಗ್ಗೆ ಅಧ್ಯಯನ ಮಾಡಿ, ರಾಜ್ಯದಲ್ಲಿ ಈ ಯಾತ್ರೆ ಮುಂದುವರಿಸಲು ನಮ್ಮ ನಾಯಕರ ಜತೆ ಚರ್ಚೆ ಮಾಡುತ್ತೇನೆ ಎಂದರು.
ರಾಹುಲ್ ಗಾಂಧಿ ಅವರು ರಾಯಚೂರಿನಲ್ಲಿ ಸಭೆ ಮಾಡಿ ಯಾತ್ರೆ ಕುರಿತು ನಮ್ಮ ಅಭಿಪ್ರಾಯ ಸಂಗ್ರಹಿಸಿದ್ದಾರೆ. ಈ ಯಾತ್ರೆಯನ್ನು ಮುಂದಿನ ದಿನಗಳಲ್ಲಿ ಹೇಗೆ ತೆಗೆದುಕೊಂಡು ಹೋಗಬೇಕು ಎಂದು ಕಾರ್ಯಯೋಜನೆ ರೂಪಿಸುತ್ತೇವೆ. ಈ ಯಾತ್ರೆಯಲ್ಲಿ ಜನ ಹೇಳಿಕೊಂಡಿರುವ ಸಮಸ್ಯೆ ಬಗ್ಗೆ ನಾವು ಚರ್ಚಿಸಿ ಪಕ್ಷದ ಚುನಾವಣಾ ಪ್ರಣಾಳಿಕೆಯಲ್ಲಿ ಸೇರಿಸುತ್ತೆವೆ ಎಂದು ತಿಳಿಸಿದರು.
ಈ ಯಾತ್ರೆ ಯಶಸ್ಸು ಕೇವಲ ಡಿ.ಕೆ. ಶಿವಕುಮಾರ್ ಅವರದಲ್ಲ. ನನ್ನ ಅಧಿಕಾರ ಸ್ವೀಕಾರ ಕಾರ್ಯಕ್ರಮ, ಕೋವಿಡ್ ಸಮಯದಲ್ಲಿ ಪಕ್ಷದ ನೆರವಿನ ಕಾರ್ಯಕ್ರಮಗಳು , ಮೇಕೆದಾಟು ಪಾದಯಾತ್ರೆ ಸೇರಿ ಒಂದೊಂದು ಹೋರಾಟವೂ ಒಂದೊಂದು ಮೈಲಿಗಲ್ಲು ಸಾಧಿಸಿದೆ. ಮೇಕೆದಾಟು ಪಾದಯಾತ್ರೆ ಒಂದು ಟ್ರೆಂಡ್ ಸೆಟ್ಟರ್ ಆಗಿದೆ. ಸ್ವಾತಂತ್ರ್ಯ ನಡಿಗೆ ಕೂಡ ಯಶಸ್ವಿಯಾಗಿತ್ತು. ಈ ಎಲ್ಲಾ ಅನುಭವಗಳಿಂದ ಈ ಯಾತ್ರೆ ಮಾಡಲು ಅನುಕೂಲವಾಯಿತು. ನಮ್ಮ ರಾಜ್ಯದಲ್ಲಿನ ಯಾತ್ರೆ ಬೇರೆ ರಾಜ್ಯಗಳಿಗೆ ಮಾದರಿ ಆಗಿದೆ. ಬೇರೆ ರಾಜ್ಯದವರು ಈ ಯಾತ್ರೆ ಆಯೋಜನೆ ಬಗ್ಗೆ ಪ್ರಶಂಸೆ ಮಾಡಿದ್ದಾರೆ ಎಂದರು.
ನಾನು ಈ ಸಂದರ್ಭದಲ್ಲಿ ಯಾತ್ರೆಗೆ ಬಂದ ಎಲ್ಲಾ ಕಾರ್ಯಕರ್ತರು, ನಾಯಕರು, ಪಕ್ಷಾತೀತವಾಗಿ ಬಂದ ನಾಗರೀಕ ಸಮಾಜದವರು, ರೈತರು, ಯುವಕರು, ಮಹಿಳೆಯರು, ಕಾರ್ಮಿಕರು ಎಲ್ಲಾ ವರ್ಗದವರಿಗೆ ಕೋಟಿ ನಮನ ಸಲ್ಲಿಸುತ್ತೇನೆ. ಈ ಯಾತ್ರೆ ಒಂದು ಆಂದೋಲನವಾಗಿತ್ತು. ಇದು ಜನ ಸಂಪರ್ಕ ಯಾತ್ರೆ ಮಾತ್ರವಲ್ಲ, ದೇಶಕ್ಕೆ ಒಂದು ಹೋರಾಟ ಆಗಿತ್ತು. ಇಡೀ ದೇಶ ಕೋಮು ಸಾಮರಸ್ಯ ಬೆಸೆಯುವತ್ತ ಗಮನಹರಿಸುವಂತೆ ಮಾಡಿದೆ ಎಂದರು.
ಬೆಲೆ ಏರಿಕೆ, ರೈತರ ಸಮಸ್ಯೆ, ಭ್ರಷ್ಟಾಚಾರ, ನಿರುದ್ಯೋಗ, ಕೋಮು ದ್ವೇಷದ ವಿರುದ್ದದ ಈ ನಡಿಗೆ ಹಳ್ಳಿ, ಹಳ್ಳಿಯಲ್ಲೂ ಜನರ ಮನ ಮುಟ್ಟಿದೆ. ಈ ಬಗ್ಗೆ ರಾಹುಲ್ ಗಾಂಧಿ ಅವರು ಯಾತ್ರೆಯಲ್ಲಿ ಪ್ರಸ್ತಾಪ ಮಾಡಿದರೆ ಜನ ಜೋರಾಗಿ ಧ್ವನಿ ಎತ್ತುತ್ತಿದ್ದರು. ವಿಶೇಷವಾಗಿ ಮಕ್ಕಳು ಯಾತ್ರೆಗೆ ಬಂದು ಭಾಗವಹಿಸಿದ್ದು ಅವಿಸ್ಮರಣೀಯ ಕ್ಷಣವಾಗಿತ್ತು ಎಂದು ತಿಳಿಸಿದರು.
ಇನ್ನೂ ಈ ಯಾತ್ರೆಯಲ್ಲಿ ರಾಹುಲ್ ಗಾಂಧಿಯವರು ತಲೆಮಾರುಗಳ ನಡುವಣ ಅಂತರವನ್ನು ಭರ್ತಿ ಮಾಡಿದ್ದಾರೆ. ಮಕ್ಕಳಿಂದ ವೃದ್ಧರವರೆಗೆ, ರೈತರಿಂದ ಕಾರ್ಮಿಕರವರೆಗೆ, ವಿದ್ಯಾರ್ಥಿಗಳಿಂದ ಯುವಕರವರೆಗೆ ಎಲ್ಲರನ್ನೂ ಮುಟ್ಟಿದ್ದು ರಾಹುಲ್ ಗಾಂಧಿ. ಅವರ ಹೊರತಾಗಿ ಬೇರೆಯವರಿಂದ ಇದು ಅಸಾಧ್ಯ. ಇದೊಂದು ಕ್ರಾಂತಿಕಾರಿ ಯಾತ್ರೆ. ಈ ಯಾತ್ರೆಯಲ್ಲಿ ಜನರಿಂದ ಸಿಕ್ಕ ಪ್ರೀತಿ ಅನುಭವ ವರ್ಣಿಸಲು ಅಸಾಧ್ಯ ಎಂದರು.
ಈ ಯಾತ್ರೆಯಲ್ಲಿ ನೋವು ತಂದ ವಿಚಾರ ಎಂದರೆ ನಮ್ಮ ಕಾರ್ಯಕರ್ತರೊಬ್ಬರು ಅಪಘಾತದಲ್ಲಿ ಮೃತಪಟ್ಟಿದ್ದು, ಪೊಲೀಸ್ ಹೆಣ್ಣು ಮಗಳು ನಿಧನರಾಗಿದ್ದು. ನಾನು ಇದೇ 28ರಂದು ಶಿವಮೊಗ್ಗಕ್ಕೆ ಭೇಟಿ ಕೊಟ್ಟು ಕಾರ್ಯಕರ್ತನ ಕುಟುಂಬಕ್ಕೆ ಘೋಷಣೆ ಮಾಡಿರುವಂತೆ 10 ಲಕ್ಷ ರು.ಪರಿಹಾರ ನೀಡಲಾಗುವುದು ಎಂದು ಹೇಳಿದರು.
ಯಾತ್ರೆ ಅಂತಿಮ ದಿನ ರಾಯಚೂರಿನಲ್ಲಿ 1 ಲಕ್ಷಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದು, ನನ್ನ ಕಾಲದಲ್ಲಿ ಇಂತಹ ಐತಿಹಾಸಿಕ ಘಟ್ಟ ದಾಖಲಿಸುವ ಅವಕಾಶ ಸಿಕ್ಕಿತಲ್ಲ ಎಂಬ ತೃಪ್ತಿ, ಸಂತೋಷ ನನಗಿದೆ. ದೇಶದುದ್ದಗಲ ಜನಸಾಮಾನ್ಯರ ನೋವನ್ನು ತಾನೇ ಖುದ್ದಾಗಿ ಬಂದು ಆಲಿಸಿದ ಏಕೈಕ ನಾಯಕ ಎಂದರೆ ರಾಹುಲ್ ಗಾಂಧಿ ಮಾತ್ರ. ಅವರು ದೇಶ, ರಾಜ್ಯ ಹಾಗೂ ಪಕ್ಷಕ್ಕೆ ಶಕ್ತಿ ತುಂಬಿದ್ದಾರೆ ಎಂದರು.
ಇದು ಸೋನಿಯಾ ಗಾಂಧಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕಡೆಯ ಯಾತ್ರೆ ಆಗಿತ್ತು. ಅದೇ ರೀತಿ ಪಕ್ಷದ ಆಂತರಿಕ ಚುನಾವಣೆಯಲ್ಲಿ ನಮ್ಮ ರಾಜ್ಯದ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಅವರು ಅಧ್ಯಕ್ಷರಾಗಿ ಆಯ್ಕೆ ಆದರು. ಇದು ದೇಶಕ್ಕೆ ಮಾತ್ರವಲ್ಲ ರಾಜ್ಯಕ್ಕೆ ಹೆಚ್ಚಿನ ಶಕ್ತಿ ಬಂದಿದೆ ಎಂದು ಹೇಳಿದರು.