ನವದೆಹಲಿ : ಹೆಚ್ಚುತ್ತಿರುವ ಹಣದುಬ್ಬರವನ್ನ ನಿಯಂತ್ರಿಸಲು ಭಾರತೀಯ ರಿಸರ್ವ್ ಬ್ಯಾಂಕ್ (RBI) ಮತ್ತು ಕೇಂದ್ರ ಸರ್ಕಾರ ಪ್ರಯತ್ನಿಸುತ್ತಿವೆ. ಆದಾಗ್ಯೂ, ಈಗ ಹಣಕಾಸು ಸಚಿವಾಲಯದ ಮಾಸಿಕ ವರದಿಯ ಪ್ರಕಾರ, ಹಣದುಬ್ಬರ(Inflation)ವು ನಿಮ್ಮ ಜೇಬಿಗೆ ಅಪ್ಪಳಿಸಲಿದೆ. ಮುಂದಿನ ವರ್ಷ 2023ರಲ್ಲಿ, ಹಣದುಬ್ಬರವು ಕಡಿಮೆಯಾಗುವ ಬದಲು ಹೆಚ್ಚಾಗಬಹುದು. ಇದಕ್ಕೆ ಡಾಲರ್ ಎದುರು ರೂಪಾಯಿ ಕುಸಿತವು ಪ್ರಮುಖ ಕಾರಣವಾಗಿರಬಹುದು.
ಹಣಕಾಸು ಸಚಿವಾಲಯದ ವರದಿಯ ಪ್ರಕಾರ, ಅಂತರಾಷ್ಟ್ರೀಯ ಮಟ್ಟದಲ್ಲಿನ ಉದ್ವಿಗ್ನತೆಗಳು ಪೂರೈಕೆ ಸರಪಳಿಯ ಮೇಲೆ ಮತ್ತೆ ಒತ್ತಡವನ್ನ ಉಂಟುಮಾಡುವ ಸಾಧ್ಯತೆಯಿದೆ. ಇದು ಕಡಿಮೆಯಾಗುವ ಬದಲು 2023 ರಲ್ಲಿ ಹಣದುಬ್ಬರ ಹೆಚ್ಚಳಕ್ಕೆ ಕಾರಣವಾಗಬಹುದು.
US ಕೇಂದ್ರ ಬ್ಯಾಂಕ್, ಫೆಡರಲ್ ರಿಸರ್ವ್, ಹಣದುಬ್ಬರವನ್ನ ನಿಯಂತ್ರಿಸಲು ಬಡ್ಡಿದರಗಳನ್ನು ಆಕ್ರಮಣಕಾರಿಯಾಗಿ ಹೆಚ್ಚಿಸುತ್ತಿದೆ. ಹಾಗಾಗಿ ಬಂಡವಾಳ ಹರಿವು ಕಡಿಮೆಯಾಗುವ ಸಾಧ್ಯತೆ ಇದೆ. ಇದರಿಂದ ರೂಪಾಯಿ ಮೇಲಿನ ಒತ್ತಡ ಹೆಚ್ಚಾಗಬಹುದು. ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತದಿಂದ ಆಮದು ದುಬಾರಿಯಾಗಬಹುದು. ಇದರಿಂದ ಹಣದುಬ್ಬರವೂ ಹೆಚ್ಚಾಗಲಿದೆ ಎಂದು ವರದಿ ಹೇಳಿದೆ.
ಜಾಗತಿಕ ಆರ್ಥಿಕ ಕ್ಷೇತ್ರದಲ್ಲಿ ಭಾರತವು ಸಮಸ್ಯೆಗಳನ್ನ ಎದುರಿಸುತ್ತಿದೆ ಎಂದು ಹಣಕಾಸು ಸಚಿವಾಲಯ ಹೇಳಿದೆ. ಇತರ ದೇಶಗಳಿಗೆ ಹೋಲಿಸಿದರೆ ಭಾರತದ ಆರ್ಥಿಕ ಸ್ಥಿತಿ ಉತ್ತಮವಾಗಿದೆ. ವಿಶ್ವದ ಇತರ ದೇಶಗಳಿಗೆ ಹೋಲಿಸಿದರೆ ಭಾರತದ ಆರ್ಥಿಕ ಬೆಳವಣಿಗೆ ದರ ಮತ್ತು ಅದರ ಸ್ಥಿರತೆಗೆ ಸಂಬಂಧಿಸಿದ ಕಳವಳಗಳು ಕಡಿಮೆ ಆತಂಕಕಾರಿ ಎಂದು ವರದಿಯು ಗಮನ ಸೆಳೆದಿದೆ. ಭಾರತದ ಆರ್ಥಿಕ ಬೆಳವಣಿಗೆ ದರವು ಮಧ್ಯಮಾವಧಿಯಲ್ಲಿ 6 ಪ್ರತಿಶತ ಎಂದು ಅಂದಾಜಿಸಲಾಗಿದೆ.
ಜಾಗತಿಕವಾಗಿ ಬೆಳವಣಿಗೆಗಳು ನಡೆಯುತ್ತಿದ್ದರೆ, ಇನ್ನೊಂದೆಡೆ ಹೂಡಿಕೆದಾರರ ಒಲವು ಭಾರತದತ್ತ ಹೆಚ್ಚುತ್ತಿದೆ. ಭಾರತವು ಜಾಗತಿಕವಾಗಿ ಪ್ರಮುಖ ಮಾರುಕಟ್ಟೆಯಾಗಿದೆ. ಬಹಳ ದಿನಗಳ ನಂತರ ದೇಶದೊಳಗಿನ ಹೂಡಿಕೆಯೂ ಹೆಚ್ಚಾಗತೊಡಗಿದೆ. ಜಾಗತಿಕ ಉದ್ವಿಗ್ನತೆ ಮತ್ತು ಪೂರೈಕೆ ಸರಪಳಿ ಸಮಸ್ಯೆಗಳ ಬಗ್ಗೆ ಕಳವಳ ವ್ಯಕ್ತಪಡಿಸಲಾಗುತ್ತಿದೆ. ಆದಾಗ್ಯೂ, ಹಣಕಾಸು ಸಚಿವಾಲಯದ ವರದಿಯ ಪ್ರಕಾರ ಭಾರತವು ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಲಿದೆ.
ಕಳೆದ ಆರು ತಿಂಗಳಲ್ಲಿ ಭಾರತದಲ್ಲಿ ಚಿಲ್ಲರೆ ಹಣದುಬ್ಬರ ದರವು ಶೇಕಡಾ 7.2 ರಷ್ಟಿದೆ. ಜಾಗತಿಕವಾಗಿ ಇದೇ ದರ ಶೇ.8ರಷ್ಟಿತ್ತು. ಡಾಲರ್ ಎದುರು ರೂಪಾಯಿ ಮೌಲ್ಯ ಶೇ.5.4ರಷ್ಟು ಕುಸಿದಿದೆ. ವಿಶ್ವದ ಆರು ಪ್ರಮುಖ ಕರೆನ್ಸಿಗಳಲ್ಲಿ, ಕುಸಿತವು ಶೇಕಡಾ 8.9 ರಷ್ಟಿದೆ. ಹಣದುಬ್ಬರವನ್ನ ನಿಯಂತ್ರಿಸಲು ಭಾರತೀಯ ರಿಸರ್ವ್ ಬ್ಯಾಂಕ್ (RBI) ಜುಲೈ 2022 ರಲ್ಲಿ ಹಲವಾರು ಕ್ರಮಗಳನ್ನ ತೆಗೆದುಕೊಂಡಿದೆ. ಆದ್ದರಿಂದ ಬಂಡವಾಳ ಹರಿವು ಮತ್ತಷ್ಟು ಸ್ಥಿರಗೊಳ್ಳುವ ನಿರೀಕ್ಷೆಯಿದೆ. ಇದರಿಂದ ರೂಪಾಯಿ ಮೌಲ್ಯ ಮತ್ತಷ್ಟು ಹೆಚ್ಚಲಿದೆ.