ಬೆಂಗಳೂರು: ಬಲಿಜ ಮತ್ತು ಅದರ ಉಪ ಜಾತಿಗಳನ್ನು 2ಎ ವರ್ಗಕ್ಕೆ ಸೇರಿಸುವ ಮನವಿ, ಬೇಡಿಕೆ ಹಲವು ವರ್ಷದ್ದಾಗಿದೆ. ಆದ್ರೇ ರಾಜ್ಯ ಸರ್ಕಾರ ಈ ಬಗ್ಗೆ ಇದುವರೆಗೆ ಸರಿಯಾದ ನಿರ್ಧಾರ ಕೈಗೊಂಡಿಲ್ಲ. ಈ ಕೂಡಲೇ ಬಲಿಜ ಮತ್ತು ಅದರ ಉಪಜಾತಿಗಳನ್ನು 2ಎ ವರ್ಗಕ್ಕೆ ಸೇರಿಸುವಂತೆ ಸರ್ಕಾರವನ್ನು ಮಾಜಿ ಪರಿಷತ್ ಸದಸ್ಯ ರಮೇಶ್ ಬಾಬು ಆಗ್ರಹಿಸಿದ್ದಾರೆ.
ಈ ಕುರಿತಂತೆ ಪತ್ರಿಕಾ ಪ್ರಕಟಣೆಯಲ್ಲಿ ಹೇಳಿಕೆ ಬಿಡುಗಡೆ ಮಾಡಿದಂತ ಅವರು, ಕರ್ನಾಟಕ ರಾಜ್ಯದ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಇರುವ “ಬಲಿಜ” ಮತ್ತು ಅದರ ಉಪಜಾತಿಗಳನ್ನು ಶೈಕ್ಷಣಿಕ ಉದ್ದೇಶದ ಸಲುವಾಗಿ 2021ರಲ್ಲಿ 2ಎ ವರ್ಗೀಕರಣ ಮಾಡಿರುತ್ತದೆ. ಆದರೆ ಬಲಿಜ ಮತ್ತು ಅದರ ಉಪಜಾತಿಗಳು ಹಾಲಿ ನೀಡುತ್ತಿರುವ ಶೈಕ್ಷಣಿಕ ವರ್ಗೀಕರಣವನ್ನು ಸರ್ಕಾರಿ ಉದ್ಯೋಗದ ಮೀಸಲಾತಿ ಮತ್ತು ಸ್ಥಳೀಯ ಸಂಸ್ಥೆಗಳ ರಾಜಕೀಯ ಮೀಸಲಾತಿ ನೀಡುವಂತೆ ಮಾಡಿರುವ ಮನವಿಗಳನ್ನು ರಾಜ್ಯಸರ್ಕಾರ ಇಲ್ಲಿಯವರೆಗೆ ಪರಿಗಣಿಸಿಲ್ಲ ಎಂದು ಹೇಳಿದ್ದಾರೆ.
ಕರ್ನಾಟಕದಲ್ಲಿ ಬಲಿಜ ಸಮುದಾಯ ಮತ್ತು ಅದರ ಉಪಪಂಗಡಗಳಾದ ಬಲಿಜಿಗ, ನಾಯ್ಡು, ತೆಲುಗು ಬಲಿಜ, ಶೆಟ್ಟಿ ಬಲಿಜ, ದಾಸ ಬಲಿಜ, ಕಸ್ಬನ್, ಮುನ್ನೂರು ಕಾಪು, ಬಳೆ ಬಲಿಜಿಗ, ರೆಡ್ಡಿ ಬಲಿಜಿಗ ಮುಂತಾದ ಸಮುದಾಯಗಳು ಶೋಷಿತ ಸಮುದಾಯಗಳಾಗಿದ್ದು, ಆರ್ಥಿಕವಾಗಿ ಮತ್ತು ಶೈಕ್ಷಣಿಕವಾಗಿ ಅತೀ ಹಿಂದುಳಿದ ಜಾತಿಗಳಾಗಿರುತ್ತವೆ. ನೂರಾರು ವರ್ಷಗಳಿಂದ ಶೋಷಣೆಗೆ ಒಳಗಾಗಿರುವ ಈ ಸಮುದಾಯದ ಜಾತಿಗಳು ಸರ್ಕಾರದ ಮೀಸಲಾತಿ ಮುಂದೂಡುವ ನೀತಿಗಳಿಂದ ಮತ್ತಷ್ಟು ಶೋಷಣೆಗೆ ಒಳಗಾಗುತ್ತಿವೆ. ಸದರಿ ಸಮುದಾಯವನ್ನು ಹಿಂದುಳಿದ ಜಾತಿ ಎಂದು ಪರಿಗಣಿಸಿ ಶೈಕ್ಷಣಿಕವಾಗಿ 2ಎ ವರ್ಗೀಕರಣದಲ್ಲಿ 12 ವರ್ಷಗಳ ಹಿಂದೆ ಅವಕಾಶ ನೀಡಲಾಗಿದೆ. ಪ್ರಸ್ತುತ ಪರಿಸ್ಥಿತಿಯಲ್ಲಿ ಸರ್ಕಾರಿ ಮತ್ತು ಅರೆ ಸರ್ಕಾರಿ ಉದ್ಯೋಗಗಳಲ್ಲಿ, ರಾಜಕೀಯ ಮೀಸಲಾತಿಯಲ್ಲಿ ಬಲಿಜ ಮತ್ತು ಅದರ ಉಪಪಂಗಡಗಳನ್ನು ಪರಿಗಣಿಸುವುದು ಅನಿವಾರ್ಯವಾಗಿದ್ದು, ರಾಜ್ಯ ಸರ್ಕಾರ ಸಕಾರಣವಿಲ್ಲದೆ 2ಎ ವರ್ಗೀಕರಣವನ್ನು ಮುಂದೂಡದೆ ಕೂಡಲೇ ಜಾರಿಗೊಳಿಸಬೇಕಾಗಿದೆ ಎಂದು ಒತ್ತಾಯಿಸಿದ್ದಾರೆ.
ಕರ್ನಾಟಕ ರಾಜ್ಯದ ಹಿಂದುಳಿದ ವರ್ಗಗಳ ಆಯೋಗವು ನಮ್ಮ ರಾಜ್ಯದಲ್ಲಿರುವ ಬಲಿಜ ಮತ್ತು ಅದರ ಉಪಜಾತಿಗಳ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಅಂಶಗಳ ಮೇಲೆ, ಇಡೀ ರಾಜ್ಯದಲ್ಲಿ ನಡೆಸಿದ ಅದ್ಯಯನಕ್ಕೆ ಅನುಗುಣವಾಗಿ ಮಾಹಿತಿಯನ್ನು ಪಡೆದುಕೊಂಡಿರುತ್ತದೆ. ಈ ವರದಿಯ ಅನುಸಾರ ಬಲಿಜ ಮತ್ತು ಅದರ ಉಪಜಾತಿಗಳು ಹಿಂದುಳಿದ ವರ್ಗಗಳ ವರ್ಗೀಕರಣದಲ್ಲಿ ಪೂರ್ಣಮಟ್ಟದಲ್ಲಿ 2ಎ ವರ್ಗೀಕರಣ ಪಡೆಯಬೇಕಾಗಿರುತ್ತದೆ. ರಾಜ್ಯ ಸರ್ಕಾರವು ಉದ್ಯೋಗ ಮೀಸಲಾತಿ ಮತ್ತು ರಾಜಕೀಯ ಮೀಸಲಾತಿಗೆ ಹಿಂದುಳಿದ ವರ್ಗಗಳ ಆಯೋಗದ ಮಾಹಿತಿಯನ್ನು ಪಡೆದುಕೊಂಡು ಈ ಜಾತಿಗಳನ್ನು 2ಎ ವರ್ಗೀಕರಣಕ್ಕೆ ಸೇರಿಸಬೇಕಾಗಿದೆ. ಬೇರೆ ಬೇರೆ ಕಾರಣಗಳಿಗಾಗಿ ಆಯೋಗದ ವರದಿಯು ಅಧಿಕೃತವಾಗಿ ರಾಜ್ಯಸರ್ಕಾರಕ್ಕೆ ಸಲ್ಲಿಕೆಯಾಗಿರುವುದಿಲ್ಲ. ಆದರೆ ಈ ಕಾರಣದ ಮೇಲೆ ನ್ಯಾಯಯುತವಾಗಿ ಮೀಸಲಾತಿಗೆ ಒಳಪಡಬೇಕಾದ ಜಾತಿಗಳ ಸೇರ್ಪಡೆಯನ್ನು ಮುಂದೂಡುವುದು ಅಥವಾ ಅವಕಾಶವನ್ನು ನಿಧಾನಗೊಳಿಸುವುದು ಸಮಂಜಸವಾಗಿರುವುದಿಲ್ಲ ಎಂದು ಹೇಳಿದ್ದಾರೆ.
ಹಲವಾರು ವರ್ಷಗಳಿಂದ ರಾಜ್ಯ ಸರ್ಕಾರವು ಬಲಿಜ ಮತ್ತು ಅದರ ಉಪಜಾತಿಗಳಿಗೆ ಪೂರ್ಣ ಮಟ್ಟದ 2ಎ ವರ್ಗೀಕರಣ ನೀಡುವುದಾಗಿ ಹೇಳುತ್ತಿದ್ದರೂ ಇಲ್ಲಿಯವರೆಗೆ ಅದು ಜಾರಿಯಾಗಿರುವುದಿಲ್ಲ. ಆದ ಕಾರಣ ಕರ್ನಾಟಕ ರಾಜ್ಯ ಸರ್ಕಾರವು ಬಲಿಜ ಮತ್ತು ಅದರ ಉಪಜಾತಿಗಳ ಬಹು ವರ್ಷಗಳ ಮನವಿಯನ್ನು ಸಹಾನುಭೂತಿಯಿಂದ ಪರಿಗಣಿಸಿ, ಕೂಡಲೇ ಉದ್ಯೋಗ ಮತ್ತು ರಾಜಕೀಯ ಮೀಸಲಾತಿಯ 2ಎ ವರ್ಗೀಕರಣ ನೀಡಲು ಕೋರಿದ್ದಾರೆ.
BREAKING NEWS : ಮಂಡ್ಯದ ಕೆಆರ್ಎಸ್ ಬೃಂದಾವನ ಪಾರ್ಕ್ನಲ್ಲಿ ಚಿರತೆ ಪ್ರತ್ಯಕ್ಷ : ಪ್ರವಾಸಿಗರಿಗೆ ನಿರ್ಬಂಧ