ಬೆಂಗಳೂರು: ‘ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದಲೂ ಜನ ಸಾಮಾನ್ಯರ ರಕ್ತ ಹೀರುತ್ತಿದ್ದು, ಅದರ ಮುಂದುವರಿದ ಭಾಗವಾಗಿ ಈಗ ಸರಕಾರಿ ಶಾಲೆ ವಿದ್ಯಾರ್ಥಿಗಳ ಪೋಷಕರಿಂದ ತಿಂಗಳಿಗೆ 100 ರೂ. ದೇಣಿಗೆ ವಸೂಲಿಗೆ ಮುಂದಾಗಿದೆ. ಈ ಸರಕಾರ ಅದೆಷ್ಟು ದರಿದ್ರಗೇಡಿ ಎಂಬುದಕ್ಕೆ ಇದಕ್ಕಿಂತ ಸಾಕ್ಷಿ ಬೇಕೇ’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಮಾಜಿ ಸಚಿವ ರಾಮಲಿಂಗಾರೆಡ್ಡಿ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸರ್ಕಾರದ ಜನವಿರೋಧಿ ನಿರ್ಧಾರದ ವಿರುದ್ಧ ರಾಮಲಿಂಗಾರೆಡ್ಡಿ ಅವರು ಮಾಧ್ಯಮ ಪ್ರಕಟಣೆ ಮೂಲಕ ಶನಿವಾರ ತಮ್ಮ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.
ಚಿತ್ರದುರ್ಗ ಮೂಲಕ ತುಮಕೂರು – ದಾವಣಗೆರೆ ‘ರೈಲ್ವೆ ಸಂಪರ್ಕ ಯೋಜನೆ’ ಪ್ರಾರಂಭಿಸಲು ಕ್ರಮ – ಸಿಎಂ ಬೊಮ್ಮಾಯಿ
‘ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ರಾಜ್ಯದಲ್ಲಿ ಶಿಕ್ಷಣ ವ್ಯವಸ್ಥೆ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಸಾವಿರಾರು ಸರ್ಕಾರಿ ಶಾಲೆಗಳನ್ನು ಮುಚ್ಚಲಾಗಿದೆ. 10 ಲಕ್ಷಕ್ಕೂ ಹೆಚ್ಚು ಮಕ್ಕಳು ಶಿಕ್ಷಣದಿಂದ ವಿಮುಖರಾಗಿದ್ದಾರೆ. ಇದು ಸರಕಾರದ ಶಿಕ್ಷಣ ವಿರೋಧಿನೀತಿ ಅಲ್ಲದೆ ಮತ್ತೇನು ಎಂದು ರಾಮಲಿಂಗಾರೆಡ್ಡಿ ಅವರು ಕಿಡಿ ಕಾರಿದ್ದಾರೆ.
ಪ್ರಸಕ್ತ ಶೈಕ್ಷಣಿಕ ವರ್ಷದ ಅವಧಿ ಅರ್ಧದಷ್ಟು ಮುಕ್ತಾಯವಾಗಿದ್ದು, ಇನ್ನೂ ಹಲವೆಡೆ ವಿದ್ಯಾರ್ಥಿಗಳಿಗೆ ಸಮವಸ್ತ್ರ, ಪಠ್ಯಪುಸ್ತಕ, ಶೂ ಸಾಕ್ಸ್ ವಿತರಣೆ ಆಗಿಲ್ಲ. ಪಠ್ಯ ಪರಿಕರಗಳನ್ನು ಪೂರೈಸದಿದ್ದರೆ ಮಕ್ಕಳು ಕಲಿಯುವುದಾದರೂ ಹೇಗೆ? ಬಹುಶಃ ಸರಕಾರ 40 % ಕಮಿಷನ್ ಬೆನ್ನು ಬಿದ್ದಿರುವುದರಿಂದ ಈ ವಿಳಂಬ ಆಗಿರಬಹುದು ಎಂದು ಅವರು ಛೇಡಿಸಿದ್ದಾರೆ.
ಗಂಗಾವತಿಯಲ್ಲಿ ಮೆರವಣಿಗೆ ವೇಳೆ ರಾಷ್ಟ್ರಧ್ವಜಕ್ಕೆ ಅಪಮಾನ: ಮೂವರ ವಿರುದ್ಧ FIR ದಾಖಲು
ಸರಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುವ ಬಹುತೇಕ ವಿದ್ಯಾರ್ಥಿಗಳು ಬಡ ಹಾಗೂ ಕೆಳಮಧ್ಯಮ ಕುಟುಂಬಗಳಿಗೆ ಸೇರಿದವರು. ಈಗ ಅವರಿಂದಲೂ ಹಣ ವಸೂಲಿಗೆ ಇಳಿದಿರುವುದು ಖಂಡನೀಯ. ಇದರ ಹಿಂದೆ ಅವರನ್ನು ಶಿಕ್ಷಣ ವಂಚಿತರನ್ನಾಗಿ ಮಾಡುವ ಹುನ್ನಾರವಿದೆ. ಈ ಸರ್ಕಾರದ ಬೇಜವಾಬ್ದಾರಿತನ, ನಿರ್ಲಕ್ಷ್ಯದಿಂದ ಮಕ್ಕಳು ಶಿಕ್ಷಣ ವಂಚಿತರಾಗುತ್ತಿದ್ದಾರೆ ಎಂದು ರಾಮಲಿಂಗಾರೆಡ್ಡಿ ಅವರು ಆರೋಪಿಸಿದ್ದಾರೆ.
ಹಿಂದೆ ಕಾಂಗ್ರೆಸ್ ಸರಕಾರ ವಿದ್ಯಾರ್ಥಿಗಳಿಗೆಂದು ಜಾರಿಗೆ ತಂದಿದ್ದ ಮಧ್ಯಾಹ್ನದ ಬಿಸಿಯೂಟ, ಹಾಲು, ಸಮವಸ್ತ್ರ, ಶೂ-ಸಾಕ್ಸ್ ವಿತರಣೆ, ವಿದ್ಯಾಸಿರಿ, ಹಾಸ್ಟೆಲ್, ವಿದೇಶ ವ್ಯಾಸಂಗಕ್ಕೆ ಸಾಲ ಸೌಲಭ್ಯ ಮತ್ತಿತರ ಯೋಜನೆಗಳನ್ನು ಈಗಿನ ಬಡಜನ ವಿರೋಧಿ ಬಿಜೆಪಿ ಸರಕಾರ ಒಂದೊಂದಾಗಿ ಕಿತ್ತುಕೊಳ್ಳುತ್ತಿದೆ. ಈಗ ಅದರ ಜತೆಗೆ ಬಡ ವಿದ್ಯಾರ್ಥಿಗಳಿಂದ ವಸೂಲಿಗೆ ಮುಂದಾಗಿದೆ. ಇದು ಸರ್ಕಾರದಿಂದ ಬಡ ಜನರಿಗೆ ಆಗುತ್ತಿರುವ ಅನ್ಯಾಯದ ಪರಮಾವಧಿ. ಈ ಸರ್ಕಾರಕ್ಕೆ ಸರ್ಕಾರಿ ಶಾಲೆ ನಡೆಸುವ ಯೋಗ್ಯತೆಯೂ ಇಲ್ಲವಾಗಿದೆ ಎಂದು ರಾಮಲಿಂಗಾರೆಡ್ಡಿ ಅವರು ಹೇಳಿಕೆಯಲ್ಲಿ ಟೀಕಿಸಿದ್ದಾರೆ.