ಬೆಂಗಳೂರು: ‘ಆದಷ್ಟು ಬೇಗ ಬೆಂಗಳೂರಿನ ರಸ್ತೆ ಗುಂಡಿ ಮುಚ್ಚುವಂತೆ ಇದೇ 21ರಂದು ಬೆಂಗಳೂರಿನ ಶಾಸಕರು, ಮಾಜಿ ಮಹಾಪೌರರು ಹಾಗೂ ಪಾಲಿಕೆ ಸದಸ್ಯರು ಬೆಳಗ್ಗೆ 11 ಗಂಟೆಗೆ ಆನಂದರಾವ್ ವೃತ್ತದಿಂದ ಮುಖ್ಯಮಂತ್ರಿಗಳ ಮನೆವರೆಗೂ ಪ್ರತಿಭಟನಾ ಮೆರವಣಿಗೆ ಮೂಲಕ ಸಾಗಿ ಮನವಿ ಮಾಡಲಿದ್ದೇವೆ’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾ ರೆಡ್ಡಿ ಅವರು ತಿಳಿಸಿದ್ದಾರೆ.
ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಬೆಂಗಳೂರಿನ ರಸ್ತೆಗಳು ಗುಂಡಿಮಯವಾಗಿವೆ. ಹೈಕೋರ್ಟ್ ಕೂಡ ಕಳೆದ ಒಂದೂವರೆ ವರ್ಷಗಳಿಂದ ರಸ್ತೆಗುಂಡಿಗಳ ವಿಚಾರವಾಗಿ ಚಾಟಿ ಬೀಸುತ್ತಲೇ ಇದೆ. ಆಯುಕ್ತರು, ಮುಖ್ಯ ಇಂಜಿನಿಯರ್ ಗಳನ್ನು ಕರೆಸಿ ರಸ್ತೆ ಗುಂಡಿ ಮುಚ್ಚದಿದ್ದರೆ ಜೈಲಿಗೆ ಹಾಕುವುದಾಗಿಯೂ ಎಚ್ಚರಿಕೆ ನೀಡಿದ್ದಾರೆ. ಇಷ್ಟೆಲ್ಲಾ ನಿರ್ದೇಶನ ನೀಡಿದ ನಂತರವೂ ಬೆಂಗಳೂರಿನಲ್ಲಿ ರಸ್ತೆಗುಂಡಿ ಕಡಿಮೆಯಾಗಿಲ್ಲ ಎಂದರು.
2008ರಿಂದ 2013ರವರೆಗೂ ಬಿಜೆಪಿ ಸರ್ಕಾರ ಅಧಿಕಾರ ಮಾಡಿ ನಂತರ ನಮ್ಮ ಸರ್ಕಾರ ಬಂದ ನಂತರವೂ ಎಲ್ಲ ಪ್ರಮುಖ ರಸ್ತೆಗಳು ಗುಂಡಿಗಳಿಂದ ಕೂಡಿತ್ತು. ನಾವು ಬಂದ ನಂತರ ರಸ್ತೆಗಳ ಡಾಂಬರೀಕರಣ ಮಾಡಲಾಯಿತು. ಬಿಜೆಪಿ ಸರ್ಕಾರ ಎಂದಿಗೂ ರಸ್ತೆಗಳ ಅಭಿವೃದ್ಧಿಗೆ ಆದ್ಯತೆ ನೀಡುವುದಿಲ್ಲ. ಅವರು ಕೇವಲ ಶಾಸಕರುಗಳಿಗೆ ಅನುದಾನ ನೀಡುವುದರ ಬಗ್ಗೆ ಗಮನಹರಿಸುತ್ತಾರೆ. ಆಗ ಪ್ರಮುಖ ರಸ್ತೆಗಳು ತಬ್ಬಲಿಯಾಗುತ್ತವೆ. ಇದರಿಂದ ಪ್ರಮುಖ ರಸ್ತೆಗಳಲ್ಲಿ ಸ್ಥಿತಿ ಹದಗೆಡುತ್ತದೆ. ಈ ಸರ್ಕಾರ ಪ್ರಮುಖ ರಸ್ತೆಗಳ ನಿರ್ವಹಣೆಗೆ ಇಟ್ಟಿದ್ದ 400 ಕೋಟಿ ರೂ. ಅನುದಾನವನ್ನು ಹಿಂಪಡೆದಿದ್ದರು ಎಂದು ತಿಳಿಸಿದರು.
ಈಗಲೂ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ 198 ವಾರ್ಡ್ ಗಳಿಗೆ 2020-21ರಲ್ಲಿ ಸರ್ಕಾರದಿಂದ ನಯಾ ಪೈಸೆ ಅನುದಾನ ಬಿಡುಗಡೆ ಮಾಡಲಿಲ್ಲ. ನಂತರ 2021-22ರಲ್ಲೂ ಬಿಡಿಗಾಸು ಅನುದಾನ ನೀಡಿಲಿಲ್ಲ. 2022-23ಕ್ಕೆ ಬಜೆಟ್ ನಲ್ಲಿ ಹೊಸ ವಾರ್ಡ್ ಗೆ 6 ಕೋಟಿ, ಹಳೇ ವಾರ್ಡ್ ಗಳಿಗೆ 4 ಕೋಟಿ ರೂ. ಘೋಷಿಸಿದ್ದಾರೆ. ಈ ಅನುದಾನ ಕನ್ನಡಿಯೊಳಗಿನ ಗಂಟಿನಂತೆ ಕೇವಲ ಕಾಗದ ಮೇಲೆ ಅನುದಾನ ಇದೆಯೇ ಹೊರತು ಈ ಅನುದಾನ ಬಿಡುಗಡೆ ಆಗಿಲ್ಲ. ಇಂಜಿನಿಯರ್ ಗಳಿಗೆ ಟೆಂಡರ್ ಕರೆಯಲು ಸರ್ಕಾರ ಇನ್ನೂ ಅನುಮತಿ ನೀಡಿಲ್ಲ ಎಂದರು.
ಕಳೆದ ವರ್ಷ ವಾರ್ಡ್ ಗೆ 60 ಲಕ್ಷ ಅನುದಾನ ನೀಡಿದ್ದರು. ಈ ಅನುದಾನ ಕೇವಲ ಚರಂಡಿ ಸ್ವಚ್ಛ ಹಾಗೂ ಟ್ರ್ಯಾಕ್ಟರ್ ನಿರ್ವಹಣೆ 20 ಲಕ್ಷ, ರಸ್ತೆ ಗುಂಡಿ ಮುಚ್ಚಲು 20 ಲಕ್ಷ ಹಾಗೂ ಕೊಳವೆ ಬಾವಿ ನಿರ್ವಹಣೆಗೆ 20 ಲಕ್ಷ ನೀಡಿದ್ದಾರೆ. ರಸ್ತೆ ಗುಂಡಿ ಮುಚ್ಚಲು ಕಳೆದ ಮೂರು ವರ್ಷಗಳಿಂದ ಪಾಲಿಕೆ ಕೇವಲ 40 ಕೋಟಿ ಬಿಡುಗಡೆ ಮಾಡಿದೆ. ಕಳೆದ ಮೂರು ವರ್ಷಗಳಿಂದ ವಾರ್ಡ್ ಗಳಿಗೆ ಪಾಲಿಕೆಯಿಂದ ನಯಾ ಪೈಸೆ ಹಣ ಸಿಕ್ಕಿಲ್ಲ ಎಂದು ಹೇಳಿದರು.
ಬೆಂಗಳೂರು ಅಭಿವೃದ್ಧಿ ಇಲಾಖೆ ಜವಾಬ್ದಾರಿಯನ್ನು ಮುಖ್ಯಮಂತ್ರಿಗಳೇ ಇಟ್ಟುಕೊಂಡಿದ್ದು, ಇವರ ಬೆಂಬಲಕ್ಕೆ 7 ಸಚಿವರು ಇದ್ದಾರೆ. ಸಿಎಂ ಸೇರಿದರೆ ಬೆಂಗಳೂರಿಗೆ ಅಷ್ಟ ದಿಗ್ಪಾಲಕರಂತೆ 8 ಜನ ಸರ್ಕಾರದಲ್ಲಿ ಇದ್ದಾರೆ. ಇನ್ನು ಬಿಡಿಎ ಮುಖ್ಯಸ್ಥರೂ, ಮುಖ್ಯ ಸಚೇತಕರು ಬೆಂಗಳೂರಿನ ಶಾಸಕರೇ ಆಗಿದ್ದಾರೆ. ಆದರೂ ಬೆಂಗಳೂರಿನ ರಸ್ತೆಗಳಲ್ಲಿ ಲಕ್ಷಗಟ್ಟಲೆ ಗುಂಡಿ ಬಿದ್ದಿವೆ. ಈ ಹಿಂದಿನ ಸರ್ಕಾರದ ಅವಧಿಯಲ್ಲೂ ಮಳೆ ಬಿದ್ದು, ರಸ್ತೆ ಗುಂಡಿ ಬೀಳುತ್ತಿದ್ದವು. ತಕ್ಷಣ ಅವುಗಳನ್ನು ಮುಚ್ಚುವ ಕೆಲಸ ಆಗುತ್ತಿತ್ತು. ಈ ವಿಚಾರವಾಗಿ ಮುಖ್ಯಮಂತ್ರಿಗಳಿಗೆ ಸದನದಲ್ಲಿ ವಿವರಿಸಿದ್ದೇನೆ ಎಂದರು
ಸರ್ಕಾರ ಪ್ರಮುಖ ರಸ್ತೆಗಳಿಗೆ ಆದ್ಯತೆ ನೀಡಬೇಕು, ಮುಖ್ಯ ಇಂಜಿನಿಯರ್ ಗಳಿಗೆ ಆದ್ಯತೆ ನೀಡಿದರೆ ಪ್ರಮುಖ ರಸ್ತೆಗಳು ಉತ್ತಮ ಸ್ಥಿತಿಯಲ್ಲಿರುತ್ತದೆ. ಕೇವಲ ಶಾಸಕರಿಗೆ ಅನುದಾನ ನೀಡಿದರೆ ಅವರು ತಮ್ಮ ಕ್ಷೇತ್ರಗಳಿಗೆ ಮಾತ್ರ ಹಾಕುತ್ತಾರೆ. ಹೀಗಾಗಿ ಪ್ರಮುಖ ರಸ್ತೆಗಳ ಬಗ್ಗೆ ಗಮನಹರಿಸಿ ಎಂದು ಮುಖ್ಯಮಂತ್ರಿಗಳಿಗೆ ಸಲಹೆ ನೀಡಿದ್ದೆ. ಅವರು ನಮ್ಮ ಸಲಹೆ ಪರಿಗಣಿಸಲಿಲ್ಲ ಎಂದು ಹೇಳಿದರು.
ನಾನು ಹಲವು ಬಾರಿ ಮುಖ್ಯಮಂತ್ರಿಗಳಿಗೆ ಮಾಧ್ಯಮಗಳ ಮೂಲಕ ಸಾಕಷ್ಟು ಬಾರಿ ಈ ವಿಚಾರ ಹೇಳಿದ್ದೇನೆ. ಇವರು ಮಾತೆತ್ತಿದರೆ ಬೆಂಗಳೂರು ಅಭಿವೃದ್ಧಿ ಎಂದು ಮಾತನಾಡುತ್ತಾರೆ. ಕೇವಲ 15 ಬಿಜೆಪಿ ಶಾಸಕರ ಕ್ಷೇತ್ರ ಅಭಿವೃದ್ಧಿ ಆದರೆ ಬೆಂಗಳೂರಿನ ಅಭಿವೃದ್ಧಿಯೇ? ಎಲ್ಲ 28 ಕ್ಷೇತ್ರ ಅಭಿವೃದ್ಧಿ ಆದರೆ ಮಾತ್ರ ಬೆಂಗಳೂರು ಅಭಿವೃದ್ಧಿ ಆಗುತ್ತದೆ. ಕೇವಲ ಬಿಜೆಪಿ ಶಾಸಕರಿಗೆ ಅನುದಾನ ನೀಡಿದರೆ, ಉಳಿದವರಿಗೆ ಅನುದಾನ ನೀಡದಿದ್ದರೆ, ಎಲ್ಲ ಕಡೆ ರಸ್ತೆ ಗುಂಡಿ ಬೀಳುತ್ತದೆ. ಹೀಗಾಗಿ ಅನುದಾನ ವಿಚಾರದಲ್ಲಿ ತಾರತಮ್ಯ ಮಾಡಬೇಡಿ. ಆಡಳಿತ ಪಕ್ಷದಲ್ಲಿರುವ ಕಾರಣ ಸ್ವಲ್ಪ ಹೆಚ್ಚಾಗಿ ತೆಗೆದುಕೊಳ್ಳಲಿ ಎಂದರು.
ಕಾಂಗ್ರೆಸ್ ನ 12 ಶಾಸಕರುಗಳಿಗೆ 1938 ಕೋಟಿ ನೀಡಿದರೆ, ಜೆಡಿಎಸ್ ಶಾಸಕರಿಗೆ 162 ಕೋಟಿ, ಬಿಜೆಪಿ 15 ಶಾಸಕರಿಗೆ 8774 ಕೋಟಿ ರೂ. ನೀಡಿದ್ದಾರೆ. ಆ ಮೂಲಕ ನಮಗಿಂತಲೂ ನಾಲ್ಕೂವರೆ ಕೋಟಿ ಹೆಚ್ಚಿನ ಅನುದಾನ ನೀಡಿದ್ದಾರೆ. ಬೆಂಗಳೂರಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಪಖ್ಯಾತಿ ತರುತ್ತಿದ್ದಾರೆ. ಮೊನ್ನೆ ರಸ್ತೆಗುಂಡಿಗೆ ಮಹಿಳೆ ಬಲಿಯಾಗಿದ್ದು, ಈವರೆಗೂ ಒಟ್ಟು 16 ಮಂದಿ ರಸ್ತೆ ಗುಂಡಿಗೆ ಬಲಿಯಾಗಿದ್ದಾರೆ. ಇವರ ಪ್ರಾಣ ವಾಪಸ್ ಪಡೆಯುತ್ತಾರೆ. ಪತ್ರಿಕೆಗಳಲ್ಲಿ ರಸ್ತೆ ಗುಂಡಿ ವಿಚಾರವಾಗಿ ವರದಿಗಳು ಬರುತ್ತಲೇ ಇವೆ ಎಂದು ಹೇಳಿದರು.
ವಿಧಾನಸಭೆಯಲ್ಲಿ ಮುಖ್ಯಮಂತ್ರಿಗಳು ಬೆಂಗಳೂರಿನಲ್ಲಿ 11,900 ಕಿ,ಮೀ ರಸ್ತೆಗಳಿದ್ದು, 5 ವರ್ಷಗಳಲ್ಲಿ ಮೂಲಸೌಕರ್ಯಕ್ಕಾಗಿ ಕಳೆದ 5 ವರ್ಷಗಳಲ್ಲಿ 20,060 ಕೋಟಿ ನೀಡಲಾಗಿದೆ ಎಂದು ಹೇಳಿದ್ದಾರೆ. ನಮ್ಮ ಕಾಲದಲ್ಲಿ ಮಾಡಲಾಗಿರುವ 120 ಕಿ.ಮೀ ಕಾಂಕ್ರೀಟ್ ರಸ್ತೆಗಳಲ್ಲಿ ಯಾವುದೇ ಗುಂಡಿ ಬಿದ್ದಿಲ್ಲ. ಈ ರಸ್ತೆ ಮಾಡುವಾಗ ಭ್ರಷ್ಟಾಚಾರದ ಆರೋಪ ಮಾಡಿದ್ದರು. ನಂತರ ಅವರೇ ತನಿಖೆ ಮಾಡಿದಾಗ ಯಾವುದೇ ಲೋಪಗಳು ಇರಲಿಲ್ಲ. ಎರಡನೇ ಹಾಗೂ ಮೂರನೇ ಹಂತದ ಕಾಂಕ್ರೀಟ್ ರಸ್ತೆಗಳಿಗೆ ಅನುಮತಿ ಇದ್ದರೂ ಸರ್ಕಾರ ಮೀನಾಮೇಷ ಎಣಿಸುತ್ತಿದೆ. ನಮ್ಮ ಕಾಲದಲ್ಲಿ ಇಂಜಿನಿಯರ್ ಗಳು ಎಲ್ಲಿ ಹೆಚ್ಚು ವಾಹನ ದಟ್ಟಣೆ ಹಾಗೂ ಭಾರಿ ವಾಹನಗಳ ಸಂಚಾರ ಇರುತ್ತದೆಯೋ ಅಂತಹ ರಸ್ತೆಗಳನ್ನು ಗುರುತಿಸಿ ಕಾಂಕ್ರೀಟ್ ರಸ್ತೆ ಮಾಡಲು ಆಯ್ಕೆ ಮಾಡುತ್ತಿದ್ದರು. ಆಗ ನಾವುಗಳು ಇದರಲ್ಲಿ ಹಸ್ತಕ್ಷೇಪ ಮಾಡುತ್ತಿರಲಿಲ್ಲ. ನಾವು ಇವರಂತೆ ಗಲ್ಲಿ ರಸ್ತೆಗಳಲ್ಲಿ ಕಾಂಕ್ರೀಟ್ ರಸ್ತೆ ಹಾಕಿಲ್ಲ. ಬಿಜೆಪಿ ಸರ್ಕಾರ ಇನ್ನಾದರೂ ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಮಾಡುವುದು ಬೇಡ. ಇವರ ತಾರತಮ್ಯದಿಂದ ರಸ್ತೆಗಳು ಹಾಳಾಗಿದ್ದು, ಇವರಿಗೆ ಜನ ಛೀಮಾರಿ ಹಾಕುತ್ತಿದ್ದಾರೆ ಎಂದು ಕಿಡಿಕಾರಿದರು.
ನಿಮಗೆ ಅಧಿಕಾರ ನಡೆಸಲು ಆಗದಿದ್ದರೆ ಅಧಿಕಾರ ಬಿಟ್ಟು ಹೋಗಿ. ನಮ್ಮ ಕಾಲದಲ್ಲಿ ಹೈಕೋರ್ಟ್ ನಿಂದ ಈ ರೀತಿ ಛೀಮಾರಿ ಹಾಕಿಸಿಕೊಂಡಿರಲಿಲ್ಲ. ಸರ್ಕಾರ ಈಗ ಸ್ಟೀಲ್ ಬ್ರಿಡ್ಜ್ ಮಾಡುವ ನಿರ್ಧಾರದ ಕುರಿತು ಕೇಳಿದ ಪ್ರಶ್ನೆಗೆ, ‘ಬಿಜೆಪಿಯವರಿಗೆ ಸ್ಟೀಲ್, ಕಾಂಕ್ರೀಟ್ ಬ್ರಿಡ್ಜ್ ವ್ಯತ್ಯಾಸವಿಲ್ಲ. ಅವರು ವಿರೋಧ ಪಕ್ಷದಲ್ಲಿದ್ದಾಗ ವಿರೋಧ ಮಾಡಬೇಕು ಎಂಬ ಕಾರಣಕ್ಕೆ ಎಲ್ಲದಕ್ಕೂ ವಿರೋಧ ಮಾಡುತ್ತಾರೆ. ನಮ್ಮ ಕಾಲದಲ್ಲಿ ಸ್ಟೀಲ್ ಬ್ರಿಡ್ಜ್ ಮಾಡಲು ಹೋದಾಗ ಅದನ್ನು ವಿರೋಧಿಸಿದರು. ಅವರಿಗೆ ಸ್ಟೀಲ್ ಬ್ರಿಡ್ಜ್ ಬೇಡವಾಗಿದ್ದರೆ ಕಾಂಕ್ರೀಟ್ ಬ್ರಿಡ್ಜ್ ಮಾಡಿ ಎಂಬ ಸಲಹೆಯಾದರೂ ನೀಡಬಹುದಿತ್ತು. ಅದನ್ನು ನೀಡಲಿಲ್ಲ. ಈಗ ಅವರೇ ಮಾಡುತ್ತಿದ್ದಾರೆ. ಅವರಿಗೆ ಅಭಿವೃದ್ಧಿ ಎಂದರೆ ಅರ್ಥ ಗೊತ್ತಿಲ್ಲ. ಬಿಜೆಪಿಯವರಿಗೆ ಜನರ ಬಗ್ಗೆ ಕಾಳಜಿ ಇದ್ದಿದ್ದರೆ ಬ್ರಿಡ್ಜ್ ವಿರೋಧಿಸುತ್ತಿರಲಿಲ್ಲ. ನಾವು ಟೆಂಡರ್ ಕೂಡ ಕರೆದಿರಲಿಲ್ಲ. ಆದರೂ ಕಿಕ್ ಬ್ಯಾಕ್ ಎಂಬ ಆರೋಪ ಮಾಡಿದ್ದರು. ಈಗ ಇವರು ಕಿಕ್ ಬ್ಯಾಕ್ ಗೆ ಮಾಡುತ್ತಿದ್ದಾರಾ? ನಾನು ಬಿಜೆಪಿಯವರಂತೆ ಇಬ್ಬಗೆ ನೀತಿ ತಾಳುವುದಿಲ್ಲ. ಬ್ರಿಡ್ಜ್ ಆಗಬೇಕು ಎಂದರೆ ಆಗಬೇಕು. ಅವರಂತೆ ಕಾಲಕ್ಕೊಮ್ಮೆ ನಿರ್ಧಾರ ಬದಲಿಸುವುದಿಲ್ಲ. ಇವರಿಂದ ಏನೂ ಸಾಧ್ಯವಿಲ್ಲ. ಇವರಿಗೆ ಇಚ್ಛಾಶಕ್ತಿ ಇಲ್ಲ. 2023ಕ್ಕೆ ನಮ್ಮ ಸರ್ಕಾರ ಬಂದ ನಂತರ ನಾವೇ ಮಾಡಬೇಕು. ಬಿಜೆಪಿಯವರು ಅಧಿಕಾರದಲ್ಲಿದ್ದಾಗ ಯಾವುದಾದರೂ ಒಂದು ಮೇಲ್ಸೇತುವೆ, ಯಾವುದಾದರೂ ಒಂದು ಮಹತ್ವದ ಯೋಜನೆ ಮಾಡಿದ್ದಾರಾ? ಕಾವೇರಿ ಕುಡಿಯುವ ವಿವಿಧ ಹಂತಗಳ ಯೋಜನೆ, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಮೆಟ್ರೋ, ಹಳ್ಳಿಗಳಿಗೆ ಕುಡಿಯುವ ನೀರು ಎಲ್ಲ ಯೋಜನೆ ಕಾಂಗ್ರೆಸ್ ಸರ್ಕಾರದ್ದೇ ಆಗಿದೆ. ಇವರು ಏನು ಮಾಡಿದ್ದಾರೆ?’ ಎಂದು ಉತ್ತರಿಸಿದರು.
ಪೇಸಿಎಂ ಅಭಿಯಾನದ ಬಗ್ಗೆ ಕೇಳಿದಾಗ, ‘ನಾವು ಈಗ ವಿರೋಧ ಪಕ್ಷದಲ್ಲಿದ್ದೇವೆ. ನಾವು ತಪ್ಪು ಮಾಡಿದ್ದರೆ ಹೇಳಲಿ. ಮುಖ್ಯಮಂತ್ರಿಗಳು ಶಿಕ್ಷಕರ ನೇಮಕಾತಿಯಲ್ಲಿ ಸಿದ್ದರಾಮಯ್ಯ ನವರು ಎಷ್ಟು ಹಣ ಪಡೆದಿದ್ದಾರೆ ಎಂದು ಕೇಳಿದ್ದಾರೆ. ಆದರೆ ಈ ನೇಮಕಾತಿ ಅಕ್ರಮದಲ್ಲಿ ಆಗಿರುವ 9 ನೇಮಕಾತಿ ಪೈಕಿ ಕೇವಲ 2 ನೇಮಕಾತಿ ಸಿದ್ದರಾಮಯ್ಯ ಅವರ ಕಾಲದಲ್ಲಿ, 1 ನೇಮಕಾತಿ ಸಮ್ಮಿಶ್ರ ಸರ್ಕಾರ ಅವಧಿಯಲ್ಲಿ ಉಳಿದ 6 ನಿಮಕಾತಿ ಬಿಜೆಪಿ ಸರ್ಕಾರದ ಅವಧಿಯಲ್ಲಿ ಆಗಿದೆ. ನಾನು ಬೊಮ್ಮಾಯಿ ಅವರ ಮೇಲಾಗಲಿ, ಸಚಿವರ ಮೇಲೆ ಆರೋಪ ಮಾಡುತ್ತಿಲ್ಲ. ಕಾಂಗ್ರೆಸ್ ಸರ್ಕಾರದಲ್ಲಿ ಅಕ್ರಮ ನಡೆದಿದೆ, ರಾಹುಲ್ ಗಾಂಧಿ ಅವರಿಗೆ ಅವುಗಳ ಮಾಹಿತಿ ನೀಡುತ್ತೇನೆ ಎಂದು ಮುಖ್ಯಮಂತ್ರಿಗಳು ಹೇಳುತ್ತಿದ್ದಾರೆ. ನಾವು ಅಧಿಕಾರದಲ್ಲಿದ್ದಾಗ ನೀವು ಏನು ಕಡಲೇ ಕಾಯಿ ತಿನ್ನುತಿದ್ದಿರಾ? ವಿಧಾನಸಭೆಯಲ್ಲಿ ಪ್ರಶ್ನಿಸಬೇಕಿತ್ತು. ನೀವು ಅಧಿಕಾರಕ್ಕೆ ಬಂದು 3 ವರ್ಷ ಆಗಿದೆ ತನಿಖೆ ಮಾಡಿಸಬಹುದಿತ್ತಲ್ಲವೇ ಯಾಕೆ ಮಾಡಿಸಲಿಲ್ಲ? ಬಿಜೆಪಿಯವರು ಬಂಡರು. ಯಾವುದೇ ನೈತಿಕತೆ ಇಲ್ಲ’ ಎಂದು ಟೀಕಿಸಿದರು.
ಒತ್ತುವರಿ ತೆರವು ವಿಚಾರವಾಗಿ ಕೇಳಿದಾಗ, ‘ಮಾಧ್ಯಮದವರು ಈ ಬಗ್ಗೆ ಬರೆದಾಗ ತೆರವು ಕಾರ್ಯಾಚರಣೆ ಮಾಡುವಂತೆ ತೋರಿಸುತ್ತಾರೆ. ನಂತರ ಮಾಡುವುದಿಲ್ಲ. ನಾವು ಅಧಿಕಾರದಲ್ಲಿ ಇದ್ದಾಗ 1900ಕ್ಕೂ ಹೆಚ್ಚು ಒತ್ತುವರಿ ಗುರುತಿಸಿ, ಸುಮಾರು 1300 ಒತ್ತುವರಿ ತೆರವುಗೊಳಿಸಿದ್ದೆವು. ಇವರು 3 ವರ್ಷದಿಂದ ಯಾವುದೇ ಒತ್ತುವರಿ ತೆರವು ಮಾಡದೇ ಇದ್ದರು. ನಾನು ಕಿವಿ ಹಿಂಡಿದರೂ ದಪ್ಪ ಚರ್ಮದವರು ಜಗ್ಗಲಿಲ್ಲ. ನಮ್ಮ ಆದ್ಯತೆ ಅಭಿವೃದ್ಧಿ, ಜತೆಗೆ ಬಡತನ, ನಿರುದ್ಯೋಗ ನಿರ್ಮೂಲನೆಗೆ ಹೋರಾಡುವುದು. ಆದರೆ ಬಿಜೆಪಿಯವರ ಆದ್ಯತೆ ಹಲಾಲ್, ಹಿಜಾಬ್, ವಿಚಾರವಾಗಿದೆ’ ಎಂದರು.
ಮಲ್ಲಿಕಾರ್ಜುನ ಖರ್ಗೆ ಅವರು ಎಐಸಿಸಿ ಅಧ್ಯಕ್ಷರಾಗಿ ಆಯ್ಕೆಯಾದ ಬಗ್ಗೆ ಕೇಳಿದ ಪ್ರಶ್ನೆಗೆ, ‘ಸ್ವಾತಂತ್ರ್ಯ ಬಂದ ನಂತರ ಎಐಸಿಸಿ ಅಧ್ಯಕ್ಷರಾಗಿ ರಾಜ್ಯದಿಂದ ಆಯ್ಕೆಯಾಗುತ್ತಿರುವ ಎರಡನೇ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು. ಅವರ ಆಯ್ಕೆ ಸಂತಸದ ವಿಚಾರ. ಕಾಂಗ್ರೆಸ್ ಪಕ್ಷ ಅನೇಕ ರಾಜ್ಯಗಳಲ್ಲಿ ಅಧಿಕಾರ ಕಳೆದುಕೊಂಡಿದ್ದು, ಮುಂದಿನ ದಿನಗಳಲ್ಲಿ ಎಲ್ಲ ಹಿರಿಯರ ಮಾರ್ಗದರ್ಶನದಲ್ಲಿ ಕಾಂಗ್ರೆಸ್ ಪಕ್ಷ ಸಧೃಡವಾಗಿ ಕಟ್ಟಲಿದ್ದಾರೆ ಎಂಬ ವಿಶ್ವಾಸದೊಂದಿಗೆ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ’ ಎಂದರು.
ಈಗ ರಾಜ್ಯದಲ್ಲಿ ಮೂರನೇ ಬಣ ನಿರ್ಮಾಣವಾಗುತ್ತದೆಯೇ ಎಂಬ ಪ್ರಶ್ನೆಗೆ, ‘ನಮ್ಮ ರಾಜ್ಯದಲ್ಲಿ ಒಂದೇ ಬಣ ಅದು ಕಾಂಗ್ರೆಸ್ ಬಣ. ಖರ್ಗೆ ಅವರು ಎಐಸಿಸಿ ಅಧ್ಯಕ್ಷರಾಗಿ ರಾಷ್ಟ್ರ ರಾಜಕಾರಣ ನೋಡಿಕೊಳ್ಳುತ್ತಾರೆ. ರಾಜ್ಯದಲ್ಲಿ ಕೆಪಿಸಿಸಿ ಅಧ್ಯಕ್ಷರು ಹಾಗೂ ಸಿಎಲ್ ಪಿ ನಾಯಕರ ಮಾರ್ಗದರ್ಶನದನಲ್ಲಿ ಪಕ್ಷ ಸಾಗಲಿದೆ’ ಎಂದರು.