ಕೆಎನ್ಎನ್ಸಿನಿಮಾಡೆಸ್ಕ್: ಸದ್ಯ ಎಲ್ಲಾ ಸಿನಿಪ್ರಿಯರ ಚಿತ್ತ ಹಾರ್ಟ್ ಫೆವರೀಟ್ ಪ್ರೇಮಕಥಾನಕ ಸಿನೆಮಾ ಬನಾರಸ್ ಮೇಲೆ ನೆಟ್ಟಿದೆ. ಗಂಗೆಯ ತಟದಲ್ಲಿ ತೆರೆದುಕೊಳ್ಳುವ ಅದ್ಭುತ ಪ್ರೇಮಕಥಾನಕದ ಬನಾರಸ್ ಗೂ ಪವಿತ್ರವಾದ ಗಂಗೆಗೂ ಒಂದು ನಂಟಿದೆ. ಭಾರತದಲ್ಲಿ ಪೂಜ್ಯನೀಯ ಸ್ಥಾನ ಪಡೆದುಕೊಂಡಿರುವ ತಾಯಿ ಗಂಗೆಯನ್ನ ಹತ್ತಿರದಿಂದ ಪೂಜಿಸಬೇಕು, ಅಲ್ಲಿ ಪಾವಿತ್ಯ್ರತೆ ಇಂದ ನಡೆಯುವ ಗಂಗಾರತಿಯಲ್ಲಿ ಭಾಗವಹಿಸಲು ಅದೆಷ್ಟೋ ಕೋಟಿ ಭಕ್ತರು ಕನಸು ಕಂಡಿರುತ್ತಾರೆ. ಆದ್ರೆ ಆ ಅದೃಷ್ಟ ಬನಾರಸ್ ಜೋಡಿಗೆ ಒಲಿದು ಬಂದಿದೆ.
ವಾರಾಣಸಿಯ ತಟದಲ್ಲಿ ಸಿನೆಮಾ ಶೂಟಿಂಗ್ ಮುಗಿಸಿಕೊಂಡು ಬಂದಿದ್ದ ಝೈದ್ ಹಾಗು ಸೋನಲ್ ರನ್ನ ಮತ್ತೆ ಮಾಯಗಂಗೆ ತನ್ನತ್ತ ಸೆಳೆದುಕೊಂಡಿದೆ. ಪಂಚ ಭಾಷೆಗಳಲ್ಲಿ ಅದ್ದೂರಿಯಾಗಿ ತೆರೆಕಾಣ್ತಿರೋ ಬನಾರಸ್ ಪಬ್ಲಿಸಿಟಿಗೆ ಬೇರೆ ಬೇರೆ ರಾಜ್ಯಗಳನ್ನ ಸುತ್ತುತ್ತಿರುವ ಸಿನಿತಂಡ ಮಾಧ್ಯಮಗಳು ಹಾಗೂ ಅಭಿಮಾನಿಗಳನ್ನ ಭೇಟಿಯಾಗ್ತಿದೆ. ಈ ನಡುವೆ ಆ ರಾಜ್ಯಗಳಲ್ಲಿ ರುವ ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳಿಗೂ ಭೇಟಿ ಕೊಟ್ಟು ಆಶೀರ್ವಾದ ಪಡೆದುಕೊಳ್ತಿದೆ. ಇದೀಗ ಬೇರೆ ರಾಜ್ಯಗಳ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿರುವ ಝೈದ್ ಖಾನ್ ಹಾಗು ಸೋನಲ್ ಜೊತೆಗೂಡಿ ವಾರಾಣಸಿಗೆ ತೆರಳಿದ್ದಾರೆ.
ಸ್ವತಃ ಗಂಗಾರತಿಯಲ್ಲಿ ಪಾಲ್ಗೊಂಡು ಗಂಗಾ ಮಾತೆಗೆ ನಮಿಸಿದ್ದಾರೆ. ಇದ್ರಲ್ಲಿ ಇನ್ನೊಂದು ವಿಶೇಷವೆಂದರೆ ಝೈದ್ ಜಾತಿ ಮತಗಳ ಹಂಗಿಲ್ಲದೆ ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡಿ ಭಕ್ತಿಯಿಂದ ನಮಿಸುತ್ತಿರೋದು, ಈ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗ್ತಿದ್ದಾರೆ. ಭಾರತದಲ್ಲಿ ಗಂಗಾ ನದಿಗೆ ಭಕ್ತಿ ಭಾವಗಳ ಜೊತೆಗೆ ವಿಧಿವಿಧಾನಗಳೊಂದಿಗೆ ನಡೆಯುವ ಗಂಗಾರತಿಗೆ ಧಾರ್ಮಿಕವಾಗಿ ತನ್ನದೇ ಆದ ಮಹತ್ವವಿದೆ. ಅದು ಕೋಟ್ಯಂತರ ಜನರ ಭಕ್ತಿ ಭಾವಗಳ ಆಚರಣೆ. ಅದರಲ್ಲಿ ಭಾಗಿಯಾಗುವ ಅವಕಾಶ ಬನಾರಸ್ ಹೀರೋ ಝೈದ್ ಖಾನ್ ಮತ್ತು ನಾಯಕಿ ಸೋನಲ್ ಮೊಂತೇರೋ ಅವರುಗಳಿಗೆ ಅದಾಗಿಯೇ ಒಲಿದು ಬಂದಿದೆ. ಆ ಧನ್ಯತಾ ಭಾವವೇ ಚಿತ್ರ ತಂಡಕ್ಕೂ ಹೊಸ ಹುರುಪು ನೀಡಿದೆ.
ರಿಲೀಸ್ ಗೂ ಮೊದಲೇ ಬನಾರಸ್ ಪಡೆದುಕೊಳ್ತಿರೋ ರೆಸ್ಪಾನ್ಸ್ ಹಾಗೂ ದಾಖಲೆ ಮೊತ್ತಕ್ಕೆ ಸೇಲ್ ಆದ ವಿತರಣ ಹಕ್ಕು, ಹಿಸ್ಟರಿ ಕ್ರಿಯೇಟ್ ಮಾಡಿರೋ ಚಿತ್ರದ ಝಲಕ್ ಸೇರಿದಂತೆ ಎಲ್ಲವೂ ಬನಾರಸ್ ಒಂದೊಳ್ಳೆ ಸಿನೆಮಾವಾಗಿ ನೆಲೆ ನಿಲ್ಲುವ ಲಕ್ಷಣಗಳನ್ನೇ ತೋರಿಸುತ್ತಿವೆ. ಇನ್ನು ಬನಾರಸ್ ಗೆ ಜಯತೀರ್ಥ ಅವರ ನಿರ್ದೇಶನವಿದೆ. ದೇವರಾಜ್, ಅಚ್ಯುತಕುಮಾರ್, ಸುಜಯ್ ಶಾಸ್ತ್ರಿ, ಸ್ವಪ್ನ ರಾಜ್, ಬರ್ಕತ್ ಆಲಿ, ಚಿರಂತ್, ರೋಹಿತ್ ಮುಂತಾದ ಕಲಾವಿದರ ಬಳಗವಿದೆ. ಅಜನೀಶ್ ಲೋಕನಾಥ್ ಸಂಗೀತ, ಅದ್ವೈತ ಗುರುಮೂರ್ತಿ ಛಾಯಾಗ್ರಹಣ, ಕೆ.ಎಂ.ಪ್ರಕಾಶ್ ಸಂಕಲನ, ರಘು ನಿಡುವಳ್ಳಿ ಸಂಭಾಷಣೆ ಚಿತ್ರಕ್ಕಿದೆ. ನ್ಯಾಷನಲ್ ಖಾನ್ಸ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ತಿಲಕ್ ರಾಜ್ ಬಲ್ಲಾಳ್ ನಿರ್ಮಿಸಿರುವ ಈ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಇದೇ ನವೆಂಬರ್ 4ಕ್ಕೆ ದೇಶಾದ್ಯಂತ ಬಿಡುಗಡೆಗೊಂಡು ಸದ್ದು ಮಾಡೋಕೆ ಸಜ್ಜಾಗಿದೆ.