ಬೆಂಗಳೂರು: ದಿನಾಂಕ 17-10-2022ರ ಇಂದು, ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ( Chief Minister Basavaraj Bommai ) ಅವರ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾಧಿಕಾರಿಗಳ ಸಭೆಯ ಮುಖ್ಯಾಂಶಗಳು ಈ ಕೆಳಗಿನಂತಿವೆ.
ಕಂದಾಯ ಇಲಾಖೆ
• ಪರಿಹಾರ ವಿತರಣೆಯನ್ನು ತ್ವರಿತವಾಗಿ ಪೂರ್ಣಗೊಳಿಸಲು ಎಲ್ಲ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಯಿತು. ಪ್ರತಿ ತಾಲ್ಲೂಕಿಗೂ ಪದೇ ಪದೇ ಭೇಟಿ ನೀಡಿ, ಬೆಳೆಹಾನಿ, ಮನೆ ಹಾನಿ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಬೇಕು.
• ಬೆಳೆಹಾನಿಗಾಗಿ ಈಗಾಗಲೇ ಮಾಡಿರುವ ಸಮೀಕ್ಷೆಯಲ್ಲಿ ಕೆರೆಯ ಕೆಳಭಾಗದ ಪ್ರದೇಶ ಸೇರಿಲ್ಲದಿದ್ದರೆ, ಅವುಗಳನ್ನು ಮಾರ್ಗಸೂಚಿಯನ್ವಯ ಪರಿಶೀಲಿಸಲು ಸೂಚಿಸಲಾಯಿತು. ಮಣ್ಣಿನ ಸವಕಳಿಗೆ NDRF ನಲ್ಲಿ ಪರಿಹಾರ ನೀಡಲು ಅವಕಾಶವಿದೆ. ಇದನ್ನು ಕೂಡ ಪರಿಹಾರ ನೀಡಲು ಪರಿಶೀಲಿಸಬೇಕು ಎಂದು ಸೂಚಿಸಲಾಯಿತು.
• ಮನೆಹಾನಿ ಮಾಹಿತಿ ದಾಖಲಿಸಲು ಅಕ್ಟೋಬರ್ 30 ರ ವರೆಗೆ ಗಡುವು ವಿಸ್ತರಿಸಲಾಗಿದೆ. ಜಿಲ್ಲಾಧಿಕಾರಿಗಳಿಗೆ ಎಲ್ಲ ಸರ್ಕಾರಿ ಆದೇಶಗಳನ್ನು, ಮಾರ್ಗಸೂಚಿಗಳನ್ನು ಕಳುಹಿಸಲಾಗಿದೆ. ಜಿಲ್ಲಾಧಿಕಾರಿಗಳು ತ್ವರಿತವಾಗಿ ಮಾಹಿತಿ ದಾಖಲಿಸುವಂತೆ ಸೂಚಿಸಲಾಯಿತು.
• ಗ್ರಾಮೀಣಾಭಿವೃದ್ಧಿ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಜೊತೆಯಾಗಿ ಕಾರ್ಯನಿರ್ವಹಿಸಲು ಸೂಚಿಸಲಾಗಿದ್ದು, ತಾಲ್ಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಗಳಿಗೆ ಮನೆ ಹಾನಿ ಮಾಹಿತಿ ದಾಖಲಾತಿಯನ್ನು ವಾರಕ್ಕೊಮ್ಮೆ ಪರಿಶೀಲಿಸುವ ಹೊಣೆಗಾರಿಕೆ ವಹಿಸಲು ಸೂಚಿಸಿದರು.
• ವಿಪತ್ತು ನಿರ್ವಹಣೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ನಿರ್ವಹಿಸಲು ಜಿಲ್ಲಾ ತುರ್ತು ನಿರ್ವಹಣಾ ಕೇಂದ್ರ (District Disaster Center) ಸ್ಥಾಪನೆಗೆ ತಲಾ ಒಂದು ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ. ಈ ಕೇಂದ್ರವನ್ನು ಮುಂದಿನ ಒಂದು ತಿಂಗಳೊಳಗೆ ಸ್ಥಾಪಿಸಿ, ಕಾರ್ಯಾರಂಭ ಮಾಡಲು ಸಿದ್ಧತೆ ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಯಿತು.
ಚಿತ್ರದುರ್ಗ: ನಾಳೆ ಹಿರಿಯೂರು ತಾಲೂಕಿನಲ್ಲಿ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ | Power Cut
• ಪ್ರವಾಹ ಪರಿಸ್ಥಿತಿ ಇನ್ನೂ ಮುಂದುವರಿಯುತ್ತಿದೆ. ಇದನ್ನು ತಡೆಯಲು ಸಾಧ್ಯವಿಲ್ಲ. ಆದರೆ ಅತ್ಯುತ್ತಮವಾಗಿ ನಿರ್ವಹಣೆ ಮಾಡುವ ಮೂಲಕ ಹಾನಿಯ ಪ್ರಮಾಣವನ್ನು ತಗ್ಗಿಸಬೇಕು. ಕೆರೆಗಳು ಒಡೆದು ಪ್ರವಾಹ ಸಂಭವಿಸುವ ಬಗ್ಗೆ ಎಚ್ಚರ ವಹಿಸಿ. ಇದಕ್ಕೆ ಮಾರ್ಗಸೂಚಿಗಳನ್ನು ನಿಗದಿ ಪಡಿಸಬೇಕಾಗಿದೆ. ತಗ್ಗು ಪ್ರದೇಶದಲ್ಲಿ ಮಳೆಯಿಂದ ಬಾಧಿತ ಮನೆಗಳನ್ನು ಹಳ್ಳಿಗಳಿಗೆ ಹೊಂದಿಕೊಂಡಂತೇ ಸ್ಥಳಾಂತರಿಸಲು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.
• ವಿಪತ್ತು ನಿರ್ವಹಣೆಗೆ ಪರಿಹಾರ ಕ್ರಮಗಳ ಮಾರ್ಗಸೂಚಿಗಳನ್ನು ರೂಪಿಸಿ. ಸಿಬ್ಬಂದಿಗೆ ತರಬೇತಿ, ಮಾರ್ಗದರ್ಶನ ನೀಡಿ ವಿಪತ್ತು ನಿರ್ವಹಣೆಗೆ ಸಜ್ಜುಗೊಳಿಸಬೇಕು. ಗ್ರಾಮಾಂತರ ಪ್ರದೇಶದಲ್ಲಿ ಸ್ವಯಂ ಸೇವಾ ಸಂಸ್ಥೇಗಳನ್ನು ಜೊತೆಗೂಡಿಸಿ, ಸ್ಥಳೀಯರ ಸಹಯೋಗದೊಂದಿಗೆ ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕು ಎಂದು ತಿಳಿಸಿದರು.
• ಕೆರೆಗಳು ಮತ್ತು ನಾಲೆಗಳ ಸರ್ವೇ ಮಾಡಿ, ತೆರವು ಗೊಳಿಸಿ ಪ್ರವಾಹ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲು ಸೂಚಿಸಲಾಯಿತು.
• ಭೂಮಿ ಯೋಜನೆಯಡಿ ಖಾತೆ ವರ್ಗಾವಣೆಯ ನೋಟಿಸ್ ಅವಧಿಯನ್ನು 30 ರಿಂದ 15 ದಿನಗಳಿಗೆ ಇಳಿಕೆ ಮಾಡಲಾಗಿದೆ. ಇದಕ್ಕೆ ತಕ್ಕಂತೆ ಕ್ರಮ ವಹಿಸಲು ಸೂಚಿಸಿದರು.
• ತಹಸೀಲ್ದಾರ್, ಉಪವಿಭಾಗಾಧಿಕಾರಿ ಹಾಗೂ ಜಿಲ್ಲಾಧಿಕಾರಿಗಳ ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣಗಳನ್ನು ತ್ವರಿತ ವಿಲೇವಾರಿ ಮಾಡುವ ದೃಷ್ಟಿಯಿಂದ ಸಮಾನಾಂತರ ಕೇಡರ್ ಅಧಿಕಾರಿಗಳಿಗೆ ಅಧಿಕಾರ ಪ್ರತ್ಯಾಯೋಜಿಸಲಾಗುವುದು ಎಂದು ಮುಖ್ಯಮಂತ್ರಿಗಳು ತಿಳಿಸಿದರು.
• ಹೊಸ ಕಂದಾಯ ಗ್ರಾಮಗಳೆಂದು 3247 ಜನವಸತಿಗಳನ್ನು ಗುರುತಿಸಲಾಗಿದೆ. ಇದಲ್ಲಿ 2180 ಗ್ರಾಮಗಳಿಗೆ ಪ್ರಾಥಮಿಕ ಅಧಿಸೂಚನೆ ಹೊರಡಿಸಲಾಗಿದೆ. 1196 ಗ್ರಾಮಗಳಿಗೆ ಅಂತಿಮ ಅಧಿಸೂಚನೆ ಹೊರಡಿಸಲಾಗಿದೆ. 984 ಗ್ರಾಮಗಳಲ್ಲಿ ಹಕ್ಕುಪತ್ರ ವಿತರಿಸಲಾಗಿದೆ.
ಅಪ್ಪು ಬಗ್ಗೆ ಅವಹೇಳನ ಮಾಡಿದವನ ಸ್ಥಿತಿ ಏನಾಯ್ತು ಗೊತ್ತಾ? ಈ ಸುದ್ದಿ ಓದಿ.! | Puneeth Rajkumar
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ
• ಆಯುಷ್ಮಾನ್ ಭಾರತ್ ಕಾರ್ಡ್ ಯೋಜನೆ, ಪ್ರಧಾನಿಮೋದಿಯವರ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು, ರಾಜ್ಯ ಸರ್ಕಾರ ಈ ಕಾರ್ಯಕ್ರಮದ ಪರಿಣಾಮಕಾರಿ ಅನುಷ್ಠಾನವನ್ನು ಗಂಭೀರವಾಗಿ ಪರಿಗಣಿಸಿದೆ. ಪ್ರತಿ ದಿನ ನೀಡಲಾಗಿರುವ ಕಾರ್ಡ್ ವಿತರಣೆ ಗುರಿಯನ್ನು ಸಾಧಿಸಲೇಬೇಕೆಂದು ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.
• ಆಯುಷ್ಮಾನ್ ಭಾರತ್ ಆರೋಗ್ಯ ಖಾತೆ ಸೃಜನೆಯಲ್ಲಿ ಜಿಲ್ಲೆಗಳ ಪ್ರಗತಿ ಸಾಕಷ್ಟಿಲ್ಲ. ಆಭಾ ಕಾರ್ಡ್ ಗಳನ್ನು ಆರೋಗ್ಯ ಖಾತೆಗೆ ಲಿಂಕ್ ಮಾಡಬೇಕು ಎಂದು ಸೂಚಿಸಿದರು.
ನಗರಾಭಿವೃದ್ಧಿ ಇಲಾಖೆ
• ಮುಖ್ಯಮಂತ್ರಿಗಳ ಅಮೃತ ನಗರೋತ್ಥಾನ ಯೋಜನೆಯಡಿ 302 ನಗರ ಸ್ಥಳೀಯ ಸಂಸ್ಥೆಗಳಿಗೆ 3885 ಕೋಟಿ ರೂ. ಅನುದಾನ ಒದಗಿಸಲಾಗಿದೆ. ಟೆಂಡರ್ ಪ್ರಕ್ರಿಯೆ ಬಹುತೇಕ ಪೂರ್ಣಗೊಂಡಿದ್ದು, ಉಳಿದ ಜಿಲ್ಲೆಗಳಲ್ಲಿಯೇ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿ, ಮಾರ್ಚ್ 15 ರೊಳಗೆ ಕಾಮಗಾರಿ ಪೂರ್ಣಗೊಳಿಸುವಂತೆ ಸೂಚಿಸಿದರು.
• ಕಾಮಗಾರಿಗಳ ಟೆಂಡರ್ ಪ್ರಕ್ರಿಯೆಗಳಿಗೆ ಸ್ಪಷ್ಟವಾದ ನಿರ್ದೇಶನಗಳನ್ನು ಕೇಂದ್ರ ಕಚೇರಿಯಿಂದ ನೀಡುವಂತೆ ಸೂಚಿಸಲಾಯಿತು.
ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾದ ಬಹುಭಾಷಾ ನಟಿ ‘ಹನ್ಸಿಕಾ ಮೋಟ್ವಾನಿ’…ಹುಡುಗ ಯಾರು ಗೊತ್ತಾ..?
ವಸತಿ ಇಲಾಖೆ
• ನಗರ ವಸತಿ ಯೋಜನೆಗಳು ಬಡವರ ಕೆಲಸವಾಗಿದ್ದು, ಅಧಿಕಾರಿಗಳು ಹೆಚ್ಚಿನ ಪ್ರಾಮುಖ್ಯತೆ ನೀಡಬೇಕು. ಫಲಾನುಭವಿಗಳ ಆಯ್ಕೆಯನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು.
• ವಸತಿ ಯೋಜನೆಗಳಡಿ 5 ಲಕ್ಷ ಮನೆಗಳ ನಿರ್ಮಾಣ ಕಾರ್ಯವನ್ನು ಡಿಸೆಂಬರ್ ಅಂತ್ಯದೊಳಗೆ ಹಾಗೂ ನಗರ ವಸತಿ ಯೋಜನೆಯಡಿ 1 ಲಕ್ಷ ಮನೆಗಳನ್ನು ಮುಂದಿನ ಮಾರ್ಚ್ ಅಂತ್ಯದೊಳಗೆ ಪೂರ್ಣಗೊಳಿಸಲು ಸೂಚಿಸಿದರು.
ಸಮಾಜ ಕಲ್ಯಾಣ ಇಲಾಖೆ
• ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ವಿದ್ಯಾರ್ಥಿ ನಿಲಯಗಳ ನಿರ್ಮಾಣಕ್ಕೆ ನಿವೇಶನ ಗುರುತಿಸಿ ಒದಗಿಸಲು ಒತ್ತು ನೀಡುವಂತೆ ಸೂಚಿಸಲಾಯಿತು. ನಗರ ಪ್ರದೇಶದ ಸರ್ಕಾರಿ ಜಮೀನನ್ನು ಗುರುತಿಸಿ, ವಶಕ್ಕೆ ಪಡೆದುಕೊಂಡು ಇಂತಹ ಉದ್ದೇಶಗಳಿಗೆ ಬಳಸಿಕೊಳ್ಳುವಂತೆ ತಿಳಿಸಿದರು.
• ದೌರ್ಜನ್ಯ ತಡೆ ಅಧಿನಿಯಮದಡಿ ದಾಖಲಾಗಿರುವ ಕೊಲೆ ಪ್ರಕರಣಗಳಲ್ಲಿ, ಮೃತರ ಕುಟುಂಬದ ಅವಲಂಬಿತರಿಗೆ ಅನುಕಂಪದ ಆಧಾರದಲ್ಲಿ ಸರ್ಕಾರಿ ನೌಕರಿ ನೀಡಲು ಬಾಕಿ ಇರುವ ಪ್ರಸ್ತಾವನೆಗಳನ್ನು ಪ್ರಾದೇಶಿಕ ಆಯುಕ್ತರು ತ್ವರಿತವಾಗಿ ವಿಲೇವಾರಿಗೊಳಿಸಲು ತಿಳಿಸಿದರು. ಜಿಲ್ಲಾಧಿಕಾರಿಗಳೂ ಪ್ರಸ್ತಾವನೆಗಳನ್ನು ಸಲ್ಲಿಸುವಾಗ ಪೂರ್ಣ ದಾಖಲೆಗಳೊಂದಿಗೆ ಸಲ್ಲಿಸುವುದನ್ನು ಖಾತರಿಪಡಿಸಲು ಸೂಚಿಸಿದರು.
• ಮಾಜಿ ಸೈನಿಕರಿಗೆ ನಿವೇಶನ ನೀಡುವ ಕುರಿತು, ನಗರದ ಹೊಂದಿಕೊಂಡಿರುವಂತೆ ಜಾಗ ಗುರುತಿಸಿ, ನಿವೇಶನ ಹಂಚಿಕೆಗೆ ಕ್ರಮ ಕೈಗೊಳ್ಳುವಂತೆ ಸೂಚನೆ.
ಕೃಷಿ ಇಲಾಖೆ
• ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಇಂದು ಪಿಎಂ ಕಿಸಾನ್ ಯೋಜನೆಯ 12 ನೇ ಕಂತಿನ ನೆರವನ್ನು ಬಿಡುಗಡೆ ಮಾಡಿದ್ದು, ರಾಜ್ಯದ 50.36 ಲಕ್ಷ ರೈತರಿಗೆ 1007.26 ಕೋಟಿ ರೂ. ಬಿಡುಗಡೆ ಮಾಡಲಾಗಿದೆ.
• ಪಿಎಂ ಕಿಸಾನ್ ಇ-ಕೆವೈಸಿ ಶೇ. 69 ಸಾಧನೆ ಆಗಿದೆ. ಇದನ್ನು ಗ್ರಾಮೀಣ ಪ್ರದೇಶದಲ್ಲಿ ಆಂದೋಲನದ ಮಾದರಿಯಲ್ಲಿ ಪೂರ್ಣಗೊಳಿಸಲು ಸೂಚನೆ.
• ರಸಗೊಬ್ಬರ ವಿತರಣೆಯಲ್ಲಿ ನಿಗಾ ವಹಿಸಲು ಸೂಚಿಸಲಾಯಿತು. ಕಾಳಸಂತೆಯಲ್ಲಿ ಮಾರಾಟ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ತಿಳಿಸಲಾಯಿತು. ಸಾರಿಗೆ ಸಮಸ್ಯೆಯಿಂದಾಗಿ ರಸಗೊಬ್ಬರ ಕೊರತೆಯಾದಂತೆ ಎಚ್ಚರ ವಹಿಸುವಂತೆ ಸೂಚಿಸಲಾಯಿತು.
• ಬೆಳೆವಿಮೆಯಲ್ಲಿ ಪ್ರಿಮಿಯಂ ಮೊತ್ತಕ್ಕಿಂತ ಕಡಿಮೆ ಮೊತ್ತದ ಬೆಳೆವಿಮೆ ಪರಿಹಾರ ವಿತರಣೆಯಾಗುತ್ತಿರುವ ಕುರಿತು ಕಳವಳ ವ್ಯಕ್ತಪಡಿಸಿದ ಮುಖ್ಯಮಂತ್ರಿಯವರು, ಅಧಿಕಾರಿಗಳು ರೈತರಿಗೆ ಬೆಳೆವಿಮೆ ಪಡೆಯಲು ಪೂರಕವಾಗಿ ಕಾರ್ಯನಿರ್ವಹಿಸಬೇಕು. ಬೆಳೆವಿಮೆ ಕುರಿತಂತೆ ಕೇಂದ್ರ ಸರ್ಕಾರವು ಕಾರ್ಯಾಗಾರ ನಡೆಸುತ್ತಿದ್ದು, ಅನಂತರ ರಾಜ್ಯದಲ್ಲಿಯೂ ಅಧಿಕಾರಿಗಳಿಗೆ ಕಾರ್ಯಾಗಾರ ನಡೆಸುವಂತೆ ಸೂಚಿಸಿದರು.
• ಪಿಎಂ ಸ್ವನಿಧಿ ಯೋಜನೆಯಡಿ ರಾಜ್ಯದಲ್ಲಿ ಈ ವರೆಗೆ 2.72 ಲಕ್ಷ ಬೀದಿಬದಿ ವ್ಯಾಪಾರಿಗಳಿಂದ ಸಾಲ ಸೌಲಭ್ಯಕ್ಕಾಗಿ ಅರ್ಜಿ ಸ್ವೀಕರಿಸಲಾಗಿದ್ದು, 2.08 ಲಕ್ಷ ವ್ಯಾಪಾರಿಗಳಿಗೆ 246.79 ಕೋಟಿ ರೂ. ಸಾಲ ಮಂಜೂರು ಮಾಡಲಾಗಿದೆ. ಬೀದಿ ಬದಿ ವ್ಯಾಪಾರಿಗಳಿಗೆ ಸಾಲ ಸೌಲಭ್ಯ ಒದಗಿಸುವ ಕುರಿತು ಬ್ಯಾಂಕುಗಳು ಅರ್ಜಿ ತಿರಸ್ಕರಿಸುವ ಕುರಿತು ಬ್ಯಾಂಕರುಗಳೊಂದಿಗೆ ನಿಯಮಿತವಾಗಿ ಸಭೆ ನಡೆಸಿ, ತಿರಸ್ಕೃತ ಅರ್ಜಿಗಳ ಪುನರ್ ಪರಿಶೀಲನೆ ನಡೆಸಬೇಕು ಹಾಗೂ ಕೇಂದ್ರ ಸರ್ಕಾರ ಗುರಿ ಹೆಚ್ಚಿಸಿದ್ದು, ಇನ್ನಷ್ಟು ಅರ್ಜಿಗಳನ್ನು ಆಹ್ವಾನಿಸಲು ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
• ಇದಲ್ಲದೆ 2 ಮತ್ತು 3ನೇ ಹಂತದ ಸಾಲ ಸೌಲಭ್ಯದ ಕುರಿತು ಹೆಚ್ಚಿನ ಅರಿವು ಮೂಡಿಸುವಂತೆ ಸೂಚಿಸಲಾಯಿತು.
ನಿರ್ದೇಶನಗಳನ್ನು ಕಾರ್ಯಗತಗೊಳಿಸಿ
• ಸಭೆಯಲ್ಲಿ ನೀಡಿರುವ ನಿರ್ದೇಶನಗಳು ಸಂಪೂರ್ಣವಾಗಿ ಕಾರ್ಯಗತವಾಗಬೇಕು. ಅನುಷ್ಠಾನದ ಹಂತದಲ್ಲಿ ನಿಮ್ಮ ಅನುಭವಗಳನ್ನು ಹಂಚಿಕೊಳ್ಳಬೇಕು. ನೀವು ಕ್ರಿಯಾಶೀಲರಾಗಿ, ಜನಸ್ನೇಹಿಗಳಾಗಿ ಕೆಲಸ ಮಾಡಬೇಕು.
• ನೀವು ನಿಮ್ಮ ಜಿಲ್ಲೆಗಳಲ್ಲಿ ಪ್ರವಾಸ ಮಾಡಬೇಕು. ಕ್ಷೇತ್ರ ಮಟ್ಟದಲ್ಲಿ ಪರಿಶೀಲನೆ ನಡೆಸಬೇಕು. ಸರ್ಕಾರದ ಯೋಜನೆಗಳ ಅನುಷ್ಠಾನ ಪರಿಶೀಲಿಸಬೇಕು.
• ದಿಢೀರ್ ಭೇಟಿ ನೀಡುವ ಮೂಲಕ ಆಡಳಿತಕ್ಕೆ ಚುರುಕು ಮುಟ್ಟಿಸಬೇಕು. ಜನರ ಪರವಾಗಿ ಕೆಲಸ ಮಾಡಲು ಹಿಂದೆಮುಂದೆ ನೋಡಬೇಡಿ. ಯೋಜನೆಗಳ ಅನುಷ್ಠಾನದಲ್ಲಿ ತೊಡಕುಗಳನ್ನು ಗಮನಕ್ಕೆ ತನ್ನಿ, ಸರಿ ಪಡಿಸಲಾಗುವುದು. ಆದರೆ ಅನಿಶ್ಚಿತತೆಯಲ್ಲಿ ಕಾಲ ದೂಡಬೇಡಿ. ಆಯವ್ಯಯ ಘೋಷಣೆಗಳ ಅನುಷ್ಠಾನಕ್ಕೆ ಒತ್ತು ನೀಡಿ.
• ಇದರಿಂದ ಸರ್ಕಾರದ ಮೇಲೆ ವಿಶ್ವಾಸ ಮೂಡಲು ಸಾಧ್ಯ. ನೀವು ಹೆಚ್ಚಿನ ಆಸಕ್ತಿ ವಹಿಸಿ ಕಾರ್ಯನಿರ್ವಹಿಸಬೇಕು. ಆಯವ್ಯಯ ಅನುಷ್ಠಾನ ಅತಿ ಮುಖ್ಯವಾದುದು. ಶಾಲಾ ಕಟ್ಟಡ, ವಿದ್ಯಾರ್ಥಿ ನಿಲಯ ನಿರ್ಮಾಣ, ಯಶಸ್ವಿನಿ ಯೋಜನೆ, ಅಮೃತ್ ಯೋಜನೆ, ಮತ್ತಿತರ ಮಹತ್ವಾಕಾಂಕ್ಷಿ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿ.
• ಕಾರ್ಯಕ್ರಮ ಅನುಷ್ಠಾನದಲ್ಲಿ ನಿಮ್ಮ ನಾಯಕತ್ವ ಗುಣ ಪ್ರದರ್ಶಿಸಿ. ಜನರ ಅಹವಾಲು ಸ್ವೀಕರಿಸಿ. ಸಾರ್ವಜನಿಕರ ಸಂದರ್ಶನಕ್ಕೆ ಸಮಯ ನಿಗದಿ ಪಡಿಸಿ. ಅವರ ಸಮಸ್ಯೆಗಳನ್ನು ಬಗೆಹರಿಸಿ. ನಿಮ್ಮ ಅನುಭವದಿಂದ ಇದು ಸಾಧ್ಯ. ನಿಮ್ಮ ಪ್ರತಿ ಚಟುವಟಿಕೆಯೂ ಫಲಿತಾಂಶ ಕೇಂದ್ರಿತ ಹಾಗೂ ಕಾಲಮಿತಿಯನ್ನು ಹೊಂದಿರಬೇಕು ಎಂದು ಸೂಚಿಸಿದರು.