ಬಳ್ಳಾರಿ: ಭ್ರಷ್ಟ ಬಿಜೆಪಿ ಸರ್ಕಾರ ಕಿತ್ತೊಗೆಯಲು, ಕಾಂಗ್ರೆಸ್ ಪಕ್ಷಕ್ಕೆ 150 ಸ್ಥಾನ ಕೊಡಲು ಜನ ಈಗಾಗಲೇ ಸಂಕಲ್ಪ ಮಾಡಿದ್ದಾರೆ. ಈ ಯಾತ್ರೆಯಲ್ಲಿ ಜನ ನೀಡುತ್ತಿರುವ ಬೆಂಬಲ ನೋಡಿದರೆ ಕಾಂಗ್ರೆಸ್ 150 ಸ್ಥಾನ ಗೆಲ್ಲುವುದು ಖಚಿತ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ವಿಶ್ವಾಸ ವ್ಯಕ್ತ ಪಡಿಸಿದ್ದಾರೆ.
ಇಂದು ಭಾರತ್ ಜೋಡೋ ಯಾತ್ರೆ ವೇಳೆಯಲ್ಲಿ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಕರ್ನಾಟಕ ರಾಜ್ಯದಲ್ಲಿ ಭಾರತ ಐಕ್ಯತಾ ಯಾತ್ರೆಗೆ ಜನ ಮತ್ತು ಮಾಧ್ಯಮಗಳಿಂದ ಉತ್ತಮ ಪ್ರೋತ್ಸಾಹ, ಸಹಕಾರ ಸಿಕ್ಕಿದೆ. ರಾಜ್ಯದಲ್ಲಿ ಚುನಾವಣೆ ಎದುರಾಗುತ್ತಿದೆ. ಈ ಚುನಾವಣೆಯಲ್ಲಿ ಕಾಂಗ್ರೆಸ್ 150 ಸ್ಥಾನ ಗೆಲ್ಲುವುದಾಗಿ ಹೇಳಿದ್ದೇನೆ. ಬಿಜೆಪಿಯವರು ನಾವು ಬೇರೆಡೆಯಿಂದ ಜನ ಕರೆದುಕೊಂಡು ಬಂದಿದ್ದೇವೆ ಎಂದು ಹೇಳುತ್ತಿದ್ದಾರೆ ಎಂದರು.
ರಾಜಕಾರಣದಲ್ಲಿ ಜನ ಸಂಘಟನೆ ಮಾಡಬೇಕಾದರೆ, ರಾಷ್ಟ್ರಮಟ್ಟದ ಪಾದಯಾತ್ರೆ ಮಾಡುವಾಗ ಎಲ್ಲರಿಗೂ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ. ಈ ಯಾತ್ರೆಯಲ್ಲಿ ಪಕ್ಷಬೇಧ ಮರೆತು ಸಹಸ್ರಾರು ಜನ ಭಾಗವಹಿಸಿದ್ದಾರೆ. ಅವರು ತೋರಿದ ಪ್ರೀತಿ, ವಿಶ್ವಾಸ ಅಪಾರ. ಶ್ರಮ ಇದ್ದಲಿ ಫಲ ಎಂಬುದರಲ್ಲಿ ನಮಗೆ ನಂಬಿಕೆ ಇದೆ. ರಾಜಕಾರಣದಲ್ಲಿರುವಾಗ ದೇಶದಲ್ಲಿ ಬದಲಾವಣೆ ತಂದು ಸಾಧನೆ ಮಾಡಬೇಕು. ದೇಶ ಒಡೆಯಲಾಗುತ್ತಿದ್ದು, ದ್ವೇಷ, ಆರ್ಥಿಕ ಸಂಕಷ್ಟ, ನಿರುದ್ಯೋಗ, ದುರಾಡಳಿತ ಹೆಚ್ಚಾಗಿದೆ. ಇದರಿಂದ ಬೇಸತ್ತು ಜನ ಹೆಚ್ಚು ಸಂಖ್ಯೆಯಲ್ಲಿ ಈ ಯಾತ್ರೆಯಲ್ಲಿ ಭಾಗವಹಿಸುತ್ತಿದ್ದಾರೆ ಎಂದು ಹೇಳಿದರು.
ನಾವು ಮಕ್ಕಳನ್ನು ಕರೆತಂದಿಲ್ಲ. ಅವರೇ ಓಡೋಡಿ ಬಂದು ಯಾತ್ರೆಯಲ್ಲಿ ಭಾಗವಹಿಸಿದ್ದಾರೆ. ಅವರ ಭಾವನೆಯನ್ನು ನಾವು ತಡೆಯಲು ಸಾಧ್ಯವೇ? ಮಕ್ಕಳು, ರೈತರು, ಮಹಿಳೆಯರು, ಕಾರ್ಮಿಕರು ಸೇರಿ ಎಲ್ಲ ವರ್ಗದ ಜನರ ಜತೆಗಿನ ರಾಹುಲ್ ಗಾಂಧಿ ಅವರ ಮಾತುಕತೆ ಸಂದರ್ಭ ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗಿದೆ ಎಂದರು.
ರಾಹುಲ್ ಗಾಂಧಿ ಅವರು ಕೇವಲ ಒಂದು ಮಗು, ಒಬ್ಬ ಯುವಕ, ಒಬ್ಬ ರೈತ, ಕಾರ್ಮಿಕ, ಮಹಿಳೆ ಜತೆ ಮಾತನಾಡಿದ್ದಲ್ಲ. ಎಲ್ಲ ವರ್ಗದ ಜನ ಸಮೂಹದ ಜತೆ ಮಾತುಕತೆ ನಡೆಸಿದ್ದಾರೆ. ಅವರ ನೋವು, ಕಷ್ಟ, ಭಾವನೆ ಅರಿತು, ಮುಂದೆ ಜನ ಆಶೀರ್ವಾದ ಮಾಡಿದಾಗ ಅವರಿಗೆ ಸರಿಯಾದ ರೀತಿಯಲ್ಲಿ ಪರಿಹಾರ ನೀಡುವ ಚಿಂತನೆ ಅವರದಾಗಿದೆ ಎಂದರು.
ಇಂದು ಬಳ್ಳಾರಿಯಲ್ಲಿ ಯಾತ್ರೆ ಮುಕ್ತಾಯವಾಗಿದ್ದು, ನಾಳೆ ಎಐಸಿಸಿ ಅಧ್ಯಕ್ಷ ಸ್ಥಾನದ ಚುನಾವಣೆ ಇದೆ. ಸಂಸದ ಡಿ ಕೆ ಸುರೇಶ್, ಉಗ್ರಪ್ಪ, ಶಾಸಕ ನಾಗೇಂದ್ರ ಸೇರಿದಂತೆ ಕೆಲವು ನಾಯಕರನ್ನು ಯಾತ್ರಿಗಳು ಎಂದು ಪರಿಗಣಿಸಿ, ಅವರಿಗೆ ಇಲ್ಲೇ ಮತ ಚಲಾಯಿಸುವ ಅವಕಾಶ ನೀಡಬೇಕು ಎಂದು ಮನವಿ ಮಾಡಲಾಗಿದೆ. ಉಳಿದವರು ಬೆಂಗಳೂರಿನಲ್ಲಿ ಮತ ಚಲಾಯಿಸಲಿದ್ದಾರೆ. ನಮ್ಮ ರಾಜ್ಯದವರೇ ಅಭ್ಯರ್ಥಿಯಾಗಿದ್ದು, ಎಲ್ಲರೂ ಚುನಾವಣೆಯಲ್ಲಿ ಉತ್ಸುಕರಾಗಿ ಭಾಗವಹಿಸಲಿದ್ದಾರೆ. ಗಾಂಧಿ ಕುಟುಂಬ ಈ ಚುನಾವಣೆಯಲ್ಲಿ ಯಾವುದೇ ಹಸ್ತಕ್ಷೇಪ ಮಾಡದೆ ಪಕ್ಷದವರಿಗೆ ಸಂಪೂರ್ಣ ಜವಾಬ್ದಾರಿ ನೀಡಿದ್ದು, ಈ ಚುನಾವಣೆ ಪಾರದರ್ಶಕವಾಗಿ ನಡೆಯುತ್ತಿದೆ ಎಂದು ಹೇಳಿದರು.
ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರು ಭಾರತ ಐಕ್ಯತಾ ಯಾತ್ರೆ ಬಗ್ಗೆ ಮಾಡಿರುವ ಟೀಕೆ ಬಗ್ಗೆ ಕೇಳಿದ ಪ್ರಶ್ನೆಗೆ, ‘ ಬಿಜೆಪಿ ಜನ ಸ್ಪಂದನ ಸಮಾವೇಶ ಮಾಡಿತು. ಹಾಗಾದರೆ ಅವರು ಇಷ್ಟು ದಿನ ಜನರಿಗೆ ಸ್ಪಂದಿಸಿರಲಿಲ್ಲವೆ? ಅವರು ಅಧಿಕಾರದಲ್ಲಿದ್ದಾಗ ಜನರ ಮಧ್ಯೆ ಇದ್ದು, ಅವರ ಕಷ್ಟಕ್ಕೆ ಸ್ಪಂದಿಸಲಿಲ್ಲವೆ? ನೀವು ನಿಮ್ಮ ಅಧಿಕಾರ ಅವಧಿಯಲ್ಲಿ ಏನು ಸಾಧನೆ ಮಾಡಿದ್ದೀರಿ ಎಂದು ಹೇಳುವ ಬದಲು ಬೇಕಾಬಿಟ್ಟಿ ಹೇಳಿಕೆ, ಜಾಹೀರಾತು ನೀಡುತ್ತಿದ್ದೀರಿ. ಈಗ ಜನ ಸಂಕಲ್ಪ ಮಾಡುತ್ತಿದ್ದಾರೆ. ಭ್ರಷ್ಟ ಬಿಜೆಪಿ ಸರ್ಕಾರ ಕಿತ್ತೊಗೆಯಲು, ಕಾಂಗ್ರೆಸ್ ಪಕ್ಷಕ್ಕೆ 150 ಸ್ಥಾನ ಕೊಡಲು ಜನ ಈಗಾಗಲೇ ಸಂಕಲ್ಪ ಮಾಡಿದ್ದಾರೆ. ಈ ಯಾತ್ರೆಯಲ್ಲಿ ಜನ ನೀಡುತ್ತಿರುವ ಬೆಂಬಲ ನೋಡಿದರೆ ಕಾಂಗ್ರೆಸ್ 150 ಸ್ಥಾನ ಗೆಲ್ಲುವುದು ಖಚಿತ ‘ ಎಂದು ಉತ್ತರಿಸಿದರು.
ಕಾಂಗ್ರೆಸ್ ಭಾರತ ಜೋಡೋ ಬದಲು, ಡಿ.ಕೆ. ಶಿವಕುಮಾರ್, ಸಿದ್ದರಾಮಯ್ಯ ಅವರ ಜೋಡೋ ಮಾಡಲಿ ಎಂಬ ಬಿಜೆಪಿ ಲೇವಡಿ ಬಗ್ಗೆ ಕೇಳಿದಾಗ, ‘ ನಮ್ಮಿಬ್ಬರನ್ನು ನೆನಪಿಸಿಕೊಳ್ಳದಿದ್ದರೆ ಅವರಿಗೆ ಸಮಾಧಾನ ಆಗುವುದಿಲ್ಲ. ಬೆಳಗ್ಗೆ ಎದ್ದಾಗಿನಿಂದ ರಾತ್ರಿ ಮಲಗುವವರೆಗೆ ಅವರು ನಮ್ಮನ್ನು ನೆನಪಿಸಿಕೊಳ್ಳುತ್ತಿದ್ದಾರೆ. ಬಹಳ ಸಂತೋಷ ‘ ಎಂದು ಕುಟುಕಿದರು.
ರಾಹುಲ್ ಗಾಂಧಿ ಅವರನ್ನು ಬಚ್ಚಾ ಎಂದು ಕರೆದಿರುವ ಬಗ್ಗೆ ಕೇಳಿದ ಪ್ರಶ್ನೆಗೆ, ‘ ಯಡಿಯೂರಪ್ಪ, ಯತ್ನಾಳ್, ಶ್ರೀರಾಮುಲು ಸೇರಿದಂತೆ ಯಾರು ಬೇಕಾದರೂ ರಾಹುಲ್ ಗಾಂಧಿ ಅವರ ಬಗ್ಗೆ ಮಾತನಾಡಲಿ. ಆದರೆ ಚಡ್ಡಿ ಹಾಕಿರುವ ಬಚ್ಚಾ ಮುಂದೆ ಪ್ಯಾಂಟು ಧರಿಸಿ, ಪಂಚೆ ಕಚ್ಚೆ ಕಟ್ಟಿ, ಕೆಲಸ ಮಾಡುತ್ತಿರುವವರನ್ನು ಜನ ಗಮನಿಸುತ್ತಿದ್ದಾರೆ. ಅವರ ವಯಸ್ಸಿನ ಮುಂದೆ, ಅವರ ಹಿರಿತನದ ಮುಂದೆ ನಾವು ಬಚ್ಚಾಗಳೇ. ಯಡಿಯೂರಪ್ಪ ಅವರನ್ನು ಯಾಕೆ ಅಧಿಕಾರದಿಂದ ತೆಗೆದಿರಿ ಎಂದು ರಾಹುಲ್ ಗಾಂಧಿ ಅವರು ಗೌರವಯುತವಾಗಿ ಕೇಳಿದ್ದಾರೆ. ಯಡಿಯೂರಪ್ಪ ಅವರು ಅದನ್ನು ಅರಿಯಬೇಕು ‘ ಎಂದರು.
ಕಾಂಗ್ರೆಸ್ ಪಕ್ಷ ಮುಂದೆ ಮಾಡಲಿರುವ ಬಸ್ ಯಾತ್ರೆ ಬಗ್ಗೆ ಕೇಳಿದ ಪ್ರಶ್ನೆಗೆ, ‘ ರಾಜ್ಯದ ಎಲ್ಲ ಕ್ಷೇತ್ರಗಳನ್ನೂ ಮುಟ್ಟಬೇಕು ಎಂಬ ಕಾರಣಕ್ಕೆ ನಾನು, ಸಿದ್ದರಾಮಯ್ಯ ಅವರು ಹಾಗೂ ಎಐಸಿಸಿ ನಾಯಕರು ಕೂತು ಚರ್ಚಿಸಿ ಈ ಬಗ್ಗೆ ತೀರ್ಮಾನ ಮಾಡಿದ್ದೇವೆ. ಮುಂದೆ ಈ ಬಗ್ಗೆ ಮಾಹಿತಿ ನೀಡುತ್ತೇವೆ ‘ ಎಂದರು.
ಕಾಂಗ್ರೆಸ್ ತಂತ್ರಗಳನ್ನು ಬಿಜೆಪಿ ನಕಲು ಮಾಡುತ್ತಿದೆಯೇ ಎಂಬ ಪ್ರಶ್ನೆಗೆ, ‘ ಜನರನ್ನು ಮರೆತು ಮಲಗಿರುವ ಸರ್ಕಾರವನ್ನು ನಾವು ಬಡಿದೆಬ್ಬಿಸುತ್ತಿದ್ದೇವೆ ‘ ಎಂದರು.
ಈ ಯಾತ್ರೆ ಯಶಸ್ಸು ಆಗಿದೆಯೇ ಎಂದು ಕೇಳಿದಾಗ, ‘ ಈ ಯಾತ್ರೆ ನೋಡಿ ನಿಮಗೆ ಏನು ಅನಿಸುತ್ತಿದೆ? ನಿಮ್ಮ ಕ್ಯಾಮೆರಾ, ನಿಮ್ಮ ಸಂದರ್ಶನ, ವಿಶ್ಲೇಷಣೆ ಏನು ಹೇಳುತ್ತಿದೆ? ನಮ್ಮ ಯಾತ್ರೆ ಜನರ ಕಷ್ಟಕ್ಕೆ ಸ್ಪಂದಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ ಎಂದು ಎಲ್ಲರೂ ಅಭಿಪ್ರಾಯ ಪಟ್ಟಿದ್ದಾರೆ. ಈ ಯಾತ್ರೆ ಯಶಸ್ಸಿನ ಶ್ರೇಯ ಪಕ್ಷದ ಎಲ್ಲ ನಾಯಕರು, ಕಾರ್ಯಕರ್ತರಿಗೆ ಸಲ್ಲಬೇಕು ‘ ಎಂದರು.
ಎಐಸಿಸಿ ಅಧ್ಯಕ್ಷ ಸ್ಥಾನದ ಚುನಾವಣೆ ಬಗ್ಗೆ ಕೇಳಿದಾಗ, ‘ ಈ ಬಗ್ಗೆ ಮಾಧ್ಯಮಗಳಲ್ಲಿ ಮಾತನಾಡುವುದಿಲ್ಲ. ಮತದಾರರ ಬಳಿ ನೇರವಾಗಿ ಮಾತನಾಡುತ್ತೇನೆ. ನನ್ನನ್ನು ಸಿಲುಕಿಸುವ ಪ್ರಯತ್ನ ಮಾಡಬೇಡಿ ‘ ಎಂದರು.
ಸೋನಿಯಾ ಗಾಂಧಿ ಅವರು ರಾಜ್ಯಕ್ಕೆ ಬಂದರೂ ಮಾತನಾಡಲಿಲ್ಲ ಎಂಬ ಪ್ರಶ್ನೆಗೆ, ‘ ಮೋದಿ ಅವರು ಎಂದಾದರೂ ಪತ್ರಿಕಾಗೋಷ್ಠಿ ನಡೆಸಿದ್ದಾರಾ? ರಾಹುಲ್ ಗಾಂಧಿ ಅವರು ಎಲ್ಲೆಡೆ ಮಾತನಾಡುತ್ತಿದ್ದಾರಲ್ಲಾ’ ಎಂದರು.
ಪ್ರಿಯಾಂಕಾ ಗಾಂಧಿ ಅವರ ಆಗಮನದ ಬಗ್ಗೆ ಕೇಳಿದಾಗ, ‘ ಅವರು ಸಿಮ್ಲಾ ಚುನಾವಣಾ ಪ್ರಚಾರದಲ್ಲಿದ್ದಾರೆ. ಇಂದು ದೆಹಲಿಗೆ ಹೋಗಿದ್ದು, ರಾಜ್ಯದಲ್ಲಿ ಇನ್ನೂ ಎರಡು ದಿನ ಯಾತ್ರೆ ಬಾಕಿ ಇದೆ. ಅವರ ಭಾಗವಹಿಸುವಿಕೆ ಬಗ್ಗೆ ಶೀಘ್ರದಲ್ಲಿ ತಿಳಿಸುತ್ತೇನೆ ಎಂದರು.
ಬಳ್ಳಾರಿಯಲ್ಲಿ ಸಮಾವೇಶ ಮಾಡಲು ಕಾರಣ ಏನು ಎಂಬ ಪ್ರಶ್ನೆಗೆ, ‘ ಈ ಯಾತ್ರೆ ಸುದೀರ್ಘವಾಗಿ ನಡೆದು, ಒಂದಷ್ಟು ಅನುಭವ ಪಡೆದ ನಂತರ ಸಮಾವೇಶ ಮಾಡಲು ತೀರ್ಮಾನ ಮಾಡಲಾಗಿತ್ತು. ಹೀಗಾಗಿ 20 ದಿನಗಳ ಯಾತ್ರೆ ನಂತರ ಬಳ್ಳಾರಿಯಲ್ಲಿ ಮಾಡಿದ್ದೇವೆ. ರಾಯಚೂರಿನಲ್ಲಿ ಮಾಡುವ ಚರ್ಚೆ ನಡೆಯಿತು. ಅಲ್ಲಿ ತೆಲಂಗಾಣ ರಾಜ್ಯದವರೂ ಆಗಮಿಸುವುದಾಗಿ ಹೇಳಿದ್ದರು. ಆದರೆ ನಾವು ಅದನ್ನು ಒಪ್ಪದೇ ಬಳ್ಳಾರಿಯಲ್ಲಿ ಮಾಡಿದ್ದೇವೆ’ ಎಂದರು.
ಈ ಯಾತ್ರೆ ನಂತರ ರಾಜ್ಯದಲ್ಲಿ ನಾಯಕತ್ವಕ್ಕೆ ಬಲ ಬಂದಿದೆಯೇ ಎಂಬ ಪ್ರಶ್ನೆಗೆ, ‘ ಪಕ್ಷಕ್ಕೆ ಶಕ್ತಿ ಬಂದಿದ್ದು, ನನ್ನ ಆರೋಗ್ಯ ಗಟ್ಟಿಯಾಗಿದೆ. ನನ್ನ ಅನುಭವ ಹೆಚ್ಚಾಯ್ತು. ನಾನು ರಾಜ್ಯ ಹಾಗೂ ಬೇರೆ ರಾಜ್ಯಗಳಲ್ಲೂ ಇಂತಹ ಹಲವು ಸಂಘಟನೆ ಮಾಡಿದ್ದೇನೆ. ನಮ್ಮ ರಾಜ್ಯದಲ್ಲಿ ಯಾತ್ರೆ ಮಾಡಿದ್ದೇನೆ. ಮೇಕೆದಾಟು ಯಾತ್ರೆ, ಸ್ವಾತಂತ್ರ್ಯ ನಡಿಗೆ ನೋಡಿದ್ದೀರಿ. ಜತೆಗೂಡುವುದು ಆರಂಭ, ಜತೆಗೂಡಿ ಯೋಚಿಸುವುದು ಪ್ರಗತಿ, ಜತೆಗೂಡಿ ಕೆಲಸ ಮಾಡುವುದು ಯಶಸ್ಸು ಎಂಬಂತೆ ಎಲ್ಲ ಕಾರ್ಯಕರ್ತರ, ನಾಯಕರನ್ನು ಸೇರಿಸಿ ಈ ಕಾರ್ಯಕ್ರಮ ಮಾಡಲಾಗಿದೆ ‘ ಎಂದರು.
ಆರು ತಿಂಗಳ ಮುಂಚಿತವಾಗಿ ಚುನಾವಣೆ ಅಭ್ಯರ್ಥಿ ಘೋಷಣೆ ಬಗ್ಗೆ ಕೇಳಿದ ಪ್ರಶ್ನೆಗೆ, ‘ ನಾವು ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಅಂತಿಮ ಘಟ್ಟಕ್ಕೆ ತಲುಪಿದ್ದು, ಯಾತ್ರೆ ಮುಗಿದ ನಂತರ ಮಾತನಾಡುತ್ತೇನೆ. ಯಾರ ಶಕ್ತಿ ಏನು ಎಂದು ನೋಡಿದ್ದೇವೆ. ಪಾದಯಾತ್ರೆಗೆ ಶ್ರಮಿಸುವವರು, ಜನರ ಬಳಿ ಕೆಲಸ ಮಾಡಿರುವವರು, ಜನರ ಪ್ರೀತಿ ವಿಶ್ವಾಸ ಉಳಿಸಿಕೊಂಡಿರುವವರನ್ನು ಗಮನದಲ್ಲಿ ಇಟ್ಟುಕೊಂಡಿದ್ದೇವೆ’ ಎಂದರು.