ಕೆಎನ್ಎನ್ಸಿನಿಮಾಡೆಸ್ಕ್: ಬ್ಯಾಕ್ ಟು ಬ್ಯಾಕ್ ದಾಖಲೆಗಳನ್ನು ಸೃಷ್ಟಿಸಿ ರಿಲೀಸ್ ಗೆ ಡೇ ಕೌಂಟ್ ಮಾಡ್ತಿರುವ ಪ್ಯಾನ್ ಇಂಡಿಯಾ ಚಿತ್ರ ಬನಾರಸ್. ಈ ಚಿತ್ರತಂಡ ಸದ್ಯ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದೆ. ನವ ನಾಯಕ ಝೈದ್ ಖಾನ್ ತಮ್ಮ ಚೊಚ್ಚಲ ಚಿತ್ರ ರಿಲೀಸ್ ಗೂ ಮೊದಲೇ ಕನ್ನಡವೂ ಸೇರಿದಂತೆ ಪಂಚ ಭಾಷೆಗಳಲ್ಲೂ ಸಿಗ್ತಿರೋ ರೆಸ್ಪಾನ್ಸ್ ಗೆ ಫುಲ್ ಥ್ರಿಲ್ ಆಗಿದ್ದಾರೆ. ಇದೇ ನವೆಂಬರ್ 4 ರಂದು ಥಿಯೇಟರ್ ಗೆ ಭರ್ಜರಿ ಎಂಟ್ರಿ ಕೊಡ್ತಿರೋ ಬನಾರಸ್ ಗೆ ಕೆಲವೇ ದಿನಗಳು ಬಾಕಿ ಇರೋದ್ರಿಂದ ನಿರ್ದೇಶಕ ಜಯತೀರ್ಥ ಸೇರಿದಂತೆ ನಾಯಕ ಝೈದ್ ಖಾನ್, ನಾಯಕಿ ಸೋನಲ್ ಮೊಂತೇರೋ ಹಲವು ದಿನಗಳಿಂದ ಬೇರೆ ರಾಜ್ಯಗಳಲ್ಲಿ ಪ್ರಚಾರ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.
ಹೀಗೆ ರಾಜ್ಯ ರಾಜ್ಯಗಳನ್ನ ಸುತ್ತಿ ಮಾಧ್ಯಮದವರನ್ನು ಮುಖಾಮುಖಿಯಾಗೋ ಮೂಲಕ ಝೈದ್ ಖಾನ್ ಮತ್ತು ಸೋನಲ್ ಬನಾರಸ್ ಪಬ್ಲಿಸಿಟಿಯಲ್ಲಿ ಬ್ಯುಸಿಯಾಗಿದ್ದಾರೆ. ಅದರ ಜೊತೆ ಜೊತೆಗೇ ಆಯಾ ಭಾಗಗಳಲ್ಲಿ ಸಿಗುವ ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳಿಗೂ ಭೇಟಿ ನೀಡಿ ಆಶೀರ್ವಾದವನ್ನೂ ಪಡೆದುಕೊಳ್ತಿದ್ದಾರೆ. ಅದರ ಭಾಗವಾಗಿಯೇ ಇದೀಗ ಬನಾರಸ್ ಜೋಡಿ, ಕೋಟ್ಯಾಂತರ ಭಕ್ತಗಣವನ್ನು ಹೊಂದಿರುವ ತಿರುಮಲ ಸ್ವಾಮಿಯ ದರ್ಶನವನ್ನ ಪಡೆದಿದ್ದಾರೆ. ಸಾಂಪ್ರದಾಯಿಕ ದಿರಿಸಿನಲ್ಲಿ ಕಂಗೊಳಿಸಿದ ಝೈದ್, ಭಕ್ತ್ತಿ ಭಾವದಿಂದ ವೆಂಕಟೇಶ್ವರನ ದರ್ಶನ ಪಡೆದುಕೊಂಡಿರುವುದು ಹಾಗು ಅವರು ಎಲ್ಲಾ ಧರ್ಮಕ್ಕೂ ನಡೆದುಕೊಳ್ಳುವ ನಡೆಗೆ ಮೆಚ್ಚುಗೆ ವ್ಯಕ್ತವಾಗಿವೆ.
ಆ ನಂತರದಲ್ಲಿ ಝೈದ್ ಮತ್ತು ಸೋನಲ್ ನೆಲ್ಲೂರಿನ ಪ್ರಸಿದ್ಧ ದರ್ಗಾವೊಂದಕ್ಕೂ ಭೇಟಿ ನೀಡಿದ್ದಾರೆ. ಹೀಗೆ ತಮ್ಮ ಸಿನೆಮಾ ಪ್ರಚಾರದ ನಡುವೆಯೇ ಧರ್ಮಗಳ ಹಂಗಿಲ್ಲದೆ, ಭಕ್ತಿಯಿಂದ ನಡೆದುಕೊಳ್ಳುವ ಗುಣದ ಮೂಲಕ ಇನ್ನಷ್ಟು ಹತ್ತಿರವಾಗ್ತಿದ್ದಾರೆ. ಧರ್ಮವನ್ನು ಗೋಡೆಯಾಗಿಸಿ ಕೊಳ್ಳದೇ ಸಮನಾಗಿ ಸ್ವೀಕರಿಸುತ್ತಿರುವುದು ನವ ನಟ ಝೈದ್ ಅಭಿಮಾನಿಗಳಿಗೆ ಖುಷಿ ಕೊಟ್ಟಿದೆ. ಪಂಚ ಭಾಷೆಗಳಲ್ಲಿ ಏಕ ಕಾಲಕ್ಕೆ ರಿಲೀಸ್ ಆಗ್ತಿರುವ ಬನಾರಸ್ ಗೆ ಅಜನೀಶ್ ಬಿ ಲೋಕನಾಥ್ ಸಂಗೀತ ನಿರ್ದೇಶನ, ತಿಲಕ್ ರಾಜ್ ಬಲ್ಲಾಳ್ ಅವರ ಅದ್ದೂರಿಯಾಗಿ ನಿರ್ಮಾಣವಿದೆ. ಅದ್ವೈತ ಗುರುಮೂರ್ತಿ ಅವರ ಛಾಯಾಗ್ರಹಣ ಸೇರಿದಂತೆ ಪ್ರತಿಭಾನ್ವಿತ ತಾಂತ್ರಿಕ ವರ್ಗ ಹಾಗು ನುರಿತ ಕಲಾವಿದರ ಬಳಗ ಸಾಥ್ ಕೊಟ್ಟಿದೆ. ಈಗಾಗಲೇ ವಿತರಣಾ ಹಕ್ಕುಗಳು ಸಹ ಪ್ರತಿಷ್ಠಿತ ಸಂಸ್ಥೆಗಳ ತೆಕ್ಕೆಗೆ ಸೇರಿ ಸುದ್ದಿಯಾಗಿದೆ. ಹೀಗೆ ಎಲ್ಲಾ ವಿಷಯಗಳಲ್ಲಿಯೂ ದಾಖಲೆಯನ್ನ ನಿರ್ಮಿಸುತ್ತಿರುವ ಬನಾರಸ್ ಮೇಲೆ ನಿರೀಕ್ಷೆ ನೂರ್ಮಡಿಸಿದೆ.