ಬಳ್ಳಾರಿ: ಭಾರತ್ ಜೋಡೋ ಯಾತ್ರೆಯ ಸಂಭ್ರಮ, ಯಶಸ್ಸು, ಅಮೋಘವಾಗಿದೆ. ರಾಜ್ಯದ ಪಾಲಿಗೆ ಇದೊಂದು ಸುವರ್ಣ ಅವಕಾಶ. ಈಗಾಗಲೇ 1000 ಕಿ.ಮೀ ಹೆಜ್ಜೆ ಹಾಕಲಾಗಿದ್ದು, ರಾಜ್ಯದಲ್ಲಿ ಮುಂದಿನ ಚುನಾವಣೆಯಲ್ಲಿ 150 ಕ್ಷೇತ್ರಗಳಲ್ಲಿ ಗೆಲ್ಲಲು ಅವಕಾಶ ಸೃಷ್ಟಿಯಾಗುತ್ತಿದೆ ಎಂಬುದಾಗಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ವಿಶ್ವಾಸ ವ್ಯಕ್ತ ಪಡಿಸಿದ್ದಾರೆ.
ಇಂದು ಬಳ್ಳಾರಿಯಲ್ಲಿನ ಭಾರತ್ ಜೋಡೋ ಯಾತ್ರೆಯ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದಂತ ಅವರು, ಕಾಂಗ್ರೆಸ್ ಶಕ್ತಿ ದೇಶದ ಶಕ್ತಿ, ಕಾಂಗ್ರೆಸ್ ಇತಿಹಾಸ ದೇಶದ ಇತಿಹಾಸ. ಕಾಂಗ್ರೆಸ್ ಪಕ್ಷದ ಮತ್ತೊಂದು ಇತಿಹಾಸಕ್ಕೆ ನಿವೆಲ್ಲರೂ ಹಾಕುತ್ತಿರುವ ಹೆಜ್ಜೆಯೇ ಸಾಕ್ಷಿ. ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ರಾಜ್ಯದ ನಾಯಕರೆಲ್ಲರೂ ಕಷ್ಟಕಾಲದಲ್ಲಿ ಪಕ್ಷದ ಅಧ್ಯಕ್ಷ ಜವಾಬ್ದಾರಿ ಕೊಟ್ಟರು. ನಾನು ಈ ಜವಾಬ್ದಾರಿ ವಹಿಸಿಕೊಂಡ ನಂತರ ನಾನೂ ನಿದ್ರೆ ಮಾಡಿಲ್ಲ. ನಿಮ್ಮನ್ನೂ ನಿದ್ರೆ ಮಾಡಲು ಬಿಟ್ಟಿಲ್ಲ. ಕಾರಣ, ಇಡೀ ದೇಶ ಈ ರಾಜ್ಯವನ್ನು ನೋಡುತ್ತಿದೆ. ಸೋನಿಯಾ ಗಾಂಧಿ ಅವರು ಮಹತ್ವದ ಜವಾಬ್ದಾರಿ ಕೊಟ್ಟಿದ್ದಾರೆ ಎಂದರು.
ರಾಜ್ಯದಲ್ಲಿ ಏನೇ ಕೆಲಸ ಆಗಬೇಕಾದರೂ 40% ಕಮಿಷನ್ ನೀಡಬೇಕು: ಬಿಜೆಪಿ ವಿರುದ್ಧ ರಾಹುಲ್ ಗಾಂಧಿ ವಾಗ್ಧಾಳಿ
ಮೇಕೆದಾಟು, ಸ್ವಾತಂತ್ರ್ಯ ನಡಿಗೆ, ಭಾರತ ಐಕ್ಯತಾ ಯಾತ್ರೆಯಲ್ಲಿ ನೀವು ಹೆಜ್ಜೆ ಹಾಕುತ್ತಿದ್ದೀರಿ. ಕಳೆದ ಎರಡು ವರ್ಷಗಳಿಂದ ನನಗೆ ಸಹಕಾರ ನೀಡಿದ ಪಕ್ಷದ ನಾಯಕರು, ಕಾರ್ಯಕರ್ತರು, ಮಹಿಳೆಯರು, ಯುವಕರು, ವಿದ್ಯಾರ್ಥಿಗಳು, ತಂದೆ ತಾಯಂದಿರಿಗೆ ಸಾಷ್ಟಾಂಗ ನಮನ ಸಲ್ಲಿಸಿದರು.
ಈ ಐತಿಹಾಸಿಕ ಯಾತ್ರೆಗಾಗಿ ನಮ್ಮ ತಾಯಿ ಸಮಾನರಾದ ಸೋನಿಯಾ ಗಾಂಧಿ ಅವರು ಮೂರು ದಿನಗಳ ಕಾಲ ರಾಜ್ಯಕ್ಕೆ ಬಂದು ದಸರಾ ಹಬ್ಬವನ್ನು ಕುಗ್ರಾಮದ ದೇವಾಲಯದಲ್ಲಿ ಆಚರಿಸಿ, ಅರ್ಧ ದಿನಗಳ ಕಾಲ ಪಾದಯಾತ್ರೆಯಲ್ಲಿ ಭಾಗವಹಿಸಿ ನಮಗೆ ದುರ್ಗಾದೇವಿಯಂತೆ ಆಶೀರ್ವಾದ ಮಾಡಿದ್ದಾರೆ ಎಂದರು.
ಇಂದು ರಾಹುಲ್ ಗಾಂಧಿ ಅವರು ಈ ಯಾತ್ರೆ ನೇತೃತ್ವ ವಹಿಸಿದ್ದಾರೆ. ಸೋನಿಯಾ ಗಾಂಧಿ ಅವರ ಮುಖಂಡತ್ವದಲ್ಲಿ ಉದಯಪುರದ ಸಭೆಯಲ್ಲಿ ಈ ಯಾತ್ರೆ ಘೋಷಣೆ ಮಾಡಿದ್ದೆವು. ಅದು ಎಂತಹ ಗಳಿಗೆ ಎಂದರೆ, ಬುದ್ಧ ಬಸವನು ಮನೆ ಬಿಟ್ಟ ಗಳಿಗೆಯಲ್ಲಿ, ಏಸುಕ್ರಿಸ್ತನು ಶಿಲುಬೆಗೆ ಏರಿದ ಗಳಿಗೆಯಲ್ಲಿ, ಪೈಗಂಬರ್ ದಿವ್ಯವಾಣಿ ಕೇಳಿದ ಗಳಿಗೆಯಲ್ಲಿ, ಭೀಮಾಬಾಯಿ ಅವರು ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಜನ್ಮಕೊಟ್ಟ ಗಳಿಗೆಯಲ್ಲಿ, ಮಹಾತ್ಮ ಗಾಂಧಿ ಕಾಂಗ್ರೆಸ್ ನಾಯಕತ್ವ ವಹಿಸಿದ ಗಳಿಗೆಯಲ್ಲಿ, ಸೋನಿಯಾ ಗಾಂಧಿ ಅವರು ದೇಶದ ಪ್ರಧಾನಮಂತ್ರಿ ಸ್ಥಾನ ತ್ಯಾಗ ಮಾಡಿ ಮನಮೋಹನ್ ಸಿಂಗ್ ಅವರಿಗೆ ನೀಡಿದ ಗಳಿಗೆಯಲ್ಲಿ ಈ ಯಾತ್ರೆಯನ್ನು ಘೋಷಿಸಿದ್ದಾರೆ ಎಂದು ತಿಳಿಸಿದರು.
ಮುರುಘಾ ಮಠಕ್ಕೆ ಕಾನೂನು ಪ್ರಕಾರ ನೂತನ ಪೀಠಾಧಿಪತಿ : ಸಿಎಂ ಬಸವರಾಜ ಬೊಮ್ಮಾಯಿ
ಈ ಯಾತ್ರೆಯ ಸಂಭ್ರಮ, ಯಶಸ್ಸು, ಅಮೋಘವಾಗಿದೆ. ರಾಜ್ಯದ ಪಾಲಿಗೆ ಇದೊಂದು ಸುವರ್ಣ ಅವಕಾಶ. ಈಗಾಗಲೇ 1000 ಕಿ.ಮೀ ಹೆಜ್ಜೆ ಹಾಕಲಾಗಿದ್ದು, ರಾಜ್ಯದಲ್ಲಿ ಮುಂದಿನ ಚುನಾವಣೆಯಲ್ಲಿ 150 ಕ್ಷೇತ್ರಗಳಲ್ಲಿ ಗೆಲ್ಲಲು ಅವಕಾಶ ಸೃಷ್ಟಿಯಾಗುತ್ತಿದೆ. ಇದು ಕೇವಲ ಪಾದಯಾತ್ರೆಯಲ್ಲ, ಇದೊಂದು ಆಂದೋಲನ, ಕ್ರಾಂತಿ. ಇದು ರಾಹುಲ್ ಗಾಂಧಿ ಅವರು ಪ್ರಧಾನಿ ಆಗಲು ಮಾಡುತ್ತಿರುವ ಪಾದಯಾತ್ರೆ ಅಲ್ಲ. ಇದು ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ ಅಥವಾ ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿ ಆಗಲು ಮಾಡುತ್ತಿರುವ ಯಾತ್ರೆ ಅಲ್ಲ. ಇದು ಜನರ ನೋವು, ದುಃಖ ದುಮ್ಮಾನಗಳನ್ನು ನಿವಾರಿಸಿ, ದೇಶ ಒಗ್ಗೂಡಿಸಿ, ದೇಶವನ್ನು ಶಾಂತಿಯ ತೋಟವನ್ನಾಗಿ ಮಾಡಲು ಈ ಯಾತ್ರೆ ಎಂದು ಹೇಳಿದರು.
ನಿಮ್ಮ ಹೆಜ್ಜೆ ದೇಶಕ್ಕೊಂದು ಕೊಡುಗೆ, ನಿಮ್ಮ ಹೆಜ್ಜೆ ನಿಮ್ಮ ಜೀವನದಲ್ಲಿ ನೆಮ್ಮದಿಯ ಬದುಕು ಕಟ್ಟಿಕೊಳ್ಳಲು ಹೆಜ್ಜೆ. ಇದು ರೈತರ ಬದುಕು, ಉದ್ಯೋಗ ಸೃಷ್ಟಿ, ನಮ್ಮೆಲ್ಲರಲ್ಲಿ ಶಾಂತಿ ಮೂಡಿಸಲು ಹಾಕುತ್ತಿರುವ ಹೆಜ್ಜೆ. ಬಡವರ ಕಣ್ಣೀರು ಒರೆಸಲು ರಾಹುಲ್ ಗಾಂಧಿ ಅವರ ಜತೆ ಹೆಜ್ಜೆ ಹಾಕುತ್ತಿದ್ದೀರಿ. ಪುರಂದರದಾಸರು ಒಂದು ಮಾತು ಹೇಳಿದ್ದಾರೆ. ಇದು ಭಾಗ್ಯ, ಇದು ಭಾಗ್ಯ, ಇದು ಭಾಗ್ಯವಯ್ಯ, ಪದುಭನಾಭನ ಪಾದ ಭಜನೆ ಪರಮ ಸುಖವಯ್ಯ. ಅದೇ ರೀತಿ ನಾನು ಅಧ್ಯಕ್ಷನಾಗಿರುವ ಇಂತಹ ಪವಿತ್ರ ಕಾರ್ಯಕ್ರಮ ನಡೆಸುವ ಅವಕಾಶ ಸಿಕ್ಕಿರುವುದು ನನ್ನ ಭಾಗ್ಯ ಎಂದು ಭಾವಿಸಿದ್ದೇನೆ ಎಂದರು.
ಬಸವಣ್ಣನವರು ಕೊಟ್ಟಿರುವ ಸಂದೇಶದಂತೆ ನಾವು ನುಡಿದಂತೆ ನಡೆಯಬೇಕು. ಕೊಟ್ಟ ಮಾತು ಉಲಿಸಿಕೊಳ್ಳಬೇಕು. ಇದೇ ರಾಹುಲ್ ಗಾಂಧಿ ಅವರು ನೀಡುತ್ತಿರುವ ಮಾರ್ಗದರ್ಶನ. ಭಾರತದ ಘನತೆ, ಶಾಂತಿ, ಮಾನವೀಯತೆಯ ಸಂಭ್ರಮಾಚರಣೆ ಮಾಡುತ್ತಿದ್ದು, ಇದು ಕ್ವಿಟ್ ಬಿಜೆಪಿ ಚಳುವಳಿ, ಬಿಜೆಪಿಯನ್ನು ತೊಲಗಿಸಬೇಕು ಎಂಬುದನ್ನು ಮರೆಯಬಾರದು. 2023ರ ಚುನಾವಣೆಯಲ್ಲಿ ರಾಜ್ಯದಿಂದ ಬದಲಾವಣೆಯ ಸಂದೇಶ ನೀಡಬೇಕು ಎಂದು ನಿಮ್ಮಲ್ಲಿ ಪ್ರಾರ್ಥಿಸುತ್ತೇನೆ ಎಂದು ನುಡಿದರು.
ಈ ಪಾದಯಾತ್ರೆ ಸಮಯದಲ್ಲಿ ಒಂದು ದಿನ ಇಡಿ ವಿಚಾರಣೆ ದಿನ ಹೊರತುಪಡಿಸಿ ಉಳಿದ ಎಲ್ಲ ದಿನ ಹೆಜ್ಜೆ ಹಾಕಿದ್ದೇನೆ. ರಾಹುಲ್ ಗಾಂಧಿ ಅವರು ಸೋಲಿಗ ಬುಡಕಟ್ಟು ಸಮುದಾಯದವರ ಜತೆ, ಆಕ್ಸಿಜನ್ ಅಪಘಾತದಲ್ಲಿ ಮೃತರ ಕುಟುಂಬ ಸದಸ್ಯರು, ನಿರುದ್ಯೋಗಿ ಯುವಕರು, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ರೈತರು, ಕಾರ್ಮಿಕರು, ಶಿಕ್ಷಣ ತಜ್ಞರು, ದಲಿತರು, ಶೋಷಿತರು ಹೀಗೆ ಎಲ್ಲಾ ವರ್ಗದ ಜನ ತಮ್ಮ ನೋವು, ಸಂಕಷ್ಟಗಳನ್ನು, ಮುಂದಿನ ಭವಿಷ್ಯದ ಆಲೋಚನೆ ಹಂಚಿಕೊಂಡರು ಎಂದರು.
ನಾನು ಮಾಧ್ಯಮದವರನ್ನು ರಾಹುಲ್ ಗಾಂಧಿ ಅವರಿಗೆ ಪರಿಚಯಿಸಿದಾಗ ನೀವು ನಿಮ್ಮ ತಾಯಿ ಯಾವುದೇ ಅಧಿಕಾರ ಪಡೆಯದೇ ಬಂದ ಅಧಿಕಾರ ತ್ಯಾಗ ಮಾಡಿ ಈ ಪರಿಶ್ರಮ ಮಾಡುತ್ತಿರುವುದೇಕೆ ಎಂದು ಕೇಳಿದರು. ಅದಕ್ಕೆ ರಾಹುಲ್ ಗಾಂಧಿ ಅವರು, ‘ನಾವು ಹುಟ್ಟುವಾಗ ಎಲ್ಲರೂ ಖುಷಿ ಪಡುತ್ತಾರೆ. ಆದರೆ ನಮ್ಮ ಬದುಕಿನಲ್ಲಿ ಈ ದೇಶದ ಜನ ನನ್ನ ಮುತ್ತಜ್ಜ, ಅಜ್ಜಿ, ನನ್ನ ತಂದೆ ತಾಯಿ ಕೊಟ್ಟಿರುವ ಪ್ರೀತಿ ಹಾಗೂ ಋಣವನ್ನು ತೀರಿಸಲು ಸಾಧ್ಯವಿಲ್ಲ. ಆ ಪ್ರೀತಿಗಾಗಿ ನಾನು ಈ ತ್ಯಾಗ ಪರಿಶ್ರಮ ಮಾಡುತ್ತಿದ್ದೇನೆ ಎಂದರು. ಇಂತಹ ದೇಶಪ್ರೇಮಿ, ಉದಾರ ಮನೋಭಾವ ಹೊಂದಿರುವ ನಮ್ಮ ನಾಯಕ ರಾಹುಲ್ ಗಾಂಧಿ ಅವರಿಗೆ ಸಾಷ್ಟಾಂಗ ನಮನಗಳನ್ನು ಅರ್ಪಿಸುತ್ತೇನೆ. ಇಂತಹ ನಾಯಕನ ಜತೆ ಕೆಲಸ ಮಾಡಲು ಸಿಕ್ಕಿರುವ ಅವಕಾಶವೇ ನಮ್ಮ ಶಕ್ತಿ. ಇದೇ ನಮ್ಮ ಭಾಗ್ಯ. ಇಂದು ಅವರ ಪ್ರೀತಿ ವಿಶ್ವಾಸ ಉಳಿಸಿಕೊಂಡು ಹೋಗಬೇಕು ಎಂದರು.
ಇಂದು ನಾವು ಕನಕದುರ್ಗಮ್ಮ ದೇವಿ ಸನ್ನಿದಿ ಮುಂದೆ ಇದ್ದೇವೆ. ರಾಜ್ಯದಲ್ಲಿ ಮತ್ತೆ ವಿಜಯನಗರ ಸಾಮ್ರಾಜ್ಯ ನಿರ್ಮಾಣವಾಗಬೇಕು. 40% ಸರ್ಕಾರ ತೆಗೆಯಬೇಕು. ದೇಶದಲ್ಲಿ ನೆಮ್ಮದಿ ಆಡಳಿತ, ಯುವಕರಿಗೆ ಉದ್ಯೋಗ ಸೃಷ್ಟಿಗೆ ನಾವೆಲ್ಲರೂ ಕೆಲಸ ಮಾಡೋಣ. ನಮಗೆ ಅಧಿಕಾರ ಮುಖ್ಯವಲ್ಲ ಎಂದರು.
ಇತಿಹಾಸ ಸೃಷ್ಟಿಸಲು ರಾಹುಲ್ ಗಾಂಧಿ ಅವರು ಹೊಸ ಹೆಜೆ ಇಟ್ಟಿದ್ದು, ಅಧಿಕಾರ ಇಲ್ಲದೆ, ಅಧಿಕಾರ ತೆಗೆದುಕೊಳ್ಳದೆ ರಾಹುಲ್ ಗಾಂಧಿ ಅವರು ಬೇರೆ ಯಾವುದೇ ನಾಯಕರು ಮಾಡಲಾಗದ ಸಾಧನೆಯನ್ನು ದೇಶಕ್ಕಾಗಿ ಮಾಡಿದ್ದಾರೆ. ಅವರ ವಿಚಾರಧಾರೆಯಲ್ಲಿ ನಾವೆಲ್ಲರೂ ಕೆಲಸ ಮಾಡಿಕೊಂಡು ಹೋಗೋಣ. ವಾಗ್ದಾನ ನಮ್ಮದು ವಿಶ್ವಾಸ ನಿಮ್ಮದು. ನಿಮ್ಮ ಸಂಕಷ್ಟ ನಿವಾರಣೆ ಮಾಡುವ ವಾಗ್ದಾನ ನಾವು ಮಾಡಿದ್ದು, ನಮ್ಮ ನಡೆ, ನುಡಿ ಸದಾ ಒಂದೇ ಆಗಿರುತ್ತದೆ. ನುಡಿದಂತೆ ನಡೆಯುತ್ತೇವೆ ನಮ್ಮ ಮೇಲೆ ವಿಶ್ವಾಸ, ನಂಬಿಕೆ ಇಡಿ ನಾವು ನಿಮ್ಮ ಸೇವೆ ಮಾಡಿ ಋಣ ತೀರಿಸುತ್ತೇವೆ ಎಂದು ಹೇಳಿದರು.