ಬೆಂಗಳೂರು: ಎಲೆಕ್ಟ್ರಾನಿಕ್ ಕ್ಷೇತ್ರದ ಬೆಳವಣಿಗೆಗೆ ರಾಜ್ಯವು 12 ಸಾವಿರ ಕೋಟಿ ರೂಪಾಯಿಗಳನ್ನು ಉತ್ತೇಜನದ ರೂಪದಲ್ಲಿ ನೀಡಿದೆ ಎಂದು ಐಟಿ-ಬಿಟಿ ಸಚಿವ ಡಾ.ಸಿ ಎನ್ ಅಶ್ವತ್ಥ ನಾರಾಯಣ ಹೇಳಿದ್ದಾರೆ.
ಭಾರತೀಯ ಎಲೆಕ್ಟ್ರಾನಿಕ್ಸ್ ಮತ್ತು ಸೆಮಿಕಂಡಕ್ಟರ್ ಅಸೋಸಿಯೇಷನ್ ನ 17ನೇ ವಾರ್ಷಿಕ ಸಮಾವೇಶದಲ್ಲಿ ಅವರು ಗುರುವಾರ ಮಾತನಾಡಿ, ಉದ್ಯಮ ಬೆಳವಣಿಗೆಗೆ ನಗರ ವ್ಯವಸ್ಥೆ ಸುಧಾರಿಸುವುದು ಅಗತ್ಯವಾಗಿದೆ. ಹೀಗಾಗಿ ಡಿಸೆಂಬರ್ ಹೊತ್ತಿಗೆ ಬೆಂಗಳೂರಿನ 13 ಸಾವಿರ ಕಿ.ಮೀ. ರಸ್ತೆಯನ್ನು ಅತ್ಯುತ್ತಮ ಮಾದರಿಯಲ್ಲಿ ಸುಧಾರಿಸಲಾಗುವುದು ಎಂದು ಅವರು ಭರವಸೆ ನೀಡಿದರು.
ರಾಜ್ಯದಲ್ಲಿ ಐಎಸ್ಎಂಸಿ ಕಂಪನಿಯು ಸೆಮಿ ಕಂಡಕ್ಟರ್ ಉತ್ಪಾದನೆಗೆ ಮುಂದಾಗಿದೆ. ಇದಕ್ಕೆ ಕೇಂದ್ರ ಸರಕಾರವು ಕೂಡ ಶೇ.50ರಷ್ಟು ಪ್ರೋತ್ಸಾಹ ಭತ್ಯೆ ಕೊಡುತ್ತಿದೆ. ಸೆಮಿ ಕಂಡಕ್ಟರ್ ಉದ್ಯಮದ ಬೆಳವಣಿಗೆಗೆ ಮೈಸೂರಿನಲ್ಲಿ ಅಗತ್ಯ ಭೂಮಿಯನ್ನು ಗುರುತಿಸಲಾಗಿದೆ ಎಂದು ಅವರು ನುಡಿದರು.
ಸೆಮಿ ಕಂಡಕ್ಟರ್ ಕ್ಷೇತ್ರಕ್ಕೆ ಸಂಬಂಧಿಸಿದ ನೀತಿಗಳು ಬರುವುದು ಸ್ವಲ್ಪ ತಡವಾದರೂ ದೇಶದ ಪ್ರಪ್ರಥಮ ಉತ್ಪಾದನಾ ಘಟಕ ರಾಜ್ಯದಲ್ಲಿ ನೆಲೆಯೂರಿರುವುದು ಸಂತಸದ ಸಂಗತಿಯಾಗಿದೆ ಎಂದು ಅವರು ಹೇಳಿದರು.
ಬ್ಯಾಟರಿ, ವಿದ್ಯುತ್ ಚಾಲಿತ ವಾಹನ, ಮೊಬೈಲ್ ಇತ್ಯಾದಿಗಳ ಉತ್ಪಾದನೆಗೆ ರಾಜ್ಯದಲ್ಲಿ ಪ್ರಶಸ್ತ ವಾತಾವರಣ ಇದೆ. ಸರಕಾರವು ಉದ್ಯಮ ವಲಯದ ಜತೆ ಚರ್ಚಿಸಿ ರಚನಾತ್ಮಕ ನೀತಿಗಳನ್ನು ರೂಪಿಸಲಾಗಿದೆ ಎಂದು ಅವರು ವಿವರಿಸಿದರು.
ರಾಜ್ಯದಲ್ಲಿ ಉದ್ಯಮಗಳಿಗೆ ಅಗತ್ಯವಾದ ಗುಣಮಟ್ಟದ ಶಿಕ್ಷಣ ಮತ್ತು ಕೌಶಲ್ಯಗಳ ಕಲಿಕೆಗೆ ಒತ್ತು ಕೊಡಲಾಗಿದೆ. ಅದರಲ್ಲೂ ಪಾಲಿಟೆಕ್ನಿಕ್ ಮತ್ತು ಐಟಿಐ ಸಂಸ್ಥೆಗಳನ್ನು ಸ್ಪರ್ಧಾತ್ಮಕ ಜಗತ್ತಿಗೆ ತಕ್ಕಂತೆ ಉನ್ನತೀಕರಿಸಲಾಗಿದೆ ಎಂದು ಅವರು ಪ್ರತಿಪಾದಿಸಿದರು.
ಶಿಕ್ಷಣ ಸಂಸ್ಥೆಗಳಲ್ಲಿ ಈಗ ಅಂತರರಾಷ್ಟ್ರೀಯ ಸಂಸ್ಥೆಗಳ ಜತೆ ಒಡಂಬಡಿಕೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಈಗ ಕೈಗಾರಿಕೆಗಳು ನಮ್ಮ ಶಿಕ್ಷಣ ಸಂಸ್ಥೆಗಳಿಂದ ದೂರ ಉಳಿಯದೆ ಕೈಗೂಡಿಸಬೇಕು. ಆತ್ಮನಿರ್ಭರ ಭಾರತದ ನಿರ್ಮಾಣಕ್ಕೆ ಇದು ಹೆದ್ದಾರಿ ಆಗಲಿದೆ ಎಂದು ಅವರು ಕರೆ ನೀಡಿದರು.
ಉನ್ನತ ಶಿಕ್ಷಣ ವಲಯದಲ್ಲಿ ಅಭೂತಪೂರ್ವ ಸುಧಾರಣೆಗಳಾಗುತ್ತಿವೆ. ತಮಿಳುನಾಡು, ಅಸ್ಸಾಂ, ಉತ್ತರ ಪ್ರದೇಶ ಮುಂತಾದ ರಾಜ್ಯಗಳು ನಮ್ಮ ಮಾದರಿಯನ್ನು ಅನುಸರಿಸುತ್ತಿವೆ ಎಂದು ಅವರು ಅಭಿಪ್ರಾಯ ಪಟ್ಟರು.
ಕಾರ್ಯಕ್ರಮದಲ್ಲಿ ಸಂಘಟನೆಯ ಅಧ್ಯಕ್ಷ ವಿವೇಕ್ ತ್ಯಾಗಿ, ಒಡಿಶಾ ಸರ್ಕಾರದ ಮುಖ್ಯ ಕಾರ್ಯದರ್ಶಿ ಮನೋಜ್ ಮಿಶ್ರ, ಐಟಿ ಇಲಾಖೆಯ ನಿರ್ದೇಶಕಿ ಮೀನಾ ನಾಗರಾಜ್, ಸಂಘಟನೆಯ ಕೃಷ್ಣಮೂರ್ತಿ ಮುಂತಾದವರು ಉಪಸ್ಥಿತರಿದ್ದರು.
‘ಹಿಜಾಬ್’ ವಿಚಾರದಲ್ಲಿ ಸುಪ್ರೀಂ ಕೋರ್ಟ್ ತಿರ್ಪಿನ ಬಗ್ಗೆ ‘ಸಿಎಂ ಬೊಮ್ಮಾಯಿ’ ಹೇಳಿದ್ದೇನು ಗೊತ್ತಾ.? | Hijab Row