ಬೆಂಗಳೂರು : ಮಳೆ ಪೀಡಿತ ರಾಜ್ಯದ 13 ಜಿಲ್ಲೆಗಳ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳ ಜೊತೆಗೆ ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಭೆ ನಡೆಸಿದ್ದಾರೆ.
ಇಂದು ಬೆಳಗ್ಗೆ 9 ಗಂಟೆಗೆ ವಿಜಯನಗರ ಜಿಲ್ಲೆಯ ಕಮಲಾಪುರದ ಹೋಟೆಲ್ ನಿಂದ ವಿಡಿಯೋ ಸಂವಾದದ ಮೂಲಕ ಸಭೆ ನಡೆಸಿದ ಸಿಎಂ ಬೊಮ್ಮಾಯಿ, ಮಳೆಯಿಂದ ಹಾನಿಗೊಳಗಾಗುವ ಪ್ರತಿಯೊಂದು ಮನೆಗೆ ಪರಿಹಾರ ದೊರೆಯುವಂತೆ ಜಿಲ್ಲಾಧಿಕಾರಿಗಳು ನಿಗಾ ವಹಿಸಬೇಕು ಎಂದು ಸೂಚಿಸಿದರು.
ಮಳೆಯಿಂದ ಎದುರಾಗುವ ಸಮಸ್ಯೆಗಳನ್ನು ಪರಿಹರಿಸಲು ಅಗತ್ಯವಿದ್ದರೆ ಹೆಚ್ಚುವರಿ ಪರಿಹಾರ ವಿತರಿಸುವಂತೆ ಸುತ್ತೋಲೆ ಹೊರಡಿಸಬೇಕು ಎಂದು ವಿಪತ್ತು ನಿರ್ವಹಣೆ ಅಧಿಕಾರಿಗಳಿಗೆ ಆದೇಶ ನೀಡಿದ್ದಾರೆ. ಬೆಳೆ ಹಾನಿ ಪರಿಹಾರ ವಿತರಣೆಯನ್ನು ತ್ವರಿತಗತಿಯಾಗಿ ವಿತರಿಸಬೇಕು. ಅಕ್ಟೋಬರ್ ತಿಂಗಳಿನಲ್ಲಿ ಸಂಭವಿಸಿದ ಬೆಳೆಹಾನಿಯನ್ನೂ ಸಹ ಕೂಡಲೇ ಸಮೀಕ್ಷೆ ನಡೆಸಿ ಈ ತಿಂಗಳೊಳಗೆ ಪರಿಹಾರ ವಿತರಿಸಲು ಸೂಚನೆ ನೀಡಿದ್ದಾರೆ.
ಇನ್ನು ಮಳೆಯಿಂದ ಹಾನಿಗೊಳಗಾದ ಸೇತುವೆಗಳ ಪುನರ್ ನಿರ್ಮಾಣಕ್ಕೆ ಆದ್ಯತೆ ನೀಡಬೇಕು. ಕೆರೆಗಳು ದುರ್ಬಲಗಳಾಗಿರುವುದು, ನೀರಿನ ಒತ್ತಡ ಹೆಚ್ಚಿರುವ ಸೂಕ್ಷ್ಮ ಪರಿಸ್ಥಿತಿಯನ್ನು ಅವಲೋಕಿಸಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.