ಕೆಎನ್ಎನ್ಸಿನಿಮಾಡೆಸ್ಕ್: ಜಯತೀರ್ಥ ನಿರ್ದೇಶನದ ಝೈದ್ ಖಾನ್ ನಟನೆಯ ಬನಾರಸ್ ಸಿನಿಮಾ ನವೆಂಬರ್ 4ರಂದು ದೇಶದಾದ್ಯಂತ ತೆರೆಗೆ ಬರಲಿದೆ. ಅದಕ್ಕೂ ಮುನ್ನ ನಾನಾ ಕಾರಣಗಳಿಂದ ಹಲವು ರೀತಿಯಲ್ಲಿ ಸದ್ದು ಮಾಡುತ್ತಲೇ ಇದೆ. ಹಾಡು, ಟ್ರೇಲರ್ ಮೂಲಕ ಹಬ್ಬವನ್ನುಂಟು ಮಾಡಿರುವ ಸಿನಿಮಾವನ್ನು ಇದೀಗ ವಿಶಾಲ ಕರ್ನಾಟಕಕ್ಕೆ ಹಂಚಲು ಡೀ ಬೀಟ್ಸ್ ರೆಡಿಯಾಗಿದೆ.
ಒಂದು ಸಿನಿಮಾ ಸಿದ್ದವಾದ ಮೇಲೆ ಎಲ್ಲರ ಚಿತ್ತ ಹರಿಯುವುದು ಈ ಸಿನಿಮಾವನ್ನು ಯಾರು ವಿತರಣೆ ಮಾಡುತ್ತಾರೆ ಎಂದು. ಅದಕ್ಕೆ ಕಾರಣವೂ ಇದೆ. ಡಿ ಬೀಟ್ಸ್ ಸೇರಿದಂತೆ ಕೆಲವೊಂದು ಪ್ರಖ್ಯಾತಿ ಪಡೆದ ಸಂಸ್ಥೆಗಳು ವಿತರಣೆ ಮಾಡಬೇಕಲ್ಲ ಎಂದು ಸಿನಿಮಾಗಳನ್ನು ತೆಗೆದುಕೊಳ್ಳುವುದಿಲ್ಲ. ಸಿನಿಮಾದೊಳಗಿನ ಕಂಟೆಂಟ್, ಸಿನಿಮಾ ಮೂಡಿ ಬಂದ ರೀತಿ ಹೀಗೆ ಅನೇಕ ಆಯಾಮಗಳಿಂದಲೂ ಯೋಚನೆ ಮಾಡಿ ಬಳಿಕ ಸಿನಿಮಾವನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳುತ್ತದೆ. ವಿಶಾಲ ಕರ್ನಾಟಕಕ್ಕೆ ಹಂಚಲಿದೆ. ಝೈದ್ ಖಾನ್ ಮೊದಲ ಬಾರಿಗೆ ನಟನಾಗುತ್ತಿದ್ದಾರೆ. ಸಿನಿಮಾದ ಮೇಲಿನ ಭರವಸೆ ಎಷ್ಟಿದೆ ಎಂಬುದಕ್ಕೆ ಹಲವು ಉದಾಹರಣೆಗಳು ಕಾಣುತ್ತಿವೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ತಯಾರಾದ ಬನಾರಸ್ ಅನ್ನು ಕರ್ನಾಟಕದಲ್ಲಿ ಹಂಚುವವರು ಯಾರು ಎಂಬುದಕ್ಕೆ ಈಗ ತೆರೆ ಬಿದ್ದಿದೆ. ಶೈಲಜಾ ನಾಗ್ ಹಾಗೂ ಬಿ ಸುರೇಶ್ ತಮ್ಮ ಸಂಸ್ಥೆ ಡಿ ಬೀಟ್ಸ್ ಮೂಲಕ ವಿತರಣೆ ಮಾಡುತ್ತಿದ್ದಾರೆ. ಡಿ ಬೀಟ್ಸ್ ಸಂಸ್ಥೆಯ ವಿತರಣೆಯ ಹಕ್ಕನ್ನು ಪಡೆದಿದೆ ಎಂದಾಗಲೇ ಹಲವರ ಮನಸ್ಸಲ್ಲಿ ಸಿನಿಮಾ ಮೇಲಿನ ಎಕ್ಸ್ಪೆಕ್ಟೇಷನ್ಸ್ ಜೊತೆಗೆ, ಸಿನಿಮಾ ಹಿಂಗೆ ಇರಲಿದೆ ಎಂಬ ನಂಬಿಕೆಯೊಂದು ಬೇರೂರಿ ಕುಳಿತಾಗಿದೆ.
ಬನಾರಸ್ ನಲ್ಲಿ ಝೈದ್ ಗೆ ಸೋನಲ್ ಜೋಡಿಯಾಗಿದ್ದಾರೆ. ಜಯತೀರ್ಥ ಆಕಗ್ಷನ್ ಕಟ್ ಹೇಳಿದ್ದರೆ, ತಿಲಕ್ ರಾಜ್ ಬಲ್ಲಾಳ್ ನಿರ್ಮಾಣ ಮಾಡಿದ್ದಾರೆ. ಕನ್ನಡ, ತಮಿಳು, ತೆಲುಗು, ಮಲೆಯಾಳಂ ಹಾಗೂ ಹಿಂದಿಯಲ್ಲಿ ಸಿನಿಮಾ ಸಿದ್ಧವಾಗಿದ್ದು, ಕರ್ನಾಟಕದಲ್ಲಿ ಡೀ ಬೀಟ್ಸ್, ಕೇರಳದಲ್ಲಿ ಮುಲಕುಪ್ಪಡಮ್ ಸಂಸ್ಥೆ ವಿತರಣೆಯ ಜವಾಬ್ದಾರಿ ತೆಗೆದುಕೊಂಡಿದೆ. ಇನ್ನುಳಿದ ಭಾಷೆಯಲ್ಲಿ ಇನ್ಯಾವ ಫೇಮಸ್ ಸಂಸ್ಥೆಗಳು ಬನಾರಸ್ ಚಿತ್ರವನ್ನು ವಿತರಣೆ ಮಾಡುತ್ತೆ ಎಂಬ ಕುತೂಹಲ ಸದ್ಯ ಜಾರಿಯಲ್ಲಿದೆ.