ಶಿವಮೊಗ್ಗ: ಜಿಲ್ಲೆಯ ಸಾಗರ ತಾಲೂಕಿನ ಶಾಸಕ ಹಾಲಪ್ಪ ( MLA Halappa ) ವಿರುದ್ಧ ಈಗ ರಸ್ತೆ ನಿರ್ಮಾಣದಲ್ಲೂ ಮತ ಪಾಲಿಟಿಕ್ಸ್ ( Vote Politics ) ಆರೋಪ ಕೇಳಿ ಬಂದಿದೆ. ಟೆಂಡರ್ ಕರೆದಿದ್ದೇ ಒಂದು, ಬಳಿಕ ರಸ್ತೆ ಕಾಮಗಾರಿ ಪ್ರಾರಂಭ ಮಾಡೋದಕ್ಕೆ ಹೊರಟಿದ್ದು ಬೇರೊಂದು ಎನ್ನುವ ಕಾರಣಕ್ಕಾಗಿ ದೀವಗದ್ದೆಯ ಗ್ರಾಮಸ್ಥರು, ಬೆಳಲಮಕ್ಕಿ ಮುಳುಗಡೆ ಸಂತ್ರಸ್ತ ರೈತರು ಶಾಸಕರ ವಿರುದ್ಧ ಕಿಡಿಕಾರಿದ್ದಾರೆ. ಅಷ್ಟಕ್ಕೂ ಆಗಿದ್ದೇನು ಎನ್ನುವ ಬಗ್ಗೆ ಮುಂದೆ ಓದಿ.
ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 206ರ ಸಮೀಪವಿರುವಂತ ದೀವಗದ್ದೆಯ ಗ್ರಾಮ ಒಂದಾಗಿದೆ. ಸಾಗರ ನಗರದಿಂದ ಕೂಗಳತೆಯ ದೂರದಲ್ಲಿರುವಂತ ಗ್ರಾಮದ ರೈತರು, ವಿದ್ಯಾರ್ಥಿಗಳು ಹೋಗಿ ಬರೋದಕ್ಕೆ ಇರೋ ರಸ್ತೆ ಮಾತ್ರ ಕಚ್ಚಾ ರಸ್ತೆಯಾಗಿತ್ತು. ಹೀಗಾಗಿ ಸೂಕ್ತ ರಸ್ತೆ ನಿರ್ಮಾಣ ಮಾಡೋದಕ್ಕೆ ದೀವಗದ್ದೆ ಗ್ರಾಮಸ್ಥರು ಸೇರಿದಂತೆ ವಿವಿಧ ಹೋರಾಟಗಾರರು ಪ್ರತಿಭಟನೆ, ಧರಣಿ ನಡೆಸಿದ್ದರು.
ದೀವಗದ್ದೆಯ ಗ್ರಾಮಸ್ಥರ ಮನವಿ, ಪ್ರತಿಭಟನೆಗೆ ಮಣಿದಿದ್ದಂತ ಸರ್ಕಾರವು, ಸುಸಜ್ಜಿತ ರಸ್ತೆ ನಿರ್ಮಾಣಕ್ಕಾಗಿ ಕೆಲ ತಿಂಗಳ ಹಿಂದೆ ಟೆಂಟರ್ ಕರೆದಿತ್ತು. 30 ಲಕ್ಷದಲ್ಲಿ ರಾಷ್ಟ್ರೀಯ ಹೆದ್ದಾರಿ 206ರಿಂದ ದೀವಗದ್ದೆಯ ಗ್ರಾಮಕ್ಕೆ ರಸ್ತೆ ನಿರ್ಮಾಣಕ್ಕೆ ಟೆಂಡರ್ ಕೂಡ ನೀಡಲಾಗಿತ್ತು. ದೀವಗದ್ದೆಯ ಗ್ರಾಮಸ್ಥರು, ಬೆಳಲಮಕ್ಕಿ ಗ್ರಾಮಸ್ಥರಿಗೆ, ವಿದ್ಯಾರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ನಿರ್ಮಿಸೋದಕ್ಕೆ ಆಕ್ಷನ್ ಪ್ಲಾನ್ ನಂತೆ ರಸ್ತೆ ನಿರ್ಮಾಣ ಮಾಡಬೇಕಿತ್ತು. ಆದ್ರೇ ಇದನ್ನು ಬದಲಾಯಿಸಿ ಬೇರೊಂದು ಕಡೆಯ ಮೂಲಕ ರಸ್ತೆ ನಿರ್ಮಾಣಕ್ಕೆ ಮುಂದಾಗಿದೆ ಎನ್ನಲಾಗಿದೆ.
ಇದಲ್ಲದೇ ದೀವಗದ್ದೆಯಲ್ಲಿ 40ಕ್ಕೂ ಹೆಚ್ಚು ಎಕರೆಯನ್ನು ಬೆಳಲಮಕ್ಕಿ ಗ್ರಾಮಸ್ಥರು ಕೃಷಿ ಜಮೀನನ್ನು ಹೊಂದಿದ್ದಾರೆ. ಬಸವನಹೊಳೆ ಡ್ಯಾಂ ನಿರ್ಮಾಣದ ನಂತ್ರ ಜಮೀನು ಕಳೆದುಕೊಂಡಿದ್ದಂತ ಬೆಳಲಮಕ್ಕಿ ಗ್ರಾಮಸ್ಥರಿಗೆ ನೀಡಲಾಗಿದ್ದಂತ ಕೃಷಿ ಭೂಮಿಗೆ ತೆರಳೋದಕ್ಕೆ ದೀವಗದ್ದೆಯ ಮೂಲಕ ಹಾದು ಹೋಗುವಂತ ರಸ್ತೆಯಲ್ಲೇ ಸಾಗಬೇಕಿದೆ. ದೀವಗದ್ದೆಯ ಗ್ರಾಮಸ್ಥರಿಗಲ್ಲದೇ ಬೆಳಲಮಕ್ಕಿ ಗ್ರಾಮದ ರೈತರು ತಮ್ಮ ಕೃಷಿ ಜಮೀನಿಗೆ ತೆರಳೋದಕ್ಕೂ ಟೆಂಟರ್ ಪ್ರಕಾರವಾಗಿ ಆಕ್ಷನ್ ಪ್ಲಾನ್ ಹೊಂದಿದಂತ ರಸ್ತೆಯ ಮೂಲಕವೇ ಸಾಗಬೇಕಿದೆ.
ಆದ್ರೇ.. ಶಾಸಕ ಹಾಲಪ್ಪ ಅವರ ಸೋದರ ಸಂಬಂಧಿಯೊಬ್ಬರ ಕಿತಾಪತಿಯಿಂದಾಗಿ ಟೆಂಟರ್ ನೀಡಲಾಗಿದ್ದಂತ ರಸ್ತೆ ನಿರ್ಮಾಣ ಬಿಟ್ಟು ದೀವಗದ್ದೆ ಗ್ರಾಮದಲ್ಲಿನ ಬೇರೊಂದು ರಸ್ತೆ ನಿರ್ಮಾಣಕ್ಕೆ ಮುಂದಾಗಿದ್ದಾರೆ ಎನ್ನಲಾಗಿದೆ. ಇದು ರಾಜಕೀಯ ಪ್ರೇರಿತ ಹಾಗೂ ಒಂದು ವರ್ಗಕ್ಕೆ ಅನುಕೂಲ ಮಾಡಿಕೊಡುವಂತ ಕೆಲಸವಾಗಿದೆ. ಅಲ್ಲದೇ ಶಾಸಕ ಹಾಲಪ್ಪನವರು ಮತಬ್ಯಾಂಕ್ ರಾಜಕಾರಣಕ್ಕಾಗಿ ನಿರ್ಮಾಣ ಮಾಡಬೇಕಿದ್ದಂತ ರಸ್ತೆಯನ್ನು ಮಾಡದೇ, ಒಂದು ವರ್ಗದ ಮಾತು ಕೇಳಿ ಬೇರೆ ರಸ್ತೆ ನಿರ್ಮಾಣ ಮಾಡೋದಕ್ಕೆ ಹೊರಟಿದ್ದಾರೆ ಎಂಬುದಾಗಿ ದೀವಗದ್ದೆ ಗ್ರಾಮಸ್ಥರು ಆರೋಪಿಸಿದ್ದಾರೆ.
ಹಾಗಾದ್ರೇ ಶಾಸಕ ಹಾಲಪ್ಪನವರಿಗೆ ತಮ್ಮ ಸೋದರ ಸಂಬಂಧಿಯ ಕಿತಾಪತಿ ತಿಳಿದಿಲ್ಲವೇ.? ದೀವಗದ್ದೆ ಗ್ರಾಮಸ್ಥರಿಗೆ, ಶಾಲಾ ಮಕ್ಕಳಿಗೆ, ಬೆಳಲಮಕ್ಕಿ ರೈತರಿಗೆ ಅನುಕೂಲವಾಗುವಂತ ರಸ್ತೆ ಬಿಟ್ಟು ಮತ ಬ್ಯಾಂಕ್ ರಾಜಕಾರಣ ಮಾಡೋದಕ್ಕೆ ಹೊರಟಿರೋದು ಯಾಕೆ ಎಂಬುದು ಹಲವು ಗ್ರಾಮಸ್ಥರ ಪ್ರಶ್ನೆಯಾಗಿದೆ. ಅಲ್ಲದೇ ಮಾನ್ಯ ಶಾಸಕ ಹಾಲಪ್ಪನವರೇ ಎಲ್ಲರಿಗೂ ಅನುಕೂಲವಾಗುವಂತ ಹಾಗೂ ಆಕ್ಷನ್ ಪ್ಲಾನ್ ಜೊತೆಗೆ ಟೆಂಟರ್ ನೀಡಿರುವಂತ ರಸ್ತೆಯನ್ನೇ ನಿರ್ಮಾಣ ಮಾಡಬೇಕು ಎಂಬುದಾಗಿ ಆಗ್ರಹಿಸಿದ್ದಾರೆ. ಹೀಗೆ ನಿರ್ಮಾಣ ಮಾಡುವಂತ ರಸ್ತೆಯಿಂದ ನೂರಾರು ಜನರಿಗೆ, ರೈತರಿಗೆ ಅನುಕೂಲವಾಗಲಿದೆ ಎಂಬ ಮನವಿ ಕೂಡ ಮಾಡಿದ್ದಾರೆ.
ಮೊಬೈಲ್ ಬಳಕೆದಾರರೇ ಎಚ್ಚರ ; ವೈರಸ್ ಹೊತ್ತು ತರ್ತಿದೆ ಈ ಜನಪ್ರಿಯ ‘ಅಪ್ಲಿಕೇಷನ್’, ಇದ್ರೆ ತಕ್ಷಣ ತೆಗೆದುಹಾಕಿ
ಆ ನಿಟ್ಟಿನಲ್ಲಿ ಶಾಸಕ ಹಾಲಪ್ಪ ಮುಂದಾಗುತ್ತಾರೋ ಅಥವಾ ಒಂದು ವರ್ಗದ, ವೋಟ್ ಬ್ಯಾಂಕ್ ರಾಜಕಾರಣಕ್ಕೆ ಒಳಗಾಗಿ ನಿಗದಿತ ರಸ್ತೆಯನ್ನು ನಿರ್ಮಾಣ ಮಾಡದೇ, ಬೇರೆ ಮಾರ್ಗದ ರಸ್ತೆ ನಿರ್ಮಾಣ ಮಾಡುತ್ತಾರೋ ಎಂಬುದನ್ನು ಕಾದು ನೋಡಬೇಕಿದೆ. ಆದ್ರೇ ಸಾರ್ವಜನಿಕರಿಗೆ ಒಳಿತಾಗುವ ನಿಟ್ಟಿನಲ್ಲಿ ರಸ್ತೆ ನಿರ್ಮಾಣ ಮಾಡಿ, ಜನಪ್ರತಿನಿಧಿಯ ನಡೆಯನ್ನು ತೋರಲಿ ಎಂಬುದು ನಮ್ಮ ಕನ್ನಡ ನ್ಯೂಸ್ ನೌ ಕಳಕಳಿಯಾಗಿದೆ.
ವರದಿ: ಉಮೇಶ್ ಮೊಗವೀರ, ಸಾಗರ