ಕೆಎನ್ಎನ್ಸಿನಿಮಾಡೆಸ್ಕ್: ಸಿನೆಮಾದಿಂದ ಒಂದೊಂದೇ ಜಲಕ್ ತೋರಿಸಿ ಪ್ರೇಕ್ಷಕರ ನಿದ್ದೆ ಕದ್ದು ರಿಲೀಸ್ ಗೆ ಡೇ ಕೌಂಟ್ ಶುರುಮಾಡಿರುವ ಬನಾರಸ್ ಬಗ್ಗೆ ಹೇಳಲಾಗದ ಒಂದು ಕ್ರೇಜ್ ಈಗಾಗಲೇ ಚಿತ್ರರಂಗದಲ್ಲಿ ಹುಟ್ಟಿದೆ. ಸಿನೆಮಾ ತಂಡ ಭರ್ಜರಿ ಪ್ರಚಾರದತ್ತ ತನ್ನ ಗಮನ ಕೇಂದ್ರಿಕರಿಸಿರುವ ಹೊತ್ತಲ್ಲಿ ಮಗದೊಂದು ಸಿಹಿ ಸುದ್ದಿ ತಂಡವನ್ನ ಥ್ರಿಲ್ ಆಗಿಸಿದೆ. ಹೌದು ಬನಾರಸ್ ನ ವಿತರಣಾ ಹಕ್ಕು ಕೇರಳದ ಪ್ರತಿಷ್ಠಿತ ಸಂಸ್ಥೆಯಾಗಿರುವ ಮುಲಕುಪ್ಪಡಮ್ ಖರೀದಿಸುವ ಮೂಲಕ ನವ ನಾಯಕ ಝೈದ್ ಮೊದಲ ಚಿತ್ರಕ್ಕೆ ದಾಖಲೆ ನಿರ್ಮಿಸಿ ಕೊಟ್ಟಿದೆ.
ಈವರೆಗೂ ಉತ್ತಮ ಗುಣಮಟ್ಟದ ಚಿತ್ರಗಳನ್ನ ಮಾತ್ರ ಖರೀದಿಸಿ ವಿತರಿಸಿ ಹೆಸರುವಾಸಿಯಾಗಿರುವ ಈ ಸಂಸ್ಥೆಗೆ ಚಿತ್ರದ ಹಕ್ಕು ಒಲಿಯೋದು ಅಷ್ಟು ಸುಲಭದ ಮಾತಲ್ಲ. ಖುದ್ದು ಸಂಸ್ಥೆ ಯೇ ಚಿತ್ರ ನೋಡಿ ಬಹುವಾಗಿ ಮೆಚ್ಚಿರುವ ಕಾರಣ ಬನಾರಸ್ ಪ್ರಯಾಣಕ್ಕೆ ಈ ಸಂಸ್ಥೆ ನಾಂದಿ ಹಾಡಿದೆ.
ಜಯತೀರ್ಥ ನಿರ್ದೇಶನದ ಬನಾರಸ್ ಕನ್ನಡವೂ ಸೇರಿ ಪಂಚ ಭಾಷೆಯಲ್ಲಿ ಏಕಕಾಲಕ್ಕೆ ತಯಾರಾಗಿ ಪ್ರದರ್ಶನಕ್ಕೆ ಸಜ್ಜಾಗಿ ನಿಂತಿರುವ ಚಿತ್ರ. ಈಗಾಗಲೇ ಸ್ಟಿಲ್ಸ್,ಮೋಷನ್ ಪೋಸ್ಟರ್,ಟ್ರೈಲರ್, ಹಾಡುಗಳ ಮೂಲಕ ದಾಖಲೆಯೊಂದಿಗೆ,ನಿರೀಕ್ಷಿತ ಚಿತ್ರದ ಪಟ್ಟಿಗೆ ಸೇರಿರುವ ಬನಾರಸ್ ಮೇಲೆ ಸಿನಿಪ್ರಿಯರ ಗಮನ ನೆಟ್ಟಿದೆ. ಈ ಹೊತ್ತಲ್ಲಿ ಮುಲಕುಪ್ಪಡಮ್ ಸಂಸ್ಥೆ ಚಿತ್ರದ ಹಕ್ಕು ಖರೀದಿಸಿರುವ ಸುದ್ದಿ ಹಬ್ಬಿದಾಗ ಚಿತ್ರ ಯಾವ ಮಟ್ಟಕ್ಕಿರಲಿದೆ? ಹಾಗು ನವ ನಾಯಕನ ಸಿನೆಮಾಗೆ ಇಷ್ಟೊಂದು ಕ್ರೇಜ್ ಇರೋದು ಚಿತ್ರದ ಮೇಲಿನ ಕಾತುರತೆಯನ್ನ ದುಪ್ಪಾಟ್ಟಾಗಿಸಿದೆ ಅಂದ್ರೆ ಅತಿಶಯೋಕ್ತಿ ಆಗದು.
ಮುಲಕುಪ್ಪಡಮ್ ಹಲವಾರು ಹಿಟ್ ಸಿನಿಮಾಗಳನ್ನು ಕೇರಳದಲ್ಲಿ ಬಿಡುಗಡೆಗೊಳಿಸಿ ಈಗಾಗಲೇ ದೊಡ್ಡ ಹೆಸರು ಮಾಡಿರುವ ಸಂಸ್ಥೆ. ದೇಶಾದ್ಯಂತ ಉದ್ಯಮಿಯಾಗಿ ದೊಡ್ಡ ಹೆಸರು ಮಾಡಿರುವ ಥಾಮಸ್ ಆಂಟೋನಿ, ತೋಮಿಚನ್ ಮುಲಕುಪ್ಪಡಮ್ ಎಂದೇ ಹೆಸರುವಾಸಿಯಾಗಿರುವ ಇವರು ಉದ್ಯಮದೊಂದಿಗೆ ಮುಲಕುಪ್ಪಡಮ್ ಫಿಲಂಸ್ ಮೂಲಕ ಹಲವಾರು ಚಿತ್ರಗಳನ್ನು ನಿರ್ಮಿಸಿ, ಮಲಕುಪ್ಪಡಮ್ ರಿಲೀಸ್ ಸಂಸ್ಥೆಯ ಮೂಲಕ ಹಿಟ್ ಚಿತ್ರಗಳ ವಿತರಕರಾಗಿಯೂ ಯಶಸ್ವಿಯಾಗಿದ್ದಾರೆ. ಹೀಗಿರುವಾಗ ಕೇರಳದ ತುಂಬೆಲ್ಲ ಬನಾರಸ್ ಬಗೆಗೀಗ ಬೇರೆಯದ್ದೇ ದಿಕ್ಕಿನಲ್ಲಿ ನಿರೀಕ್ಷೆ ಉದಯಿಸಿವೆ.
ಇನ್ನುಳಿದಂತೆ ಬನಾರಸ್ ಸಿನಿಮಾಗೆ ನಿರ್ದೇಶಕ ಜಯತೀರ್ಥ ಆಕ್ಷನ್ ಕಟ್ ಹೇಳಿದ್ದು, ಚಿತ್ರವನ್ನು ತಿಲಕ್ ರಾಜ್ ಬಲ್ಲಾಳ್ ಅದ್ದೂರಿಯಾಗಿ ನಿರ್ಮಾಣ ಮಾಡಿದ್ದಾರೆ. ಮೋಷನ್ ಪೋಸ್ಟರ್ ಮೂಲಕವೇ ಸಾಕಷ್ಟು ಕುತೂಹಲ ಮೂಡಿಸಿದ್ದ ಈ ಚಿತ್ರ ಕನ್ನಡ ಸೇರಿದಂತೆ ಮಲಯಾಳಂ ತಮಿಳು, ತೆಲುಗು, ಹಾಗೂ ಹಿಂದಿ ಭಾಷೆಯಲ್ಲಿ ರಿಲೀಸ್ ಆಗಲಿದೆ.
ತಾರಾಗಣದಲ್ಲಿ ನಾಯಕನಾಗಿ ನವ ನಟ ಝೈದ್ ಖಾನ್ ಬಣ್ಣ ಹಚ್ಚಿದ್ರೆ, ನಾಯಕಿಯಾಗಿ ಸೋನಲ್ ಮೊಂತೆರಿಯೋ ಜೊತೆಯಾಗಿದ್ದಾರೆ. ಸುಜಯ್ ಶಾಸ್ತ್ರಿ, ದೇವರಾಜ್, ಅಚ್ಯುತ್ ಕುಮಾರ್, ಸ್ವಪ್ನಾ ಮುಂತಾದ ನುರಿತ ಕಲಾವಿದರಿರುವ ಬನಾರಸ್ ಗೆ ಅಜನೀಶ್ ಬಿ ಲೋಕನಾಥ್ ಅವರ ಸಂಗೀತ ನಿರ್ದೇಶನ, ಅದ್ವೈತ ಗುರುಮೂರ್ತಿ ಅವರ ಛಾಯಾಗ್ರಹಣ ಸೇರಿಸಂತೆ ಪ್ರತಿಭಾನ್ವಿತ ತಾಂತ್ರಿಕ ವರ್ಗ ಶ್ರಮಿಸಿದ್ದು ಇದೇ ನವೆಂಬರ್ 4 ರಂದು ವಿಶಾಲವಾಗಿ ಸಿನಿಪ್ರಿಯರ ಕಣ್ಣಮುಂದೆ ಹಾಜಾರಾಗಲಿದೆ. ಒಟ್ನಲ್ಲಿ ಬನಾರಸ್ ಸಿನೆಮಾ ಸಿನಿರಂಗದಲ್ಲಿ ಹೊಸ ದಾಖಲೆಯನ್ನ ನಿರ್ಮಿಸುವ ಎಲ್ಲ ಲಕ್ಷಣಗಳು ಖಾತ್ರಿಯಾದಂತಿದ್ದು, ಸಧ್ಯ ವಿತರಣಾ ಹಕ್ಕು ಖರೀದಿಸಿರುವ ಮುಲಕುಪ್ಪಡಮ್ ಸಂಸ್ಥೆ ಯೇ ಈ ವಿಚಾರವನ್ನು ಖುದ್ದು ಅಧಿಕೃತವಾಗಿ ಘೋಶಿಸಿಕೊಂಡಿರೋದು ಚಿತ್ರ ತಂಡದ ಖುಷಿಗೆ ಪಾರವಿಲ್ಲದಂತಾಗಿದೆ.
ಈ ವಿದ್ಯಮಾನ ನವನಾಯಕ ಝೈದ್ ಖಾನ್ ಪಾಲಿಗೂ ಹೊಸಾ ಭರವಸೆ, ಹುರುಪು,ಚೈತನ್ಯ ಮೂಡಿಕೊಂಡಂತಾಗಿದೆ ಎನ್ನಬಹುದು.