ಮೈಸೂರು: ಬ್ರಿಟೀಷ್ ರಾಜ್ ವ್ಯವಸ್ಥೆ ವಿರುದ್ಧ ಗಾಂಧಿ ಅವರ ಹೋರಾಟದಂತೆ, ಗಾಂಧಿ ( Mahathma Gandhi ) ಅವರನ್ನು ಕೊಂದವರ ಸಿದ್ಧಾಂತದ ವಿರುದ್ಧ ನಾವು ಇಂದು ಹೋರಾಟ ಮಾಡುತ್ತಿದ್ದೇವೆ. ಈ ಸಿದ್ಧಾಂತದ ಪರಿಣಾಮ ಕಳೆದ ಎಂಟು ವರ್ಷಗಳಿಂದ ದೇಶದಲ್ಲಿ ಅಸಮಾನತೆ, ಸಮಾಜ ವಿಭಜನೆ ಹಾಗೂ ಕಷ್ಟಪಟ್ಟು ಪಡೆದ ಸ್ವಾತಂತ್ರ್ಯದ ಹರಣವಾಗುತ್ತಿದೆ. ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೂ ಈ ಹಿಂಸಾತ್ಮಕ ರಾಜಕೀಯ, ಅಸತ್ಯದ ವಿರುದ್ಧ ಭಾರತ ಐಕ್ಯತಾ ಯಾತ್ರೆ ಮೂಲಕ ಅಹಿಂಸೆ ಮತ್ತು ಸ್ವರಾಜ್ಯದ ಸಂದೇಶವನ್ನು ಪಸರಿಸಲಾಗುತ್ತಿದೆ ಎಂಬುದಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ( Rahul Gandhi ) ಹೇಳಿದ್ದಾರೆ.
ಮೈಸೂರಿನ ಭಾರತ ಐಕ್ಯತಾ ಯಾತ್ರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಮಹಾತ್ಮ ಗಾಂಧಿ ಅವರ 153ನೇ ಜಯಂತೋತ್ಸವ ಹಿನ್ನೆಲೆಯಲ್ಲಿ ಇಂದು ನಾವೆಲ್ಲರೂ ಬದನವಾಳುವಿನ ಖಾದಿ ಗ್ರಾಮೋದ್ಯೋಗ ಕೇಂದ್ರದಲ್ಲಿ ಸೇರಿದ್ದೇವೆ. ಮಹಾತ್ಮ ಗಾಂಧಿ ಅವರು 1927ರಲ್ಲಿ ಈ ಕೇಂದ್ರಕ್ಕೆ ಭೇಟಿ ನೀಡಿದ್ದು, ಈ ಕೇಂದ್ರದಲ್ಲಿ ಭಾರತ ಮಾತೆಯ ಶ್ರೇಷ್ಠ ಪುತ್ರನಿಗೆ ನಮನ ಸಲ್ಲಿಸುತ್ತಿದ್ದೇವೆ. ಭಾರತ ಜೋಡೋ ಯಾತ್ರೆಯ 25ನೇ ದಿನವಾದ ಇಂದು ನಾವು ಗಾಂಧಿ ಅವರ ಸ್ಮರಣೆ ಮಾಡುತ್ತಿದ್ದು, ಈ ಯಾತ್ರೆ ಗಾಂಧಿ ಅವರ ಅಹಿಂಸೆ, ಏಕತೆ, ಸಮಾನತೆ ಹಾಗೂ ನ್ಯಾಯದ ಮಾರ್ಗದಲ್ಲಿ ಸಾಗುತ್ತಿದೆ ಎಂದರು.
ಸ್ವರಾಜ್ಯಕ್ಕೆ ಹಲವು ಅರ್ಥಗಳಿವೆ. ಅಂದರೆ ಭಯದಿಂದ ಮುಕ್ತಿಗೊಳ್ಳುವುದು. ನಮ್ಮ ರೈತರು, ಯುವಕರು, ಸಣ್ಣ ಮತ್ತು ಮಧ್ಯಮ ವ್ಯಾಪಾರಸ್ಥರು ಇದನ್ನೇ ಬಯಸುತ್ತಿದ್ದಾರೆ. ಇನ್ನು ನಮ್ಮ ರಾಜ್ಯಗಳು ತಮಗಿರುವ ಸಂವಿಧಾನಿಕ ಸ್ವಾಂತ್ರ್ಯವನ್ನು ಅನುಭವಿಸಿ, ನಮ್ಮ ಹಳ್ಳಿಗಳು ಪಂಚಾಯತ್ ರಾಜ್ ವ್ಯವಸ್ಥೆಯನ್ನು ಹೊಂದುವ ಅವಕಾಶ ಪಡೆಯುವ ಸ್ವಾಂತ್ರ್ಯವಾಗಿದೆ. ಅಷ್ಟೇ ಅಲ್ಲ ಇದು ಈ ಯಾತ್ರೆಯಲ್ಲಿ 3600 ಕಿ.ಮೀ ಸಾಗುತ್ತಿರುವ ಯಾತ್ರಿಗಳು ಹಾಗೂ ಅಲ್ಪವಧಿಯಲ್ಲಿ ಸಾಗುತ್ತಿರುವ ಲಕ್ಷಾಂತರ ಜನರ ಗೆಲುವಾಗಿದೆ. ಈ ಯಾತ್ರೆಯು ಭಯ, ದ್ವೇಷ ಹಾಗೂ ವಿಭಜನೆ ರಾಜಕೀಯದ ವಿರುದ್ಧ ದೇಶದ ಜನರು ಗಟ್ಟಿ ಧ್ವನಿ ಎತ್ತುವ ಯಾತ್ರೆಯಾಗಿದೆ. ಅಧಿಕಾರದಲ್ಲಿರುವವರಿಗೆ ಗಾಂಧಿ ಅವರ ಪರಂಪರೆ ಬಗ್ಗೆ ಮಾತನಾಡುವುದು ಸುಲಭವಾಗಬಹುದು. ಆದರೆ ಅವರ ಹಾದಿಯಲ್ಲಿ ಸಾಗುವುದು ಬಹಳ ಕಷ್ಟವಾಗಲಿದೆ ಎಂದು ಹೇಳಿದರು.
ಈ ಯಾತ್ರೆಯಲ್ಲಿ ಅಪಾರ ಪ್ರಮಾಣದಲ್ಲಿ ಪುರುಷರು, ಮಹಿಳೆಯರು, ಮಕ್ಕಳು ಭಾಗವಹಿಸಿದ್ದಾರೆ. ಗಾಂಧಿ ಅವರು ನಮ್ಮ ಸಂವಿಧಾನಿಕ ಹಕ್ಕಿಗಾಗಿ ತ್ಯಾಗ ಬಲಿದಾನ ನೀಡಿದ್ದು, ಇಂದು ಆ ಹಕ್ಕುಗಳು ಅಪಾಯಕ್ಕೆ ಸಿಲುಕಿವೆ ಎಂಬುದು ಬಹುತೇಕರಿಗೆ ಮನದಟ್ಟಾಗಿದೆ. ನಮ್ಮ ಯಾತ್ರೆ ಮೈಸೂರಿನಿಂದ ಕಾಶ್ಮೀರದವರೆಗೆ ಸಾಗುತ್ತಿದ್ದಂತೆ ಎಲ್ಲರೂ ಈ ಯಾತ್ರೆಯಲ್ಲಿ ಅಹಿಂಸಾ ಹಾಗೂ ಸದ್ಭಾವನ ಮನೋಭಾವದಿಂದ ನಮ್ಮೊಡನೆ ಹೆಜ್ಜೆ ಹಾಕಬೇಕು ಎಂದು ಮನವಿ ಮಾಡಿದರು.