ಬೆಂಗಳೂರು: ಕ್ಷೇತ್ರದ ಶಾಸಕರನ್ನು ಕತ್ತಲೆಯಲ್ಲಿಟ್ಟು ಕಾಮಗಾರಿ ರಾಜಕೀಯ ಮಾಡಲಾಗುತ್ತಿದೆ. ಚನ್ನಪಟ್ಟಣ ವಿಧಾನಸಭೆ ಕ್ಷೇತ್ರದಲ್ಲಿ ನನಗೆ ಅಪಮಾನ ಮಾಡಲಾಗಿದೆ. ಅಲ್ಲಿನ ಅಧಿಕಾರಿಗಳು ನನ್ನ ಪಾಲಿಗೆ ಹಕ್ಕುಚ್ಯುತಿ ಎಸಗಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿಗಳು ಹಾಗೂ ಚನ್ನಪಟ್ಟಣ ಶಾಸಕರೂ ಆಗಿರುವ ಹೆಚ್.ಡಿ.ಕುಮಾರಸ್ವಾಮಿ ಅವರು ಆಕ್ರೋಶ ವ್ಯಕ್ತಪಡಿಸಿದರು.
ಪಕ್ಷದ ರಾಜ್ಯ ಕಚೇರಿ ಜೆ.ಪಿ.ಭವನದಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದರು ಅವರು, ಓರ್ವ ನಾಮನಿರ್ದೇಶಿತ ವಿಧಾನ ಪರಿಷತ್ ಸದಸ್ಯರ ರಾಜಕೀಯ ಹಿತರಕ್ಷಣೆ ಮಾಡುವ ಏಕೈಕ ಉದ್ದೇಶದಿಂದ ಎಲ್ಲ ಶಿಷ್ಟಾಚಾರಗಳನ್ನು ಗಾಳಿಗೆ ತೂರಿ ರಾಜ್ಯ ಸರಕಾರದ ಅಧಿಕಾರಿಗಳು ಅಪಚಾರ ಎಸಗಿದ್ದಾರೆ. ಇಂದು ಚನ್ನಪಟ್ಟಣದಲ್ಲಿ ನಡೆದಿರುವ ಎಲ್ಲ ಘಟನೆಗಳಿಗೂ ಸರಕಾರ, ಅಧಿಕಾರಿಗಳು ಮತ್ತು ವಿಧಾನಪರಿಷತ್ ಸದಸ್ಯರೇ ಕಾರಣ ಎಂದು ಅವರು ಆರೋಪ ಮಾಡಿದರು.
ನಾನೊಬ್ಬ ಮಾಜಿ ಮುಖ್ಯಮಂತ್ರಿ. ನನ್ನಂಥವರಿಗೇ ಸರಕಾರ ಈ ರೀತಿ ಕಿರುಕುಳ ನೀಡಿದರೆ, ಇತರೆ ಶಾಸಕರ ಪಾಡೇನು? ಶಾಸಕನಾದ ನನ್ನ ಹಕ್ಕುಚ್ಯುತಿಗೆ ಕಾರಣರಾದ ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ಧಿ ನಿಯಮಿತ (ಕೆ.ಆರ್.ಐ.ಡಿ.ಎಲ್.) ಅಧಿಕಾರಿಗಳು ಹಾಗೂ ಜಿಲ್ಲೆಯ ಇನ್ನಿತರೆ ಅಧಿಕಾರಿಗಳನ್ನು ಕೂಡಲೇ ಸೇವೆಯಿಂದ ಅಮಾನತು ಮಾಡಬೇಕು ಎಂದು ಕುಮಾರಸ್ವಾಮಿ ಅವರು ಒತ್ತಾಯ ಮಾಡಿದರು.
ಇಲ್ಲವಾದರೆ, ವಿಧಾನಸಭೆಯ ಒಳಗೆ, ಹೊರಗೆ ಹೋರಾಟ ನಡೆಸುತ್ತೇನೆ ಹಾಗೂ ಸದನದಲ್ಲಿ ಹಕ್ಕುಚ್ಯುತಿ ನಿರ್ಣಯ ಮನ್ನಡಿಸಲಾಗುವುದು. ಈ ಬಗ್ಗೆ ವಿಧಾನಸಭಾಧ್ಯಕ್ಷರಿಗೆ ದೂರು ನೀಡಲಾಗುವುದು. ಈ ಬಗ್ಗೆ ಸ್ವತಃ ಹಿಂದೆ ಮುಖ್ಯಮಂತ್ರಿಗಳಿಗೆ ಪತ್ರ ನಡೆದು ದೂರು ನೀಡಿದ್ದೆ. ಈವರೆಗೆ ಅವರು ನನಗೆ ಉತ್ತರ ನೀಡಿಲ್ಲ ಎಂದು ಗುಡುಗಿದರು ಮಾಜಿ ಮುಖ್ಯಮಂತ್ರಿಗಳು.
ನನಗೆ ಆಗಿರುವ ಅಪಮಾನ ಕ್ಷೇತ್ರದ ಜನತೆಗೆ ಮಾಡಿರುವ ಅಪಮಾನ. ಕಾಮಗಾರಿಗೆ ಅಡಿಗಲ್ಲು ಹಾಕುವುದಾದರೆ ಶಾಸಕರನ್ನು ಹೊರಗಿಟ್ಟು ಮಾಡಬೇಕು ಎನ್ನುವ ನಿಯಮ ಇದೆಯೇ? ಇಷ್ಟು ದಿನಗಳಿಂದ ಸುಮ್ಮನಿದ್ದು, ಈಗ ವಿಧಾನ ಪರಿಷತ್ ಸದಸ್ಯರಿಗೆ ಚಿತಾವಣೆ ಮಾಡಿ ಅತಿ ಉತ್ಸಾಹದಿಂದ ಕಾಮಗಾರಿಗಳಿಗೆ ಚಾಲನೆ ನೀಡಲು ಹೊರಟ ಒಳಗುಟ್ಟು ಏನು? ಈ ರೀತಿ ಆಳ್ವಿಕೆ ನಡೆಸಲೆಂದು ಆರ್ ಎಸ್ ಎಸ್ ಕಲಿಸಿಕೊಟ್ಟಿರುವುದಾ? ಎಂದು ಅವರು ಪ್ರಶ್ನಿಸಿದರು.
BIGG NEWS: ಭಾರತ್ ಜೋಡೋ ಯಾತ್ರೆ, ಇದು ಕಾಂಗ್ರೆಸ್ನ ಕೊನೆಯ ಪಾದಯಾತ್ರೆ; ಆನಂದ್ ಸಿಂಗ್ ವ್ಯಂಗ್ಯ
ಇವತ್ತಿನ ದಿನ ನನ್ನ ಕ್ಷೇತ್ರ ಚನ್ನಪಟ್ಟಣದಲ್ಲಿ ಸರಕಾರದ ಅನುದಾನ ಕಾರ್ಯಕ್ರಮದ ಶಂಕುಸ್ಥಾಪನೆ ಇತ್ತು. ಆದರೆ, ಸರಕಾರದ ನಿಯಮಾವಳಿಗಳನ್ನು ಗಾಳಿಗೆ ತೂರಿ ರಾಜಕೀಯಕ್ಕೊಸ್ಕರ ಇವತ್ತು ಕಾರ್ಯಕ್ರಮ ಮಾಡಿದ್ದಾರೆ ಅವರು ಕಿಡಿಕಾರಿದರು.
ಕಡ್ಡಾಯವಾಗಿ ಕ್ಷೇತ್ರದ ಶಾಸಕರ ಉಪಸ್ಥಿತಿಯಲ್ಲಿಯೇ ರಾಜ್ಯ ಸರಕಾರದ ಎಲ್ಲ ಅನುದಾನದ ಕಾರ್ಯಕ್ರಮಗಳನ್ನು ನಡೆಸಲೇಬೇಕು ಎಂದು ಖುದ್ದು ಮುಖ್ಯಮಂತ್ರಿಗಳೇ ಸದನದಲ್ಲೇ ಹೇಳಿದ್ದಾರೆ. ರಾಮನಗರ ಜಿಲ್ಲೆಯಲ್ಲಿ ಆಯೋಜಿಸುವ ಸರಕಾರಿ ಕಾರ್ಯಕ್ರಮಗಳಲ್ಲಿ ಶಿಷ್ಟಾಚಾರ ಕಟ್ಟುನಿಟ್ಟಾಗಿ ಪಾಲಿಸಬೇಕು. ತಪ್ಪಿದ್ದಲ್ಲಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿಗಳು ಹೇಳಿದ್ದಾರೆ. ಇದು ಅಧಿಕಾರಿಗಳ ಗಮನಕ್ಕೆ ಇಲ್ಲವೇ? ಎಂದು ಕುಮಾರಸ್ವಾಮಿ ಅವರು ಹೇಳಿದರು.
ಇತ್ತೀಚೆಗೆ ಕೆಐಎಡಿಬಿ ಸಭೆಯಲ್ಲೂ ಉಸ್ತುವಾರಿ ಸಚಿವರಾಗಿ ನಾನೇ ಎಲ್ಲಾ ಉದ್ಘಾಟನೆ ಕಾರ್ಯಕ್ರಮಗಳಿಗೆ ಬರುತ್ತೇನೆ ಎಂದು ರಾಮನಗರ ಉಸ್ತುವಾರಿ ಸಚಿವರು ಹೇಳಿದ್ದಾರೆ. ಮೊನ್ನೆ ಮುದ್ರಿಸಿ ಹೊರಡಿಸಿರುವ ಆಹ್ವಾನ ಪತ್ರಿಕೆಯನ್ನು ನನ್ನ ಗಮನಕ್ಕೆ ತಂದಿಲ್ಲ. ವಿಧಾನ ಪರಿಷತ್ ಸದಸ್ಯರ ಕೋರಿಕೆ ಮೇರೆಗೆ 50 ಕೋಟಿ ರೂ. ಬಿಡುಗಡೆ ಮಾಡಿದ್ದಾರೆಂದು ಸಿ.ಪಿ. ಯೋಗೇಶ್ವರ್ ಹೆಸರು ಹಾಕಿದ್ದಾರೆ. ಒಬ್ಬ ಮಾಜಿ ಮುಖ್ಯಮಂತ್ರಿ ಕ್ಷೇತ್ರದಲ್ಲೇ ಈ ರೀತಿ ದಬ್ಬಾಳಿಕೆ ಅಂದರೆ ನೀವೇ ಯೋಚನೆ ಮಾಡಿ. ಇದರ ಬಗ್ಗೆ ಜಿಲ್ಲಾಧಿಕಾರಿಗಳ ಜತೆ ಮಾತಾಡಿದ್ದೇನೆ. ಅವರು ನನ್ನ ಗಮನಕ್ಕೆ ಕೂಡ ಬಂದಿಲ್ಲ ಅಂತಾರೆ. ಈ ಬಗ್ಗೆ ಮುಖ್ಯಮಂತ್ರಿಗಳು ಉತ್ತರ ಕೊಡುತ್ತಿಲ್ಲ ಎಂದು ಇಡೀ ಮಾಹಿತಿಯನ್ನು ಮಾಜಿ ಮುಖ್ಯಮಂತ್ರಿಗಳು ತೆರೆದಿಟ್ಟರು.
ಕಾಂಗ್ರೆಸ್ – ಜೆಡಿಎಸ್ ಮೈತ್ರಿ ಸರ್ಕಾರ ಕೆಡುವುದರಲ್ಲಿ ಸಿ.ಪಿ.ಯೋಗೇಶ್ವರ್ ಪಾತ್ರ ಏನು? ಆಗ ಅವರು ಯಾವ ಪಾಪದ ಹಣ ಬಳಸಿಕೊಂಡರು ಅನ್ನುವುದನ್ನು ನಾನು ಈಗ ಮಾತನಾಡುವುದಿಲ್ಲ. ಮುಂದಿನ ಆರು ತಿಂಗಳಲ್ಲಿ ವಿಧಾನಸಭೆ ಚುನಾವಣೆ ಇರುವುದರಿಂದ ಹಣ ಹೊಡೆಯೋಕೆ ಯೋಗೇಶ್ವರ್ ಹೀಗೆಲ್ಲಾ ಮಾಡುತ್ತಿದ್ದಾರೆ ಎಂದು ಅವರು ಟೀಕಾ ಪ್ರಹಾರ ನಡೆಸಿದರು.
ನಾನು ಮುಖ್ಯಮಂತ್ರಿಯಾಗಿದ್ದಾಗ ಆಗ ಶಾಸಕರಾಗಿದ್ದ, ಈಗ ಸಚಿವರಾಗಿರುವ ಒಬ್ಬರ ಕ್ಷೇತ್ರಕ್ಕೆ 1,700 ಕೋಟಿ ರೂ. ಅನುದಾನ ಕೊಟ್ಟಿದ್ದೆ. ಅವರು ಈಗಲೂ ನೆನಪು ಮಾಡಿಕೊಳ್ಳುತ್ತಾರೆ. ನಾನೆಂದೂ ಅನುದಾನ ನೀಡಿಕೆಯಲ್ಲಿ ತಾರತಮ್ಯ ಮಾಡಿದವನಲ್ಲ. ಇದನ್ನು ಬಿಜೆಪಿ ಸರಕಾರ ಅರ್ಥ ಮಾಡಿಕೊಳ್ಳಬೇಕು ಎಂದರು ಅವರು.
ನನ್ನ ಶಕ್ತಿ ಕುಂದಿಸಲು ಸಾಧ್ಯವಿಲ್ಲ
ಅಭಿವೃದ್ಧಿ ಕಾಮಗಾರಿಗಳಿಗೆ ಜನರನ್ನು ಸೇರಿಸಿಕೊಂಡು ಚಾಲನೆ ನೀಡಬೇಕು. ಅದನ್ನು ಹೊರತುಪಡಿಸಿ ಪೊಲೀಸ್ ಬೆಟಾಲಿಯನ್ ಗಳನ್ನು ಇಟ್ಟುಕೊಂಡು ಶಂಕುಸ್ಥಾಪನೆ ಮಾಡಿದ್ದಾರೆ. ಇದರಿಂದ ನನ್ನ ಶಕ್ತಿಯನ್ನು ಕುಂದಿಸಲು ಸಾಧ್ಯವಿಲ್ಲ. ರಾಮನಗರ ಜನತೆಯೊಂದಿಗೆ ನನ್ನ ಒಡನಾಟ ಯಾವ ರೀತಿ ಇದೆ ಅಂತ ಎಲ್ಲರಿಗೂ ಗೊತ್ತು. ಅದನ್ನೇ ನನ್ನ ದೌರ್ಬಲ್ಯ ಅಂದುಕೊಂಡರೆ ಮುಂದಿನ ದಿನಗಳಲ್ಲಿ ನನ್ನ ಶಕ್ತಿ ಏನೆಂಬುದನ್ನು ನೋಡಬೇಕಾಗುತ್ತದೆ ಎಂದು ಅವರು ನೇರವಾಗಿ ಎಚ್ಚರಿಕೆ ನೀಡಿದರು.
ಧಮ್ಮು, ತಾಖತ್ತು ಎಂದರೆ ಅದಕ್ಕೂ ಸಿದ್ಧರಿದ್ದೇವೆ
ಪ್ರೀತಿ, ವಿಶ್ವಾಸ ಮತ್ತು ಕಾನೂನಿಗೆ ತಲೆಬಾಗುತ್ತೇನೆ. ನೀವು ಧಮ್ಮು, ತಾಖತ್ತು ಎಂದು ಹೇಳಿ ತೋರಿಸುವುದಕ್ಕೆ ಬಂದರೆ ಅದಕ್ಕೆ ನಾವೂ ಸಿದ್ಧರಿದ್ದೇವೆ. ಹಿಂದಿನ ಮುಖ್ಯಮಂತ್ರಿ ಒಬ್ಬರು ಹೆಚ್.ಡಿ.ದೇವೇಗೌಡರ ಕುಟುಂಬವನ್ನು ಕೆಣಕಿ ಏನಾದರು? ಅದನ್ನು ಒಮ್ಮೆ ನೆನಪು ಮಾಡಿಕೊಂಡರೆ ಉತ್ತಮ. ಯಾವುದೇ ಕಾರಣಕ್ಕೂ ನನ್ನ ಪಕ್ಷದ ಕಾರ್ಯಕರ್ತರನ್ನು ಕೆರಳಿಸೋಕೆ ಹೋಗಬೇಡಿ ಎಂದು ಅವರು ಚಾಟಿ ಬೀಸಿದರು.
ಮಂಡ್ಯದಲ್ಲಿ ಲೋಕಸಭೆ ಚುನಾವಣೆಯಲ್ಲಿ ನನ್ನನ್ನು ಮುಗಿಸಬೇಕು ಎಂದು ಕಾಂಗ್ರೆಸ್, ಬಿಜೆಪಿ ಪಕ್ಷಗಳು ಒಂದಾಗಿದ್ದವು. ಈಗ ರಾಮನಗರದಲ್ಲಿ ಒಬ್ಬರನ್ನು ತಯಾರು ಮಾಡಿ ಬಿಟ್ಟಿದ್ದಾರೆ. ಈಗ ಚನ್ನಪಟ್ಟಣಕ್ಕೆ ವಿಧಾನಸಭೆ ಕ್ಷೇತ್ರದಲ್ಲಿ ನನ್ನನ್ನು ಕಟ್ಟಿಹಾಕಲು ಬಿಜೆಪಿ, ಕಾಂಗ್ರೆಸ್ ಒಂದಾಗಿವೆ ಅನ್ನುವುದೂ ನನಗೆ ಗೊತ್ತಿದೆ. ಆದರೆ ನಾನು ಅಲ್ಲಿ ಜನರ ಮನೆಯ ಮಗನಾಗಿದ್ದೇನೆ. ಅವರು ಏನು ಮಾಡುವುದಕ್ಕೆ ಆಗುವುದಿಲ್ಲ ಎಂದು ನೇರ ಮಾತುಗಳಲ್ಲಿ ಅವರು ಹೇಳಿದರು.
ಚನ್ನಪಟ್ಟಣದಲ್ಲಿ ಸಾವಿರಾರು ಪೊಲೀಸರ ಬೆಟಾಲಿಯನ್ ಹಾಕಿದ್ದರು. ಇತಿಹಾಸದಲ್ಲಿ ಇಷ್ಟು ಪೊಲೀಸರನ್ನು ಹಾಕಿದ್ದು ಇದೇ ಮೊದಲು. ಯೋಗೇಶ್ವರ್ ಎಂಎಲ್ ಸಿ ಆಗಿರುವುದು ಕಲಾವಿದರ ಕೋಟಾದಲ್ಲಿ. ಅವರ ‘ಕೋರಿಕೆ ಮೇರೆಗೆ’ 50 ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡುವುದು ಎಂದರೆ ಏನರ್ಥ? ಯಾರ ಕಿಸೆಗೆ ಹಣ ಹರಿದು ಹೋಗಲು ಹೀಗೆ ಮಾಡಿದ್ದಾರೆ ಇವರು. ಇವರ ಜತೆಗೆ ಅಧಿಕಾರಿಗಳ ಉದ್ದಟತನವೂ ಹೆಚ್ಚಾಗಿದೆ. ಮಾಜಿ ಮುಖ್ಯಮಂತ್ರಿಯೊಬ್ಬರನ್ನು ಲಘುವಾಗಿ ಪರಿಗಣಿಸಿದ್ದಾರೆ. ಶಾಸಕರ ಅನುಪಸ್ಥಿತಿಯಲ್ಲಿ ಕಾರ್ಯಕ್ರಮ ಮಾಡಿದ್ದಾರೆ. ಈ ಬಗ್ಗೆ ಮುಖ್ಯಕಾರ್ಯದರ್ಶಿಗೆ ಪತ್ರ ಬರೆದಿದ್ದೇನೆ. ದೂರವಾಣಿ ಮೂಲಕವೂ ದೂರು ನೀಡಿದ್ದೇನೆ ಎಂದು ಕುಮಾರಸ್ವಾಮಿ ಅವರು ಹೇಳಿದರು.
ಈ ಕಾರ್ಯಕ್ರಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವರು ಯಾಕೆ ಹೋಗಿಲ್ಲ? ಅವರ ಗಮನಕ್ಕೂ ಈ ಕಾಮಗಾರಿ ಚಾಲನೆ ವಿಷಯ ಬಂದಿಲ್ಲವೇ? ಎಂದು ಪ್ರಶ್ನಿಸಿದ ಅವರು, ಒಂದು ಕಡೆ ಕಾರ್ಯಕ್ರಮ ಮುಂದೂಡಿಕೆ ಮಾಡಲಾಗಿದೆ ಎನ್ನುತ್ತಾರೆ. ಇನ್ನೊಬ್ಬರು ಎಲ್ಲ ಕಾರ್ಯಕ್ರಮಗಳನ್ನು ತಾವೇ ಮುಂದೆ ನಿಂತು ವ್ಯವಸ್ಥೆ ಮಾಡುತ್ತಿದ್ದಾರೆ ಎಂದರು.
ಇಬ್ಬರು ಗುತ್ತಿಗೆದಾರರ ಬಗ್ಗೆ ಯೋಗೇಶ್ವರ್ ಮಾತನಾಡಿದ್ದಾರೆ. ಅವರು ಯಾವ ಗುತ್ತಿಗೆದಾರರು ಎನ್ನುವುದನ್ನು ಅವರು ಹೇಳಬೇಕು. ಅವರದೇ ಸರಕಾರ ಇದೆ. ತನಿಖೆ ಮಾಡಿಸಲಿ. ಆ ಇಬ್ಬರು ಗುತ್ತಿಗೆದಾರರು ಹಿಂದೆ ಕಾಂಗ್ರೆಸ್, ಬಿಜೆಪಿ ಸರಕಾರಗಳ ಅವಧಿಯಲ್ಲಿ ಎಷ್ಟು ಕೆಲಸ ಮಾಡಿದ್ದಾರೆ? ಎಂದು ಜನರಿಗೂ ಗೊತ್ತಾಗಲಿ. ಯಾವುದೇ ಚರ್ಚೆಗೆ ನಾನು ತಯಾರಿದೇನೆ ಎಂದು ಅವರು ಸವಾಲು ಹಾಕಿದರು.
ನಮ್ಮ ಪಕ್ಷದಲ್ಲಿ ಗೂಂಡಾಗಳು ಇಲ್ಲ , ಇರುವುದು ಕಾರ್ಯಕರ್ತರು ಮಾತ್ರ. ಹೊರಗಿನಿಂದ ಜನರನ್ನು ಕರೆ ತರುವಂಥ ಸ್ಥಿತಿ ನಮಗೆ ಬಂದಿಲ್ಲ ಎಂದು ಅವರು ತಿಳಿಸಿದರು.
ನಾನು ಬ್ಲಾಕ್ ಮೇಲ್ ರಾಜಕೀಯ ಮಾಡುತ್ತಿದ್ದೇನೆ ಎಂಬ ಯೋಗೇಶ್ವರ್ ಆರೋಪ ವಿಚಾರಕ್ಕೆ ಪ್ರತಿಕ್ರಿಯಿಸಿದ ಹೆಚ್ ಡಿಕೆ, ಅಯ್ಯೋ ರಾಮ… ನಾನು ಯಾಕೆ ಬ್ಲಾಕ್ ಮೇಲ್ ಮಾಡಲಿ? ನಾನು ಇರುವುದು ಬ್ಲಾಕ್ (ಬಣ್ಣ) ಅಷ್ಟೇ. ನನಗೆ ಅದ್ಯಾವ ಬ್ಲಾಕ್ ಮೇಲ್ ಅನ್ನೊದೇ ಗೊತ್ತಿಲ್ಲ ಎಂದು ವ್ಯಂಗ್ಯವಾಡಿದರು.
ಬಿಎಂಎಸ್ ನಲ್ಲಿ ಜೈಲಿಗೆ ಹೋಗುತ್ತಾರೆ
ಬಿಎಂಎಸ್ ಟ್ರಸ್ಟ್ ಹಗರಣ ತನಿಖೆಯಾದರೆ ಯಾರ ತಲೆ ಉರುಳುತ್ತದೆಯೋ ಗೊತ್ತಿಲ್ಲ. ತನಿಖೆಯಾದರೆ ಒಬ್ಬೊಬ್ಬರ ಇತಿಹಾಸವೂ ಹೊರಬರುತ್ತದೆ ಎಂದು ಗುಡುಗಿದ ಹೆಚ್ ಡಿಕೆ, ಚನ್ನಪಟ್ಟಣದಲ್ಲಿ ಈ ರೀತಿಯ ದೌರ್ಜನ್ಯಕ್ಕೆ ನಾನು ಹೆದರುವುದಿಲ್ಲ. ಶಂಕುಸ್ಥಾಪನೆಗೆ ಜಿಲ್ಲಾ ಉಸ್ತುವಾರಿ ಸಚಿವರು ಯಾಕೆ ಹೋಗಿಲ್ಲ. ವಿಧಾನಪರಿಷತ್ ನ ನಾಲ್ಕು ಚೇಲಾಗಳನ್ನು ಇಟ್ಟುಕೊಂಡು ಮಾಡುತ್ತೀರಾ?, ಅಧಿಕಾರಿಗಳು ಅವರ ಜೊತೆ ಇದ್ದುಕೊಂಡೇ ಗುದ್ದಲಿಪೂಜೆ ಮಾಡುತ್ತೀರಾ?, ಉಲ್ಲಂಘನೆ ಮಾಡಿರುವ ಅವರನ್ನು ಬಂಧಿಸಬೇಕು. ಅದು ಬಿಟ್ಟು ಧರಣಿ ಮಾಡುವವರನ್ನು ಬಂಧಿಸುತ್ತೀರಾ ಎಂದು ಕಿಡಿಕಾರಿದರು.