ಇಂದೋರ್: ಮಧ್ಯಪ್ರದೇಶದ ಇಂದೋರ್ ನಗರದಲ್ಲಿ ಬೀದಿ ನಾಯಿಗಳ ಖಾಸಗಿ ಭಾಗಗಳಿಗೆ ಪೆಟ್ರೋಲ್ ಹಾಕಿದ್ದ ಆರೋಪದ ಮೇಲೆ ಪೊಲೀಸರು ಇಬ್ಬರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ಬುಧವಾರ ತಿಳಿಸಿದ್ದಾರೆ. ಈ ಕ್ರೌರ್ಯದ ಕೃತ್ಯದಿಂದಾಗಿ ನಾಯಿಗಳು ನೋವಿನಿಂದ ನರಳುತ್ತವೆ ಎಂದು ಸಂಯೋಗಿತಗಂಜ್ ಪೊಲೀಸ್ ಠಾಣೆಯ ಅಧಿಕಾರಿ ತಿಳಿಸಿದ್ದಾರೆ.
ಜಾವೋರಾ ಕಾಂಪೌಂಡ್ ಪ್ರದೇಶದಲ್ಲಿರುವ ಡೈರಿಯೊಂದರ ಇಬ್ಬರು ಉದ್ಯೋಗಿಗಳು ಬೀದಿನಾಯಿಗಳ ಜನನಾಂಗಕ್ಕೆ ಸಿರಿಂಜ್ ನಿಂದ ಪೆಟ್ರೋಲ್ ಸಿಂಪಡಿಸುವ ಮೂಲಕ ದೀರ್ಘಕಾಲದಿಂದ ಕಿರುಕುಳ ನೀಡುತ್ತಿದ್ದರು ಎಂದು ಆರೋಪಿಸಲಾಗಿದೆ. ಪೀಪಲ್ ಫಾರ್ ಅನಿಮಲ್ಸ್ ಸಂಘಟನೆಯ ಇಂದೋರ್ ಘಟಕದ ಅಧ್ಯಕ್ಷ ಪ್ರಿಯಾಂಶು ಜೈನ್ ಅವರು ಮಂಗಳವಾರ ರಾತ್ರಿ ಸಂಯೋಗಿತಗಂಜ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಅದರ ಆಧಾರದ ಮೇಲೆ ಇಬ್ಬರು ವ್ಯಕ್ತಿಗಳ ವಿರುದ್ಧ ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆ ಮತ್ತು ಇತರ ಸಂಬಂಧಿತ ನಿಬಂಧನೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.