ಕೆಎನ್ಎನ್ಡಿಜಿಟಲ್ ಡೆಸ್ಕ್ : ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ನಾಮನಿರ್ದೇಶನ ಪ್ರಕ್ರಿಯೆ ಸೆಪ್ಟೆಂಬರ್ 24ರಂದು ಪ್ರಾರಂಭವಾಗಲಿದೆ. ಏತನ್ಮಧ್ಯೆ, ಅಧ್ಯಕ್ಷ ಸ್ಥಾನದ ರೇಸ್’ನಲ್ಲಿ ತೊಡಗಿರುವ ನಾಯಕರಿಗೆ ರಾಹುಲ್ ಗಾಂಧಿ ದೊಡ್ಡ ಸಲಹೆ ನೀಡಿದ್ದಾರೆ.
ಭಾರತ್ ಜೋಡೋ ಯಾತ್ರೆಯಲ್ಲಿರುವ ರಾಹುಲ್ ಗಾಂಧಿ, ಕಾಂಗ್ರೆಸ್ ಅಧ್ಯಕ್ಷರಾಗಿರುವುದು ಕೇವಲ ಕಚೇರಿ ಮಾತ್ರವಲ್ಲ, ನಂಬಿಕೆಯ ಸಂಕೇತ ಎಂದು ಗುರುವಾರ ಹೇಳಿದ್ದಾರೆ. ಇದು ಭಾರತದ ದೃಷ್ಟಿಕೋನವನ್ನ ಪ್ರತಿನಿಧಿಸುತ್ತದೆ ಎಂದರು.
ಮಾಧ್ಯಮಗಳೊಂದಿಗೆ ಮಾತನಾಡಿದ ರಾಹುಲ್ ಗಾಂಧಿ, ‘ಕಾಂಗ್ರೆಸ್ ಅಧ್ಯಕ್ಷರ ಚುನಾವಣೆಗೆ ಸ್ಪರ್ಧಿಸುವವರಿಗೆ ನನ್ನ ಸಲಹೆ ಏನೆಂದರೆ, ನೀವು ಪಡೆಯಲಿರುವ ಸ್ಥಾನವು ಐತಿಹಾಸಿಕ ಮತ್ತು ಭಾರತದ ಕಲ್ಪನೆಯನ್ನ ಪ್ರತಿನಿಧಿಸುತ್ತದೆ.ಇದು ಕೇವಲ ಸಂಸ್ಥೆಯ ಪೋಸ್ಟ್ ಅಲ್ಲ. ಆದ್ರೆ, ಒಂದು ನಂಬಿಕೆಯನ್ನ ಪ್ರತಿನಿಧಿಸುವ ಸೈದ್ಧಾಂತಿಕ ಪೋಸ್ಟ್ ಆಗಿದೆ ಎಂದರು.
ಇನ್ನು ಇದೇ ವೇಳೆ ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ರಾಹುಲ್, “ದೇಶದ ಸಂಸ್ಥೆಗಳನ್ನ ಸ್ವಾಧೀನಪಡಿಸಿಕೊಂಡಿರುವ ಯಂತ್ರದ ವಿರುದ್ಧ ನಾವು ಹೋರಾಡುತ್ತಿದ್ದೇವೆ. ಅವರ ಬಳಿ ಸಾಕಷ್ಟು ಹಣವಿದೆ ಮತ್ತು ಅವರು ಖರೀದಿಸಬಹುದು. ಜನರ ಮೇಲೆ ಒತ್ತಡ ಹೇರಬಹುದು ಮತ್ತು ಬೆದರಿಕೆ ಹಾಕಬಹುದು. ಗೋವಾದಂತಹ ರಾಜ್ಯದಲ್ಲಿ ಇದರ ಫಲಿತಾಂಶವನ್ನು ನೀವೂ ನೋಡಿದ್ದೀರಿ” ಎಂದರು.
ಈ ನಡುವೆ ಕಾಂಗ್ರೆಸ್ ಪಕ್ಷವು ಅಧ್ಯಕ್ಷರ ಆಯ್ಕೆಗೆ ಅಧಿಸೂಚನೆ ಹೊರಡಿಸಿದೆ. ವೇಳಾಪಟ್ಟಿಯ ಪ್ರಕಾರ, ಯಾವುದೇ ನಾಯಕರು ಚುನಾವಣೆಗೆ ಸ್ಪರ್ಧಿಸಲು ಸೆಪ್ಟೆಂಬರ್ 24 ರಿಂದ 30 ರವರೆಗೆ ನಾಮಪತ್ರ ಸಲ್ಲಿಸಬಹುದು.ಇದಲ್ಲದೇ ನಾಮಪತ್ರ ಹಿಂಪಡೆಯಲು ಅಕ್ಟೋಬರ್ 8 ಕೊನೆಯ ದಿನವಾಗಿರುತ್ತದೆ.