ಗುಜರಾತ್: ಇಂದು ಬೆಳಗ್ಗೆ 10 ಗಂಟೆಗೆ ಗುಜರಾತ್ನ ಏಕತಾ ನಗರದಲ್ಲಿ ʻಪರಿಸರ ಸಚಿವರ ರಾಷ್ಟ್ರೀಯ ಸಮ್ಮೇಳ(National Conference of Environment Ministers)ʼನವನ್ನು ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ಅವರು ಉದ್ಘಾಟಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ಪ್ರಧಾನ ಮಂತ್ರಿಗಳ ಕಚೇರಿ (PMO) ಪ್ರಕಾರ, ರಾಜ್ಯ ಕ್ರಿಯಾ ಯೋಜನೆಗಳ ಮೂಲಕ ಪ್ಲಾಸ್ಟಿಕ್ ಮಾಲಿನ್ಯದ ನಿರ್ಮೂಲನೆ ಮುಂತಾದ ವಿಷಯಗಳ ಕುರಿತು ಕೆಲವು ಉತ್ತಮ ನೀತಿಗಳನ್ನು ರೂಪಿಸುವಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವೆ ಹೆಚ್ಚಿನ ಹೊಂದಾಣಿಕೆ ಬೆಳೆಸಲು ಈ ಸಮ್ಮೇಳನವನ್ನು ಆಯೋಜಿಸಲಾಗಿದೆ.
ನಾಶವಾಗುತ್ತಿರುವ ಭೂಮಿ ಮತ್ತು ವನ್ಯಜೀವಿ ಸಂರಕ್ಷಣೆಗೆ ವಿಶೇಷ ಒತ್ತು ನೀಡುವ ಮೂಲಕ ಅರಣ್ಯ ಪ್ರದೇಶವನ್ನು ಹೆಚ್ಚಿಸಲು ಇದು ಗಮನಹರಿಸುತ್ತದೆ. ಎರಡು ದಿನಗಳ ಸಮ್ಮೇಳನವು ಸೆಪ್ಟೆಂಬರ್ 23-24 ರಂದು ನಡೆಯಲಿದೆ.
ಈ ವರ್ಷ ಜುಲೈನಿಂದ ಆಯ್ದ ಏಕ-ಬಳಕೆಯ ಪ್ಲಾಸ್ಟಿಕ್ ವಸ್ತುಗಳನ್ನು ನಿಷೇಧಿಸಲಾಗಿದ್ದು, ಪ್ಲಾಸ್ಟಿಕ್ ಮಾಲಿನ್ಯದ ವಿರುದ್ಧದ ಹೋರಾಟದಲ್ಲಿ ಭಾರತವು ಜಾಗತಿಕವಾಗಿ ಮುಂದುವರೆದಿದೆ. ಏಕ-ಬಳಕೆಯ ಪ್ಲಾಸ್ಟಿಕ್ಗಳು ಸಾಮಾನ್ಯವಾಗಿ ಒಂದೇ ಬಾರಿ ಬಳಸಿದ ನಂತರ ಎಸೆಯಲ್ಪಡುತ್ತವೆ. ಇವುಗಳನ್ನು ಮರುಬಳಕೆ ಮಾಡಲು ಸಾಧ್ಯವಿಲ್ಲ. ಪ್ರಪಂಚದಾದ್ಯಂತ ಪ್ಲಾಸ್ಟಿಕ್ನ ಭಾರೀ ಬಳಕೆಯು ಸಾಕಷ್ಟು ಅಪಾಯಗಳನ್ನು ಉಂಟುಮಾಡಿದೆ. ಸರ್ಕಾರಗಳು ಮತ್ತು ವಿವಿಧ ಜಾಗತಿಕ ನಿಯಂತ್ರಣ ಸಂಸ್ಥೆಗಳು ಪ್ಲಾಸ್ಟಿಕ್ನ ಬಳಕೆಯನ್ನು ತಡೆಯಲು ಶ್ರಮಿಸುತ್ತಿವೆ.