ಬೆಂಗಳೂರು : ಬಡತನ ರೇಖೆಗಿಂತ ಕೆಳಗಿರುವ ಅಸಹಾಯಕರು ಪಿಂಚಣಿ ಕೋರಿಕೆ ಸಲ್ಲಿಸಿದ 72 ಗಂಟೆಯೊಳಗೆ ಪಿಂಚಣಿ ಮಂಜೂರಾತಿ ಮಾಡುವ ವ್ಯವಸ್ಥೆ ಜಾರಿಗೆ ತರಲಾಗಿದೆ. ದೂರವಾಣಿ ಮೂಲಕ ಪಿಂಚಣಿ ಕೋರಿದರೂ ಸಹ ಕೇವಲ ಆಧಾರ್ ಕಾರ್ಡ್ ಹಾಗೂ ಮನೆಯ ಫೋಟೋ ದಾಖಲೆ ಪಡೆದು ಪಿಂಚಣಿ ನೀಡಲಾಗುವುದು ಎಂದು ಕಂದಾಯ ಸಚಿವ ಆರ್. ಅಶೋಕ್ ತಿಳಿಸಿದ್ದಾರೆ.
ಕಾಂಗ್ರೆಸ್ ನ ಎಂ.ನಾಗರಾಜು ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಮಧ್ಯವರ್ತಿಗಳ ಕಾಟವಿಲ್ಲದೆ, ಫಲಾನುಭವಿಗಳಿಗೆ ಅಲೆದಾಟ ಇಲ್ಲದೆ ಪಿಂಚಣಿ ಮಂಜೂರು ಮಾಡಲಾಗುವುದು. ಅರ್ಜಿ ಸಲ್ಲಿಸಿದ 72 ಗಂಟೆಗಳ ಒಳಗೆ ಅರ್ಹ ಫಲಾನುಭವಿಗಳಿಗೆ ಮನೆ ಬಾಗಿಲಿಗೆ ಪಿಂಚಣಿ ತಲುಪಿಸಲಾಗುವುದು. ಇದು ದೇಶದಲ್ಲೇ ಮಾದರಿ ಪ್ರಕ್ರಿಯೆಯಾಗಿದೆ ಎಂದು ಹೇಳಿದರು.
ಕಂದಾಯ ಇಲಾಖೆಯ ಹಲೋ ಕಂದಾಯ ಸಚಿವರೇ ಎಂಬ ಟೋಲ್ ಫ್ರಿ ಸಹಾಯವಾಣಿ ಆರಂಭಿಸಿದೆ. ಈ ದೂರವಾಣಿಗೆ ಕರೆ ಮಾಡಿದರೆ ಸಹಾಯವಾಣಿ ಸಿಬ್ಬಂದಿ ವ್ಯಕ್ತಿಯ ವಿವರ ಪಡೆದು ಅದನ್ನು ಸಂಬಂಧಪಟ್ಟ ಗ್ರಾಮ ಲೆಕ್ಕಿಗನ ಮೊಬೈಲ್ ಗೆ ವಿವರ ಹೋಗುತ್ತದೆ. ಆತ ಮನೆಗೆ 72 ಗಂಟೆಯೊಳಗೆ ಪಿಂಚಣಿ ಮಂಜೂರಾತಿ ಆದೇಶ ನೀಡುತ್ತಾನೆ ಎಂದು ಮಾಹಿತಿ ನೀಡಿದ್ದಾರೆ.