ನ್ಯೂಯಾರ್ಕ್: ʻಇದು ಯುದ್ಧದ ಸಮಯವಲ್ಲ ಎಂದು ಭಾರತದ ಪ್ರಧಾನಿ ನರೇಂದ್ರ ಮೋದಿ(Narendra Modi )ಅವರು ಹೇಳಿದ್ದು ಸರಿಯಾಗಿಯೇ ಇದೆʼ ಎಂದು ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರೋನ್(France President Emmanuel Macron) ಹೇಳಿದ್ದಾರೆ. ಮಂಗಳವಾರ ನ್ಯೂಯಾರ್ಕ್ ನಗರದಲ್ಲಿ ನಡೆದ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ 77ನೇ ಅಧಿವೇಶನದಲ್ಲಿ ಪಾಲ್ಗೊಂಡು ಮಾತನಾಡಿದ ಮ್ಯಾಕ್ರೋನ್ ಅವರು ಮೋದಿ ಅವರನ್ನು ಶ್ಲಾಘಿಸಿದ್ದಾರೆ.
ʻಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಇದು ಯುದ್ಧದ ಸಮಯವಲ್ಲ ಎಂದು ಹೇಳಿದ್ದು ಸರಿಯಾಗಿದೆ. ಇದು ಪಶ್ಚಿಮದ ದೇಶಗಳ ವಿರುದ್ಧ ಸೇಡು ತೀರಿಸಿಕೊಳ್ಳಲು ಅಥವಾ ಪೂರ್ವದದೇಶಗಳ ವಿರುದ್ಧ ಪಶ್ಚಿಮವನ್ನು ಎತ್ತಿಕಟ್ಟುವುದಕ್ಕಾಗಲೀ ಅಲ್ಲ. ಇದು ನಮ್ಮ ವಿಶ್ವದ ಎಲ್ಲ ದೇಶಗಳಿಗೆ ಅನ್ವಯಿಸುವ ಸಮಾನ ಸಂಗತಿಯಾಗಿದೆ. ನಾವೆಲ್ಲರೂ ಒಟ್ಟಾಗಿ ಸವಾಲುಗಳನ್ನು ಎದುರಿಸಬೇಕು’ ಎಂದು ಹೇಳಿದರು.
ಕಳೆದ ವಾರ ಉಜ್ಬೇಕಿಸ್ತಾನ್ನ ಸಮರ್ಕಂಡ್ನಲ್ಲಿ ನಡೆದ ಶಾಂಘೈ ಸಹಕಾರ ಸಂಘಟನೆ (SCO) ಶೃಂಗಸಭೆಯ ದ್ವಿಪಕ್ಷೀಯ ಸಭೆಯಲ್ಲಿ ಪ್ರಧಾನಿ ಮೋದಿ ಬಾಗಿಯಾಗಿದ್ದರು. ಈ ವೇಳೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ಮಹತ್ವದ ದ್ವಿಪಕ್ಷೀಯ ಮಾತುಕತೆ ನಡೆಸಿದರು. ಈ ವೇಳೆ ಮೋದಿ ಅವರು ಪುಟಿನ್ಗೆ ʻಇದು ಯುದ್ಧದ ಸಮಯವಲ್ಲ. ಉಕ್ರೇನ್ ಜೊತೆಗಿನ ಸಂಘರ್ಷ ಕೊನೆಗೊಳಿಸಿʼ ಎಂದಿದ್ದರು. ಇದೇ ಹೇಳಿಕೆಯನ್ನು ಉಲ್ಲೇಖಿಸಿ ಇದೇ ಮ್ಯಾಕ್ರೋನ್ ಸಹ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.